ಹೂಜಿಯೊಳಗೆ ಕಲ್ಲುಗಳನ್ನ ಹಾಕಿ ಉಪಾಯದಿಂದ ಬಾಯಾರಿಕೆ ನೀಗಿಕೊಂಡ ಕಾಗೆಯ ಕಥೆ ನಮಗೆಲ್ಲ ಪರಿಚಿತ. ಅದು ಆ ಪಕ್ಷಿಯ ಅಗಾಧವಾದ ಬುದ್ಧಿವಂತಿಕೆಯನ್ನ ಸಾರಿ ಹೇಳುತ್ತೆ. ಆದರೂ ಕೂಡಾ ಂದು ಕೆಟ್ಟ ಶಕುನದ ಪಕ್ಷಿ ಎಂದೇ ಬಿಂಬಿತವಾಗಿದೆ. ಆದ್ದರಿಂದಲೇ ಅದರ ಬಗೆಗೊಂದು ತಾತ್ಸಾರ ತಂತಾನೇ ಮೂಡಿಕೊಂಡು ಬಿಟ್ಟಿದೆ. ಆದ್ರೆ ಕಾಗೆಯ ಗ್ರಹಿಕೆ, ಸ್ಮರಣ ಶಕ್ತಿ, ಬುದ್ಧಿವಂತಿಕೆ ನಿಜಕ್ಕೂ ಕಂಗಾಗಾಗುವಂಥಾದ್ದು.
ಭಾರತದಲ್ಲಿ ಒಂದಷ್ಟು ನಂಬಿಕೆಗಳು ಕಾಗೆಯ ಸುತ್ತಾ ಹಬ್ಬಿಕೊಂಡಿದೆ. ಕಾಗೆ ಮುಟ್ಟಿದರೊಂದು ಶಕುನ, ಅದು ಕೂಗಿದರೊಂದು ಶಕುನ… ಒಟ್ಟಾರೆಯಾಗಿ ಅದು ಪಿಂಡ ಪ್ರಧಾನ ಮಾಡೋ ಸಮಯದಲ್ಲಿ ಮಾತ್ರವೇ ಉಪಯೋಗಕ್ಕೆ ಬರೋ ಪಕ್ಷಿ ಎಂಬಂತಾಗಿ ಹೋಗಿದೆ. ಆದ್ರೆ ವಾಶಿಂಗ್ಟನ್ ಯುನಿವರ್ಸಿಟಿಯೊಂದು ವರ್ಷಾಂತರಗಳ ಕಾಲ ನಡೆಸಿರೋ ಅಧ್ಯಯನ ಕಾಗೆಯ ಅಗಾಧ ಶಕ್ತಿ ಸಾಮಥ್ರ್ಯಗಳಿಗೆ ಕನ್ನಡಿ ಹಿಡಿಯುವಂತಿದೆ.
ಕಾಗೆಯದ್ದು ಅಪರಿಮಿತ ಸ್ಮರಣ ಶಕ್ತಿ. ಸಾಮಾನ್ಯವಾಗಿ ಕಾಗೆಗಳು ಸಂಘ ಜೀವಿಗಳು. ಸಿಕ್ಕ ಆಹಾರವನ್ನು ಅದೆಂಥಾ ಹಸಿವಿದ್ದರೂ ಅವು ಒಂದೊಂದೇ ಕಬಳಿಸೋದಿಲ್ಲ. ತಮ್ಮವರನ್ನೆಲ್ಲ ಕೂಗಿ ಕರೆದು ಹಂಚಿ ತಿನ್ನುತ್ತವೆ. ಅವು ಒಂಥರಾ ನಿರುಪದ್ರವಿ ಜೀವಿಗಳು. ಆದ್ರೆ ಅವುಗಳಿಗೆ ಮನುಷ್ಯರಿಂದಲೇ ನಾನಾ ತೊಂದರೆಗಳಾಗುತ್ತವೆ. ವಿಶೇಷ ಅಂದ್ರೆ ಅವು ತಮ್ಮ ಸುತ್ತ ಓಡಾಡೋ ಮನುಷ್ಯರನ್ನ ನಿಖರವಾಗಿ ನೆನಪಿಟ್ಟುಕೊಳ್ಳುತ್ತವಂತೆ.
ಅದೇನು ಸಾಮಾನ್ಯವಾದ ಸ್ಮರಣ ಶಕ್ತಿಯಲ್ಲ. ಓರ್ವ ಮನುಷ್ಯನ ಮುಖ ಕಾಗೆಯ ಮೆದುಳಲ್ಲಿ ರಿಜಿಸ್ಟರ್ ಆಯಿತೆಂದರೆ ಐದಾರು ವರ್ಷ ಕಳೆದರೂ ಅದು ಮಾಸಲಾಗೋದಿಲ್ಲ. ಒಂದು ವೇಳೆ ಯಾರಾದರೂ ಕಾಗೆಗೆ ತೊಂದರೆ ಕೊಟ್ಟರೆಂದಿಟ್ಟುಕೊಳ್ಳಿ. ಆ ವ್ಯಕ್ತಿಯ ಮುಖವನ್ನವು ಕಡೇಯ ವರೆಗೂ ಮರೆಯೋದಿಲ್ಲ. ಆತನ ಬಗ್ಗೆ ತಮ್ಮ ಸಂಗಾತಿಗಳಿಗೂ ಎಚ್ಚರಿಕೆಯ ಸಂದೇಶ ರವಾನಿಸಿ ಅಲರ್ಟ್ ಆಗಿರುವಂತೆ ಮಾಡುತ್ತವಂತೆ.
ಇನ್ನು ಆಹಾರ ಸಂಗ್ರಹಣೆಯ ವಿಚಾರದಲ್ಲಿಯೂ ಕಾಗೆಗಳು ಅಪರಿಮಿತವಾದ ಬುದ್ಧಿಶಕ್ತಿಯನ್ನ ಬಳಸುತ್ತವೆ. ಶಕ್ತಿಯಿಂದ ಸಾಧ್ಯವಾಗದಿದ್ದರೆ ಯುಕ್ತಿಯಿಂದಲೇ ಆಹಾರವನ್ನು ಪಡೆದುಕೊಳ್ಳುತ್ತವೆ. ಆಹಾರವೆಂಬುದು ಯಾವ ಸಂದಿಗೊಂದಿಯಲ್ಲಿದ್ದರೂ ಅವು ಉಳಿದ ಪಕ್ಷಿಗಳಿಗಿಂತ ಹೆಚ್ಚು ಶ್ರಮ ವಹಿಸಿ ನಾಜೂಕಿನಿಂದ ಪಡೆದೇ ತೀರುತ್ತವೆ. ಇಂಥಾ ಬುದ್ಧಿವಂತಿಕೆಯ ಕಾಗೆ ನಮ್ಮ ನಡುವೆ ಕೆಟ್ಟ ಶಕುನವಾಗಿ ಬಿಂಬಿತವಾಗಿರೋದು ದುರಂತವಲ್ಲದೆ ಮತ್ತೇನು?