ನೀವೇನಾದರೂ ಕೊಂಚ ಗ್ರಾಮೀಣ ಪ್ರದೇಶದವರಾಗಿದ್ದರೆ ಕಣಜನ ಹುಳುವಿನ ಪರಿಚಯವಿರುತ್ತೆ. ಪ್ರದೇಶದಿಂದ ಪ್ರದೇಶಕ್ಕೆ ಇದರ ಹೆಸರು ಬದಲಾದೀತೇನೋ. ಆದ್ರೆ ಅದರ ದಾಳಿಯ ಭಯ ಮಾತ್ರ ಎಲ್ಲ ಕಡೆಯೂ ಅಷ್ಟೇ ತೀವ್ರವಾಗಿರುತ್ತೆ. ಕೊಂಚ ಕಾಡಿನ ಅಂಚಿನಲ್ಲಿರೋ ಕಣಜನ ಹುಳುವಿನ ದಾಳಿ ನಿಜಕ್ಕೂ ಭೀಕರವಾಗಿರುತ್ತೆ. ತಲೆಗೇನಾದರೂ ಐದಾರು ಹುಳ ಚುಚ್ಚಿದರೆ ಮನುಷ್ಯ ಸತ್ತೇಹೋಗಿ ಬಿಡ್ತಾನೆ. ಜೇನು ಹುಳಗಳಿಗಿಂತ ತುಸು ದೊಡ್ಡ ಗಾತ್ರ ಕಣಜನ ಹುಳುಗಳದ್ದು. ಜೇನು ಹುಳುಗಳಿರೋ ಪ್ರದೇಶದಲ್ಲಿ ಇವುಗಳ ಹಾಜರಿ ಇರುತ್ತೆ. ಜೇನು ಸಾಕಣೆ ಮಾಡುವಲ್ಲಿಯಂತೂ ಇವು ಇದ್ದೇ ಇರುತ್ತವೆ. ಜೇನು ನೊಣಗಳನ್ನ ಕೊಂದು ಮಕರಂದ ಅಪಹರಿಸುವಲ್ಲಿಯೂ ಕಣಜಗಳದ್ದು ಎತ್ತಿದ ಕೈ.
ಇಂಥಾ ಕಣಜಗಳು ಯಾವುದೇ ಪ್ರಚೋದನೆ ಇಲ್ಲದೆಯೂ ಮನುಷ್ಯರ ಮೇಲೆ ದಾಳಿ ಮಾಡಿ ಬಿಡುತ್ತವೆ. ಜೇನು ಹುಳುಗಳಾದರೆ ಕೆಣಕಿದರೆ ಮಾತ್ರವೇ ಆತ್ಮರಕ್ಷಣೆಗೆ ದಾಳಿ ಮಾಡುತ್ವೆ. ಆದ್ರೆ ಈ ಕಣಜನ ಹುಳುಗಳು ಮಾತ್ರ ಅದೇಕೆ ಪ್ರಚೋದನೆ ಇಲ್ಲದೆ ದಾಳಿ ಮಾಡುತ್ವೆ ಅನ್ನೋದು ಗ್ರಾಮೀಣರನ್ನ ಕಾಡೋ ಪ್ರಶ್ನೆ. ಅದಕ್ಕೆ ಉತ್ತರವಾಗಿ ನಿಲ್ಲೋದು ಎಣ್ಣೆ ಏಟು. ಅರೇ ಕಣಜನ ಹುಳುಗಳೇನು ಎಣ್ಣೆ ಹೊಡೀತಾವಾ ಅಂದ್ಕೋತೀರೇನೋ. ಆದ್ರೆ ಒಂದು ಸಂಶೋದನೆ ಅದಕ್ಕೆ ಹೌದೆಂಬ ಉತ್ತರ ಕೊಡ್ತಿದೆ. ಹಾಗಂತ ಕಣಜಗಳು ವೈನ್ ಶಾಪಿಗೆ ನುಗ್ಗಿ ಎಣ್ಣೆ ಹೊಡೆಯೋದಿಲ್ಲ. ಈ ಹುಳುಗಳು ದಿನ ನಿತ್ಯ ರಾಣಿ ಹುಳಕ್ಕೆ ಮಕರಂದ ಸರಬರಾಜು ಮಾಡೋ ಕೆಲಸ ಮಾಡ್ತಾವೆ. ಆ ಕೆಲಸದಲ್ಲಿಯೇ ಹೈರಾಣಾಗ್ತಾವೆ.
ರಾಣಿ ಹುಳದ ಹೊಟ್ಟೆ ತುಂಬಿದ ಮೇಲಷ್ಟೇ ಮಿಕ್ಕವುಗಳ ಹೊಟ್ಟೆಪಾಡು. ಎಷ್ಟೋ ದಿನ ರಾಣಿ ಜೇನಿಗೆ ಮಕರಂದ ಹುಡುಕೋವಷ್ಟರಲ್ಲಿ ರಾತ್ರಿಯಾಗಿರುತ್ತೆ. ಹಾಗಾದಾಗ ಮಿಕ್ಕವುಗಳಿಗೆ ಉಪವಾಸವೇ ಗತಿ. ಅಂತ ವನವಾಸ ತಪ್ಪಿಸಿಕೊಳ್ಳಲು ಅವೊಂದು ಉಪಾಯ ಕಂಡುಕೊಂಡಿರುತ್ವೆ. ಕೆಲ ಹಣ್ಣುಗಳನ್ನ ನಿಗಧಿತ ಪ್ರದೇಶದಲ್ಲಿ ಶೇಖರಿಸಿಟ್ಟಿರುತ್ವೆ. ಹಾಗೆ ಕೂಡಿಟ್ಟ ಹಣ್ಣು ಅಲ್ಲೇ ಕೊಳೆತು ವೈನಿನಂತಾಗಿರುತ್ತೆ. ಯಾವಾಗಲೋ ಒಮ್ಮೆ ಹೊಟ್ಟೆಗಿಲ್ಲದಾಗ ಕೊಳೆತ ಹಣ್ಣಿನ ರಸವನ್ನ ಹೊಟ್ಟೆ ಬಿರಿಯೆ ಕುಡಿಯೋ ಕಣಜಗಳಿಗೆ ಮತ್ತೇರುತ್ತದಂತೆ. ಹಾಗೊಂದು ವೇಳೆ ಬೆಳಕಿರುವ ಸಮಯದಲ್ಲಿ ಕಿಕ್ಕೇರಿದ್ದರೆ ಕಣಜನ ಹುಳುಗಳು ದಾಳಿಗೆ ಅಣಿಯಾಗ್ತಾವೆ. ಆ ಘಳಿಗೆಯಲ್ಲಿ ಅವುಗಳಿಗೆ ತಮಗಿಂತ ದೊಡ್ಡ ಜೀವಿಗಳ ಮೇಲೆ ದಾಳಿ ಮಾಡೋ ಹುಮ್ಮಸ್ಸು ತುಂಬಿಕೊಳ್ಳುತ್ತಂತೆ. ಗ್ರಹಚಾರ ಕೆಟ್ಟು ಯಾರಾದರೂ ಅವುಗಳ ವಲಯದಲ್ಲಿ ಅಡ್ಡಾಡಿದರೆ ದಾಳಿ ಗ್ಯಾರೆಂಟಿ.