ನಾವೆಲ್ಲ ಪುಟ್ಟ ಮಕ್ಕಳು ಅಳದಂತೆ ನೋಡಿಕೊಳ್ಳಲು ಹರಸಾಹಸ ಪಡ್ತೀವಿ. ಚಿಕ್ಕ ಮಕ್ಕಳು ತುಸು ಅತ್ತರೂ ಅದನ್ನು ಸಮಾಧಾನಿಸಲು ಮನೆ ಮಂದಿಯೆಲ್ಲ ಹರಸಾಹಸ ಪಡ್ತಾರೆ. ಕೇವಲ ಭಾರತದಲ್ಲಿ ಮಾತ್ರವಲ್ಲದೆ, ಎಲ್ಲ ದೇಶಗಳಲ್ಲಿಯೂ ಅಂಥಾದ್ದೇ ಮನಸ್ಥಿತಿ ಇದೆ. ಯಾರಾದ್ರೂ ಪುಟ್ಟ ಮಕ್ಕಳು ಅಳೋದನ್ನ, ಅಬೋಧ ಕಣ್ಣುಗಳಲ್ಲಿ ನೀರು ತುಂಬಿಕೊಂಡು ದೈನ್ಯದಿಂದ ನೋಡೋದನ್ನ ಬಯಸ್ತಾರಾ? ಬಯಸೋದಿಲ್ಲ ಅಂತಲೇ ನಾವೆಲ್ಲ ಅಂದ್ಕೊಂಡಿರ್ತೀವಿ. ಆದ್ರೆ ಅದು ಶುದ್ಧ ಸುಳ್ಳು.
ಜಪಾನ್ ದೇಶದಲ್ಲಿ ಅಖಂಡ ನಾನೂರು ವರ್ಷಗಳಿಂದ ರೂಢಿಯಲ್ಲಿರೋ ಸಂಪ್ರದಾಯದ ಕಥೆ ಕೇಳಿದ್ರೆ ನಿಮಗೂ ಹಾಗನ್ನಿಸದಿರೋದಿಲ್ಲ. ನಾವು ಮಗು ಅಳದಂತೆ ನೋಡಿಕೊಳ್ಳಲು ಹಣಗಾಡ್ತೀವಲ್ಲ? ಜಪಾನಿಗರು ಮಕ್ಕಳನ್ನು ಭೋರಿಟ್ಟು ಅಳುವಂತೆ ಮಾಡಲು ಅಷ್ಟೇ ಹರಸಾಹಸ ಪಡ್ತಾರಂತೆ. ಇದು ವಿಚಿತ್ರ ಅನ್ನಿಸಿದ್ರೂ ನಂಬಲೇ ಬೇಕಾದ ಸತ್ಯ.
ಅದು ಗಂಡು ಮಗುವಾಗಿದ್ರೂ ಹೆಣ್ಣು ಮಗುವಾಗಿದ್ರೂ ಎಷ್ಟು ಅತ್ತರೂ ಜಪಾನ್ ಮಂದಿಗೆ ಸಮಾಧಾನವಿರೋದಿಲ್ಲ. ಯಾಕಂದ್ರೆ ಹೆಚ್ಚು ಅತ್ತಷ್ಟೂ ಅವು ಮುಂದಿನ ಜೀವನದಲ್ಲಿ ಹೆಚ್ಚು ಖುಷಿಯಾಗಿರತ್ತವೆಂಬ ನಂಬಿಕೆ ಅವರಲ್ಲಿದೆ. ಆ ನಂಬಿಕೆಗೆ ಸರಿಸುಮಾರು ನಾಲಕ್ಕುನೂರು ವರ್ಷಗಳಾಗಿವೆ. ಆದ್ದರಿಂದಲೇ ಹೆಚ್ಚಿನ ಜಪಾನ್ ಪೋಶಕರು ಮಕ್ಕಳನ್ನ ಹೆಚ್ಚೆಚ್ಚು ಅಳಿಸಲು ಪ್ರಯತ್ನಿಸ್ತಾರೆ. ಅಲ್ಲಿನ ತಾಯಿ ತನ್ನ ಪುಟ್ಟ ಕಂದ ಹೆಚ್ಚು ಅತ್ತಷ್ಟೂ ಸಂಭ್ರಮಿಸ್ತಾಳಂತೆ.
ಈ ನಂಬಿಕೆ ಅದೆಷ್ಟು ಬಲವಾಗಿ ಬೇರೂರಿದೆ ಅಂದ್ರೆ ಮಗುವನ್ನು ಅಳಿಸಲೆಂದೇ ಜಪಾನಿಗರು ಒಂದಷ್ಟು ತಂತ್ರಗಳನ್ನ ಪಾಲಿಸ್ತಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಸುಮೋಗಳಿಗೆ ಮಕ್ಕಳನ್ನು ಅಳಿಸೋ ಭಾರವೂ ವರ್ಗಾವಣೆಗೊಂಡಿದೆ. ಇಲ್ಲಿನ ಪೋಶಕರು ತಮ್ಮ ಮಕ್ಕಳನ್ನು ಅಳಿಸಲೆಂದೇ ದೈತ್ಯ ದೇಹಿ ಸುಮೋಗಳ ವಶಕ್ಕೊಪ್ಪಿಸ್ತಾರೆ. ಸುಮೋಗಳು ಪುಟ್ಟ ಮಗುವನ್ನೆತ್ತಿಕೊಂಡು ಲಗಾಟಿ ಹೊಡೆದು ಅಳುವಂತೆ ಮಾಡ್ತಾರೆ. ಆಗ ಮಗು ಜೋರಾಗಿ ಅತ್ತರ ಹೆತ್ತವರ ಕಣ್ಣಾಲಿಗಳಲ್ಲಿ ಆನಂದಭಾಷ್ಪ ಜಿನುಗಲಾರಂಭಿಸುತ್ತೆ.