ಕನ್ನಡ ಸಿನಿಮಾಗಳು ಸೀಮಿತ ಪರಿಧಿಯಲ್ಲಿ ಗಿರಕಿ ಹೊಡೆಯುತ್ತಿದ್ದ ಘಳಿಗೆಯಲ್ಲಿ, ಎಲ್ಲೆ ಮೀರಿ ಹಬ್ಬಿಕೊಂಡು ವಿಶ್ವ ಮಟ್ಟದಲ್ಲಿ ಗೆದ್ದಿದ್ದ ಚಿತ್ರ ಕೆಜಿಎಫ್. ಈ ಗೆಲುವಿನ ಹಿಂದೆ ನಿರ್ದೇಶಕ ಪ್ರಶಾಂತ್ ನೀಲ್ ಸೇರಿದಂತೆ ಒಂದಿಡೀ ತಂಡದ ಶ್ರಮವಿದೆ. ಆದರೆ, ಅಂಥಾದ್ದೊಂದು ಪವಾಡಸದೃಶ ಗೆಲುವು ಸಾಧ್ಯವಾಗಿದ್ದರಲ್ಲಿ ರಾಕಿಂಗ್ ಸ್ಟಾರ್ ಯಶ್ ಪಾತ್ರ ಪ್ರಧಾನವಾಗಿದೆ. ಈ ಮೂಲಕ ಅತ್ಯಂತ ಕಡುಗಷ್ಟದಿಂದ ಬಂದ ಹುಡುಗನೊಬ್ಬ, ವಿಶ್ವವೇ ನಿಬ್ಬರಗಾಗುವಂತೆ ಬೆಳೆದುನಿಲ್ಲ ಬಲ್ಲ ಎಂಬುದಕ್ಕೆ ಯಶ್ ಸಜೀವ ಉದಾಹರಣೆಯಾಗಿ ನಿಂತಿದ್ದಾರೆ. ಕನಸು ಬಿಟ್ಟರೆ ಬೇರೇನೂ ದಿಕ್ಕಿಲ್ಲದ ಕೋಟಿ ಜೀವಗಳ ಕಣ್ಣುಗಳಲ್ಲಿ ಭರವಸೆಯ ಮಿಂಚೊಂದು ಹೊಳೆಯುವಂತೆ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಯಶ್ ನಡೆದು ಬಂದ ರೀತಿ, ಪರಿಶ್ರಮದಿಂದಲೇ ಏರಿರುವ ಎತ್ತರ ಸಾರ್ವಕಾಲಿಕ ಸ್ಫೂರ್ತಿ.
ಕೆಜಿಎಫ್ ಚಿತ್ರೀಕರಣವಾಗುತ್ತಿದ್ದ ಘಳಿಗೆಯಲ್ಲಿದ್ದ ವಾತಾವರಣವನ್ನೊಮ್ಮೆ ರಿವೈಂಡ್ ಮಾಡಿಕೊಳ್ಳಿ. ಆಗ ಪ್ಯಾನಿಂಡಿಯಾ ಅಂತೊಂದು ಪದವೇ ಅಸಾಧ್ಯವೆಂಬಂತೆ ಭಾಸವಾಗುತ್ತಿತ್ತು. ಇದೆಲ್ಲದರ ನಡುವೆ ಯಶ್, ಇಡೀ ಭಾರತವೇ ತಿರುಗಿ ನೋಡುವಂಥಾ ಸಿನಿಮಾ ಮಾಡಬೇಕು, ಕನ್ನಡ ಚಿತ್ರರಂಗವನ್ನು ಉತ್ತುಂಗಕ್ಕೇರಿಸಬೇಕೆಂಬಂಥಾ ಸ್ಫೂರ್ತಿಯ ಮಾತಾಡುತ್ತಿದ್ದರು. ಆ ಕಾಲಕ್ಕದು ಕೆಲಮಂದಿಗೆ ಆಗದ ಕೆಲಸವೆಂಬಂತೆಯೂ, ಮತ್ತೆ ಕೆಲವರಿಗೆ ಅಹಮ್ಮಿಕೆಯ ಮಾತಿನಂತೆಯೂ ಭಾಸವಾಗಿದ್ದರಲ್ಲಿ ಅಚ್ಚರಿ ಪಡುವಂಥಾದ್ದೇನೂ ಇಲ್ಲ. ವರ್ಷಗಟ್ಟಲೆ ಚಿತ್ರೀಕರಣಗೊಂಡಿದ್ದ ಕೆಜಿಎಫ್ ಬಗ್ಗೆ ನಕಾರಾತ್ಮಕ ರೂಮರ್ಗಳು ಹಬ್ಬಿಕೊಂಡಿದ್ದವೇ ಹೊರತು, ಅದು ದೊಡ್ಡ ಮಟ್ಟದಲ್ಲಿ ಗೆಲುವು ಕಾಣುತ್ತದೆಂಬ ನಂಬಿಕೆ ಯಾರೆಂದರೆ ಯಾರಿಗೂ ಇರಲಿಲ್ಲ. ಆದರೆ, ಅದು ಬಿಡುಗಡೆಗೊಂಡ ನಂತರ ಸೃಷ್ಟಿಯಾಗಿದ್ದ ಕ್ರೇಜ್, ಪರಭಾಷಿಕರೇ ದಿಗ್ಭ್ರಾಂತರಾಗಿ ಕನ್ನಡ ಚಿತ್ರರಂಗದತ್ತ ದಿಟ್ಟಿಸಿದ ಪರಿಯೆಲ್ಲವೂ ಐತಿಹಾಸಿಕ ವಿದ್ಯಮಾನಗಳೇ.
ಅದಾದ ನಂತರ ತೆರೆಕಂಡ ಕೆಜಿಎಫ್ ಚಾಪ್ಟರ್2 ಕೂಡಾ ಅಂಥಾದ್ದೇ ಅದ್ಭುತ ಗೆಲುವು ದಾಖಲಿಸಿದೆ. ಅದಾಗಿ ಹತ್ತತ್ತಿರ ವರ್ಷ ಕಳೆಯುತ್ತಾ ಬಂದಿದೆ. ಆದರೆ ರಾಕಿಂಗ್ ಸ್ಟಾರ್ ಯಶ್ ಅವರ ಮುಂದಿನ ಚಿತ್ರ ಯಾವುದು? ಅದನ್ನು ಯಾರು ನಿರ್ದೇಶನ ಮಾಡಲಿದ್ದಾರೆ ಅಂತೆಲ್ಲ ಸಾವಿರ ಪ್ರಶ್ನೆಗಳು ಹುಟ್ಟಿಕೊಂಡಿವೆ. ಖುದ್ದು ಯಶ್ ಅಭಿಮಾನಿಗಳೇ ಅದಕ್ಕೆಲ್ಲ ಉತ್ತರದ ನಿರೀಕ್ಷೆಯಲ್ಲಿದ್ದಾರೆ. ಆದರೆ, ಯಶ್ ಕಡೆಯಿಂದ ಈ ವರೆಗೂ ಮುಂದಿನ ನಡೆಯ ಬಗ್ಗೆ ಸಣ್ಣದೊಂದು ಸುಳಿವೂ ಜಾಹೀರಾಗಿರಲಿಲ್ಲ. ಅಂತೂ ಹೊಸಾ ವರ್ಷ ಕಣ್ಣಳತೆಯಲ್ಲಿ ಕಣ್ಣು ಮಿಟುಕಿಸುತ್ತಿರುವ ಈ ಘಳಿಗೆಯಲ್ಲಿ ಶುಭ ಸುದ್ದಿಯೊಂದು ಹೊರಬಿದ್ದಿದೆ.
ಅದರನ್ವಯ ಹೇಳೋದಾದರೆ, ಮುಂದಿನ ವರ್ಷದ ಮೊದಲ ವಾರದಲ್ಲಿಯೇ ಯಶ್ ತಮ್ಮ ಮುಂದಿನ ಸಿನಿಮಾ ಬಗ್ಗೆ ಖುದ್ದಾಗಿ ಮಾತಾಡಲಿದ್ದಾರೆ. ತಾವು ಒಪ್ಪಿಕೊಂಡಿರೋ ಹೊಸಾ ಸಿನಿಮಾದ ಬಗ್ಗೆ ಒಂದಷ್ಟು ಇಂಟರೆಸ್ಟಿಂಗ್ ವಿಚಾರಗಳನ್ನು ಹಂಚಿಕೊಳ್ಳಲಿದ್ದಾರೆ. ಹಾಗೆ ಯಶ್ ಜಾಹೀರು ಮಾಡಲಿರುವ ಪ್ರತೀ ಅಂಶಗಳೂ ಕೂಡಾ ದೇಶ ಮಟ್ಟದಲ್ಲಿ ಸಂಚಲನ ಸೃಷ್ಟಿಸಲಿದ್ದಾವೆ. ಯಶ್ ಮುಂದಿನ ನಡೆ ಈಗ ಹಬ್ಬಿಕೊಂಡಿರುವ ಎಲ್ಲ ಅಂತೆಕಂತೆಗಳನ್ನೂ ತಲೆ ಕೆಳಗೆ ಮಾಡಲಿದ್ದಾವೆ. ಈ ವರ್ಷ ಒಂದು ಸುದೀರ್ಘ ಗ್ಯಾಪ;ಇನಲ್ಲಿ ನಿರಾಶರಾಗಿರುವ ಅಭಿಮಾನಿಗಳಿಗೆ, ಮುಂದಿನ ವರ್ಷವನ್ನು ಹಬ್ಬವಾಗಿಸುವಂಥಾ ಎಲ್ಲ ತಯಾರಿಗಳನ್ನೂ ಯಶ್ ಮಾಡಿಕೊಂಡಿದ್ದಾರೆ.
ಹಾಗೆ ನೋಡಿದರೆ, ಯಶ್ಗೇನೂ ಅವಕಾಶಗಳಿಗೆ ಬರವಿಲ್ಲ. ಈ ಕ್ಷಣಕ್ಕೂ ಬಾಲಿವುಡ್ ಲೆವೆಲ್ಲಿನ ಪ್ರಖ್ಯಾತ ನಿರ್ಮಾಣ ಸಂಸ್ಥೆಗಳು ಬೆಂಬಿಡದೆ ಎಡತಾಕುತ್ತಿವೆ. ಯಶ್ಗಾಗಿ ಒಂದು ಸಿನಿಮಾ ನಿರ್ದೇಶನ ಮಾಡಬೇಕೆಂದು ಸ್ಟಾರ್ ನಿರ್ದೇಶಕರ ದಂಡೇ ಕಾದು ಕೂತಿದೆ. ಅತ್ತ ನೇರವಾಗಿ ಬಾಲಿವುಡ್ಗೆ ಹಾರೋ ವಿಪಲ ಅವಕಾಶಗಳೂ ಕೂಡಾ ಯಶ್ ಮುಂದೆ ಇದ್ದೇ ಇದ್ದಾವೆ. ಆದರೆ, ಈ ವಿಚಾರದಲ್ಲಿ ಯಶ್ ಯಾವ ಕಾರಣಕ್ಕೂ ತುರ್ತಿನಲ್ಲಿ ನಿರ್ಧಾರ ತೆಗೆದುಕೊಳ್ಳುವವರಲ್ಲ. ಕೊಂಚ ತಡವಾದರೂ ಪರವಾಗಿಲ್ಲ, ಕೆಜಿಎಫ್ ಸರಣಿಯ ಗೆಲುವನ್ನು ಮತ್ತಷ್ಟು ಆವೇಗದಿಂದ ಮುನ್ನಡೆಸಬೇಕೆಂಬ ನಿರ್ಧಾರ ಅವರದ್ದಾಗಿದೆ.
ಕೆಜಿಎಫ್ನಂಥಾ ಅಮೋಘ ಗೆಲುವು ಯಾವ ನಟನ ಪಾಲಿಗಾದರೂ ವಿಶೇಷವೇ. ಭಾರತೀಯ ಚಿತ್ರರಂಗದ ಮಟ್ಟಿಗೆ ಅದೊಂದು ಸಮ್ಮೋಹಕವಾದ ಗೆಲುವು. ಆದರೆ, ಆ ಗೆಲುವಿನ ಪ್ರಭೆಯನ್ನು ಮುಂದುವರೆಸಿಕೊಂಡು ಹೋಗೋದು ಕೂಡಾ ಸವಾಲಿನ ಸಂಗತಿಯೇ. ಕೊಂಚ ಯಾಮಾರಿದರೂ ಗೆಲುವಿನ ಹಾದಿಯಲ್ಲಿ ಮತ್ತೆ ಕಲ್ಲು ಮುಳ್ಳುಗಳು ಹರಡಿಕೊಳ್ಳುವ ಅಪಾಯಗಳಿರುತ್ತವೆ. ಅದೆಲ್ಲವನ್ನೂ ಮನಗಂಡೇ ಯಶ್ ಮುಂದಿನ ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಒಂದು ಮೂಲದ ಪ್ರಕಾರ ಅದಕ್ಕೆ ಬೇಕಾದ ಸರ್ವ ತಯಾರಿಯನ್ನೂ ಅವರೀಗಲೇ ಮಾಡಿಕೊಂಡಿದ್ದಾರೆ. ಮುಂದಿನ ವರ್ಷದ ಆರಂಭದಿಂದಲೇ ಯಶ್ ಅಭಿನಯದ ಹೊಸಾ ಸಿನಿಮಾಕ್ಕೆ ವಿದ್ಯುಕ್ತ ಚಾಲನೆ ಸಿಗಲಿದೆ. ವರ್ಷಗಟ್ಟಲೆ ಕಾದು ಕೂತಿರುವ ಅಭಿಮಾನಿಗಳ ಮುಂದೆ ಇಷ್ಟರಲ್ಲಿಯೇ ಹಬ್ಬದಂಥಾ ವಾತಾವರಣ ತೆರೆದುಕೊಳ್ಳಲಿದೆ!