ಕರಾವಳಿಯ ದಿಕ್ಕಿನಿಂದ ಕನ್ನಡ ಚಿತ್ರರಂಗದತ್ತ ಗೆಲುವಿನ ಕುಳಿರ್ಗಾಳಿ ಬೀಸಿ ಬರಲಾರಂಭಿಸಿದೆ. ಆ ಭಾಗದ ಕಥಾನಕವನ್ನೊಳಗೊಂಡಿದ್ದ ಕಾಂತಾರ ಚಿತ್ರವಂತೂ ವಿಶ್ವಾದ್ಯಂತ ಅದೆಂಥಾ ಕ್ರೇಜ್ನ ಕಿಡಿ ಹೊತ್ತಿಸಿ ಗೆದ್ದಿತೆಂಬುದು ಕಣ್ಣ ಮುಂದಿನ ಸತ್ಯ. ಹಾಗೆ ನೋಡಿದರೆ, ಕರಾವಳಿ ಸೀಮೆ ರೋಚಕ ಕಥನಗಳ ಅಕ್ಷಯ ಪಾತ್ರೆಯಿದ್ದಂತೆ. ಈ ಕಾರಣದಿಂದಲೇ ಆ ನೇಟಿವಿಟಿಯ ಕಥೆಗಳು ಹೆಚ್ಚಿನ ಸಂಖ್ಯೆಯಲ್ಲಿ ದೃಷ್ಯರೂಪ ಧರಿಸುತ್ತಾ, ಪ್ರೇಕ್ಷಕರನ್ನು ಮುಖಾಮುಖಿಯಾಗುವ ಸನ್ನಾಹದಲ್ಲಿದ್ದಾವೆ. ಸದ್ಯಕ್ಕೆ ಆ ಸಾಲಿನಲ್ಲಿ ದೊಡ್ಡ ಮಟ್ಟದಲ್ಲಿಯೇ ನಿರೀಕ್ಷೆ, ಕುತೂಹಲ ಹುಟ್ಟು ಹಾಕಿರುವ ಚಿತ್ರ `ಕುದ್ರು’!
ಹಾಗಾದರೆ, ಕುದ್ರು ಅಂದರೇನು? ಅಂತೊಂದು ಪ್ರಶ್ನೆ ಕರ್ನಾಟಕದ ಬೇರೆ ಭಾಗಗಳ ಮಂದಿಯನ್ನು ಕಾಡೋದು ಸಹಜ. ಆದರೆ, ಕರಾವಳಿಗರ ಪಾಲಿಗದು ಪರಿಚಿತ, ಬದುಕಿನ ಭಾಗ. ನದಿ ಸಮುದ್ರವನ್ನ ಕೂಡುವಲ್ಲಿ, ನೀರಿನಿಂದಾವೃತವಾದ ಮಧ್ಯ ಭಾಗದಲ್ಲಿ ಹುಟ್ಟಿಕೊಳ್ಳುವ ನಡುಗಡ್ಡೆಯನ್ನು ಕರಾವಳಿ ಸೀಮೆಯಲ್ಲಿ ಕುದ್ರು ಅಂತ ಕರೆಯಲಾಗುತ್ತೆ. ಅಂಥಾದ್ದೊಂದು ಪ್ರದೇಶದಲ್ಲಿ ನಡೆಯೋ ರೋಚಕ ಕಥೆಯೊಂದನ್ನು ಈ ಮೂಲಕ ದೃಷ್ಯೀಕರಿಸಲಾಗಿದೆ. ವಿಶೇಷವೆಂದರೆ, ಈ ಸಿನಿಮಾದ ನಿರ್ಮಾಪಕರಾದ ಭಾಸ್ಕರ್ ನಾಯಕ್ ಅವರೇ ಈ ಕಥೆಯನ್ನು ಬರೆದಿದ್ದಾರೆ. ಮೂಲತಃ ಉಡುಪಿಯವರಾದ, ಉದ್ಯಮಿಯೂ ಆಗಿರುವ ಭಾಸ್ಕರ್ ನಾಯಕ್, ಕನ್ನಡಕ್ಕೆ ಹೊಸದೆನ್ನಿಸುವಂಥಾ ಈ ಕಥೆಯನ್ನು ನವ ನಿರ್ದೇಶಕ ಮಧು ವೈಜಿ ಹಳ್ಳಿ ಸಾರಥ್ಯಕ್ಕೊಪ್ಪಿಸಿದ್ದಾರೆ. ತಾವಂದುಕೊಂಡಿದ್ದಕ್ಕಿಂತಲೂ ಚೆಂದಗೆ ಒಂದಿಡೀ ಸಿನಿಮಾ ಮೂಡಿ ಬಂದಿರುವ ಖುಷಿಯೂ ಅವರಲ್ಲಿದೆ.
ಒಂದೊಂದು ಭೂ ಪ್ರದೇಶಗಳಲ್ಲಿ ಅಲ್ಲಿನ ಬದುಕಿಗನುಗುಣವಾಗಿ ಘಟಿಸೋ ಕಥೆಯ ಸಿನಿಮಾಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ರೂಪುಗೊಳ್ಳುತ್ತಿವೆ. ಕಾಂತಾರಾ ಕೂಡಾ ಅಂಥಾದ್ದೇ ಕಥಾನಕವನ್ನೊಳಗೊಂಡಿತ್ತು. ಸದ್ಯಕ್ಕೆ ಕುದ್ರು ಬಗ್ಗೆ ಹಬ್ಬಿಕೊಂಡಿರುವ ಕ್ರೇಜ್ ಅನ್ನೊಮ್ಮೆ ನೋಡಿದರೆ, ಆ ಅಮೋಘ ಗೆಲುವು ಮತ್ತೊಮ್ಮೆ ಮರುಕಳಿಸುವ ಲಕ್ಷಣಗಳು ದಟ್ಟವಾಗಿ ಗೋಚರಿಸುತ್ತಿವೆ. ವಿಶೇಷವೆಂದರೆ, ಈ ಸಿನಿಮಾದಲ್ಲಿ ಸಾಮರಶ್ಯ ಸಾರುವ ಸಾರವಿದೆಯಂತೆ. ಹಿಂದೂ ಮುಸ್ಲಿಂ ಕ್ರಶ್ಚಿಯನ್ ಎಂಬ ಭೇದವಿಲ್ಲದೆ ಬದುಕೋ ದ್ವೀಪದಲ್ಲೆದುರಾಗೋ ನಾನಾ ಪಲ್ಲಟಗಳ ಬಿರುಗಾಳಿ, ಅದು ತಂದೊಡ್ಡೋ ಸ್ಥಿತಿಗತಿ ಮತ್ತು ಗಲ್ಫ್ ದೇಶಗಳಿಗೂ ಹಬ್ಬಿಕೊಳ್ಳುವ ಕಥೆ… ಇವಿಷ್ಟರೊಂದಿಗೆ ಕುದ್ರುವಿನದ್ದೊಂದು ರೋಚಕ ಪಯಣ ಎಂಬ ವಿವರಣ ಚಿತ್ರತಂಡದ್ದು.
ಹರ್ಷಿತ್ ಶೆಟ್ಟಿ, ಗಾಡ್ವಿನ್ ಮತ್ತು ಫರ್ಹಾನ್ ನಾಯಕರಾಗಿ ನಟಿಸಿದ್ದರೆ, ಪ್ರಿಯಾ ಹೆಗ್ಡೆ, ವಿನುತಾ ಮತ್ತು ಡೈನಾ ಡಿಸೋಜಾ ನಾಯಕಿಯರಾಗಿ ಸಾಥ್ ಕೊಟ್ಟಿದ್ದಾರೆ. ಕಥೆಯ ವಿಚಾರದಲ್ಲಿ ಮಾತ್ರವಲ್ಲದೇ, ಮೇಕಿಂಗ್ನಲ್ಲಿಯೂ ಈ ಚಿತ್ರವನ್ನು ನಿರ್ಮಾಪಕರು ಅದ್ದೂರಿಯಾಗಿರುವಂತೆ ನೋಡಿಕೊಂಡಿದ್ದಾರಂತೆ. ಎಲ್ಲವೂ ಅಂದುಕೊಂಡಂತೆಯೇ ಆಗಿದ್ದರೆ, ಈ ಹೊತ್ತಿಗೆಲ್ಲ ಕುದ್ರು ಜನರ ಮುಂದೆ ಬರುತ್ತಿತ್ತು. ಆದರೆ ಸರಿಯಾದ ಮುಹೂರ್ತಕ್ಕಾಗಿ ಕಾದಿರುವ ಚಿತ್ರತಂಡ, ಮುಂದಿನ ತಿಂಗಳು ತೆರೆಗಾಣಿಸುವ ಸನ್ನಾಹದಲ್ಲಿದೆ. ಒಟ್ಟಾರೆಯಾಗಿ, ಕುದ್ರು ಕನ್ನಡದ ಮಟ್ಟಿಗೆ ಒಂದು ಅಪರೂಪದ ಚಿತ್ರವಾಗಿ ದಾಖಲಾಗುವ ಲಕ್ಷಣಗಳಿದ್ದಾವೆ!