ಶರಣ್ ಹುಟ್ಟುಹಬ್ಬದ ರಂಗನ್ನು ಮತ್ತಷ್ಟು ಹೆಚ್ಚಿಸುವಂಥಾ ಛೂ ಮಂತರ್ ಟೀಸರ್ ಬಿಡುಗಡೆಗೊಂಡಿದೆ. ಇದು ರಣ್ ಹುಟ್ಟು ಹಬ್ಬಕ್ಕೆ ಉಡುಗೊರೆ ಎಂಬಂತೆ ಹೊರ ಬಂದಿರೋ ಈ ಟೀಸರ್ ಪ್ರೇಕ್ಷಕರ ಪಾಲಿಗೂ ಹಬ್ಬದಂತಿದೆ. ಈ ಹಿಂದಿನಿಂದಲೂ ಛೂ ಮಂತರ್ ಬಗೆಗೊಂದು ಗಾಢ ಕುತೂಹಲ ಗರಿಗೆದರಿಕೊಂಡಿತ್ತಲ್ಲಾ? ಅದೆಲ್ಲವನ್ನು ಮತ್ತಷ್ಟು ನಿಗಿನಿಗಿಸುವಂತೆ ಮಾಡುವಲ್ಲಿಯೂ ಸದರಿ ಟೀಸರ್ ಯಶ ಕಂಡಿದೆ. ನವನಿರ್ದೇಶಕ ನವನೀತ್ ಭಿನ್ನವಾದ ಕಥೆಯೊಂದಿಗೆ ಮ್ಯಾಜಿಕ್ ಮಾಡಿದ್ದಾರೆಂಬ ನಂಬುಗೆ, ಮೇಕಿಂಗ್ನ ಅದ್ದೂರಿತನದತ್ತ ಒಂದು ಅಚ್ಚರಿ ಮತ್ತು ಛೂ ಮಂತರ್ ಶರಣ್ ವೃತ್ತಿ ಬದುಕಿಗೆ ಮಹತ್ತರ ತಿರುವು ನೀಡೋ ಭರವಸೆಯನ್ನು ಈ ಟೀಸರ್ ಪ್ರತೀ ಪ್ರೇಕ್ಷಕರ ಮನಸಲ್ಲಿಯೂ ಪ್ರತಿಷ್ಠಾಪಿಸಿಬಿಟ್ಟಿದೆ!
ಅಷ್ಟರ ಮಟ್ಟಿಗೆ ಛೂ ಮಂತರ್ ಟೀಸರ್ ಕಮಾಲ್ ಮಾಡಿದೆ. ಒಂದು ಗಟ್ಟಿ ಕಥೆ ಮತ್ತು ಅದರೊಂದಿಗೆ ಹೊಸೆದುಕೊಂಡಿರುವ ಹಾರರ್ ಅಂಶಗಳು ಪ್ರತಿಯೊಬ್ಬರನ್ನೂ ಸೆಳೆದಿವೆ. ಇಲ್ಲಿನ ಪಾತ್ರಗಳು ಭಿನ್ನ ಚಹರೆಗಳೊಂದಿಗೆ ಪ್ರೇಕ್ಷಕರೊಳಗಿಳಿದಿವೆ. ಅದರಲ್ಲಿಯೂ ನಾಯಕ ಶರಣ್ ಗೆಟಪ್ಪುಗಳಂತೂ ನಾನಾ ಬಗೆಯಲ್ಲಿ ಚರ್ಚೆಗಳಿಗೂ ಕಾರಣವಾಗಿದೆ. ಒಂದು ಪರಿಣಾಮಕಾರಿಯಾದ, ಯಶಸ್ವೀ ಟೀಸರ್ ಒಂದು ಹೇಗಿರಬೇಕೋ, ಅಂಥಾ ಎಲ್ಲ ಲಕ್ಷಣಗಳೊಂದಿಗೆ ಛೂ ಮಂತರ್ ಟೀಸರ್ ಮೈ ಕೈ ತುಂಬಿಕೊಂಡು ಬಂದಿದೆ.
ಈ ಹಿಂದೆ ಕರ್ವ ಅಂತೊಂದು ಸಿನಿಮಾ ನಿರ್ದೇಶನ ಮಾಡಿದ್ದವರು ನವನೀತ್. ಅದೊಂದು ಸಿನಿಮಾ ಮೂಲಕವೇ ಈತ ಹುಟ್ಟು ಹಾಕಿದ್ದ ಕ್ರೇಜ್ ಸಾಮಾನ್ಯದ್ದೇನಲ್ಲ. ಆ ಚಿತ್ರ ಎಲ್ಲ ಬಗೆಯಲ್ಲಿಯೂ ಗಮನ ಸೆಳೆದಿತ್ತು; ಅದಕ್ಕೆ ತಕ್ಕುದಾದಂಥಾ ಗೆಲುವನ್ನೂ ದಾಖಲಿಸಿತ್ತು. ಆ ನಂತರದಲ್ಲಿ ನಾನಾ ಸುದ್ದಿಗಳು ಹಬ್ಬಿಕೊಂಡಿದ್ದರೂ ಕೂಡಾ, ಯಾವ ಸದ್ದೂ ಇಲ್ಲದಂತೆ ನವನೀತ್ ಆರಂಭಿಸಿದ್ದ ಚಿತ್ರ ಛೂ ಮಂತರ್. ಇದರ ಕಥೆಯನ್ನು ಕೇಳಿ ಥ್ರಿಲ್ ಆಗಿಯೇ ಶರಣ್ ಒಪ್ಪಿಕೊಂಡಿದ್ದರಂತೆ. ಆ ಥ್ರಿಲ್ ಇದೀಗ ಈ ಟೀಸರ್ ಮೂಲಕ ಶರಣ್ ಮನಸಿಂದ ಪ್ರೇಕ್ಷಕರತ್ತ ದಾಟಿಕೊಂಡಿದೆ. ಅದುವೇ ಛೂ ಮಂತರ್ನ ಸಂಭಾವ್ಯ ಗೆಲುವಿನಂತೆಯೂ ಗೋಚರಿಸುತ್ತಿದೆ.
ಹಾಸ್ಯ ನಟನಾಗಿದ್ದ ಕಾಲದಲ್ಲಿಯೇ ತಾನೋರ್ವ ಅದಭುತ ನಟನೆಂಬುದನ್ನು ಸಾಬೀತು ಪಡಿಸಿದ್ದವರು ಶರಣ್. ಅದ್ಯಾವ ಪಾತ್ರವೇ ಆಗಿದ್ದರೂ ಒಳಗಿಳಿದು ನಟಿಸುತ್ತಾ, ತನ್ನ ಇರುವಿಕೆ ಇರುವ ಪ್ರತೀ ಫ್ರೇಮಿನಲ್ಲಿಯೂ ನಗೆ ಹೊಮ್ಮಿಸುತ್ತಿದ್ದ ಶರಣ್ಗೆ ದೊಡ್ಡ ಅಭಿಮಾನಿ ಬಳಗವೇ ಇದೆ. ನಾಯಕ ನಟನಾಗಿ ಮಗ್ಗುಲು ಬದಲಿಸಿದ ನಂತರವಂತೂ ಆ ಅಭಿಮಾನಿ ಪಡೆ ಮತ್ತಷ್ಟು ಹಿಗ್ಗಲಿಸಿಕೊಂಡಿದೆ. ಛೂ ಮಂತರ್ನ ಚಹರೆಗಳನ್ನು ನೋಡಿದರೆ, ಆ ಬಳಗಕ್ಕೆ ಮತ್ತೊಂದಷ್ಟು ಮನಸುಗಳು ಜಮೆಯಾಗೋದರಲ್ಲಿ ಯಾವ ಸಂದೇಹವೂ ಇಲ್ಲ. ಮೇಕಿಂಗ್, ಕಥೆ, ಪಾತ್ರವರ್ಗ ಸೇರಿದಂತೆ ಎಲ್ಲ ದಿಕ್ಕುಗಳಲ್ಲಿಯೂ ಈ ಟೀಸರ್ ಪರಿಣಾಮಕಾರಿಯಾಗಿದೆ.
ಅಂದಹಾಗೆ, ಇದು ತರುಣ್ ಶಿವಪ್ಪ ತಮ್ಮ ತರುಣ್ ಟಾಕೀಸ್ ಬ್ಯಾನರಿನಡಿಯಲ್ಲಿ ನಿರ್ಮಾಣ ಮಾಡಿರುವ ಚಿತ್ರ. ಈಗಾಗಲೇ ಯಶಸ್ವೀ ನಿರ್ಮಾಪಕರೆನ್ನಿಸಿಕೊಂಡಿರುವ ತರುಣ್ ಛೂ ಮಂತರ್ ಮೂಲಕ ಮತ್ತೊಂದು ಮೈಲಿಗಲ್ಲು ನೆಡುವ ಮುನ್ಸೂಚನೆಗಳೂ ಕಾಣಿಸುತ್ತಿವೆ. ಇನ್ನುಳಿದಂತೆ, ಒಂದಷ್ಟು ಎಡರುತೊಡರು, ಏರುಹಾದಿಗಳನ್ನು ಹಾದು ಬಂದಿರುವ ಶರಣ್ ಪಾಲಿಗೂ ಇದು ಅತ್ಯಂತ ಮಹತ್ವದ ಚಿತ್ರ. ಯಾಕೆಂದರೆ, ಹಾಸ್ಯದಾಚೆಗಿನ ಮತ್ತೊಂದು ಆಯಾಮದ ಪಾತ್ರಕ್ಕೆ ಶರಣ್ ತಮ್ಮನ್ನು ತಾವು ತೆರೆದುಕೊಂಡಿದ್ದಾರೆ. ಈ ಟೀಸರ್ಗೆ ಬರುತ್ತಿರೋ ಪ್ರತಿಕ್ರಿಯೆಗಳನ್ನು ಗಮನಿಸಿದರೆ, ಶರಣ್ರನ್ನು ಛೂ ಮಂತರ್ ಪಾತ್ರದ ಮೂಲಕ ಪ್ರೇಕ್ಷಕರೆಲ್ಲ ಬೇಷರತ್ತಾಗಿ ಒಪ್ಪಿ ಅಪ್ಪಿಕೊಳ್ಳೋದು ಖಚಿತ. ಅಂತೂ ಇದು ಈ ವರ್ಷದ ಅತ್ಯಂತ ಭರವಸೆಯ ಟೀಸರ್ ಆಗಿಯೂ ಸ್ಥಾನ ಪಡೆದುಕೊಂಡಿದೆ!