ನಾವು ಮನುಷ್ಯರನ್ನು ಬಾಧಿಸುವ ಚಿತ್ರ ವಿಚಿತ್ರವಾದ ಕಾಯಿಲೆಗಳನ್ನ ಕಂಡು ಆಗಾಗಾ ಹೌಹಾರ್ತೇವೆ. ದೇಹದೊಳಗೆ ಸಣ್ಣಪುಟ್ಟ ವ್ಯತ್ಯಯಗಳಾದಾಗಲೂ ಅದರ ಬಗ್ಗೆ ವಿಪರೀತ ತಲೆಕೆಡಿಸಿಕೊಳ್ತೇವೆ. ಯಾರನ್ನೋ ಬಾಧಿಸಿದ ಕಾಯಿಲೆ ನಮಗೇ ಅಮರಿಕೊಳ್ಳಬಹುದೇನೋ ಅಂತ ಚಿಂತೆಗೀಡಾಗ್ತೇವೆ. ಅಂಥಾ ಎಲ್ಲ ಭಯ, ಚಿಂತನೆಗಳ ದಾವಾನಲದಂತಿರೋ ನಮ್ಮ ಮನಸಿನೊಳಗಿನ ಕಾಯಿಲೆಗಳ ಬಗ್ಗೆ ನಾವೇ ಕುರುಡಾಗ್ತೇವೆ.
ನಿಮಗೇನಾದರೂ ಮಾನಸಿಕವಾಗಿ ಬಾಧಿಸೋ ಭಯ, ಕಾಯಿಲೆಗಳ ಇಂಚಿಂಚು ವಿವರ ಗೊತ್ತಾದ್ರೆ ನಿಜಕ್ಕೂ ಕಸಿವಿಸಿಗೀಡಾಗ್ತೀರಿ. ಮಾನಸಿಕವಾಗಿ ಜರ್ಝರಿತಗೊಂಡ ಮನುಷ್ಯನಿಗೆ ಹುಚ್ಚನ ಪಟ್ಟ ಕಟ್ಟೋ ಜನರಿಗೆ ತಾವೂ ಕೂಡಾ ಅದಕ್ಕೆ ಸಮೀಪವಾಗುವಂಥಾ ನಾನಾ ಭಯ, ಕಾಯಿಲೆಗಳ ಗುಡಾಣವಾಗುತ್ತಿದೆ ಅನ್ನೋದರ ಪರಿವೆಯೇ ಇರೋದಿಲ್ಲ. ನಿಖರವಾಗಿ ನೋಡಿದ್ರೆ ನಾವೆಲ್ಲರೂ ಒಂದಲ್ಲಾ ಒಂದು ರೀತಿಯ ಮಾನಸಿಕ ರೋಗಿಗಳೇ!
ಮನಃಶಾಸ್ತ್ರದಲ್ಲಿ ನಾನಾ ಫೋಬಿಯಾಗಳ ಉಲ್ಲೇಖಗಳಿದ್ದಾವೆ. ಅದರಲ್ಲಿ ಒಂದಷ್ಟು ಗುಣ ಲಕ್ಷಣಗಳಿಲ್ಲದ ಮನುಷ್ಯರು ಸಿಗೋದೇ ಡೌಟು. ಕೆಲವರಿಗೆ ನೀರು ಕಂಡ್ರೆ ಭಯ. ಮತ್ತೆ ಕೆಲವರಿಗೆ ಎತ್ತರ, ಪ್ರಪಾತಗಳ ಭಯ. ಇದರಾಚೆಗೆ ಮತ್ತೊಂದಷ್ಟು ಫೋಬಿಯಾಗಳು ಮನುಷ್ಯನ ಬೆಳವಣಿಗೆಯನ್ನೇ ಕುಂಠಿತಗೊಳಿಸ್ತಾವೆ. ಆ ಸಾಲಿನಲ್ಲಿ ಅಲೋಡಕ್ಸಾಫೋಬಿಯಾ ಕೂಡಾ ಸೇರಿಕೊಳ್ಳುತ್ತೆ.
ಇದು ಇತರರ ಅಭಿಪ್ರಾಯಗಳನ್ನ ಎದುರಿಸೋ ಭಯ. ನಿಜವಾಗಿಯೂ ನಿಮ್ಮೊಳಗೊಂದು ಪ್ರತಿಭೆ ಇರುತ್ತೆ. ಮತ್ಯಾವುದೋ ಕೆಲಸದಲ್ಲಿ ನಿಮಗೆ ಅತೀವ ಪಾಂಡಿತ್ಯವಿರುತ್ತೆ ಅಂತಿಟ್ಟುಕೊಳ್ಳಿ. ಆದ್ರೆ ಅದನ್ನ ತೋರ್ಪಡಿಸಿಕೊಳ್ಳೋಕೆ ಹಿಂಜರೀತೀರಿ. ಆಸುಪಾಸಿನವರು ಅದಕ್ಕೆ ನಾಚಿಕೆ ಅಂತ ಹೆಸರಿಟ್ಟಾಗ ತುಸು ನಾಚಿಕೊಂಡೇ ನಿರಾಳವಾಗ್ತೀರಿ. ಆದ್ರೆ ನಿಮ್ಮೊಳಗೇ ಅದು ನಾಚಿಕೆಯನ್ನು ಮೀರಿದ ಮತ್ತೇನೋ ಕಿಸುರೆಂಬ ಧ್ವನಿ ಮೊರೆಯುತ್ತಿರುತ್ತೆ.
ಆ ನಂತರ ನಿಮ್ಮ ಪ್ರತಿಭೆಯನ್ನ ಬೇರ್ಯಾರೋ ಕೆಟ್ಟದಾಗಿ ಪ್ರಚುರಪಡಿಸಿದಾಗ, ಒಂದಷ್ಟು ಖ್ಯಾತಿ ಗಳಿಸಿದಾಗ ಒಳಗೊಳಗೇ ಕೊರಗ್ತೀರಿ. ಅದನ್ನ ಮೀರಲಾಗದೆ ನಿಮ್ಮ ಬೆಳವಣಿಗೆಗೆ ನೀವೇ ಗೋಡೆಯಾಗ್ತೀರಿ. ಇಂಥಾ ಮನೋವ್ಯಾಕುಲ ನಿಮ್ಮನ್ನು ಕಾಡುತ್ತಿದೆ ಅಂದ್ರೆ ನಿಮಗೆ ಅಲೋಡಕ್ಸಾಫೋಬಿಯಾ ಇದೆ ಅಂತಾನೇ ಅರ್ಥ. ಅದೇ ರೀತಿ ಒಂದು ಸನ್ನಿವೇಷದಲ್ಲಿ ನಿಮಗನ್ನಿಸಿದ ಅಭಿಪ್ರಾಯವನ್ನ ಹೇಳಲಾಗದಿದ್ರೆ ಅದು ಡಕ್ಸೋಫೋಬಿಯಾದ ಲಕ್ಷಣ. ನೆನಪಿರಲಿ, ಇವೆರಡೂ ಬೆಳವಣಿಗೆಯನ್ನು ಮಣ್ಣುಪಾಲು ಮಾಡುವಷ್ಟು ಪರಿಣಾಮ ಹೊಂದಿರೋ ಕಾಯಿಲೆಗಳೇ!