ಅದ್ಯಾವುದೇ ದೇಶ ಆಗಿದ್ರೂ ಅಲ್ಲಿ ಕಾನೂನು ಸುವ್ಯವಸ್ಥೆಯನ್ನ ಸರಿಕಟ್ಟಾಗಿರೋವಂತೆ ನೋಡ್ಕೊಳ್ಳೋ ಭಾರ ಪೊಲೀಸರ ಮೇಲಿರುತ್ತೆ. ಇಡೀ ಸಮಾಜದಲ್ಲಿ ಯಾವುದೇ ದುಷ್ಟ ದಂಧೆಗಳು ನಡೆಯದಂತೆ ತಡೆಯುವಲ್ಲಿ ಪೊಲೀಸರ ಪಾತ್ರವನ್ನ ಯಾರೂ ಶ್ಲಾಘಿಸದಿರೋಕೆ ಸಾಧ್ಯಾನೆ ಇಲ್ಲ. ಹಾಗೆ ಸಾರ್ವಜನಿಕರ ರಕ್ಷಣೆಯ ಹೊಣೆ ಹೊತ್ತಿರೋ ಪೊಲೀಸ್ ಇಲಾಖೆಯ ಕಾನೂನು ರೀತಿ ರಿವಾಜುಗಳು ದೇಶದಿಂದ ದೇಶಕ್ಕೆ ಭಿನ್ನವಾಗಿರುತ್ವೆ. ಅದು ಕೇವಲ ಯೂನಿಫಾಂಗೆ ಮಾತ್ರ ಸೀಮಿತವಲ್ಲ; ಕಾರ್ಯವೈಖರಿಯಲ್ಲೂ ವ್ಯತ್ಯಾಸಗಳಿರುತ್ವೆ.
ಅನ್ಯಾಯ ನಡೀತಿದ್ರೆ ಯಾವ ಮೂಲಾಜೂ ಇಲ್ಲದೆ ಎದುರಾಗಿ ನಿಲ್ಲೋ ಪೊಲೀಸರ ಪಾಲಿಗೆ ಮಾನವೀಯ ಗುಣಗಳೂ ಮುಖ್ಯ. ನಮ್ಮಲ್ಲಿ ಕೆಲ ಖಡಕ್ ಅಧಿಕಾರಿಗಳೂ ಕೂಡಾ ಅಂಥಾ ಮಾನವೀಯತೆಯಿಂದಾನೇ ಪ್ರಸಿದ್ಧಿ ಪಡೆಯೋದಿದೆ. ನಿಷ್ಠುರತೆ, ಪ್ರಾಮಾಣಿಕತೆ ಮತ್ತು ಮನುಷ್ಯತ್ವವನ್ನ ಜೊತೆಯಾಗಿಸಿಕೊಂಡವರು ಮಾತ್ರವೇ ಅಂಥಾ ಮನ್ನಣೆ ಪಡೆಯೋಕೆ ಸಾಧ್ಯ. ಸದ್ಯ ಡಚ್ ಪೊಲೀಸರು ಕೂಡಾ ಅಂಥಾದ್ದೊಂದು ಮಾನವೀಯ ವಿಚಾರದ ಮೂಲಕ ಗಮನ ಸೆಳೆಯುತ್ತಾರೆ.
ಪ್ರತೀ ಡಚ್ ಪೊಲೀಸರೂ ಕೂಡಾ ಡ್ಯೂಟಿಗೆ ತೆರಳುವಾಗ ಟೆಡ್ಡಿಬೇರ್ಗಳನ್ನ ಜೊತೆಗಿಟ್ಟುಕೊಳ್ತಾರಂತೆ. ಅವರ ಕಾರುಗಳಲ್ಲಿ ಟೆಡ್ಡಿಬೇರ್ಗಳು ಇದ್ದೇ ಇರುತ್ವೆ. ಅರೇ ಪೊಲೀಸರಿಗೂ ಟೆಡ್ಡಿ ಬೇರ್ಗಳಿಗೂ ಯಾವ ಸಂಬಂಧ ಅನ್ನಿಸೀತೇನೋ. ಅದಕ್ಕೆ ಉತ್ತರವಾಗಿ ಆರಕ್ಷಕರ ಮಾನವೀಕ ಮುಖವೊಂದು ಎದುರಾಗುತ್ತೆ. ಒಂದು ವೇಳೆ ಅಪಘಾತಗಳಾದಾಗ ಪುಟ್ಟ ಮಕ್ಕಳು ಗಾಯಗೊಂಡಿದ್ರೆ ಅಥವಾ ಎಲ್ಲರೂ ಗಾಯಗೊಂಡು ಮಗುವನ್ನು ಸಂಭಾಳಿಸಬೇಕಾಗಿ ಬಂದ್ರೆ ಸಹಾಯವಾಗುತ್ತೆ ಅಂತ ಟೆಡ್ಡಿ ಬೇರ್ ಮೊರೆ ಹೋಗಲಾಗಿದ್ಯಂತೆ. ಅಲ್ಲಿನ ಪೊಲೀಸರ ಪಾಲಿಗೆ ಲಾಠಿ, ರಿವಾಲ್ವರುಗಳಂತೆ ಟೆಡ್ಡಿಬೇರ್ಗಳು ಕೂಡಾ ಡ್ಯೂಟಿಯ ಭಾಗವಾಗಿವೆಯಂತೆ.