ಹಿರಿಯರನ್ನು ಪೂಜ್ಯನೀಯವಾಗಿ ನೋಡೋ ಪರಿಪಾಠ ಮನುಷ್ಯತ್ವದ ಭಾಗ. ಅದು ಭಾರತೀಯ ಸಂಸ್ಕøತಿಯ ಅವಿಭಾಜ್ಯ ಅಂಗವೂ ಹೌದು. ಅಗಾಧ ಅನುಭವದ ಮೂಟೆ ಹೊತ್ತು ಬೆನ್ನು ಬಾಗಿಸಿಕೊಂಡ ಜೀವಗಳ ಮುಂದೆ ಬಾಗಿ ನಡೆಯಬೇಕನ್ನೋದು ನಮ್ಮ ಸಂಸ್ಕøತಿಯ ಸಾರ. ಇದರ ಫಲವಾಗಿಯೇ ಪ್ರತೀ ಹಂತದಲ್ಲಿಯೂ ಹಿರಿಯರನ್ನು ಗೌರವಿಸೋದು ನಮ್ಮೆಲ್ಲರ ಬದುಕಿನ ಭಾಗವೇ ಆಗಿ ಹೋಗಿದೆ. ಅದೇ ರೀತಿ ಈ ವಿಚಾರದಲ್ಲಿ ನಾವೆಲ್ಲರೂ ಅಚ್ಚರಿಗೊಳ್ಳುವಂಥ ಒಂದಷ್ಟು ರೂಢಿಗತ ವಿಚಾರಗಳು ವಿವಿಧ ದೇಶಗಳಲ್ಲಿಯೂ ಚಾಲ್ತಿಯಲ್ಲಿದೆ.
ಉತ್ತರ ಕೊರಿಯಾದಲ್ಲಿ ಹಿರಿಯರನ್ನು ಗೌರವಿಸೋ ಪರಿ ಎಲ್ಲರಿಗೂ ಮಾದರಿಯಂತಿದೆ. ಅಲ್ಲಿ ಯಾವುದೋ ಒಂದು ದಿನವನ್ನ ನಿಗಧಿ ಮಾಡಿಕೊಂಡು ಆವತ್ತು ಮಾತ್ರವೇ ಹಿರೀಕರನ್ನ ಗೌರವಿಸೋ ಭಟ್ಟಂಗಿತನವಿಲ್ಲ. ಅದು ಅವರ ಪ್ರತೀ ಕ್ಷಣದ ಬದುಕಿನ ಭಾಗ. ಅದು ಯಾವ ಪರಿ ಇದೆ ಅನ್ನೋದನ್ನ ಮುಂದಿನ ವಿವರಗಳೇ ತೆರೆದಿಡುತ್ವೆ. ಅಲ್ಲಿನ ಪ್ರತೀ ಮನೆಗಳಲ್ಲಿ ಊಟಕ್ಕೆ ಸಜ್ಜಾಗೋ ರೀತಿಯಲ್ಲಿಯೇ ಹಿರಿಯರಿಗೆ ಸಲ್ಲಿಸೋ ಗೌರವ ಹಾಸು ಹೊಕ್ಕಾಗಿದೆ.
ಪ್ರತೀ ಹೊತ್ತಿನ ಊಟದ ಸಂದರ್ಭದಲ್ಲಿಯೂ ಅಲ್ಲಿ ಹಿರಿಯರಿಗೇ ಮೊದಲ ಸ್ಥಾನ. ಮನೆ ಮಂದಿ ಊಟದ ಟೇಬಲ್ಲಿನ ಮುಂದೆ ನಿಂತೇ ಇರ್ತಾರೆ. ಆ ಮನೆಯ ಹಿರಿಯ ವ್ಯಕ್ತಿ ಬಂದು ಕೂತ ನಂತರವಷ್ಟೇ ಎಲ್ಲರೂ ಕೂರುತ್ತಾರೆ. ಹಾಗೆ ಕೂತ ಹಿರಿಯರು ಒಂದು ತುತ್ತನ್ನೆತ್ತಿ ಬಾಯಿಗಿಡುವ ಮುನ್ನ ಯಾರಂದ್ರೆ ಯಾರೂ ತಟ್ಟೆಗೆ ಕೈ ಹಾಕೋದೂ ಇಲ್ಲ. ಹಿರಿಯ ವ್ಯಕ್ತಿ ಒಂದು ತುತ್ತು ತಿಂದಾದ ಮೇಲಷ್ಟೇ ಮಿಕ್ಕವರ ಊಟ ಆರಂಭವಾಗುತ್ತೆ. ಈವತ್ತಿಗೂ ಉತ್ತರ ಕೊರಿಯಾದಲ್ಲಿ ಇದೇ ಭಯ ಭಕ್ತಿಯ ಜೀವನ ಕ್ರಮ ಮುಂದುವರೀತಿದೆ.