ಬೆಕ್ಕು ಅನೇಕರಿಗೆ ಪ್ರಿಯವಾದ ಮುದ್ದಿನ ಪ್ರಾಣಿ. ಮನೆಯೊಳಗೇ ಅಡ್ಡಾಡಿಕೊಂಡು ಮಡಿಲೇರಿ ಕೂರೋ ಬೆಕ್ಕುಗಳಿರದ ಮನೆ ವಿರಳ. ಬೆಕ್ಕುಗಳಿಗೆ ಸಾಕಿದ ಮನೆಯಲ್ಲಿ ಸಕಲ ಸೌಕರ್ಯಗಳಿದ್ದರೂ ಪಕ್ಕದ ಮನೆಯ ಅಡುಗೆಮನೆ ಜಾಲಾಡಿದರೇನೇ ಸಮಾಧಾನ. ಕೊಂಚ ಕದ್ದು ತಿಂದರೆ ಅದೇನೋ ತೃಪ್ತಿ. ಇಂಥಾ ಬೆಕ್ಕು ಜಾಗತಿಕ ಶೀತಲ ಸಮರದ ಕಾಲಘಟ್ಟದಲ್ಲಿ ಪತ್ತೇದಾರಿಕೆ ನಡೆಸಿತ್ತೆಂದರೆ ನಂಬ್ತೀರಾ? ಅದನ್ನ ನಂಬದೇ ವಿಧಿಯಿಲ್ಲ. ಈಗಲೂ ಯುದ್ಧ ಕಾಲದಲ್ಲಿ ಶತ್ರು ದೇಶಗಳ ಮೇಲೆ ಕಣ್ಣಿಡಲು ಪಾರಿವಾಳದಂಥ ಪಕ್ಷಿಗಳನ್ನ ಬಳಸೋ ಪರಿಪಾಠವಿದೆ. ಆದರೆ ಅಮೆರಿಕದ ಬೇಹುಗಾರಿಕಾ ಅಲಾಖೆಯ ಅಧಿಕಾರಿಗಳು ಶೀತಲ ಸಮರದ ಕಾಲದಲ್ಲಿ ಒಂದು ಹೆಜ್ಜೆ ಮುಂದೆ ಹೋಗಿ ಕಾರ್ಯಪ್ರವೃತ್ತರಾಗಿದ್ದರು.
ಬೆಕ್ಕುಗಳ ಗುಣ ಲಕ್ಷಣ ಅರಿತಿದ್ದ ಅಧಿಕಾರಿಗಳು ಶತ್ರುಗಳ ಕಾರ್ಯ ಯೋಜನೆ ಅರಿಯಲು ಬೆಕ್ಕನ್ನ ಬಳಸಿಕೊಳ್ಳಲು ಪ್ರಯತ್ನಿಸಿದ್ದರು. ಶತ್ರು ಪಾಳೆಯದವರು ಗುಪ್ತ ಮಾತುಕತೆ ನಡೆಸೋದನ್ನು ಕದ್ದಾಲಿಸಲು ಬೆಕ್ಕನ್ನ ಪಣಕ್ಕಿಟ್ಟಿದ್ದರು. ಬೆಕ್ಕಿನ ಕಿವಿಗೆ ರೆಕಾರ್ಡರ್ ಅಳವಡಿಸಿ ಶತ್ರುಗಳ ಸುತ್ತ ಬೀಟು ಹೊಡೆಯುವಂಥಾ ವ್ಯವಸ್ಥೆ ಮಾಡಿದ್ದರಂತೆ.
ಒಂದು ಬೆಕ್ಕಿನ ಕಿವಿಗೆ ಸಾಧನ ಅಳವಡಿಸಿ ಅದಕ್ಕೆ ತಯಿಂಗಳುಗಟ್ಟಲೆ ತರಬೇತಿ ಕೊಡಲಾಗಿತ್ತು. ಕಡೆಗೂ ಅಧಿಕಾರಿಗಳು ಟಾಕ್ಸಿಯಲ್ಲಿ ಶತ್ರುಗಳ ಅಡ್ಡೆಯ ಬಳಿ ತೆರಳಿ ಪತ್ತೇದಾರಿ ಬೆಕ್ಕನ್ನ ಒಳ ಬಿಟ್ಟಿದ್ದರು. ಆದರೆ ಕೆಲವೇ ಕ್ಷಣಗಳಲ್ಲಿ ಪುಕ್ಕಲು ಬೆಕ್ಕು ಮರಳಿ ಟ್ಯಾಕ್ಸಿಗೆ ತೂರಿಕೊಂಡಿತ್ತು. ಅದರ ಮೂಲಕವೇ ಎಲ್ಲಿ ಸಿಗೆಬೀಳಬೇಕಾಗುತ್ತೋ ಅಂತ ಅಧಿಕಾರಿಗಳು ಬೆಚ್ಚಿಬಿದ್ದು ಅಲ್ಲಿಂದ ಜಾಗ ಖಾಲಿ ಮಾಡಿದ್ದರಂತೆ. ಆ ಮೂಲಕ ಮಾರ್ಜಾಲದ ಪತ್ತೇದಾರಿಕೆ ಸಮಾಪ್ತಿಯಾಗಿತ್ತಂತೆ!