ಜಗತ್ತು ಅದೇನೇ ಮುಂದುವರೆದಿದೆ ಅಂದ್ರೂ ಹಲವಾರು ವಿಷಯಗಳಲ್ಲದು ಹಿಂದೆಯೇ ನಿಂತು ಬಿಟ್ಟಿದೆ. ಕೆಲ ಪಿಡುಗುಗಳಿಂದ ಅದೆಷ್ಟೇ ವಿಮೋಚನೆಗೊಳ್ಳಲು ಹವಣಿಸಿದ್ರೂ ಆಚರಣೆಗಳ ಹಣೆಪಟ್ಟಿಯಡಿಯಲ್ಲಿ ಅವು ಜೀವಂತವಾಗಿವೆ. ಇಡೀ ಜಗತ್ತಿನ ತುಂಬಾ ಹೆಣ್ಣನ್ನು ಭೋಗದ ವಸ್ತುವಾಗಿಯಷ್ಟೇ ಕಾಣೋ ಮನಸ್ಥಿತಿ ಕೂಡಾ ಆ ಲಿಸ್ಟಿಗೆ ಖಂಡಿತಾ ಸೇರಿಕೊಳ್ಳುತ್ತೆ. ಈವತ್ತಿಗೆ ಹೆಣ್ಣು ಯಾವುದರಲ್ಲಿಯೂ ಪುರುಷರಿಗೆ ಕಡಿಮೆಯಲ್ಲ ಅನ್ನೋದು ಸಾಬೀತಾಗಿದೆ. ಆದರೂ ಹೆಣ್ಣನ್ನು ಅಡಿಯಾಳಾಗಿಸಿಕೊಳ್ಳೋ ಹುನ್ನಾರಗಳು ಮಾತ್ರ ಹಲವು ಮುಖವಾಡ ಧರಿಸಿ ಜೀವಂತವಾಗಿವೆ.
ಪ್ರಸ್ತುತ ಪ್ರತೀ ದೇಶಗಳಲ್ಲಿಯೂ ಹೆಣ್ಣು ಮಕ್ಕಳ ಮೇಲಾಗೋ ದೌರ್ಜನ್ಯ ತಡೆಗೆ ಬಿಗುವಾದ ಕಾನೂನು ಕಟ್ಟಳೆಗಳಿವೆ. ಭಾರತವೂ ಅದಕ್ಕೆ ಹೊರತಾಗಿಲ್ಲ. ಮಹಿಳೆಯರನ್ನು ಕಿಡ್ನಾಪ್ನಂಥಾ ಹಿಂಸೆಗೊಳಪಡಿಸಿದರಂತೂ ಕಾನೂನು ನರಕ ತೋರಿಸುತ್ತೆ. ಈವತ್ತಿಗೆ ಮಹಿಳಾ ಸಂಕುಲ ಒಂದಷ್ಟು ನಿರಾಳವಾಗಿರೋದು ಇಂಥಾದ್ದರಿಂದಲೇ. ಹೀಗೆ ಜಗತ್ತೆಲ್ಲ ಹೆಣ್ಣಿನ ರಕ್ಷಣೆಗೆ ಟೊಂಕ ಕಟ್ಟಿ ನಿಂತಿರುವಾಗ ಅದೇ ಜಗತ್ತಿನ ಭಾಗವಾಗಿರೋ ಒಂದು ದೇಶದಲ್ಲಿ ಹುಡುಗೀರನ್ನ ಕಿಡ್ನಾಪ್ ಮಾಡೋದು ಲೀಗಲ್ ಆಗಿದೆ ಅಂದ್ರೆ ಅಚ್ಚರಿಯಾಗದಿರೋದಿಲ್ಲ.
ಇಂಥಾದ್ದೊಂದು ಅನಿಷ್ಟದ ರಿವಾಜು ಜಾರಿಯಲ್ಲಿರೋದು ಕಿರ್ಗಿಸ್ತಾನ್ ದೇಶದಲ್ಲಿ. ಸಾಮಾನ್ಯವಾಗಿ ಹೆಣ್ಣೊಬ್ಬಳನ್ನು ಒಲಿಸಿಕೊಂಡು ಜೊತೆಯಾಗಿ ಬದುಕೋದೊಂದು ಸಾಹಸ. ಹಾಗೊಂದು ವೇಳೆ ಪ್ರೀತಿ ಫಲಿಸಿದರೂ ಮದುವೆಯ ಹೊಸ್ತಿಲು ದಾಟೋದು ಮತ್ತೊಂದು ಸಾಹಸ. ಆದ್ರೆ ಕಿರ್ಗಿಸ್ತಾನದಲ್ಲಿ ಮಾತ್ರ ಮನಸು ಗೆದ್ದ ಹುಡುಗಿಯನ್ನು ಸ್ವಂತವಾಗಿಸಿಕೊಳ್ಳೋದು ಸಲೀಸು. ಯಾವುದೇ ಹುಡುಗನಿಗೆ ಹುಡುಗಿಯೊಬ್ಬಳು ಇಷ್ಟವಾದರೆ ಆಕೆಯನ್ನು ಕಿಡ್ನಾಪ್ ಮಾಡಿ ನಾಲಕೈದು ದಿನ ಅಜ್ಞಾತ ಸ್ಥಳದಲ್ಲಿಟ್ಟರೆ ಮದುವೆಯ ಮೊದಲ ಹಂತ ಮುಕ್ತಾಯವಾದಂತೆಯೇ.
ಹೀಗೆ ಮನ ಗೆದ್ದ ಹುಡುಗಿಯನ್ನು ಕಿಡ್ನಾಪ್ ಮಾಡೋಕೆ ಹುಡುನಿಗೆ ಆತನ ಸ್ನೇಹಿತರು ಸಹಾಯ ಮಾಡ್ತಾರಂತೆ. ಹಾಗೆ ಯಶಸ್ವಿಯಾಗಿ ಕಿಡ್ನಾಪ್ ಮಾಡಿದ ನಂತರ ಸ್ನೇಹಿತರೇ ಹುಡುಗಿಯ ಮನೆ ಮಂದಿಗೆ ವಿಷಯ ಮುಟ್ಟಿಸ್ತಾರೆ. ಒಂದು ವೇಳೆ ಕಿಡ್ನಾಪ್ ಆದ ಹುಡುಗಿಗೆ ಆ ಹುಡುಗ ಇಷ್ಟವಾಗಿಲ್ಲ ಅಂತಿಟ್ಕೊಳ್ಳಿ, ಆ ನಂತರದಲ್ಲಿ ನೆಮ್ಮದಿಯಾಗಿರೋ ಅವಕಾಶವನ್ನಾಕೆ ಕಳೆದುಕೊಳ್ತಾಳೆ. ಆಕೆಯನ್ನು ಆ ನಂತರದಲ್ಲಿ ಯಾರೂ ಮದುವೆಯಾಗೋದಿಲ್ಲ. ದುರಂತವೆಂದರೆ, ಹೆಣ್ಣುಮಕ್ಕಳನ್ನು ನರಕಕ್ಕೆ ತಳ್ಳುವ ಈ ಪ್ರಕ್ರಿಯೆಯನ್ನು ಆ ದೇಶ ಇನ್ನೂ ಕಾನೂನುಸಮ್ಮತವಾಗಿ ಕಾಯ್ದುಕೊಂಡು ಬಂದಿದೆ.