ಕನ್ನಡ ಚಿತ್ರಪ್ರೇಮಿಗಳ ಪಾಲಿನ ಪ್ರೀತಿಯ ಹಾಸ್ಯ ನಟನಾಗಿ, ಆ ನಂತರದಲ್ಲಿ ಏಕಾಏಕಿ ನಟನೆಯ ಮತ್ತೊಂದು ಆಯಾಮದತ್ತ ಹೊರಳಿಕೊಂಡವರು ಶರಣ್. ಹಾಗೆ ಶರಣ್ ನಾಯಕನಾಗುವ ನಿರ್ಧಾರ ಪ್ರಕಟಿಸಿದಾಗ ಅವರನ್ನು ಇಷ್ಟಪಡುವ ಮಂದಿಯಲ್ಲೂ ಕೂಡಾ ಇದೊಂದು ವ್ಯರ್ಥ ಸಾಹಸವೆಂಬಂಥಾ ಮನಃಸ್ಥಿತಿ ಮೂಡಿಕೊಂಡಿತ್ತು. ಅದೆಲ್ಲವನ್ನೂ ಅತ್ಯಂತ ಕಡಿಮೆ ಅವಧಿಯಲ್ಲಿ ಸುಳ್ಳಾಗಿಸಿ, ನಾಯಕನಾಗಿ ಕಾಲೂರಿ ನಿಲ್ಲುವಲ್ಲಿ ಶರಣ್ ಯಶ ಕಂಡಿದ್ದಾರೆ. ಹಾಸ್ಯ ನಟನಾಗಿ ಬೇಡಿಕೆ ಹೊಂದಿರುವಾಗಲೇ ನಾಯಕನಾಗೋ ತಲುಬು ಹತ್ತಿಸಿಕೊಂಡು ಅನೇಕರು ವಿಫಲರಾಗಿದ್ದಾರೆ. ಆದರೆ, ಶರಣ್ ಅವರದ್ದು ಭಿನ್ನವಾದ ಯಶದ ಪರ್ವ. ಆ ಪರ್ವವೀಗ ಒಂದಷ್ಟು ಪ್ರಯೋಗಾತ್ಮಕ ಗುಣಗಳೊಂದಿಗೆ ಹೊಸಾ ಆವೇಗ ಕಂಡುಕೊಂಡಿದೆ. ಅದರ ಭಾಗವಾಗಿಯೇ ಬಿಡುಗಡೆಗೆ ಸಜ್ಜುಗೊಂಡಿರೋ ಚಿತ್ರ `ಛೂ ಮಂತರ್’!
ಹಾಗೆ ನೋಡಿದರೆ, ಛೂ ಮಂತರ್ ಆರಂಭದಿಂದಲೂ ಗಾಢವಾದೊಂದು ಕುತೂಹಲಕ್ಕೆ ಕಾರಣವಾಗಿತ್ತು. ನಂತರದ ದಿನಗಳಲ್ಲಿ ಹಂತಹಂತವಾಗಿ ಅದನ್ನು ಕಾಪಿಟ್ಟುಕೊಳ್ಳುವ ಜಾಣ್ಮೆಯನ್ನೂ ಕೂಡಾ ಚಿತ್ರತಂಡ ಪ್ರದರ್ಶಿಸುತ್ತಾ ಬಂದಿತ್ತು. ಅಂದಹಾಗೆ, ಇದು ಈ ಹಿಂದೆ ಕರ್ವ ಅಂತೊಂದು ಚೆಂದದ ಚಿತ್ರ ನಿರ್ದೇಶನ ಮಾಡಿದ್ದ ನವನೀತ್ ನಿರ್ದೇಶನದಲ್ಲಿ ಮೂಡಿ ಬಂದಿರೋ ಚಿತ್ರ. ವಿಭಿನ್ನ ಕಥಾಹಂದರ ಮತ್ತು ನಿರೂಪಣೆ ಹೊಂದಿದ್ದ ಕರ್ವವನ್ನು ಪ್ರೇಕ್ಷಕರೆಲ್ಲ ಬಹುವಾಗಿ ಮೆಚ್ಚಿಕೊಂಡಿದ್ದರು. ಆ ಬಳಿಕ ನವನೀತ್ ಕರ್ವ ಸೀಕ್ವೆಲ್ ಮಾಡುತ್ತಾರೆಂಬ ಸುದ್ದಿಯೂ ಹಬ್ಬಿಕೊಂಡಿತ್ತು. ಆದರೆ, ಅದಕ್ಕೂ ಮುನ್ನ ಅವರು ಛೂ ಮಂತರ್ ಎಂಬ ಅದ್ಭುತವೊಂದನ್ನು ಸೃಷ್ಟಿಸಿದ್ದಾರೆ!
ಇದೀಗ ಇಷ್ಟೆಲ್ಲವನ್ನೂ ಹೇಳಲು ಕಾರಣವಿದೆ. ಛೂ ಮಂತರ್ ಚಿತ್ರತಂಡ, ನಾಯಕ ಶರಣ್ ಅವರ ಬರ್ತ್ಡೇ ಗಿಫ್ಟಾಗಿ ಟೀಸರ್ ಬಿಡುಗಡೆಗೊಳಿಸಲು ಮುಂದಾಗಿದೆ. ತಿಂಗಳುಗಳ ಹಿಂದೆ ಛೂ ಮಂತರ್ನ ಫಸ್ಟ್ ಲುಕ್ಕೊಂದು ಬಿಡುಗಡೆಗೊಂಡಿತ್ತು. ಅದರಲ್ಲಿ ಶರಣ್ ಪಾತ್ರದ ಸಣ್ಣ ಸುಳಿವೂ ಸಿಕ್ಕಿತ್ತು. ಅದುವೇ ಈ ಸಿನಿಮಾದಲ್ಲಿ ಶರಣ್ ವಿಶಿಷ್ಟವಾದ ಪಾತ್ರವೊಂದಕ್ಕೆ ಜೀವ ತುಂಬಿದ್ದಾರೆಂಬುದು ಸ್ಪಷ್ಟವಾಗಿಯೇ ಜಾಹೀರಾಗಿತ್ತು. ಈವತ್ತಿಗೆ ಛೂ ಮಂತರ್ ಬಗ್ಗೆ ಹರಡಿಕೊಂಡಿರುವ ಅಷ್ಟೂ ಸಕಾರಾತ್ಮಕ ಸನ್ನಿವೇಷಗಳ ಹಿಂದೆ ಆ ಫಸ್ಟ್ ಲುಕ್ಕಿನ ಪಾತ್ರವಿದೆ. ಇದೀಗ ಆ ಕ್ರೇಜ್ ಅನ್ನು ಮತ್ತಷ್ಟು ನಿಗಿನಿಗಿಸುವ ಭರವಸೆಯೊಂದಿಗೇ ಚಿತ್ರತಂಡ ಶರಣ್ ಬರ್ತ್ಡೇಗೆ ಟೀಸರ್ ಗಿಫ್ಟ್ ನೀಡುವ ಉತ್ಸಾಹದಲ್ಲಿದೆ.
ಇದೇ ಫೆಬ್ರವರಿ ಆರನೇ ತಾರೀಕಿನಂದು ಶರಣ್ ಹುಟ್ಟಿದ ದಿನ. ಅದೇ ದಿನ ಸಂಜೆ 5 ಗಂಟೆ ಒಂದು ನಿಮಿಷಕ್ಕೆ ಸರಿಯಾಗಿ ಛೂ ಮಂತರ್ ಟೀಸರ್ ಲಾಂಚ್ ಆಗಲಿದೆ. ಅದು ಕೇವಲ ಶರಣ್ ಅವರಿಗೆ ಮಾತ್ರವೇ ಕೊಡುತ್ತಿರೋ ಗಿಫ್ಟ್ ಅಲ್ಲ; ಬದಲಾಗಿ ಒಂದಿಡೀ ಪ್ರೇಕ್ಷಕ ವರ್ಗಕ್ಕೇ ಕೊಡುತ್ತಿರುವ ಕೊಡುಗೆ ಎಂಬಂಥಾ ಮನಃಸ್ಥ ಚಿತ್ರತಂಡದಲ್ಲಿದೆ. ವಿಶೇಷವೆಂದರೆ, ಆರನೇ ತಾರೀಕಿನಂದು ಶರಣ್ ಐವತ್ತನೇ ವಸಂತಕ್ಕೆ ಕಾಲಿರಿಸುತ್ತಿದ್ದಾರೆ. ಈ ವಿಚಾರ ತಿಳಿದೇಟಿಗೆ ಬಹುತೇಕರು ಶರಣ್ಗೈವತ್ತು ವರ್ಷವಾಯ್ತಾ ಎಂಬಂತೆ ಅಚ್ಚರಿಗೀಡಾಗಬಹುದು. ಯಾಕೆಂದರೆ, ವಯಸ್ಸನ್ನು ಕೇವಲ ಸಂಕಿ ಸಂಖ್ಯೆಯ ಲೆಕ್ಕಾಚಾರಕ್ಕೆ ಗದುಮಿ, ಹದಿನೆಂಟರ ಉತ್ಸಾಹವನ್ನು ಆವಾಹಿಸಿಕೊಂಡು ಬದುಕುತ್ತಿರುವವರು ಶರಣ್. ಐವತ್ತೆಂಬುದು ಯಾರ ಬದುಕಲ್ಲಿಯೇ ಆದರೂ ಮಹತ್ವದ ಘಟ್ಟ. ಈ ಹಂತದಲ್ಲಿ ಛೂ ಮಂತರ್ ಮೂಲಕ ಅವರ ವೃತ್ತಿ ಬದುಕು ಮತ್ತಷ್ಟು ಲಕಲಕಿಸುವ ಲಕ್ಷಣಗಳು ದಟ್ಟವಾಗಿ ಗೋಚರಿಸುತ್ತಿವೆ…