ಈ ವರ್ಷವಿಡೀ ಕನ್ನಡ ಚಿತ್ರರಂಗದ ಪಾಲಿಗೆ ಮನ್ವಂತರದಂಥಾ ಅನೇಕ ಬೆಳವಣಿಗೆಗಳಾಗಿವೆ. ಒಂದಷ್ಟು ಗೆಲುವುಗಳು, ಅದರ ಫಲವಾಗಿ ಮೂಡಿಕೊಂಡಿರೋ ನಿರೀಕ್ಷೆಗಳ ಜೊತೆ ಜೊತೆಗೇ ಒಂದಷ್ಟು ಭಿನ್ನ ಸಿನಿಮಾಗಳು ಬಿಡುಗಡೆಯ ಹೊಸ್ತಿಲಿನಲ್ಲಿವೆ. ಹಾಗೆ ಈ ವರ್ಷದಂಚಿನಲ್ಲಿ ಕಮಾಲ್ ಮಾಡಲು ಮುಂದಾಗಿರುವ ಚಿತ್ರಗಳ ಸಾಲಿನಲ್ಲಿ ಧನಂಜಯ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಮೈಸೂರು ಡೈರೀಸ್ ಕೂಡಾ ಪ್ರಧಾನವಾಗಿ ಸೇರಿಕೊಳ್ಳುತ್ತದೆ. ನಮ್ಮಾಳದಲ್ಲಿರುವ ನೆನಪಿನ ಪರಾಗ ಬಚ್ಚಿಟ್ಟುಕೊಂಡಂತೆ ಭಾಸವಾಗೋ ಈ ಟ್ರೈಲರ್ ವ್ಯಾಪಕ ಮೆಚ್ಚುಗೆ ಪಡೆದುಕೊಂಡಿತ್ತು. ಇದೀಗ ಚಿತ್ರ ಬಿಡುಗಡೆಗೊಂಡು ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ.
ಪ್ರೀತಿ ಎಂಬುದಕ್ಕೆ ವಯಸ್ಸಿನ ಗಡಿ ರೇಖೆಗಳಿಲ್ಲ. ಎಲ್ಲವನ್ನೂ ಮೀರಿಕೊಂಡು, ಎಲ್ಲರನ್ನೂ ಆವರಿಸಿಕೊಳ್ಳುವ ಪ್ರೀತಿಯ ಜೊತೆಗೆ, ಹಲವಾರು ಅಂಶಗಳನ್ನು ಬೆರೆಸಿ ತಯಾರಿಸಲಾಗಿರುವ ಚಿತ್ರ ಮೈಸೂರು ಡೈರೀಸ್. ಟ್ರೈಲರ್ನಲ್ಲಿಯೇ ಒಟ್ಟಾರೆ ಕಥೆಯ ಸೊಬಗು ಎಂಥಾದ್ದಿದೆ ಎಂಬುದು ಸುಳಿವು ಗೋಚರಿಸಿದೆ. ಈ ಟ್ರೈಲರ್ ಮೂಲಕವೇ ಮೈಸೂರು ಡೈರೀಸ್ ಎಲ್ಲೆಡೆಗಳಿಂದಲೂ ಚರ್ಚೆ ಹುಟ್ಟು ಹಾಕಿದೆ. ಜೊತೆಗೆ ಸದಭಿಪ್ರಾಯಗಳೂ ಕೂಡಾ ಕೇಳಿ ಬರುತ್ತಿದ್ದಾವೆ. ಒಟ್ಟಾರೆ ಸಿನಿಮಾ ಬಗ್ಗೆ ಚಿತ್ರತಂಡ ಯಾವುದೇ ರೀತಿಯ ಬಿಲ್ಡಪ್ಪು ಕೊಡುವುದಿಲ್ಲ. ಆದರೆ, ಎಲ್ಲ ವರ್ಗದ ಪ್ರೇಕ್ಷಕರಿಗೂ ಇಷ್ಟವಾಗುವಂಥಾ ಕಂಟೆಂಟು ಇದರಲ್ಲಿ ಅಡಕವಾಗಿದೆ ಎಂಬ ಭರವಸೆ ಮಾತ್ರ ಗಾಢವಾಗಿದ್ದಂತಿದೆ. ಅದು ಸಿನಿಮಾ ನೋಡಿದವರಿಗೆಲ್ಲ ನಿಜವೆನಿಸಿದೆ.
ಈ ಚಿತ್ರ ಈ ಪರಿಯಾಗಿ ಚರ್ಚೆಯಲ್ಲಿರೋದಕ್ಕೆ ಅನೇಕ ಕಾರಣಗಳಿದ್ದಾವೆ. ಅದರಲ್ಲಿ ಪ್ರಧಾನವಾಗಿ ಗುರುತಿಸಿಕೊಳ್ಳುವವರು ನಿರ್ದೇಶಕ ಧನಂಜಯ್. ಅವರು ಹಲವಾರು ವರ್ಷಗಳಿಂದ ಚಿತ್ರರಂಗದ ಭಾಗವಾಗಿರುವವರು. ಹಲವಾರು ಹಿಟ್ ಹಾಡುಗಳಿಗೆ ಸಾಹಿತ್ಯ ಒದಗಿಸಿ, ಪ್ರಶಸ್ತಿಗಳಿಗೂ ಭಾಜನರಾಗಿರುವವರು ಧನಂಜಯ್. ನೀವು ಕಿರಿಕ್ ಪಾರ್ಟಿ ಚಿತ್ರ ನೋಡಿದ್ದರೆ ಧನಂಜಯ್ ಅವರನ್ನು ಮರೆಯಲು ಸಾಧ್ಯವೇ ಇಲ್ಲ. ಅದರಲ್ಲಿ ಬಹುಮುಖ್ಯವಾದ ಪಾತ್ರವೊಂದನ್ನು ನಿಭಾಯಿಸುತ್ತಲೇ, ಬೆಳಗೆದ್ದು ಯಾರ ಮುಖವ ನಾನು ನೋಡಿದೆ ಎಂಬ ಸಾರ್ವಕಾಲಿಕ ಹಿಟ್ ಹಾಡನ್ನೂ ಸ್ವತಃ ಬರೆದಿದ್ದರು. ಅದಕ್ಕಾಗಿ ಪ್ರಶಸ್ತಿಯನ್ನೂ ಪಡೆದುಕೊಂಡಿದ್ದರು.
ಆ ನಂತರದಲ್ಲಿ ಹಲವಾರು ಚಿತ್ರಗಳಿಗೆ ಹಾಡುಗಳನ್ನು ಬರೆಯುತ್ತಾ, ಅಲ್ಲೇ ನಾನಾ ಥರದಲ್ಲಿ ಸಕ್ರಿಯರಾಗಿದ್ದ ಧನಂಜಯ್ ರಾಮ ರಾಮಾ ರೇ ಚಿತ್ರದಲ್ಲಿಯೂ ನಿರ್ಣಾಯಕವಾಗಿ ಕಾರ್ಯ ನಿರ್ವಹಿಸಿದ್ದರು. ಬಹುಮುಖ್ಯವಾಗಿ, ಸಿನಿಮಾ ಸಾಹಿತಿಯಾಗಿ ಮುನ್ನೆಲೆಗೆ ಬಂದಿದ್ದ ಧನಂಜಯ್ ಅವರಿಗೆ ಈ ಕ್ಷಣಕ್ಕೂ ಉತ್ತಮ ಬೇಡಿಕೆ ಇದೆ. ಆದರೆ, ಬಹುಮುಖಿ ಅಭಿರುಚಿ ಹೊಂದಿರುವ ಅವರ ಪ್ರಧಾನ ಧ್ಯಾನವಾಗಿದ್ದದ್ದು ನಿರ್ದೇಶನ. ಈ ಕಾರಣದಿಂದಲೇ ಅತ್ಯಂತ ಅಚ್ಚುಕಟ್ಟಾಗಿ, ಚೆಂದದ ಕಥೆಯೊಂದನ್ನು ಸಿದ್ಧಪಡಿಸಿಕೊಂಡು ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ.
ಅಂದಹಾಗೆ, ಈ ಚಿತ್ರದಲ್ಲಿ ಪಾವನಾ ಗೌಡ, ಪ್ರಭು ಮುಂಡ್ಕೂರ್, ಮಂಜುನಾಥ್ ಶೇಖರ್ ಮುಂತಾದವರು ಮುಖ್ಯಭೂಮಿಕೆಯಲ್ಲಿದ್ದಾರೆ. ಸ್ವತಃ ಧನಂಜಯ್ ಒಂದು ಪಾತ್ರವನ್ನೂ ನಿರ್ವಹಿಸಿದ್ದಾರೆ. ಪಾವನಾ ಗೌಡ ಬಹುಕಾಲದ ನಂತರ ಈ ಸಿನಿಮಾ ಮೂಲಕ, ಒಂದೊಳ್ಳೆ ಪಾತ್ರದೊಂದಿಗೆ ಪ್ರೇಕ್ಷಕರನ್ನು ಮುಖಾಮುಖಿಯಾಗುವ ಖುಷಿಯಲ್ಲಿದ್ದಾರೆ. ಸಿಕೆ ಸಿನೆ ಕ್ರಿಯೇಷನ್ಸ್ ಮತ್ತು ಸಮರ್ಥ್ ಎಂಟರ್ಟೈನ್ಮೆಂಟ್ ಬ್ಯಾನರಿನಡಿಯಲ್ಲಿ ಸುನಂದಾ ಕ್ರಿಷ್ಣಪ್ಪ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಚರಣ್ ರಾಜ್ ಮತ್ತು ಅನೂಪ್ ಸಿಳೀನ್ ಸಂಗೀತ ನಿರ್ದೇಶನ, ಹರೀಶ್ ಕೊಮ್ಮೆ ಸಂಕಲನ ಮತ್ತು ಶಕ್ತಿ ಶೇಖರ್ ಛಾಯಾಗ್ರಹಣದೊಂದಿಗೆ ಮೈಸೂರು ಡೈರೀಸ್ ಕಳೆಗಟ್ಟಿಕೊಂಡಿದೆ.