ಇದು ಎಲ್ಲ ಭಾವಗಳೂ ಬೆರಳಂಚಿಗೆ ಬಂದು ನಿಂತಿರುವ ಕಾಲ. ಅದರ ಫಲವಾಗಿಯೇ ಇಲ್ಲಿ ಯಾವುದೂ ಬೆರಗಾಗಿ ಉಳಿದುಕೊಂಡಿಲ್ಲ. ಫೇಸ್ಬುಕ್ಕಿನ ಇನ್ಬಾಕ್ಸಿನಲ್ಲಿ ಮೊಳೆಯ ಪ್ರೀತಿ, ಕ್ಷಣಾರ್ಧದಲ್ಲಿ ವಾಟ್ಸಪ್ಪಿಗೆ ರವಾನೆಯಾಗುತ್ತೆ. ಅಲ್ಲಿ ಹಬ್ಬಿಕೊಳ್ಳುವ ದಂಡಿ ದಂಡಿ ಮಾತಿಗಳಿಗೆ ಪಿಸುಮಾತುಗಳ ಮಾಧುರ್ಯವಿರುವುದಿಲ್ಲ. ಕಾಯುವಿಕೆಯ ಸಂಭ್ರಮ ಇಮೋಜಿಗಳಲ್ಲಿ ಕಳೆದು ಹೋಗಿ, ಮೌನವೆಂಬುದು ಗುರುತಿರದ ಸರಕಿನಂತಾಗಿ, ಬರೀದೇ ಮಾತುಗಳ ಸಂತೆಯಲ್ಲಿ ಎಲ್ಲವೂ ಪರ್ಯಾವಸಾನವಾಗುತ್ತಿದೆ. ಇಂಥಾ ಜಗತ್ತಿನಲ್ಲಿ ಪ್ರೀತಿ ಎಂಬುದು ಏಕಾಏಕಿ ಘಟಿಸಿಬಿಡುವ ಜಾತ್ರೆಯಂಥಾದ್ದು. ಅದು ಅಷ್ಟೇ ವೇಗವಾಗಿ ಮುಗಿದ ಮೇಲೆ, ಅಲ್ಲೇಲ್ಲೋ ಮೂಲೆಯಲ್ಲಿ ಭಾವಗಳ ತೇರು ಕೂಡ ನಿಲ್ಲುವುದಿಲ್ಲ. ಇಂಥಾ ಶುಷ್ಕ ಕಾಲಮಾನದಲ್ಲಿ ಕಾಗದದಲ್ಲಿ ಹರಡಿಕೊಂಡಿದ್ದ ಭಾವುಕ ಕಾಲಮಾನವನ್ನು ಧ್ಯಾನಿಸೋದೊಂದು ಪುಳಕ. ಇಂಥಾ ಸೂಕ್ಷ ಭಾವಗಳಿಗೆ ದೃಷ್ಯ ರೂಪ ಸಿಕ್ಕತಿರುವ ಅಪರೂಪದ ಚಿತ್ರ `ಕಾಗದ’ವೀಗ ಪ್ರೇಕ್ಷಕರ ಮುಂದೆ ತೆರೆದುಕೊಳ್ಳಲು ಸಜ್ಜಾಗಿ ನಿಂತಿದೆ!
ಕಾಗದ ಎಂಬ ಶೀರ್ಷಿಕೆ ಕೇಳಿದಾಕ್ಷಣವೇ ಎಂಥವರ ಮನಸಲ್ಲಾದರೂ ನೂರು ಭಾವಗಳ ವೀಣೆ ನುಡಿದಂತಾಗುತ್ತದೆ. ಅಂಥಾದ್ದೊಂದು ಶೀರ್ಷಿಕೆಯನ್ನು ಪ್ರೇಮ ಕಥಾನಕವೊಂದಕ್ಕೆ ಆಯ್ಕೆ ಮಾಡಿಕೊಳ್ಳುವ ಮೂಲಕ ರಂಜಿತ್ ಕುಮಾರ್ ಗೌಡ ಗೆದ್ದಿದ್ದಾರೆ. ಪಿಯುಸಿ ದಿನಮಾನದ ಪ್ರೇಮ ಕಥೆಯೊಂದನ್ನು, ಪಕ್ಕಾ ಹಳ್ಳಿ ಫ್ಲೇವರಿನೊಂದಿಗೆ ರಂಜಿತ್ ದೃಷ್ಯವಾಗಿಸಿದ್ದಾರಂತೆ. ಹಾಗಂತ, ಕಾಗದಕ್ಕೆ ಅಂಟಿಕೊಂಡಿರೋದು ಬರೀ ಪ್ರೇಮದ ಗಂಧ ಮಾತ್ರವಲ್ಲ; ಅದರ ತುಂಬಾ ಈಗಿನ ಕಾಲಕ್ಕೆ ಮರೀಚಿಕೆಯಾಗುತ್ತಿರುವ ಬಾಂಧವ್ಯದ ಸುಗಂಧವೂ ಸೇರಿಕೊಂಡಿದೆ. ಇದು ಹೇಳಿಕೇಳಿ ಬೇರೆ ಬೇರೆ ಥರದ ಸಿನಿಮಾಗಳು ರೂಪುಗೊಳ್ಳುತ್ತಿರುವ ಕಾಲ. ಇಂಥಾ ಹೊತ್ತಿನಲ್ಲಿ ತಾಜಾ ತಾಜಾ ಹಳ್ಳಿ ಹಿನ್ನೆಲೆಯ ಸಿನಿಮಾ ನೋಡಿ ಮನಸು ತಂಪು ಮಾಡಿಕೊಳ್ಳಲು ಅದೆಷ್ಟೋ ಪ್ರೇಕ್ಷಕರು ಕಾದು ಕೂತಿದ್ದಾರೆ. ಅವರೆಲ್ಲರಿಗೂ ಅಕ್ಷರಶಃ ಹಬ್ಬವಾಗಬಲ್ಲ ಕಸುವಿರುವ ಚಿತ್ರ ಕಾಗದ.
ಈ ಹಿಂದೆ ಮದರಂಗಿ ಮತ್ತು ವಾಸ್ಕೋಡಿ ಗಾಮ ಚಿತ್ರಕ್ಕೆ ಕೋ ಡೈರೆಕ್ಟರ್ ಆಗಿ ಕಾರ್ಯ ನಿರ್ವಹಿಸಿದ್ದವರು ರಂಜಿತ್. ಆ ನಂತರದಲ್ಲಿ ಸ್ವತಂತ್ರ ನಿರ್ದೇಶಕರಾಗಿದ್ದ ರಂಜಿತ್ ಈ ಹಿಂದೆ ಆಪಲ್ ಕೇಕ್ ಎಂಬ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಅದೇನು ದುರಾದೃಷ್ಟವೋ ಗೊತ್ತಿಲ್ಲ; ಈ ಸಿನಿಮಾ ಬಿಡುಗಡೆಯಾದ ಮಾರನೇ ದಿನದ ಹೊತ್ತಿಗೆಲ್ಲ ರೆಬೆಲ್ ಸ್ಟಾರ್ ಅಂಬರೀಶ್ ಇನ್ನಿಲ್ಲವೆಂಬ ಸುದ್ದಿ ಬಂದಿತ್ತು. ಚಿತ್ರರಂಗವೇ ಕೆಲ ದಿನಗಳ ಕಾಲ ಸ್ಥಗಿತಗೊಂಡಿದ್ದರಿಂದ ಹಿನ್ನಡೆಯಾದರೂ, ಅದಕ್ಕೆ ಫಿಲಂ ಫೆಸ್ಟಿವಲ್ನಲ್ಲಿ ಪ್ರಶಸ್ತಿ ಮತ್ತು ನೋಡಿದ ಮಂದಿಯಿಂದ ಮೆಚ್ಚುಗೆಗಳು ಸಿಕ್ಕಿದ್ದವು. ಆ ನಂತರ ಲೂಸ್ ಮಾದ ಯೋಗಿ ನಾಯಕನಾಗಿರುವ ಕಂಸ ಚಿತ್ರವನ್ನು ಕೈಗೆತ್ತಿಕೊಂಡು ಮುಗಿಸಿದ್ದ ರಂಜಿತ್, ರೂಬಿಕ್ ಎಂಬ ಮತ್ತೊಂದು ಚಿತ್ರವನ್ನೂ ನಿರ್ದೇಶನ ಮಾಡಿದ್ದಾರೆ. ಕಾಗದ ಎಂಬ ನವಿರು ಕಥನ ಅವರ ಪಾಲಿಗೆ ಮೂರನೇ ಚಿತ್ರ.
ಒಂದಕ್ಕಿಂತ ಒಂದು ಭಿನ್ನ ಸಿನಿಮಾಗಳನ್ನೇ ನಿರ್ದೇಶನ ಮಾಡಬೇಕೆಂಬ ಕನಸಿಟ್ಟುಕೊಂಡಿರುವ ನಿರ್ದೇಶಕರು, ಕಾಗದದ ಮೂಲಕ ದಾಖಲೆ ಬರೆಯಲು ಮುಂದಾಗಿದ್ದಾರೆ. ಸರಿಸುಮಾರು 2005ರ ಕಾಲಘಟ್ಟದ ಪ್ರೇಮ ಕಥೆ, ಹಳ್ಳಿ ಹಿನ್ನೆಲೆಯಲ್ಲಿ ಪ್ರೇಕ್ಷಕರೆದುರು ತೆರೆದುಕೊಳ್ಳಲಿದೆ. ಭೈರನಕೋಟೆ ಮತ್ತು ಕೆಂಪನಹಳ್ಳಿ ರೆಂಬೆರಡು ಕಾಲ್ಪನಿಕ ಹಳ್ಳಿಗಳ ನಡುವೆ ಈ ಕಥೆ ಚಲಿಸಲಿದೆ. ಹಳ್ಳಿ ಬದುಕಿನ ಆಪ್ತ ಚಿತ್ರಣದ, ಭಾವ ತೀವ್ರತೆ ಹೊಂದಿರೋ ಈ ಪ್ರೇಮ ಕಥಾನಕವನ್ನು ಚಿಕ್ಕಮಗಳೂರು, ಬೇಲೂರು ಮುಂತಾದೆಡೆಗಳಲ್ಲಿನ ಸೂಕ್ತ ಪ್ರದೇಶಗಳಲ್ಲಿ ಚಿತ್ರೀಕರಿಸಿಕೊಳ್ಳಲಾಗಿದೆ. ಆದಿತ್ಯಾ ಮತ್ತು ಅಂಕಿತ ನಾಯಕ ನಾಯಕಿಯರಾಗಿ ನಟಿಸಿರೋ ಕಾಗದದ ತಾರಾ ಬಳಗದಲ್ಲಿ ನೇಹಾ ಪಾಟೀಲ್, ಎಂ.ಕೆ ಮಥ, ರೋಹಿಣಿ ಮುಂತಾದವರಿದ್ದಾರೆ. ಸತೀಶ್ ಬಾಬು ಸಂಗೀತ, ಪವನ್ ಗೌಡ ಸಂಕಲನ ಮತ್ತು ವೀನಸ್ ನಾಗರಾಜ ಮೂರ್ತಿ ಛಾಯಾಗ್ರಹಣ ಈ ಚಿತ್ರಕ್ಕಿದೆ.