ಸಂಕೇಶ್ವರರ ಸಾಹಸ ಅಷ್ಟೊಂದು ಸಲೀಸಿನದ್ದಾಗಿತ್ತಾ?
ಪ್ರತೀ ಗೆಲುವಿನ ಹಿಂದೆಯೂ ಪದೇ ಪದೆ ಎದುರಾದ ಸೋಲಿನ ತರಚುಗಾಯಗಳಿರುತ್ತವೆ. ಅಂಥಾ ಗಾಯದ ಗುರುತುಗಳಿಲ್ಲದ ಗೆಲುವೊಂದು ಗೆಲುವೇ ಅಲ್ಲ. ಅದರಾಚೆಗೂ ಯಾವನಾದರೂ ಗೆದ್ದೇ ಅಂತ ಬೀಗಿದರೆ, ಒಂದೋ ಆಸುಪಾಸಿನವರ ಎದೆಮೇಲೆ ಕಾಲಿಟ್ಟು ಮೆರೆದಿರಬೇಕಾಗುತ್ತೆ. ಇಲ್ಲವೆಂದರೆ ಯಾರದ್ದೋ ಶ್ರಮಕ್ಕೆ ಏಕಾಏಕಿ ಅಪ್ಪನಾಗಿ ಬಿಡಬೇಕಾಗುತ್ತೆ. ಆದರೆ, ಹಾಗೆ ದಕ್ಕಿಸಿಕೊಂಡ ಗೆಲುವೆಂಬೋ ಭ್ರಮೆ ಬಹುಬೇಗನೆ ಕಳಚಿಕೊಳ್ಳುತ್ತೆ. ಅದ್ಯಾವ ಕ್ಷೇತ್ರವೇ ಆದರೂ ಆದಷ್ಟು ಬೇಗನೆ ಷಡ್ಯಂತ್ರಗಳ ಪೊರೆ ಕಳಚಿ ಬೆತ್ತಲಾಗಬೇಕಾಗುತ್ತೆ. ನಮ್ಮ ಸುತ್ತಲೂ ಹಾಗೆ ಯಾರದ್ದೋ ಶ್ರಮ, ಪ್ರತಿಭೆಗಳನ್ನು ತಮ್ಮದೆಂದು ಬಿಂಬಿಸುತ್ತಾ ಯಾಮಾರಿಸೋ ಫಟಿಂಗರದ್ದೊಂದು ಪಡೆಯೇ ಇರುತ್ತದೆ. ಆದರೆ, ವಿಜಯ ಸಂಕೇಶ್ವರರಂಥಾ ಸಾಧಕರ ಜೀವನಗಾಥೆ ಅದೆಲ್ಲವನ್ನೂ ಮೀರಿಕೊಂಡಿರುವಂಥಾದ್ದು. ಅಲ್ಲಿ ಯಾರ ನೆರಳೂ ಇಲ್ಲ. ಅದರ ಆಸುಪಾಸಿನಲ್ಲಿರೋದು ಬರೀ ಕಠಿಣ ಪರಿಶ್ರಮವಷ್ಟೇ. ಅವರ ಬದುಕಿನ ತುಣುಕುಗಳನ್ನು ಬೊಗಸೆಯಲ್ಲಿಟ್ಟುಕೊಂಡು ಅದೆಷ್ಟೋ ಮಂದಿ ಸಂಭ್ರಮಿಸುತ್ತಾರೆ. ಸಂಕೇಶ್ವರರನ್ನೇ ಸ್ಫೂರ್ತಿಯಾಗಿಸಿಕೊಳ್ಳುತ್ತಾರೆ. ಹಾಗಿರುವಾಗ ಅವರದ್ದೇ ಬದುಕಿನ ಕಥನ ದೃಷ್ಯರೂಪ ಧರಿಸಿದೆ ಅಂದರೆ, ಅದರ ಬಗ್ಗೆ ಕುತೂಹಲ ಮೂಡಿಕೊಳ್ಳದಿರಲು ಸಾಧ್ಯವೇ?
ರಿಷಿಕಾ ಶರ್ಮಾ ನಿರ್ದೇಶನದಲ್ಲಿ ಮೂಡಿ ಬಂದಿದ್ದ ವಿಜಯಾನಂದ ಎಂಬ ಚಿತ್ರ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದದ್ದು ಅದೇ ಕಾರಣದಿಂದ. ಎಲ್ಲೋ ಸಂಕೇಶ್ವರರ ಬಗ್ಗೆ ಕೆಲ ಮಾತುಗಳನ್ನು ಕೇಳಿ, ಬರಹಗಳನ್ನು ಓದಿ ಜನ ಪುಳಕಗೊಂಡಿದ್ದರು. ಅಂಥಾ ಸಾಧಕನ ಜೀವನಗಾಥೆ ದೃಷ್ಯರೂಪಕ್ಕಿಳಿದಿರೋದರಿಂದ ಸ್ಫೂರ್ತಿ ಮತ್ತು ಅಚ್ಚರಿಗಳ ಜಳಕ ಗ್ಯಾರೆಂಟಿ ಎಂದೇ ಜನ ಭಾವಿಸಿದ್ದರು. ಇಂಥಾ ಸಾವಿರ ನಿರೀಕ್ಷೆಗಳ ಒಡ್ಡೋಲಗದಲ್ಲಿ ಈ ಚಿತ್ರವೀಗ ಪ್ಯಾನಿಂಡಿಯಾ ಮಟ್ಟದಲ್ಲಿ ತೆರೆಕಂಡಿದೆ. ಅದರಲ್ಲಿ ಅಡಕವಾಗಿರುವ ಸಂಕೇಶ್ವರರ ಯಶೋಗಾಥೆ ಹೇಗಿದೆ? ನಮ್ಮ ಕಾಲಮಾನದಲ್ಲಿಯೇ ನಡೆದ ದಂತಕಥೆಯಂಥಾ ಕಹಾನಿಯನ್ನು ಹೇಗೆ ದೃಷ್ಯಕ್ಕೆ ಒಗ್ಗಿಸಿದ್ದಾರೆ? ಇದು ನಿಜಕ್ಕೂ ಪ್ಯಾನಿಂಡಿಯಾ ಮಟ್ಟಕ್ಕೆ ತಲುಪುವಂತೆ ಮೂಡಿ ಬಂದಿದೆಯಾ? ಹೀಗೆ ಕಾತರದಲ್ಲಿ ಅದ್ದಿ ತೆಗೆದಂಥಾ ಪ್ರಶ್ನೆಗಳನ್ನಿಟ್ಟುಕೊಂಡು ಸಿನಿಮಾ ಮಂದಿರ ಹೊಕ್ಕವರೆಲ್ಲ ಅದೊಂದು ತೆರನಾದ ಅತೃಪ್ತ ಭಾವದೊಂದಿಗೆ ಹೊರಬರುತ್ತಿದ್ದಾರೆ!
ವಿಜಯ ಸಂಕೇಶ್ವರ ಅಂದಾಕ್ಷಣವೇ ಸಾರಿಗೆ ಸಾಮ್ರಾಜ್ಯದ ಅಧಿಪತಿಯಂಥಾ ಚಿತ್ರ ಕಣ್ಮುಂದೆ ಕದಲುತ್ತದೆ. ಅವರು ಸರಕು ಸಾಗಾಟ ವಾಹನ ಕಂಪೆನಿ ಹಾಗೂ ಸಾರಿಗೆ ಸಂಸ್ಥೆಯನ್ನು ಕಟ್ಟಿ ನಿಲ್ಲಿಸಿದ್ದರ ಹಿಂದೆ ರೋಚಕ ಕಥನೆಗಳೇ ಇದ್ದಾವೆ. ಡಾಂಬರು ರಸ್ತೆಗಳ ಎದೆ ಮೇಲೆ ಆಯುಷ್ಯ ಕರಗಿಸಿಕೊಂಡ ಹಳೇ ಟೈರುಗಳನ್ನು ತಾವೇ ಖುದ್ದಾಗಿ ಮಾರೋದರಿಂದ ಹಿಡಿದು, ದಿನಚರಿ ಎಂಬುದು ಒಂಚೂರೂ ಮುಕ್ಕಾಗದಂತೆ ನಡೆದುಕೊಳ್ಳುವ ಶಿಸ್ತಿನವರೆಗೆ ಸಂಕೇಶ್ವರ ಗಮನ ಸೆಳೆಯುತ್ತಾರೆ. ಒಂದು ಲಾರಿಯಿಂದ ಆರಂಭಿಸಿ, ನೂರಾರು ಲಾರಿಗಳ ವರೆಗೆ ಹಬ್ಬಿಕೊಂಡ ಅವರ ಉದ್ಯಮ ಸಾಮ್ರಾಜ್ಯದ ಬಗ್ಗೆ ಕುತೂಹಲ ಮೂಡಿಕೊಳ್ಳುತ್ತೆ. ಅಲ್ಲಿಂದಾಚೇಗೆ ಪತ್ರಿಕೆಗಳನ್ನು ಆರಂಭಿಸಿ, ದೃಷ್ಯಮಾಧ್ಯಮಕ್ಕೂ ಲಗ್ಗೆಯಿಟ್ಟು ಗೆದ್ದ ಸಂಕೇಶ್ವರರ ಗೆಲುವಿನ ಗುಟ್ಟು ತಿಳಿದುಕೊಳ್ಳುವ ಧಾವಂತವೂ ಅನೇಕರಲ್ಲಿದ್ದೇ ಇದೆ. ಅದಕ್ಕೆಲ್ಲ ವಿಜಯಾನಂದ ಚಿತ್ರದಲ್ಲಿ ಉತ್ತರಗಳಿವೆಯಾ ಅಂತ ನೋಡ ಹೋದರೆ, ನಿರಾಸೆ, ಗೊಂದಲಗಳ ಹೊರತಾಗಿ ಬೇರೇನೂ ದಕ್ಕುವುದಿಲ್ಲ!
ಸೋತು ಗೆದ್ದವರ ಕಥೆಗಳು ಯಾವತ್ತಿದ್ದರೂ ಫ್ರೆಶ್ ಆಗಿರುತ್ತವೆ. ಆದರೆ ಸಂಕೇಶ್ವರರ ಜೀವನವನ್ನು ದೃಷ್ಯಕ್ಕೆ ಒಗ್ಗಿಸುವಾಗ ನಿರ್ದೇಶಕಿ ರಿಷಿಕ ಗೊಂದಲಕ್ಕೀಡಾಗಿರೋದು ಪ್ರತೀ ಫ್ರೇಮುಗಳಲ್ಲಿಯೂ ಸ್ಪಷ್ಟವಾಗುತ್ತದೆ. ಸಂಕೇಶ್ವರರ ಜೀವನಗಾಥೆಯನ್ನ ಯಥಾವತ್ತಾಗಿ ದೃಷ್ಯೀಕರಿಸಿದರೆ ಡಾಕ್ಯುಮೆಂಟರಿಯಾಗಿ ದಾಖಲಾಗುವ ಅಪಾಯ, ಕಮರ್ಶಿಯಲ್ ದೃಷಿಯಲ್ಲಿ ದಿಟ್ಟಿಸಿದರೆ ಡ್ರಾಮಾ ಆಗಿಬಿಡುವ ಕಂಟಕ… ಈ ಗೊಂದಲ ನಿರ್ದೇಶಕಿಯನ್ನು ಅತ್ತ ಧರೆ, ಇತ್ತ ಪುಲಿ ಎಂಬಷ್ಟು ತೀವ್ರವಾಗಿ ಕಾಡಿದೆ. ಅದನ್ನು ಮ್ಯಾನೇಜು ಮಾಡುವ ಭರದಲ್ಲಿ ಕಮರ್ಶಿಯಲ್ ಅಂಶಗಳೇ ಮೇಲುಗೈ ಪಡೆದುಕೊಂಡಿವೆ. ತೀವ್ರವಾಗಿ, ಪರಿಣಾಮಕಾರಿಯಾಗಿ ಕಟ್ಟಿಕೊಡಬಹುದಾಗಿದ್ದ ಸಂಕೇಶ್ವರರ ಕಥನ ಹಲವಾರು ಗೋಜಲುಗಳ ನಡುವೆ ಕಳೆದು ಹೋಗಿದೆ.
ಇಲ್ಲಿ ವಿಜಯ ಸಂಕೇಶ್ವರ್ ಪಾತ್ರವನ್ನು ನಿಹಾಲ್ ನಿಭಾಯಿಸಿದ್ದಾರೆ. ಆದರೆ ಅವರ ನಟನೆಯಾಗಲಿ, ಹಾವಭಾವವಾಗಲಿ, ಸಂಕೇಶ್ವರರ ನಿಜ ವ್ಯಕ್ತಿತ್ವದ ಹತ್ತಿರಕ್ಕೂ ಸುಳಿದಾಡುವುದಿಲ್ಲ. ಆರಂಭದಲ್ಲಿಯೇ ಭರ್ಜರಿ ಬಿಲ್ಡಪ್ ಸಾಂಗ್ನೊಂದಿಗೆ ತೆರೆದುಕೊಳ್ಳುವ ಈ ಸಿನಿಮಾ, ಅಂಥಾ ವ್ಯರ್ಥ ಕಸರತ್ತುಗಳ ಮೂಲಕವೇ ಇಂಟರ್ವೆಲ್ ದಾಟಿಕೊಂಡು, ಕ್ಲೈಮ್ಯಾಕ್ಸಿನಲ್ಲಿ ಕಳೆದು ಹೋಗುತ್ತದೆ. ಅದು ಒಂದು ಸಜೀವ ಸಾಹಸಗಾಥೆಯ ಸಣ್ಣ ಚಹರೆಯನ್ನೂ ನೋಡುಗರ ಮನಸಲ್ಲುಳಿಸೋದಿಲ್ಲ ಎಂಬುದೇ ಪ್ರಧಾನ ಹಿನ್ನಡೆ.
ಹಾಗೆ ನೋಡಿದರೆ, ವಿಜಯ ಸಂಕೇಶ್ವರರದ್ದು ಹೇಳಿಕೊಳ್ಳುವಂಥಾ ಬಡತನದ ಫ್ಯಾಮನಿಲಿಯೇನಲ್ಲ. ಅವರ ತಂದೆ ಆ ಕಾಲದಲ್ಲಿಯೇ ಪ್ರಿಂಟಿಂಗ್ ಪ್ರೆಸ್ ಮಾಲೀಕರಾಗಿದ್ದರು. ಓದೆಲ್ಲ ಮುಗಿದ ನಂತರ, ತಂದೆಯ ಕಾರ್ಯಕ್ಷೇತ್ರಕ್ಕೆ ಬರುವ ವಿಜಯ ಸಂಕೇಶ್ವರ, ಆ ಪ್ರಿಂಟಿಂಗ್ ಪ್ರೆಸ್ ಅನ್ನೂ ಕೂಡಾ ತಮ್ಮ ಜಾಣ್ಮೆಯಿಂದಲೇ ಹೆಚ್ಚು ವಹಿವಾಟು ನಡೆಸುವಂತೆ ನೋಡಿಕೊಳ್ಳುತ್ತಾರೆ. ಆ ನಂತರ ಏಕಾಏಕಿ ಲಾರಿ ಖರೀದಿಸಿ ಚಾಲಕರಾಗ ಹೊರಟ ಸಂಕೇಶ್ವರರಿಗೆ ಮನೆಮಂದಿಯ ಕಡೆಯಿಂದಲೇ ಸಪೋರ್ಟು ಸಿಗುವುದಿಲ್ಲ. ಹಾಗೆ ಒಂದು ಲಾರಿಯಿಂದ, ನೂರಾರು ಲಾರಿಯವರೆಗೆ ಸಂಕೇಶ್ವರರ ಉದ್ಯಮ ಬೆಳೆದಿದ್ದು ಹೇಗೆಂಬ ಕುತೂಹಲ ಎಲ್ಲರೊಳಗೂ ಇತ್ತು. ಅದನ್ನಿಲ್ಲಿ ಅತ್ಯಂತ ಪೇಲವವವಾಗಿ ಚಿತ್ರೀಕರಿಸಲಾಗಿದೆ.
ಒಂದು ಲಾರಿಯನ್ನಿಟ್ಟುಕೊಂಡು ಹೊಯ್ದಾಡುತ್ತಿದ್ದ ಸಂಕೇಶ್ವರರಿಗೆ ರವಿಚಂದ್ರನ್ ನಿಭಾಯಿಸಿರುವ ಪಾತ್ರದ ಪರಿಚಯವಾಗುತ್ತೆ. ಅದು ಅವರ ಗೆಳೆಯನ ಮೂಲಕ. ಹಾಗೆ ಆ ವ್ಯಕ್ತಿಯ ಮುಂದೆ ನಿಲ್ಲುವ ಸಂಕೇಶ್ವರ ದೊಡ್ಡ ಮೊತ್ತದ ಸಾಲಕ್ಕಾಗಿ ಬೇಡಿಕೆ ಇಡುತ್ತಾರೆ. ಅಲ್ಲಿ ಆ ವ್ಯಕ್ತಿ ಸಂಕೇಶ್ವರರನ್ನು ಸಣ್ಣ ಪರೀಕ್ದಷೆಗೊಡ್ಡುತ್ತಾನೆ. ಆ ಪರೀಕ್ಷೆಯನ್ನೂ ಕೂಡಾ ಸಂಕೇಶ್ವರರು ಮೈಂಡ್ ಗೇಮ್ ಮೂಲಕವೇ ಎದುರಿಸುತ್ತಾರೆ. ಅದನ್ನು ಕಂಡು ಫಿದಾ ಆದ ಆ ವ್ಯಕ್ತಿ ಲಕ್ಷ ಲಕ್ಷ ಸಾಲ ಕೊಡುತ್ತಾನೆ. ಅದರಲ್ಲಿಯೇ ಸಂಕೇಶ್ವರರ ಮತ್ತೊಂದಷ್ಟು ಲಾರಿ ಖರೀದಿಸುತ್ತಾರೆ. ಹೀಗೆ ಪ್ರತೀ ಘಟ್ಟದಲ್ಲಿಯೂ ತಮ್ಮ ಜಾಣ್ಮೆ ಪ್ರದರ್ಶಿಸುತ್ತಲೇ ಸಂಕೇಶ್ವರರ ಪಾತ್ರ ಸರಿಕಟ್ಟಾದ ಸಹಾಯ ಪಡೆದುಕೊಳ್ಳುತ್ತಾ ಸಾಗುತ್ತೆ. ಅದನ್ನು ಬಳಸಿಕೊಂಡು ಗೆಲ್ಲುತ್ತಲೇ ಹೋಗುತ್ತೆ. ವಿಶೇಷವೆಂದರೆ, ಅಂಥಾ ಸಹಾಯ ಪಡೆದಾದ ನಂತರ ಸಂಕೇಶ್ವರ ಶ್ರಮಗಳ ಬಗ್ಗೆ ತೀವ್ರವಾಗಿ ಬೆಳಕು ಹರಿಸಿಲ್ಲ. ಆದ್ದರಿಂದಲೇ ಸಂಕೇಶ್ವರರ ವ್ಯಕ್ತಿತ್ವ ಅವರಿವರ ಸಾಂದರ್ಭಿಕ ಸಹಾಯ ಪಡೆದುಕೊಂಡು ಗೆದ್ದಂತೆಯೇ ಭಾಸವಾಗುತ್ತೆ!
ಅದರ ನಡುವೆ ದಾವಣಗೆರೆಯ ಗೋಡೌನಿಗೆ ಬೆಂಕಿಬೀಳುವ ಸೀನು, ಅದರಿಂದಾಗೋ ನಷ್ಟ ಮತ್ತು ಅದನ್ನು ಸಂಕೇಶ್ವರರು ಜೈಸಿಕೊಂಡ ರೀತಿಯ ಬಗ್ಗೆಯೂ ಪರಿಣಾಮಕಾರಿಯಾಗಿ ಒತ್ತು ಕೊಟ್ಟಿಲ್ಲ. ಎಲ್ಲೋ ಒಂದು ಕಡೆ ಸಂಕೇಶ್ವರರ ಪಾತ್ರಕ್ಕೆ ಹೀರೋಯಿಸಂ ಅನ್ನು ಸವರಲು ಹೋಗಿ, ಆ ಪಾತ್ರದ ಅಸಲೀ ಕಸುವನ್ನೇ ಸವೆಸಿ ಹಾಕಿದ್ದಾರೆಂಬ ಭಾವ ಬಹುತೇಕರನ್ನು ಕಾಡುತ್ತೆ. ಇನ್ನುಳಿದಂತೆ ಸಂಕೇಶ್ವರರ ತಂದೆಯ ಪಾತ್ರದಲ್ಲಿ ಅನಂತ್ ನಾಗ್ ನಟಿಸಿದ್ದಾರೆ. ಉತ್ತರಕರ್ನಾಟಕದ ಜವಾರಿ ಸ್ಟೈಲಿನ ಆ ಪ;ಆತ್ರದ ಭಾಷೆಯ ಬಗ್ಗೆಯೇ ನಿರ್ದೇಶಕರು ತಲೆಕೆಡಿಸಿಕೊಂಡಂತಿಲ್ಲ. ಒಂದು ಹಂತದಲ್ಲಿ ಸಂಕೇಶ್ವರರ ತಂದೆ ನಿಧನರಾಗುತ್ತಾರೆ. ಆ ದೃಷ್ಯ ಸರಿದು ಹೋಗುತ್ತದೆ. ಆದರೆ ತಾಯಿ ಮರೆಯಾದ ವಿಚಾರ ಗೊತ್ತಾಗೋದು ಗೋಡೆಗೆ ನೇತುಬಿದ್ದ ಫೋಟೋ ಮತ್ತು ಅದಕ್ಕೆ ತೂಗುವ ಹಾರದಿಂದಲೇ!
ಒಟ್ಟಾರೆಯಾಗಿ ಯಾವ್ಯಾವುದಕ್ಕೆ ಎಷ್ಟೆಷ್ಟು ಪ್ರಾಶಸ್ತ್ಯ ಕೊಡಬೇಕು, ಯಾವುದರತ್ತ ಪ್ರಧಾನವಾಗಿ ಫೋಕಸ್ ಮಾಡಬೇಕೆಂಬುದೇ ನಿರ್ದೇಶಕ ಪ್ರಧಾನ ಗೊಂದಲವಾದಂತೆ ಗೋಚರಿಸುತ್ತದೆ. ಅದರ ಫಲವಾಗಿ ಇಡೀ ಚಿತ್ರವೇ ಅದ್ದೂರಿತನದಾಚೆಗೂ ಸಪ್ಪೆ ಎನಿಸುತ್ತೆ. ಸಂಕೇಶ್ವರರಂಥಾ ಸಾಧಕರ ಜೀವನಗಾಥೆ ನಿಜಕ್ಕೂ ಅದ್ಭುತ ಫೀಲ್ ಹುಟ್ಟಿಸಬೇಕು. ನೋಡಿದ ಪ್ರತಿಯೊಬ್ಬರನ್ನೂ, ಪ್ರತೀ ಫ್ರೇಮುಗಳಲ್ಲಿಯೂ ಕಾಡುವಂತಿರಬೇಕು. ಆದರೆ, ಆ ಸ್ಥಾನವನ್ನು ಗೊಂದಲ ಮತ್ತು ನಿರಾಸೆಗಳೇ ನುಂಗಿಕೊಳ್ಳುತ್ತವೆ. ನಿಹಾಲ್ ನಟನೆಯಲ್ಲೂ ಕೂಡಾ ಕಸುವಿಲ್ಲ. ಬಿಲ್ಡಪ್ಪುಗಳಿಂದಲೂ ಆ ಪಾತ್ರ ಬರಖತ್ತಾಗೋದಿಲ್ಲ. ಸಂಕೇಶ್ವರರ ಇದುವರೆಗಿನ ಸುದೀರ್ಘ ಯಾನ, ಅಷ್ಟೂ ವರ್ಷ ಸಾಮ್ರಾಜ್ಯ ಕಟ್ಟಿದ ರೋಚಕ ಕಥನಗಳೆಲ್ಲವೂ ಕಮರ್ಶಿಯಲ್ ಎಲಿಮೆಂಟುಗಳ ನಡುವೆ ಕಳೆದು ಹೋಗಿದೆ. ನಿಜಕ್ಕೂ ಪ್ಯಾನಿಂಡಿಯಾ ಮಟ್ಟದಲ್ಲಿ ಕಮಾಲ್ ಮಾಡಬಹುದಾದ ಅವಕಾಶವನ್ನು ವಿಜಯಾನಂದ ಚಿತ್ರ ಕಳೆದುಕೊಂಡಿದೆ. ಎಲ್ಲವೂ ಇದ್ದು ಇಂಥಾ ಸ್ಥಿತಿ ಎದುರಾಗಿರೋದು ಕನ್ನಡ ಚಿತ್ರರಂಗದ ಮಟ್ಟಿಗೆ ವರ್ಷದಂಚಿನ ಮಹಾ ದುರಂತ!