ಸದಾ ಒಂದು ಹರಿವಿನಂಥಾ ಸ್ಥಿತಿ ಜಾರಿಯಲ್ಲಿಲ್ಲದೇ ಹೋದರೆ ಮನಷ್ಯರ ಮನಸು ನಾನಾ ಕಾಯಿಲೆ, ಮಾನಸಿಕ ತಲ್ಲಣಗಳ ಕೊಂಪೆಯಂತಾಗಿ ಬಿಡುತ್ತದೆ. ಸದಾ ಒಂದಷ್ಟು ಜನರೊಂದಿಗೆ ಬೆರೆಯುತ್ತಾ, ಅಡ್ಡಾಡುತ್ತಿರುವವರಿಗೆ ಗೃಹಬಂಧನ ವಿಧಿಸಿದರಂತೂ ಮಾನಸಿಕ ಸ್ಥಿತಿ ಸ್ಥಿಮಿತ ಕಳೆದುಕೊಂಡು ಬಿಡುತ್ತದೆ. ಹಾಗಾದರೆ ಕೊರೋನಾ ವೈರಸ್ ಬಾಧೆಯಿಂದ ಲಾಕ್ಡೌನ್ ಘೋಷಣೆಯಾದ ಬಳಿಕ ಜನ ತಿಂಗಳಿಂದೀಚೆಗೆ ಮನೆಯೊಳಗೇ ಬಂಧಿಯಾಗಿದ್ದಾರಲ್ಲಾ? ಈ ಸಂದರ್ಭದಲ್ಲಿ ಕೊರೋನಾಗಿಂತಲೂ ಭೀಕರವಾಗಿ ಜನರನ್ನು ಮಾನಸಿಕ ತೊಳಲಾಟಗಳು ಕಾಡೋದಿಲ್ಲವೇ. ಮಾನಸಿಕವಾಗಿ ಜನ ಅದ್ಯಾವ್ಯಾವರೀತಿಯಲ್ಲಿ ಬೇಯುತ್ತಿದ್ದಾರೆಂಬುದೆಲ್ಲ ಕೊರೋನಾ ಕಾಲದ ಅಧ್ಯಯನ ಯೋಗ್ಯ ಅಂಶಗಳೇ!
ಕೊರೋನಾ ಅಂದರೊಂದು ವೈರಸ್. ಆದರದು ದೈಹಿಕವಾಗಿ ತಮ್ಮೊಳಗೆ ಸೇರಿ ಬಲಿ ಪಡೆಯುವ ಭಯವೇ ಅನೇಕರನ್ನು ನಾನಾ ಥರದಲ್ಲಿ ಮಾನಸಿಕವಾಗಿಯೂ ಹೈರಾಣು ಮಾಡಿ ಹಾಕುತ್ತಿದೆ. ಅದರಲ್ಲಿಯೂ ಇಂಥಾ ಭಯವೆಂಬುದು ಕನಸಿನ ರೂಪದಲ್ಲಿ ಹಲವರನ್ನು ಕಾಡುತ್ತಿದೆ ಅನ್ನೋದು ನಿಜಕ್ಕೂ ಇಂಟರೆಸ್ಟಿಂಗ್ ಸಂಗತಿ. ಕೆಲ ಮಂದಿಗಂತೂ ಕೊರೋನಾ ಭಯ ಗಾಢ ನಿದ್ದೆಯಿಂದೆದ್ದು ಬೆವರಾಡುವ ರೀತಿಯಲ್ಲಿ ಕಾಡುತ್ತಿದೆ. ಬಹುಶಃ ಒಂದಷ್ಟು ಮಂದಿ ಇಂಥಾ ಚಿತ್ರವಿಚಿತ್ರ ಅನುಭವಗಳನ್ನು ಮನಸಲ್ಲೇ ಇಟ್ಟುಕೊಂಡು ಮತ್ತಷ್ಟು ಕಳವಳಕ್ಕೀಡಾಗಿರಲೂ ಬಹುದು. ತುಂಬಾನೇ ಕಷ್ಟವಾದರೂ ಅವುಡುಗಚ್ಚಿಕೊಂಡು ಮೆನೆಯೊಳಗೇ ಬಂಧಿಯಾಗಿರೋ ಅನೇಕರು ಕನಸಲ್ಲೇ ಲಾಕ್ಡೌನ್ ಮುರಿದು ಮುದುರಿ ಮಲಗಿದ್ದಲ್ಲೇ ಬೆಚ್ಚಿ ಬೀಳುತ್ತಿದ್ದಾರೆ!
ಲಾಕ್ಡೌನ್ ಆರಂಭವಾದ ಶುರುವಾತಿನಲ್ಲಿ ದೇಶದ ಜನರೆಲ್ಲ ಅದನ್ನು ತೀರಾ ಲೈಟಾಗಿ ತೆಗೆದುಕೊಂಡಿದ್ದರು. ಆದ್ದರಿಂದಲೇ ಪದೇ ಪದೆ ಜನರ ಕಡೆಯಿಂದ ರೂಲ್ಸ್ ಬ್ರೇಕಾಗುತ್ತಾ ಸಾಗಿತ್ತು. ಹೀಗೇ ಬಿಟ್ಟರೆ ಕೊರೋನಾ ಪ್ರತೀ ಮನೆಗಳಲ್ಲಿಯೂ ಕುಕ್ಕರು ಬಡಿಯೋದು ಗ್ಯಾರೆಂಟಿ ಎಂದರಿತ ಪೊಲೀಸರು ಬಿಗು ಕ್ರಮಗಳನ್ನು ಕೈಗೊಂಡು ರುಬ್ಬಲಾರಂಭಿಸಿದರು ನೋಡಿ? ಜನಸಾಮಾನ್ಯರಿಗೆ ಕೊರೋನಾ ಜೊತೆಗೆ ಕಾನೂನು ಕ್ರಮಗಳ ಭಯವೂ ಕಾಡಲಾರಂಭಿಸಿತ್ತು. ಆದ್ದರಿಂದಲೇ ಅನೇಕರಿಗೆ ತಾವು ಬಾರು ಪಬ್ಬುಗಳಿಗೆ ನುಗ್ಗಿ ಕಂಠಮಟ್ಟ ಎಣ್ಣೆ ಹೊಡೆದು ಕುಣಿದಾಡೋ ಕನಸು ಬೀಳಲಾರಂಭಿಸಿದೆಯಂತೆ. ಇನ್ನೇನು ಮದೋನ್ಮತ್ತ ಡ್ಯಾನ್ಸಿಗೆ ಪೊಲೀಸರ ಲಾಠಿಯೇಟಿನ ರಿಧಂ ಮೊಳಗಬೇಕೆಂಬಷ್ಟರಲ್ಲಿ ಹಠಾತ್ತನೆ ಎಚ್ಚರ… ಅಂಗಾಂಗಳನ್ನೂ ತೋಯಿಸಿದ ಬೆವರು!
ಇನ್ನೂ ಕೆಲ ಮಂದಿಯನ್ನು ಕೊರೋನಾ ವೈರಸ್ ಮತ್ತು ಗೃಹ ಬಂಧನದ ನೀರವ ಮತ್ತೊಂದಷ್ಟು ವೆರೈಟಿಯ ಭೀಕರ ಕನಸುಗಳಿಂದ ಬೆಚ್ಚಿ ಬೀಳಿಸುತ್ತಿದೆ. ಇದರಿಂದಾಗಿ ರಾತ್ರಿಗೂ ಹಗಲಿಗೂ ವ್ಯತ್ಯಾಸ ಮಾಸಲಾಗಿದೆ. ದಿನ, ಕ್ಷಣ, ವಾರ ಒಪ್ಪತ್ತುಗಳೆಲ್ಲ ಸಪಾಟಾಗಿ ಏಕೀಭವಿಸಿದಂಥಾ ಅಯೋಮಯ ಮನೋ ವ್ಯಾಧಿ ಬಹುತೇಕರನ್ನು ಕಾಡುತ್ತಿದೆ. ಇದೆಲ್ಲವೂ ಕೊರೋನಾ ಬಗೆಗಿನ ಜೀವ ಭಯವಾಗಿಯೂ ಕಾಡಲು ಶುರುವಿಟ್ಟಿದೆ. ಸಾಮಾನ್ಯವಾಗಿ ಕನಸೆಂಬುದು ಸುಪ್ತಮನಸಿನಿಂದಲೇ ಸುರುಳಿ ಬಿಚ್ಚಿಕೊಳ್ಳುವಂಥಾದ್ದು. ಕನಸು ನಿಜಕ್ಕೂ ಯಾಕೆ ಬೀಳುತ್ತದೆಂಬುದಕ್ಕೆ ವೈಜ್ಞಾನಿಕ ಕಾರಣಗಳಿರುವಂತೆಯೇ ಒಂದಷ್ಟು ಮೂಢ ನಂಬಿಕೆಗಳೂ ಇವೆ. ಆದರೆ ಸುಪ್ತ ಮನಸಿನ ಇಷಾರೆಯಂತೆಯೇ ಕನಸಿನ ರೀಲು ಬಿಚ್ಚಿಕೊಳ್ಳುತ್ತದೆಯೆಂಬುದು ವಾಸ್ತವಕ್ಕೆ ಹತ್ತಿರಾದ ವಿಚಾರ.
ಕೆಲವೊಮ್ಮೆ ಮನಸಿನಾಳದಲ್ಲಿ ಹತ್ತಿಕ್ಕಿಕೊಂಡ ಬಯಕೆಗಳು ಕನಸಿನ ಕ್ಯಾನ್ವಾಸಿನ ಮೇಲೆ ಮೂಡಿಕೊಳ್ಳುತ್ತವೆ. ಭಯವೆಂಬುದು ಅಸ್ಪಷ್ಟ ಭೀಕರ ಸ್ವರೂಪದ ಚಿತ್ರಗಳಾಗಿ ಕದಲುತ್ತಾ ಬೆಚ್ಚಿ ಬೀಳಿಸುತ್ತವೆ. ಕೊರೋನಾ ವಿಚಾರದಲ್ಲಿ ಕನಸುಗಳ ಹಂಗಾಮ ಶುರುವಾಗಿರೋದರ ಹಿಂದೆಯೂ ಅಂಥಾದ್ದೇ ಕಿಸುರಿರಬಹುದು. ಬಹುಶಃ ಬಹು ಕಾಲದಿಂದ ಎಣ್ಣೆಯಿಲ್ಲದೆ ಬೇಸತ್ತ ಕುಡುಕರಿಗೆ ಬಾರಿನ ಮುಂದೆ ನಿಂತು ಬ್ಯಾಕಿನಲ್ಲಿ ಬಾಸುಂಡೆಯೆದ್ದ ಕನಸಾಗಿರಬಹುದು. ಸಿಗರೇಟು ಚಟದವರಿಗೆ ಬೇಕರಿಯ ಮುಂದೆ ಹೊಗೆಯಾಡಿಸುತ್ತಿರುವಾಗ ಪೊಲೀಸರ ಲಾಠಿ ನಾಟ್ಯವಾಡಿದ ದೃಷ್ಯಗಳು ಕದಲಿರಬಹುದು. ದುರಂತವೆಂದರೆ ಅದೆಷ್ಟೋ ಕೋಟಿ ಜೀವಗಳಿಗೆ ತುತ್ತು ಅನ್ನದ ಕನಸು ಬಿದ್ದು ಸಣ್ಣ ಕರುಳಿನಾಳದಿಂದ ಹಸಿವೆಂಬುದು ಚುಚ್ಚಿ ಕೊಂದಂತಾಗಿರಬಹುದು…