ಸುಮ್ಮನೊಮ್ಮೆ ನೆನಪಿಸಿಕೊಳ್ಳಿ… ನಮ್ಮೆಲ್ಲ ಭಾವನೆಗಳು, ಮನೆ, ಊರ ವಿಚಾರಗಳೆಲ್ಲವೂ ಲಕೋಟೆಯ ಮೂಲಕ ರವಾನೆಯಾಗ್ತಿದ್ದ ಆ ಸುವರ್ಣ ಕಾಲವನ್ನ. ಪ್ರೀತಿಪಾತ್ರರ ನಡುವೆ ವಾಹಕವಾಗಿದ್ದ ಏಕೈಕ ಕೇಂದ್ರ ಅಂದ್ರೆ ಅದು ಫೋಸ್ಟಾಫೀಸು. ಅಲ್ಲಿಂದಲೇ ಊರಿಂದೂರಿಗೆ, ಮನಸಿಂದ ಮನಸಿಗೆ ಕನೆಕ್ಷನ್ನು. ಮುಂದೊಂದು ದಿನ ಪೋಸ್ಟ್ ಕಾರ್ಡಿನಲ್ಲಿ, ಲೆಟರಿನಲ್ಲಿನ ಭಾವಗಳೆಲ್ಲ ಬೆರಳ ಮೊನೆಗೆ ಬರುತ್ತೆ, ಅದೆಲ್ಲವನ್ನೂ ಮೊಬೈಲು ನುಂಗಿ ಹಾಕುತ್ತೆಂಬಂಥಾ ಸಣ್ಣ ಸುಳಿವೂ ಇಲ್ಲದ ಕಾಲವನ್ನು… ಅದೀಗ ಭಾರತವೂ ಸೇರಿದಂತೆ ಬಹುತೇಕ ಕಡೆಗಳಲ್ಲಿ ನೆನಪಾಗಿಯಷ್ಟೇ ಉಳಿದುಕೊಂಡಿದೆ.
ಆದ್ರೆ ಜಪಾನಿನಲ್ಲಿ ಈ ಹೊತ್ತಿಗೂ ಪತ್ರ ತಲುಪಿಸುವ ಮಧುರಾನುಭೂತಿ ಚಾಲ್ತಿಯಲ್ಲಿದೆ. ನಾವೆಲ್ಲ ಮೊಬೈಲು ಬಂದಾಕ್ಷಣ ಥ್ರಿಲ್ ಆಗಿ ಪೋಸ್ಟ್ ಆಫೀಸುಗಳಲ್ಲಿ ನೊಣ ಸುಳಿದಾಡುವಂಥ ಸ್ಥಿತಿ ತಂದಿಟ್ವಿ. ಆದ್ರೆ ಜಪಾನಿನಲ್ಲಿ ಪತ್ರ ಸಂಸ್ಕøತಿಯನ್ನು ಆಧುನೀಕರಣದ ಭರಾಟೆಯಲ್ಲಿಯೂ ಜೀವಂತವಾಗಿಡೋ ಕ್ರಿಯೇಟಿವ್ ಪ್ರಯತ್ನಗಳು ನಡೀತಿವೆ. ಅದರ ಭಾಗವಾಗಿಯೇ ಅಚ್ಚರಿಗೊಳ್ಳುವಂಥ ಪೋಸ್ಟ್ ಬಾಕ್ಸ್ ಒಂದನ್ನು ಜಪಾನಿನಲ್ಲಿ ನಿರ್ಮಿಸಲಾಗಿದೆ. ಎಂಥವರೂ ಒಂದರೆಕ್ಷಣ ಥ್ರಿಲ್ ಆಗುವಂಥಾ ಸದರಿ ಪೋಸ್ಟ್ ಬಾಕ್ಸ್ ಗಿನ್ನಿಸ್ ದಾಖಲೆಯನ್ನೂ ಮಾಡಿ ಬಿಟ್ಟಿದೆ.
ಇಂಥಾದ್ದೊಂದು ವಿಶೇಷ ಪೋಸ್ಟ್ ಬಾಕ್ಸ್ ಇರೋದು ಜಪಾನಿನ ಸುಸಾಮಿ ಬೇ ಅನ್ನೋ ನಗರದಲ್ಲಿ. ಅದು ಅಂತಿಂಥ ಪೋಸ್ಟ್ ಬಾಕ್ಸ್ ಅಲ್ಲ. ಅಷ್ಟಕ್ಕೂ ಅದಿರೋದು ಭೂಮಿ ಮೇಲೆಯೂ ಅಲ್ಲ. ಸರಿಸುಮಾರು ಹತ್ತು ಮೀಟರಿನಷ್ಟು ಸಮುದ್ರದ ನೀರಿನಾಳದಲ್ಲಿ ಈ ಪೋಸ್ಟ್ ಬಾಕ್ಸ್ ಇದೆ. ಅದಕ್ಕೆ ಹಾಕೋ ಕಾರ್ಡುಗಳನ್ನ ವಾಟರ್ ಫ್ರೂಪ್ ಮಾದರಿಯಲ್ಲಿ ಸಿದ್ಧಪಡಿಸಲಾಗಿದೆ. ಬರೆಯಲು ವಿಶೇಷ ಮಾರ್ಕರ್ ಅನ್ನೂ ನಿಗಧಿ ಪಡಿಸಲಾಗಿದೆ. ಹಾಗೆ ಬರೆದ ಕಾರ್ಡ್ ಅನ್ನು ಪೋಸ್ಟ್ ಬಾಕ್ಸ್ಗೆ ಹಾಕಬೇಕಂದ್ರೆ ನಿರ್ಧಿಷ್ಟು ಉಡುಗೆ ಧರಿಸಿ, ಆಕ್ಸಿಜನ್ ಕಿಟ್ ಅಳವಡಿಸ್ಕೊಂಡು ನೀರಿನಾಳಕ್ಕೆ ಹಾರ ಬೇಕು.
ಇದರಲ್ಲಿ ಪತ್ರ ಹಾಕಲು ಸುತ್ತಲ ಹತ್ತಾರು ಊರು, ನಗರಗಳಿಂದಲೂ ಜನ ಬರ್ತಾರೆ. ಅದೀಗ ಆ ಭಾಗದಲ್ಲಿ ಕ್ರೇಜ್ನಂತಾಗಿದೆ. ಇಂಥಾದ್ದೊಂದು ವಿಶಿಷ್ಟವಾದ ಪೋಸ್ಟಿಂಗ್ ವ್ಯವಸ್ಥೆಯನ್ನ ಶುರು ಮಾಡಿದಾತ ಟೊಶಿಹಿಕೋ. ಇದೀಗ ಎಪ್ಪತ್ತು ವರ್ಷ ವಯಸ್ಸಾಗಿರೋ ಅವರು ಅದೇ ನಗರದಲ್ಲಿ ಪೋಸ್ಟ್ ಮಾಸ್ಟರ್ ಆಗಿ ಕಾರ್ಯ ನಿರ್ವಹಿಸ್ತಿದ್ರು. ಆಧುನಿಕತೆ ಅಡಿಯಿರಿಸಿದ ಮೇಲೆ ಪತ್ರ ವ್ಯವಹಾರ ಮಾಸಲಾಗುತ್ತಿರೋದ್ರ ಬಗ್ಗೆ ಟೊಶಿಹಿಕೋ ಸಹಜವಾಗಿಯೇ ಬೇಸರಗೊಂಡಿದ್ರು. ಹೇಗಾದ್ರೂ ಮಾಡಿ ಈ ವ್ಯವಸ್ಥೆ ಉಳಿಸಬೇಕೆಂಬ ಇರಾದೆಯಿಂದ 1999ರಲ್ಲಿ ಅವರು ಈ ಐಡಿಯಾವನ್ನ ಕಾರ್ಯ ರೂಪಕ್ಕೆ ತಂದಿದ್ದರು. ಅದೀಗ ಜಗದ್ವಿಖ್ಯಾತಿ ಪಡೆದುಕೊಂಡಿದೆ.