ಈ ಜಗತ್ತನ್ನ ತುಂಬಿಕೊಂಡಿರೋ ಬೆರಗುಗಳು ನಿಜಕ್ಕೂ ಅಕ್ಷಯಪಾತ್ರೆಯಂಥವು. ನಾವು ತಿಳಿದುಕೊಂಡೆವೆಂದು ಬೀಗೋ ಮುನ್ನವೇ ತಿಳಿಯದೇ ಉಳಿದ ನಿಗೂಢಗಳು ಅಣಿಕಿಸುತ್ವೆ. ಅಂಥಾ ಅನ್ವೇಷಣೆಯ ಕಾಲುದಾರಿಯಲ್ಲಿ ಹೆಜ್ಜೆಯಿಟ್ರೆ ಅದು ಸೀದಾ ಹೆದ್ದಾರಿಗೇ ಕರೆದೊಯ್ದು ತಬ್ಬಿಬ್ಬುಗೊಳಿಸುತ್ತೆ. ಒಟ್ಟಾರೆಯಾಗಿ ಈ ಜಗತ್ತಿನ ಬೆರಗುಗಳು ಮೊಗೆದು ಮುಗಿಯುವಂಥವುಗಳಲ್ಲ. ಅದರಲ್ಲೊಂದು ಅಚ್ಚರಿಯ ಹನಿ ನಮಗೆಲ್ಲ ತೀರಾ ಪರಿಚಿತವಾಗಿರೋ ಜೇನು ನೊಣಗಳ ಬಗೆಗಿದೆ.
ಜೇನು ನೊಣಗಳ ಜೀವನಕ್ರಮ, ಅವುಗಳ ಬದುಕಿನ ರೀತಿ ನಿಜಕ್ಕೂ ಅಚ್ಚರಿ. ಅವು ಗೂಡು ಕಟ್ಟೋ ಶಿಸ್ತು, ಅದರ ಇಂಜಿನೀರಿಂಗು, ಜೀವನ ಕ್ರಮಗಳೆಲ್ಲವೂ ಅಪರಿಮಿತ ಆನಂದ ಮೂಡಿಸುತ್ತೆ. ಈಗ ಹೇಳ ಹೊರಟಿರೋದು ಅವುಗಳ ಮತ್ತೊಂದು ಬಗೆಯ ಸಮ್ಮೋಹಕ ಸಾಮಥ್ರ್ಯದ ಬಗ್ಗೆ. ನಮ್ಮ ದೇಶದ ವೈಚಿತ್ರ್ಯಗಳ ಆಗರದಂತಿರೋ ಮೌಂಟ್ ಎವರೆಸ್ಟ್ ಜಗತ್ತಿನ ಅತೀ ಎತ್ತರದ ಪರ್ವತ. ನಮ್ಮ ಕಣ್ಣಿಗೆ ತುಂಬಾ ಪುಟ್ಟದಾಗಿ ಕಾಣಿಸೋ ಜೇನ್ನೊಣಗಳು ಮೌಂಟ್ ಎವರೆಸ್ಟಿಗಿಂತಲೂ ಎತ್ತರಕ್ಕೆ ಹಾರುತ್ತವೆ ಅಂದ್ರೆ ಅದೇನು ಸುಮ್ಮನೆ ಮಾತಲ್ಲ.
ಲಾಗಾಯ್ತಿನಿಂದಲೂ ಜೇನು ನೊಣಗಳ ಬಗ್ಗೆ ಸಂಶೋಧನೆಗಳು ನಡೆಯುತ್ತಲೇ ಇವೆ. ಅದರ ಭಾಗವಾಗಿಯೇ ಅವುಗಳ ಮಹಾ ಶಕ್ತಿಯೂ ಅನಾವರಣಗೊಂಡಿದೆ. ಭಾರತದಲ್ಲಿ ಇನ್ನೂರೈವತ್ತಕ್ಕೂ ಹೆಚ್ಚು ಬಗೆಯ ಜೇನ್ನೊಣಗಳಿವೆ ಅಂತ ಅಂದಾಜಿಸಲಾಗಿದೆ. ಅದರಲ್ಲಿ ಜಂಬಲ್ಬೀ ಅನ್ನೋ ವರ್ಗ ಅತ್ಯಂತ ಅಪರೂಪದ ಪ್ರಬೇಧವಾಗಿ ಗುರುತಿಸಿಕೊಂಡಿದೆ. ಇದೀಗ ಅಳಿವಿನಂಚಿನಲ್ಲಿರೋ ಜಂಬಲ್ಬೀ ಜಾತಿಯ ಜೇನ್ನೊಣಗಳಿಗೆ ಮೌಂಟ್ ಎವರೆಸ್ಟನ್ನು ಮೀರಿ ಹಾರೋ ಅದ್ಭುತ ಸಾಮಥ್ರ್ಯ ಇದೆಯಂತೆ.