ಈ ಜಗತ್ತಿನಲ್ಲಿ ಒಪ್ಪತ್ತಿನ ಊಟಕ್ಕೂ ಗತಿಯಿಲ್ಲದೆ ಪರಡಾಡುವ ಕೋಟ್ಯಂತರ ಜೀವಗಳಿದ್ದಾವೆ. ಅದರಾಚೆಗೆ ಕಪ್ಪು, ಕುರೂಪಗಳೆಂಬ ಕೀಳರಿಮೆಯ ಕುಲುಮೆಯಲ್ಲಿ ಮತ್ತಷ್ಟು ಜೀವಗಳು ಬೇಯುತ್ತಿದ್ದಾವೆ. ಇಂಥಾದ್ದರ ನಡುವೆ ಕೆಲ ಮಂದಿ ನಾನಾ ಥರದ ಶೋಕಿಗಳಿಗಾಗಿಯೇ ಬದುಕುತ್ತಿದ್ದಾರೆ. ಪ್ರಾಕೃತಿಕವಾಗಿ ಸಿಕ್ಕ ಸೌಂದರ್ಯವನ್ನೂ ಕೂಡಾ ಕಷ್ಟಪಟ್ಟು, ದುಡ್ಡು ಖರ್ಚು ಮಾಡಿ ಹಾಳು ಮಾಡಿಕೊಳ್ಳುತ್ತಿದ್ದಾರೆ.
ಇಂಥಾದ್ದೇ ಮನಸ್ಥಿತಿಯ ಹುಚ್ಚನೊಬ್ಬ ಇರುವ ಸೌಂದರ್ಯವನ್ನ ಕುರೂಪ ಮಾಡಿಕೊಳ್ಳಲು ಬರೋಬ್ಬರಿ ಐದು ಲಕ್ಷಕ್ಕೂ ಹೆಚ್ಚಿನ ಹಣವನ್ನ ಮುಡಿಪಾಗಿಟ್ಟಿದ್ದಾನೆ. ಅಂಥಾದ್ದೊಂದು ಹುಚ್ಚುತನದ ಮೂಲಕವೇ ಕುಖ್ಯಾತಿ ಗಳಿಸಿರುವಾತ ಜರ್ಮನಿ ದೇಶದ ಸ್ಯಾಂಡ್ರೋ. ಈತನ ಹುಚ್ಚಾಟದ ಬಗ್ಗೆ ಒಂದಷ್ಟು ಮಂದಿ ಉಗಿದು ಉಪ್ಪಾಕಲಾರಂಭಿಸಿದ್ದಾರೆ.
ಅಷ್ಟಕ್ಕೂ ಈ ಆಸಾಮಿಗಿದ್ದದ್ದು ವಿಚಿತ್ರವಾದ ಬಯಕೆ. ತನ್ನ ದೇಹವನ್ನು ಥೇಟು ಅಸ್ಥಿಪಂಜರದ ಆಕಾರದಲ್ಲಿ ರೂಪಿಸಬೇಕನ್ನೋದು ಅವನ ಬಯಕೆ. ಇದಕ್ಕಾಗಿ ಅಸ್ಥಿಪಂಜರದಂತೆ ಮೈ ತುಂಬಾ ಟ್ಯಾಟೂ ಹಾಕಿಸಿಕೊಂಡಿದ್ದ. ಆತನ ಹುಚ್ಚು ಅದ್ಯಾವ ಪರಿ ಇತ್ತೆಂದರೆ ಲಕ್ಷಾಂತರ ಖರ್ಚು ಮಾಡಿ ಕಿವಿಗಳನ್ನೂ ಶಾಶ್ವತವಾಗಿ ಕೀಳಿಸಿಕೊಂಡಿದ್ದಾನೆ. ಈ ಪ್ರಪಂಚದಲ್ಲಿ ಇನ್ನೂ ಎಂತೆಂಥ ಹುಚ್ಚರಿದ್ದಾರೋ…