ನಮ್ಮೆಲ್ಲರದ್ದು ಜಂಜಾಟಗಳ ಬದುಕು. ಅದರ ನಡುವಲ್ಲಿಯೇ ಒಂದಷ್ಟು ವಿಚಾರಗಳನ್ನ ತಿಳಿದುಕೊಳ್ಳೋಕೆ ಪ್ರಯತ್ನಿಸುವವರಿದ್ದಾರೆ. ಆದ್ರೆ ಅವ್ರ ಗಮನವೆಲ್ಲ ದೊಡ್ಡ ದೊಡ್ಡ ವಿಚಾರಗಳನ್ನ ಅರಿತುಕೊಳ್ಬೇಕು ಅನ್ನೋದ್ರತ್ತಲೇ ಇರುತ್ತೆ. ಈ ಭರಾಟೆಯಲ್ಲಿ ತೀರಾ ಸಣ್ಣಪುಟ್ಟ ಅಂಶಗಳು ಅರಿವಿಗೆ ಬರೋದೇ ಇಲ್ಲ. ಬೇರೆಲ್ಲಾ ಒತ್ತಟ್ಟಿಗಿರ್ಲಿ; ಮನ್ನದೇ ದೇಹದ ಗುಣ ಲಕ್ಷಣಗಳ ಬಗ್ಗೆ ನಮಗೇ ತಿಳಿದಿರೋದಿಲ್ಲ. ಹಾಗೊಂದುವೇಳೆ ನಿಮಗೊಂದಷ್ಟು ತಿಳಿದಿದೆ ಅಂತಿಟ್ಕೊಳ್ಳಿ… ನಿಮ್ಮದೇ ಪಾದಗಳ ಬಗ್ಗೆ ನಿಮಗೆಷ್ಟು ಗೊತ್ತು?
ಹೀಗೊಂದು ಪ್ರಶ್ನೆ ಎದುರಾದ್ರೆ ನೀವಲ್ಲ; ಯಾರೇ ಆದ್ರೂ ತಡವರಿಸಬೇಕಾಗುತ್ತೆ. ನಮ್ಮ ಪಾದಗಳು ನಮ್ಮಿಡೀ ದೇಹದಲ್ಲಿ ಎಂಥಾ ಶಕ್ತಿಯುತ ಅನ್ನೋದನ್ನ ತಿಳ್ಕೊಳ್ಳೋದಕ್ಕೆ ಕಾಮನ್ಸೆನ್ಸ್ ಸಾಕು. ಆದ್ರೆ ಅದನ್ನ ಮೀರಿದ ವಿಸ್ಮಯಗಳು ಪಾದಗಳಲ್ಲಿವೆ. ಅದಕ್ಕೆ ಪ್ರಾಕೃತಿಕವಾಗಿಯೇ ಅಂಥಾ ಶಕ್ತಿ ದಕ್ಕಿದೆ. ಇಡೀ ದೇಹದ ಭಾರವನ್ನು ಹೊತ್ತುಕೊಳ್ಳಲು ಅನುವಾಗುವಂತೆ ಅದರ ರಚನೆಯಿದೆ. ಈ ಕಾರಣದಿಂದಲೇ ನಮ್ಮ ದೇಹದಲ್ಲಿರೋ ಒಟ್ಟಾರೆ ಮೂಳೆಗಳ ಹೆಚ್ಚಿನ ಪಾಲು ಪಾದಗಳಲ್ಲಿದೆ.
ಮನುಷ್ಯನ ದೇಹದೊಳಗೆ ಸಾಮಾನ್ಯವಾಗಿ 206 ಮೂಳೆಗಳಿರುತ್ತವೆ. ಅದರಲ್ಲಿ ಸಣ್ಣದು, ದೊಡ್ಡವುಗಳೆಲ್ಲ ಸೇರಿಕೊಂಡಿರುತ್ವೆ. ಆ ಒಟ್ಟಾರೆ ಮೂಳೆಗಳಲ್ಲಿ ಪಾದಗಳಲ್ಲಿಯೇ ಬರೋಬ್ಬರಿ ಐವತ್ತೆರಡು ಮೂಳೆಗಳಿವೆಯಂತೆ. ಆ ಅಷ್ಟೂ ಮೂಳೆಗಳು ಇತರವುಗಳಿಗಿಂತಲೂ ತುಂಬಾ ಸ್ಟ್ರಾಂಗ್ ಆಗಿರುತ್ತವೆ. ಇದರಿಂದಾಗಿಯೇ ನಾವೆಲ್ಲರೂ ಕುಣಿದು ಕುಪ್ಪಳಿಸಲು, ಮನ ಬಂದಂತೆ ಹಾರಲು, ದೇಹದಲ್ಲಿ ಮಣಗಟ್ಟಲೆ ಬೊಜ್ಜು ತುಂಬಿಕೊಂಡಿದ್ದರೂ ಸಲೀಸಾಗಿ ದೇಹವನ್ನ ಮ್ಯಾನೇಜ್ ಮಾಡಲು ಸಾಧ್ಯವಾಗಿದೆ.