ನಮ್ಮ ದೇಹದ ಪ್ರತೀ ಅಂಗಾಂಗಗಳಿಗೂ ತಮ್ಮದೇ ಆದ ಮಹತ್ವ ಇದ್ದೇ ಇದೆ. ಅದರಲ್ಲಿ ಒಂದು ಹೆಚ್ಚು ಒಂದು ಕಡಿಮೆ ಅನ್ನೋದು ಇಲ್ಲವೇ ಇಲ್ಲ. ಅದರಲ್ಲೊಂದಕ್ಕೆ ತೊಂದರೆಯಾದರೂ ಕೂಡಾ ಇಡೀ ದೇಹದ ಒಟ್ಟಾರೆ ಆರೋಗ್ಯದ ಮೇಲೆ ವ್ಯತಿರಿಕ್ತವಾದ ಪರಿಣಾಮ ಬೀರುತ್ತೆ. ಅದರಲ್ಲಿಯೂ ಮೂಗಂತೂ ಕೇವಲ ಆಘ್ರಾಣಿಸೋದಕ್ಕೆ, ಉಸಿರಾಡೋದಕ್ಕೆ ಮಾತ್ರವಲ್ಲದೇ ಬಾಹ್ಯ ಸೌಂದರ್ಯದಲ್ಲಿಯೂ ಪ್ರಧಾನ ಪಾತ್ರ ವಹಿಸುತ್ತೆ.
ಅವರಿವರ ವಿಚಾರಗಳಲ್ಲಿ ಹಸ್ತಕ್ಷೇಪ ಮಾಡೋದಕ್ಕೆ ಮೂಗು ತೂರಿಸೋದು ಅನ್ನೋ ವಿಶೇಷಣ ನಮ್ಮ ನಡುವೆ ಚಾಲ್ತಿಯಲ್ಲಿದೆ. ಅದು ಮೂಗಿನ ಮಹತ್ವದ ದ್ಯೋತಕವೂ ಹೌದು. ಆದ್ರೆ ಈ ಮೂಗಿನ ಬಗ್ಗೆ ತಿಳಿದುಕೊಳ್ಳಲೇ ಬೇಕಾದ ಒಂದಷ್ಟು ಇಂಟರೆಸ್ಟಿಂಗ್ ಸಂಗತಿಗಳಿದ್ದಾವೆ. ಅವೆಲ್ಲವೂ ಯಾರಿಗೇ ಆದ್ರೂ ಅಚ್ಚರಿಯುಂಟು ಮಾಡುವಂತಿರೋದು ಸುಳ್ಳಲ್ಲ. ಮೂಗೆಂಬುದು ಮುಖದ ಒಟ್ಟಾರೆ ಸೌಂದರ್ಯದ ಕೇಂದ್ರ ಬಿಂದು. ಅದು ಇರಬೇಕಾದ ಜಾಗದಲ್ಲಿ, ಇಂತಿಷ್ಟೇ ಆಕಾರದಲ್ಲಿದ್ರೆ ಚೆನ್ನ. ಆ ಮೂಗಿನಲ್ಲಿಯೂ ನಾನಾ ವೆರೈಟಿಗಳಿರೋದು ಕಣ್ಣ ಮುಂದಿನ ಸತ್ಯ. ಈ ಕಾರಣದಿಂದಾನೆ ಪುಟ್ಟ ಮಕ್ಕಳ ಮೂಗನ್ನು ಕೊಂಚ ವಿಶೇಷವಾಗಿಯೇ ತಿದ್ದಿ ತೀಡುವ ಪರಿಪಾಠ ಚಾಲ್ತಿಯಲ್ಲಿದೆ.
ಹಾಗಾದ್ರೆ ಎಳೇ ವಯಸ್ಸಿನಲ್ಲಿ ಮಾತ್ರವೇ ಮೂಗಿನ ಬೆಳವಣಿಗೆಯಾಗುತ್ತಾ? ಒಂದು ಸಾರಿ ಒಂದು ಆಕಾರಕ್ಕೆ ಬಂತಂದ್ರೆ ಮತ್ತೆ ಮೂಗು ಬದಲಾಗೋದಿಲ್ಲವಾ ಅನ್ನೋದು ನಿಜವಾದ ಪ್ರಶ್ನೆ. ಇದಕ್ಕೆ ಉತ್ತರವಾಗಿ ಸಿಗೋದು ಮಜವಾದ ಅಂಶಗಳೇ. ಆ ಪ್ರಕಾರವಾಗಿ ಹೇಳೋದಾದ್ರೆ, ಯಾರಿಗೇ ಆದ್ರೂ ಹತ್ತೊಂಬತ್ತನೇ ವಯಸ್ಸಿನ ಹೊತ್ತಿಗೆಲ್ಲ ಮೂಗು ಒಂದು ಆಕಾರಕ್ಕೆ ಟ್ಯೂನ್ ಆಗುತ್ತೆ. ಆ ನಂತರದಲ್ಲಿ ಬಹಳಷ್ಟು ವರ್ಷ ಅದರ ಬೆಳವಣಿಗೆ ಸಾಗುತ್ತೆ. ಅದು ಬಲು ಸೂಕ್ಷ್ಮವಾಗಿ ಆಕಾರ ಬದಲಿಸುತ್ತೆ. ಅದು ಉದ್ದ ಬೆಳೆಯಲೂ ಬಹುದು. ಕ್ಯಾಪ್ಸಿಕಂನಂತೆ ದಪ್ಪಗಾಗಲೂ ಬಹುದು. ನಸೀಬು ಕೆಟ್ಟರೆ ಅದರ ಗಾತ್ರ ಸಣ್ಣದಾಗಲೂ ಬಹುದಂತೆ.