ಸುಮ್ಮನೊಮ್ಮೆ ಯೋಚಿಸಿ ನೋಡಿ; ಕಾಸೆಂಬುದು ನಮ್ಮ ಬದುಕಿನಲ್ಲಿ ನಮಗೇ ಗೊತ್ತಿಲ್ಲದಂತೆ ನಾನಾ ಬೆರಗುಗಳನ್ನು ಸೃಷ್ಟಿಸಿರುತ್ತೆ. ಸರಿಯಾಗಿ ದಿಟ್ಟಿಸಿದರೆ ಆ ಮಾಯೆಯ ಅಲಗಿನಿಂದಾದ ಗಾಯಗಳೇ ಹೆಚ್ಚು ಸಿಗುತ್ತವೆ. ಕೆಲ ಮಂದಿಯಂತೂ ಹೇಗಾದರೂ ಕಾಸು ಪೇರಿಸಿಕೊಳ್ಳಬೇಕೆಂಬ ಭರದಲ್ಲಿ ನಾನಾ ಥರದಲ್ಲಿ ಲಗಾಟಿ ಹೊಡೆಯುತ್ತಾರೆ. ಜೀವದಷ್ಟೇ ನಂಬಿಕೆಯಿಟ್ಟುಕೊಂಡಿದ್ದವರ ನೆತ್ತಿಗೆ ದೋಖಾ, ದಗಲ್ಬಾಜಿಗಳ ಮೂಲಕ ಘಾಸಿಯುಂಟು ಮಾಡುತ್ತಾರೆ. ಯಾರದ್ದೋ ಶ್ರಮಕ್ಕೆ ಅಪ್ಪನಾಗಿ ಮೆರೆಯುತ್ತಾರೆ. ಅದನ್ನು ದಕ್ಕಿಸಿಕೊಳ್ಳಲು ನಾನಾ ಥರದ ಆಟ ಕಟ್ಟುತ್ತಾರೆ. ಅಂಥಾ ನೌಟಂಕಿ ಆಟದ ಪಾರಂಗತರಿಗೂ ಕೂಡಾ, ಕಾಸಿಗಿಂತ ಬೆಚ್ಚನೆಯದ್ದೊಂದು ಸ್ನೇಹ, ಉಗುರುಬೆಚ್ಚಗಿನ ಹಿತವಾದ ಪ್ರೀತಿ ಮತ್ತು ಎದೆಯೊಳಗೆ ಸದಾ ಪ್ರವಹಿಸುವ ಮನುಷ್ಯತ್ವವೊಂದೇ ಶಾಶ್ವತವೆಂಬ ಅಂತಿಮ ಸತ್ಯದ ಅರಿವಾಗುತ್ತೆ. ಅಷ್ಟರಲ್ಲಿ ಕಾಲ ಮಿಂಚಿ ಹೋಗಿ ಕೈ ಚಾಚಿದರೂ ಹತ್ತಿರದ ಜೀವಗಳು ಸಿಗದೇ ಹೋಗೋ ನರಕ ಮಾತ್ರವೇ ಜೊತೆಗಿರುತ್ತೆ. ಇಂಥಾ ಕಾಂಚಾಣವೆಂಬ ಮಾಯೆಯ ಸುತ್ತ ಹಬ್ಬಿಕೊಂಡಿರೋ ರೋಚಕ ಕಥನದ ಚಿತ್ರವೊಂದು ಬಿಡುಗಡೆಗೆ ಸಜ್ಜಾಗಿ ನಿಂತಿದೆ!
ಅಂದಹಾಗೆ, ಶೀರ್ಷಿಕೆ ಕೇಳಿದಾಕ್ಷಣವೇ ಇಷ್ಟೆಲ್ಲ ಲಹರಿಗೆ ಬೀಳಿಸುವಂತಿರೋ ಆ ಚಿತ್ರ `ರುಪಾಯಿ’. ಎಲ್ಲರ ಬದುಕಲ್ಲಿಯೂ ಮಹತ್ವದ ಪಾತ್ರ ವಹಿಸಿರುವ ಕಾಸೆಂಬ ಮಾಯೆಯ ಸುತ್ತ ರೋಚಕವಾದೊಂದು ಕಥೆ ಹೆಣೆದು, ಅದಕ್ಕೆ ದೃಷ್ಯ ರೂಪ ಕೊಟ್ಟಿರುವವರು ನಿರ್ದೇಶಕ ವಿಜಯ್ ಜಗದಾಳ್. ಬದುಕೆಂದಮೇಲೆ ಕಾಸೆಂಬುದು ಅನಿವಾರ್ಯ. ಈ ಕಾರಣದಿಂದಲೇ ಒಬ್ಬೊಬ್ಬರೂ ಒಂದೊಂದು ರೀತಿಯಲ್ಲಿ ಕಾಸಿನ ಬೆಂಬಿದ್ದು ಹೊರಟಿರುತ್ತಾರೆ. ಅಂಥಾದ್ದೇ ಛಾಯೆಯ ಐದು ಪಾತ್ರಗಳ ಸುತ್ತ ನಡೆಯೋ ಕಥೆಯನ್ನು ಎಲ್ಲ ವರ್ಗದ ಪ್ರೇಕ್ಷಕರೂ ಥ್ರಿಲ್ ಆಗುವಂತೆ ಕಟ್ಟಿಕೊಡಲಾಗಿದೆಯಂತೆ.
ಇದರ ನಾಯಕರಲ್ಲೊಬ್ಬರಾಗಿ ಖುದ್ದು ನಿರ್ದೇಶಕ ವಿಜಯ್ ಜಗದಾಳ್ ನಟಿಸಿದ್ದಾರೆ. ಕೃಷಿ ತಾಪಂಡ, ಚಂದನಾ ರಾಘವೇಂದ್ರ ನಾಯಕಿಯರಾಗಿ ಬಣ್ಣ ಹಚ್ಚಿದ್ದಾರೆ. ಪ್ರಮೋದ್ ಶೆಟ್ಟಿ, ಮೋಹನ್ ಜುನೇಜಾ, ರಾಕ್ಲೈನ್ ಸುಧಾಕರ್ ಮುಂತಾದವರು ಪ್ರಧಾನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮಂಜುನಾಥ್ ನಿರ್ಮಾಣ ಮ ಆಡಿರುವ ಈ ಚಿತ್ರಕ್ಕೆ ಆರ್ಡಿ ನಾಗರಾಜ್ ಛಾಯಾಗ್ರಹಣ, ಶಿವರಾಜ್ ಮೇರು ಸಂಕಲನ, ಆನಂದ್ ರಾಜಾ ವಿಕ್ರಮ್ ಸಂಗೀತ, ವಿಕ್ರಂ ಸಾಹಸ ಮತ್ತು ಗೀತಾ ಪೈ ಅವರ ನೈತ್ಯ ನಿರ್ದೇಶನವಿದೆ. ಈಗಾಗಲೇ ಸೆನ್ಸಾರ್ ಅನ್ನೂ ಮುಗಿಸಿಕೊಂಡಿರುವ ರುಪಾಯಿ ಇದೇ ಫೆಬ್ರವರಿ ಹತ್ತನೇ ತಾರೀಕಿನಂದು ತೆರೆಗಾಣಲಿದೆ.
ಈಗಾಗಲೇ ಹತ್ತಾರು ಸಿನಿಮಾಗಳ ನಿರ್ದೇಶನ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಾ, ತಮ್ಮದೇ ಆದ ಅನುಭವ ದಕ್ಕಿಸಿಕೊಂಡಿರುವವರು ವಿಜಯ್ ಜಗದಾಳ್. ಆ ಅನುಭವಗಳನ್ನೆಲ್ಲ ಒಟ್ಟುಗೂಡಿಸಿಕೊಂಡು, ಪಕ್ಕಾ ಎಂಟರ್ಟೈನರ್ ಕಥೆಯೊಂದರ ಮೂಲಕ ರುಪಾಯಿಯನ್ನವರು ರೂಪಿಸಿದ್ದಾರೆ. ಈಗಾಗಲೇ ಈ ಚಿತ್ರದ ಎರಡು ಹಾಡುಗಳು ಮತ್ತು, ಟೀಸರ್ ಬಿಡುಗಡೆಗೊಂಡಿವೆ. ಟೀಸರ್ಗಂತೂ ವ್ಯಾಪಕ ಮೆಚ್ಚುಗೆ ಮತ್ತು ಹೆಚ್ಚೆಚ್ಚು ವೀಕ್ಷಣೆ ಲಭಿಸಿದೆ. ಸದ್ಯ ಬಿಡುಗಡೆಯತ್ತ ಇಡೀ ಚಿತ್ರತಂಡ ಗಮನ ಹರಿಸುತ್ತಿದೆ. ರಾಜ್ಯಾದ್ಯಂತ ಸಿಂಗಲ್ ಥಿಯೇಟರುಗಳಲ್ಲಿಯೇ ಹೆಚ್ಚಾಗಿ ಚಿತ್ರವನ್ನು ತೆರೆಗಾಣಿಸುವ ಸಲುವಾಗಿ, ಆ ಮೂಲಕ ಪ್ರೇಕ್ಷಕರಿಗೆ ಹಬ್ಬವಾಗಿಸುವ ನಿಟ್ಟಿನಲ್ಲಿ ಪ್ರಯತ್ನಗಳು ಚಾಲ್ತಿಯಲ್ಲಿವೆ. ಇದೀಗ ಪಡಿಮೂಡಿಕೊಂಡಿರುವ ವಾತಾವರಣ ರುಪಾಯಿಯ ಭರಪೂರ ಗೆಲುವನ್ನಷ್ಟೇ ನಿಖರವಾಗಿ ಧ್ವನಿಸುತ್ತಿದೆ!