ಸಿಗರೇಟು ಆರೋಗ್ಯಕ್ಕೆ ಹಾನಿಕರ ಅಂತ ಬೋರ್ಡು ಹಾಕಿ ಬ್ಯಾಂಡು ಬಜಾಯಿಸಿದ್ರೂ ಅದರಿಂದಲೇ ಕಿಕ್ಕೇರಿಸಿಕೊಳ್ಳೋರ ಸಂಖ್ಯೆಯೇನೂ ಕಡಿಮೆಯಾಗಿಲ್ಲ. ಈಗಂತೂ ಸಿಗರೇಟು ಪ್ಯಾಕೆಟ್ಟುಗಳ ಮೇಲೆ ಭೀಕರ ಚಿತ್ರಗಳನ್ನು ಪ್ರಿಂಟು ಹೊಡೆಸಲಾಗ್ತಿದೆ. ಅದನ್ನ ಕಂಡ್ರೆ ಬದುಕಿನ ಬಗ್ಗೆಯೇ ಜಿಗುಪ್ಸೆ ಬರಬೇಕು. ಹಾಗಿರುತ್ತೆ ಅದರ ಭಯಾನಕ ರೀತಿ. ಆದ್ರೆ ಸ್ಮೋಕರ್ಸ್ ಅದನ್ನ ನೋಡಿ ಮತ್ತೊಂದು ಸಿಗರೇಟು ಸೇದಿ ಸಮಾಧಾನ ಮಾಡ್ಕೋತಾರೇ ಹೊರತು ಸೇದೋದನ್ನ ಬಿಡೋ ಮನಸು ಮಾಡೋದಿಲ್ಲ.
ಹೊಗೆಗೆ ವಶವಾದವರ ಈ ವಿಲ್ಪವರ್ ಇದೆಯಲ್ಲಾ? ಅದು ಜಗತ್ತಿನ ಸಿಗರೇಟು ಕಂಪೆನಿಗಳ ಉಸಿರುಳಿಸಿದೆ. ದುಖಃ, ದಾವಂತ, ನೋವು, ನಿರಾಸೆಗಳೆಲ್ಲಕ್ಕೂ ಈ ಜನ ಹೊಗೆಯನ್ನೇ ಆಶ್ರÀ್ರಯಿಸ್ತಾರೆ. ಆರಂಭದಲ್ಲಿ ಸಿಗರೇಟನ್ನ ಅವರು ಸೇದಿದ್ರೆ ನಂತರದಲ್ಲಿ ಸಿಗರೇಟೇ ಅವರನ್ನ ಸೇದಲಾರಂಭಿಸುತ್ತೆ. ಬರಬರುತ್ತಾ ನಿಕೋಟಿನ್ ಅನ್ನೋದು ಮನಸಿನ ಗೋಡೆಗೆ ಗಡಿಯಾರದಂತೆ ನೇತು ಬೀಳುತ್ತೆ. ಆಯಾ ಕಾಲಕ್ಕೆ ಬೆಲ್ಲು ಹೊಡೆದು ಎಚ್ಚರಿಸುತ್ತೆ. ಆಗ ಕೆಂಗಣ್ಣಿನ ಸಿಗರೇಟು ತುಟಿಯ ಮೇಲೆ ನಸುನಗಬೇಕು. ಹಾಗೆ ಒಳ ಹೋದ ಹೊಗೆ ಶ್ವಾಶಕೋಶದ ಅಂಗುಲಂಗುಲದಲ್ಲೂ ಲಗಾಟಿ ಹೊಡೆಯಬೇಕು. ಆಗಲೇ ಸಮಾಧಾನ…
ನೀವೂ ಕೂಡಾ ಸಿಗರೇಟನ್ನ ಆ ಪಾಟಿ ಹಚ್ಚಿಕೊಂಡಿದ್ದೀರಾ? ಈಗ ವಿಶ್ವ ಆರೋಗ್ಯ ಸಂಸ್ಥೆ ಕೊಟ್ಟಿರೋ ಒಂದು ವರದಿ ನಿಮ್ಮನ್ನು ಬೆಚ್ಚಿ ಬೀಳಿಸಲು ಸರದಿಯಲ್ಲಿ ನಿಂತಿದೆ. ಯಾಕೆಂದರೆ, ಆ ವರದಿ ಕೊರೋನಾ ಭೂಮಿಕೆಯಲ್ಲಿ ಸ್ಮೋಕರ್ಸ್ಗಳನ್ನೇ ಟಾರ್ಗೆಟ್ ಮಾಡಿದೆ. ವಿಶ್ವದ ಹಲವಾರು ಸಂಸ್ಥೆಗಳು ಕೊರೋನಾ ವೈರಸ್ ಹೇಗೆ ಹರಡುತ್ತದೆಂಬುದರ ಹೆಜ್ಜೆ ಜಾಡು ಜಾಲಾಡಿವೆ. ಯಾವ ದೇಹಪ್ರಕೃತಿ ಕೊರೋನಾಗೆ ಬಲು ಇಷ್ಟ ಅನ್ನೋದನ್ನೂ ತಲಾಶು ಮಾಡಲಾಗಿದೆ. ಈ ಹಂತದಲ್ಲಿ ಕೊರೋನಾದಿಂದ ಬಾಧಿತರಾದವರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಧೂಮಪಾನಿಗಳಿರೋದು ಪತ್ತೆಯಾಗಿದೆ.
ಕೊರೋನಾದಿಂದ ಆಸ್ಪತ್ರೆ ಪಾಲಾದವರಲ್ಲಿ ಹೆಚಿನವರು ಸ್ಮೋಕರ್ಸ್ ಅನ್ನೋದನ್ನು ಎಲ್ಲ ವರದಿಗಳೂ ಸಾಕ್ಷೀಕರಿಸಿವೆ. ಮೃತಪಟ್ಟವರಲ್ಲಿಯೂ ಧೂಮಪಾನದ ಚಟ ಹೊಂದಿರುವವರದ್ದೇ ಸಿಂಹ ಪಾಲೆಂಬ ಶಾಕಿಂಗ್ ಸತ್ಯವನ್ನೂ ಜಾಹೀರು ಮಾಡಿದೆ. ಈ ವರದಿಯನ್ನೀಗ ವಿಶ್ವ ಸಂಸ್ಥೆ ಅಂಗೀಕರಿಸಿ ಜಾಹೀರು ಮಾಡಿದೆ. ಈಗ ಹೇಳಿಕೇಳಿ ಕೊರೋನಾ ನಮ್ಮ ದೇಶದ ನಗರ ದಾಟಿ, ಹಳ್ಳಿಗಳನ್ನು ಆವರಿಸಿ ಸಂದಿಗೊಂದಿಗಳಿಗೂ ಆವರಿಸಿಕೊಂಡಿದೆ. ನೀವೇನಾದ್ರೂ ಸಿಗರೇಟು ಪ್ರಿಯರಾಗಿದ್ರೆ ನೀವು ಕೊರೋನಾಗೂ ಪ್ರಿಯರಾಗೋ ಸಾಧ್ಯತೆಗಳೇ ಹೆಚ್ಚು. ಸಿಗರೇಟು ಎಸೆದು ಪಾರಾಗ್ತೀರೋ, ನೀವೇ ತನ್ಮಯರಾಗಿ ಸಿಗರೇಟಿನ ಹೊಗೆಯೊಂದಿಗೆ ವೈರಸ್ಸನ್ನ ಶ್ವಾಶಕೋಶಕ್ಕೆ ಬರಮಾಡಿಕೊಳ್ತೀರೋ ಅನ್ನೋದು ನಿಮ್ಮ ವಿವೇಚನೆಗೆ ಬಿಟ್ಟ ವಿಚಾರ.