ಕೊರೋನಾ ಕರಿಛಾಯೆಯ ನಡುವೆ ಮಂಕಾದಂತಿದ್ದ ಒಂದಷ್ಟು ಚಿತ್ರಗಳೀಗ ಸಾವರಿಸಿಕೊಂಡು ಬಿಡುಗಡೆಯ ಅಂಚಿಗೆ ಬಂದು ನಿಂತಿದೆ. ಹಾಗೆ ನೋಡಿದರೆ, ಹೀಗೆ ಕೊರೋನಾ ಕಾಲದಲ್ಲಿ ಗ್ರಹಣ ಕವುಚಿಕೊಂಡ ಸಿನಿಮಾಗಳದ್ದೇ ಮತ್ತೊಂದು ಸಿನಿಮಾಕ್ಕಾಗುವಷ್ಟು ದುರಂತ ಕಥೆಗಳಿದ್ದಾವೆ. ಅರೆಬರೆ ಚಿತ್ರೀಕರಣಗೊಂಡಿದ್ದ ಸಿನಿಮಾಗಳದ್ದೇ ಒಂದು ಕಥೆಯಾದರೆ, ಇನ್ನೇನು ಬಿಡುಗಡೆಗೆ ದಿನಾಂಕ ನಿಗಧಿಯಾಗಿದ್ದ ಚಿತ್ರಗಳದ್ದು ಮತ್ತೊಂದು ವ್ಯಥೆ. ಹಾಗೆ ೨೦೨೦ರ ಏಪ್ರಿಲ್ ತಿಂಗಳ ಆಸುಪಾಸಲ್ಲಿ ಬಿಡುಗಡೆಗೆ ಸಿದ್ಧವಾಗಿ, ಹಠಾತ್ ಲಾಕ್ಡೌನಿನಿಂದಾಗಿ ಮರೆಗೆ ಸರಿದಿದ್ದ ಚಿತ್ರಗಳ ಸಾಲಿನಲ್ಲಿ ‘೯ ಸುಳ್ಳು ಕಥೆಗಳು’ ಚಿತ್ರ ಪ್ರಧಾನವಾಗಿ ಗುರುತಿಸಿಕೊಳ್ಳುತ್ತದೆ. ವರ್ಷಗಳ ಹಿಂದಿನಿಂದಲೇ ರಿಷಭ್ ಶೆಟ್ಟಿ ಹಾಡಿದ್ದೊಂದು ಹಾಡು ಮತ್ತು, ಟೀಸರ್, ಟ್ರೈಲರ್ಗಳ ಮೂಲಕ ಭರವಸೆ ಮೂಡಿಸಿದ್ದ ಈ ಚಿತ್ರ ಮುಂದಿನ ವಾರ ಅಂದರೆ, ೯ನೇ ತಾರೀಕಿನಂದು ರಾಜ್ಯಾದ್ಯಂತ ಬಿಡುಗಡೆಗೊಳ್ಳುತ್ತಿದೆ.
ನವರಸಗಳ ಆಧಾರದಲ್ಲಿ ಒಂಬತ್ತು ದಿಕ್ಕಿನ, ಒಂಬತ್ತು ಬಗೆಯ ವಿಭಿನ್ನ ಕಥಾಗುಚ್ಛಗಳನ್ನೊಳಗೊಂಡಿರುವ ಚಿತ್ರ ‘೯ ಸುಳ್ಳು ಕಥೆಗಳು’. ಶೃಂಗಾರ, ಹಾಸ್ಯ, ಕರುಣ, ರೌಧ್ರ, ವೀರ, ಭಯಾನಕ, ಅದ್ಭುತ, ಬೀಭತ್ಸ ಹಾಗೂ ಶಾಂತರಸಗಳ ಒಂಬತ್ತು ಕಥೆಯೊಂದಿಗೆ ಮಂಜುನಾಥ್ ಮುನಿಯಪ್ಪ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಟ್ರೈಲರ್ಗೆ ಮಿಲಿಯನ್ನುಗಟ್ಟಲೆ ವೀವ್ಸ್ ಸಿಗುವ ಮೂಲಕವೇ ಈ ಸಿನಿಮಾ ಮುನ್ನೆಲೆಗೆ ಬಂದಿತ್ತು. ಹಾಡುಗಳಂತೂ ಹೊಸಾ ಥರದಲ್ಲಿ ಟೆಂಡ್ ಸೆಟ್ ಮಾಡಿದ್ದವು. ಅದರಲ್ಲಿಯೂ ವಿಶೇಷವಾಗಿ, ರಿಶಭ್ ಶೆಟ್ಟಿ ಹಾಡಿದ್ದ ಹಾಡೊಂದು ಭಾರೀ ಸದ್ದು ಮಾಡಿತ್ತು. ಇದು ಹೇಳಿಕೇಳಿ ಪ್ರಯೋಗಾತ್ಮಕ ಚಿತ್ರಗಳ ಜಮಾನ. ಸದರಿ ಸಿನಿಮಾದ ಶೀರ್ಷಿಕೆಯೇ ಭಿನ್ನವಾಗಿರೋದರಿಂದ, ಈಗಾಗಲೇ ಹೊರಬಂದಿರುವ ಟೀಸರ್, ಟ್ರೈಲರ್ಗಳು ಅದಕ್ಕೆ ಪೂರಕವಾಗಿರೋದರಿಂದ ಪ್ರೇಕ್ಷಕರು ಒಂಬತ್ತು ಸುಳ್ಳು ಕಥೆಗಳತ್ತ ತೀವ್ರವಾಗಿಯೇ ಆಕರ್ಷಿತರಾಗಿದ್ದಾರೆ.
ಇಲ್ಲಿ ಒಂಭತ್ತು ರಸಗಳಿಗೂ ಒಂದೊಂದು ಕಥಾನಕಗಳನ್ನು ದೃಷ್ಯೀಕರಿಸಲಾಗಿದೆ. ಅದರ ಶೃಂಗಾರ ರಸದ ಕಥೆಯಲ್ಲಿ ಪ್ರತಿಭಾನ್ವಿತ ನಟಿ ಸುಕೃತಾ ವಾಗ್ಳೆ ಮತ್ತು ವಿನಾಯಕ ಜೋಶಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಈ ಮೂಲಕ ಸುಕೃತಾ ಒಂದಷ್ಟು ಕಾಲದ ಗ್ಯಾಪ್ನ ನಂತರ ಮರಳಿ ಬಂದಿದ್ದಾರೆ. ದಕ್ಷಿಣ ಕನ್ನಡ ಮೂಲದ ಸುಕೃತಾ ವಾಗ್ಳೆ ಬಿ.ಎಂ ಗಿರಿರಾಜ್ ನಿರ್ದೇಶದ ಜಟ್ಟ ಚಿತ್ರದ ಮೂಲಕ ಬೆಳಕಿಗೆ ಬಂದಿದ್ದ ಪ್ರತಿಭೆ. ಆ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಕೂಡಾ ಅರಸಿ ಬಂದಿತ್ತು. ಅದೊಂದು ಚಿತ್ರದ ಮೂಲಕವೇ ತನ್ನೊಳಗಿನ ನಟನೆಯ ಕಸುವನ್ನು ಜಾಹೀರು ಮಾಡಿದ್ದ ಸುಕೃತಾ, ಆ ನಂತರ ಒಂದಷ್ಟು ಕಾಲ ವಿರಾಮ ತೆಗೆದುಕೊಂಡಂತೆ ಕಾಣುತ್ತಿದ್ದರು. ಆದರೆ, ಒಂದಿಲ್ಲೊಂದು ಚಿತ್ರಗಳಲ್ಲಿ ಸದಾ ಬ್ಯುಸಿಯಾಗಿರುತ್ತಿದ್ದ ಅವರು, ಇದೀಗ ಒಂಬತ್ತು ಸುಳ್ಳು ಕಥೆಗಳ ಮೂಲಕ ಮತ್ತೆ ಪ್ರೇಕ್ಷಕರನ್ನು ಮುಖಾಮುಖಿಯಾಗುತ್ತಿದ್ದಾರೆ. ಈ ಮೂಲಕ ಮಹತ್ತರವಾದೊಂದು ಬ್ರೇಕ್ ಸಿಗುವ ಗಾಢ ಭರವಸೆಯೂ ಅವರಲ್ಲಿದ್ದಂತಿದೆ.
ರಂಗಭೂಮಿಯಲ್ಲಿ ಹಲವಾರು ವರ್ಷಗಳಿಂದ ಪಳಗಿಕೊಂಡಿರುವ ಮಂಜುನಾಥ್ ಮುನಿಯಪ್ಪ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಮೂರ್ನಾಲಕ್ಕು ಚೆಂದದ ಕಥೆ ಮಾಡಿಟ್ಟುಕೊಂಡು, ನಿರ್ಮಾಪಕರಿಗಾಗಿ ಹುಡುಕುತ್ತಿದ್ದಾಗ, ಬಹುಕಾಲದ ಗೆಳೆಯ ಸಾಯಿ ನಾರಾಯಣ್ ಎಲ್ಐಸಿ ಪಾಲಿಸಿ ಮಾಡಿಸುವ ನೆಪದಲ್ಲಿ ಒಂದು ದೊಡ್ಡ ಅಮಂಟನ್ನು ಏಕಾಏಕಿ ಮಂಜುನಾಥ್ರ ಅಕೌಂಟಿಗೆ ವರ್ಗಾಯಿಸಿದ್ದರಂತೆ. ನಂತರ ‘ನಾನು ಹಣ ಕಳಿಸಿದ್ದೇ ಸಿನಿಮಾ ಮಾಡೋದಕ್ಕೆ, ಒಂದೊಳ್ಳೆ ಸಿನಿಮಾ ಮಾಡು’ ಅಂತ ಬನ್ತಟ್ಟಿ ಪ್ರೋತ್ಸಾಹಿಸಿದ್ದರಂತೆ. ಅಂದಹಾಗೆ, ಸಾಯಿ ನಾರಾಯಣ್ ಮಂಜುನಾಥ್ ಅವರ ಬಹುಕಾಲದ ಗೆಳೆಯ. ಈಗ ಅವರು ವಿದೇಶದಲ್ಲಿ ನೆಲಸಿದ್ದಾರಂತೆ. ಅವರ ಪ್ರೀತಿಪೂರ್ವಕ ಪ್ರೋತ್ಸಾಹದಿಂದ ಒಂಬತ್ತು ಸುಳ್ಳು ಕಥೆಗಳು ಚಿತ್ರಕ್ಕೊಂದು ಹೊಸಾ ಆವೇಗವೇ ಬಂದು ಬಿಟ್ಟಿತ್ತು.
ಟೈಟಲ್ಲಿನಲ್ಲಿಯೇ ಒಂಬತ್ತು ಸುಳ್ಳು ಕಥೆಗಳು ಎಂದಿದೆ. ವಿಶೇಷವೆಂದರೆ, ಅದರಲ್ಲಿ ಬಹುತೇಕ ಕಥೆಗಳು ನೈಜ ಘಟನೆಗಳನ್ನಾಧಿಸಿದವುಗಳಂತೆ. ಪ್ರಮೋದ್ ಶೆಟ್ಟಿ ಇದರಲ್ಲಿ ಪ್ರಧಾನ ಪಾತ್ರವೊಂದಕ್ಕೆ ಜೀವ ತುಂಬಿದ್ದಾರೆ. ಇನ್ನುಳಿದಂತೆ ಸುಕೃತಾ ವಾಗ್ಳೆ ಮತ್ತು ವಿನಾಯಕ್ ಜೋಶಿ ಶೃಂಗಾರ ರಸದ ಭಾಗವಾಗಿದ್ದಾರೆ. ಸಂಪತ್ ಮೈತ್ರೇಯ, ಕೃಷ್ಣ ಹೆಬ್ಬಾಳೆ, ಜಯಲಕ್ಷ್ಮಿ ಪಾಟೀಲ್, ಲಕ್ಷ್ಮಿ ಚಂದ್ರಶೇಖರ್, ವೀನಾ ಸುಂದರ್, ಸುನೇತ್ರ ಪಂಡಿತ್, ನಂದಗೋಪಾಲ್, ಜಯದೇವ್ ಮೋಹನ್, ಶ್ರೀನಿವಾಸ ಪ್ರಭು, ಕರಿಸುಬ್ಬು,ಅನಿರುದ್ಧ್, ರಾಧಾ ರಾಮಚಂದ್ರ, ಸುಪ್ರಿತಾ ಶೆಟ್ಟಿ ಮುಂತಾದವರು ಪತಿಯೊಬ್ಬರಿಗೂ ಆಪ್ತವಾಗುವಂಥಾ, ಸಿನಿಮಾ ಮಂದಿರದಾಚೆಗೂ ಕಾಡುವಂಥಾ ಪಾತ್ರಗಳಿಗೆ ಜೀವ ತುಂಬಿದ್ದಾರಂತೆ.
ಈ ಚಿತ್ರಕ್ಕೆ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಹಿನ್ನೆಲೆ ಧ್ವನಿ ನೀಡಿದ್ದಾರೆ. ಅವರ ಇಷ್ಟೂ ವರ್ಷಗಳ ವೃತ್ತಿ ಬದುಕಿನಲ್ಲಿ, ಶಿವಣ್ಣ ಹಿನ್ನೆಲೆ ಧ್ವನಿಯಾದ ಮೊದಲ ಚಿತ್ರವೆಂಬ ಹೆಗ್ಗಳಿಕೆಗೂ ಒಂಬತ್ತು ಸುಳ್ಳು ಕಥೆಗಳು ದಾಖಲಾಗುತ್ತದೆ. ಒಂದಕ್ಕೊಂದು ಕನೆಕ್ಷನ್ ಇಲ್ಲದಿರುವಂಥಾ ಒಂಬತ್ತು ವಿಭಿನ್ನ ಕಥೆಗಳು ಈ ಚಿತ್ರದ ಮೂಲಕ ಗರಿಬಿಚ್ಚಿಕೊಳ್ಳುತ್ತವೆ. ಈ ವಿಚಾರವೇ ಸದರಿ ಚಿತ್ರದತ್ತಲಿನ ಕುತೂಹಲವನ್ನು ಇಮ್ಮಡಿಗೊಳಿಸುವಂತಿದೆ. ಹಾಗೆ ನೋಡಿದರೆ, ಕೊರೋನಾ ಲಾಕ್ಡೌನ್ಗಿಂತಲೂ ಮೊದಲೇ ಈ ಚಿತ್ರ ಸಿದ್ಧಗೊಂಡಿತ್ತು. ೨೦೨೦ರ ಏಪ್ರಿಲ್ ತಿಂಗಳಿನಲ್ಲಿ ತೆರೆಗಾಣುವ ದಿನಾಂಕವೂ ನಿಗಧಿಯಾಗಿತ್ತು ಆ ಘಳಿಗೆಯಲ್ಲಿ ಹಠಾತ್ತನೆ ಬಂದೆರಗಿದ ಕೊರೋನಾ ಎಲ್ಲವನ್ನೂ ಅದಲುಬದಲು ಮಾಡಿತ್ತು. ಕಡೆಗೂ ಈಗ ಬಿಡುಗಡೆಗೆ ಮ ಉಹೂರ್ತ ನಿಗಧಿಯಾಗಿದೆ. ಒಂಬತ್ತು ಸುಳ್ಳು ಕಥೆಗಳು ಇದೇ ಒಂಬತ್ತನೇ ತಾರೀಕಿನಂದು ನಾಡಿನಾದ್ಯಂತ ತೆರೆದುಕೊಳ್ಳಲಿವೆ.