ಕಣ್ಣಿನ ಪ್ರಾಬ್ಲಂಗೋ, ತಲೆ ನೋವಿನ ಬಾಧೆಗೋ ಕನ್ನಡಕ ಹಾಕ್ಕೊಂಡ್ರೆ ಸೋಡಾಬುಡ್ಡಿ ಅಂತ ಕಾಲೆಳೆಸಿಕೊಳ್ಳೋ ಸಾಧ್ಯತೆಗಳಿರುತ್ವೆ. ಆದ್ರ ಸನ್ಗ್ಲಾಸ್ ಹಾಕೊಂಡ್ರೆ ಮಾತ್ರ ಅದನ್ನು ಸ್ಟೈಲಿಶ್ ಲುಕ್ ಅಂತ ಕೊಂಡಾಡಲಾಗುತ್ತೆ. ಅದು ಈಗ ಆಧುನಿಕ ಜಗತ್ತಿನ ಫ್ಯಾಷನ್ ಹುಟ್ಟಿನ ಭಾಗ. ಅದು ಜನಸಾಮಾನ್ಯರ ಸೌಂದರ್ಯ ಪ್ರಜ್ಞೆಯನ್ನ ಕೊಂಚ ತಣಿಸಿರೋದು ಸುಳ್ಳಲ್ಲ. ಆದ್ರೆ ಅದು ಮೊದಲು ಬಳಕೆಯಾಗಿದ್ದು ಫ್ಯಾಷನ್ಗಲ್ಲ ಅನ್ನೋದು ನಿಜವಾದ ಮಜದ ಸಂಗತಿ.
ಈ ಮಾತು ಕೇಳಿದ್ರೆ ಅರೇ ಶೋಕಿಯ ಭಾಗವಾಗಿರೋ ಕೂಲಿಂಗ್ ಗ್ಲಾಸುಗಳು ಮತ್ತೇನಕ್ಕೆ ಬಳಕೆಯಾದ್ವು ಅನ್ನೋ ಕ್ಯೂರಿಯಾಸಿಟಿ ಮೂಡಿಕೊಳ್ಳುತ್ತೆ. ಅದಕ್ಕೆ ಪಕ್ಕಾ ಇಂಟರೆಸ್ಟಿಂಗ್ ಉತ್ತರವೂ ರೆಡಿಯಾಗಿದೆ. ಅದ್ರ ಪ್ರಕಾರ ಹೇಳೋದಾದ್ರೆ ಈ ಕೂಲಿಂಗ್ ಗ್ಲಾಸ್ ಅನ್ನೋ ಪರಿಕಲ್ಪನೆ ಮೊದಲು ಆರಂಭವಾಗಿದ್ದ ಹನ್ನೆರಡನೇ ಶತಮಾನದಲ್ಲಿ. ಗ್ಯಾರೆಂಟಿಯಿಲ್ಲದ ಸರಕುಗಳ ಕಾರ್ಖಾನೆಯಂತಿರೋ ಚೀನಾ ಅದರ ತವರು ನೆಲ.
ಈವತ್ತಿಗೆ ಕೂಲಿಂಗ್ ಗ್ಲಾಸ್ ಶೋಕಿಗೆ ಹೆಚ್ಚಾಗಿ ಬಳಕೆಯಾಗ್ತಿದೆ. ಆದ್ರೆ ಅದ್ರ ಹಿಂದೆ ಸೂರ್ಯನ ತೀಕ್ಷ್ಣವಾದ ಕಿರಣಗಳಿಂದ ಕಣ್ಣನ್ನ ಕಾಪಾಡಿಕೊಳ್ಳೋ ಇರಾದೆಯೂ ಇದೆ. ಆದ್ರೆ ಮೊದಲು ಕೂಲಿಂಗ್ ಗ್ಲಾಸಿನ ಆವಿಷ್ಕಾರವಾದಾಗ ಅದರ ಹಿಂದಿದ್ದ ಉದ್ದೇಶವೇ ಬೇರೆ. ಅದನ್ನು ಮೊದಲು ಬಳಸಿದ್ದು ಚೀನಾದ ನ್ಯಾಯಾಧೀಶರು. ಯಾವುದೇ ಪ್ರಕರಣದ ವಿಚಾರಣೆ ನಡೆಯುವಾಗ ನ್ಯಾಯಾಧೀಶರ ಭಾವನೆಗಳು ಆಪಾದಿತರಿಗೆ ತಿಳಿಯದಂತೆ ಮಾಡಲು ಕೂಲಿಂಗ್ ಗ್ಲಾಸ್ ಬಳಕೆಯಾಗ್ತಿತ್ತಂತೆ. ಅದುವೇ ನಂತರದ ದಿನಗಳಲ್ಲಿ ಶೋಕಿಯ ರೂಪ ಧರಿಸಿಕೊಂಡಿದೆ. ವಿಶ್ವಾದ್ಯಂತ ಪ್ರಸಿದ್ಧಿ ಪಡೆದುಕೊಂಡಿದೆ.