ಹುಡುಕಾಡುವ ಮನಸಿದ್ದರೆ, ಎದೆ ತುಂಬಾ ಬೆರಗಿನ ಒರತೆಯೊಂದು ಸದಾ ಜಿನುಗುತ್ತಿದ್ದರೆ ಹೆಜ್ಜೆ ಇಟ್ಟಲ್ಲೆಲ್ಲ ಪ್ರಾಕೃತಿಕ ಅಚ್ಚರಿಗಳು ತೊಡರಿಕೊಳ್ಳುತ್ತವೆ. ವಿಶೇಷವೆಂದರೆ, ಈ ಜಗತ್ತಿನ ಅದೆಷ್ಟೋ ಮಂದಿ ಅಂಥಾ ಅಚ್ಚರಿಗಳನ್ನು ದಂಡಿ ದಂಡಿಯಾಗಿ ಜಗತ್ತಿನ ಮುಂದೆ ತೆರೆದಿಡುತ್ತಿದ್ದಾರೆ. ಈ ಜಗತ್ತಿನಲ್ಲಿರುವ ಜೀವ ವೈವಿಧ್ಯಗಳ ಬಗ್ಗೆ ಅಧ್ಯಯನ ನಡೆಸಲೆಂದೇ ಅದೆಷ್ಟೋ ಮಂದಿ ತಜ್ಞರು ಬದುಕನ್ನು ಮುಡಿಪಾಗಿಟ್ಟಿದ್ದಾರೆ. ಅಂಥಾದ್ದೇ ತಂಡವೊಂದು ಭರ್ತಿ 3500 ವರ್ಷಗಳಷ್ಟು ಹಳೇಯ ಕರಡಿಯೊಂದರ ಕಳೇಬರವನ್ನು ಪತ್ತೆಹಚ್ಚಿದ್ದಾರೆ!
ಇಂಥಾದ್ದೊಂದು ಪರಮಾಚ್ಚರಿ ಎದುರಾದದ್ದು ಸೈಬೀರಿಯಾದ ಮಂಜುಗಡ್ಡೆಯಿಂದಾವೃತವಾದ ಅರಣ್ಯ ಪ್ರದೇಶದಲ್ಲಿ. ಸಾಮಾನ್ಯವಾಗಿ, ಯಾವುದೇ ಜೀವಿಗಳ ಮೃತ ದೇಹಗಳಾದರೂ ದಿನದೊಪ್ಪತ್ತಿನಲ್ಲಿಯೇಢ ಕೊಳೆತು ನಾರುತ್ತವೆ. ಮತ್ತೂ ಒಂದಷ್ಟು ದಿನ ಕಳೆದರೆ ಹುಳ ಹತ್ತಿಕೊಂಡು ಜೀರ್ಣವಾಗಿ ಅಸ್ಥಿಪಂಜರ ಮಾತ್ರವೇ ಉಳಿದುಕೊಳ್ಳುತ್ತೆ. ಆದರೆ, ಹಿಮದ ಅಡಿಯಲ್ಲಿ ಸಂಪೂರ್ಣವಾಗಿ ಹುದುಗಿಕೊಂಡಿದ್ದ ಈ ಕರಡಿಯ ದೇಹ ಮಾತ್ರ ಹೇಳಿಕೊಳ್ಳುವಂಥಾ ಯಾವುದೇ ಡ್ಯಾಮೇಜುಗಳಿಲ್ಲದೆ ಸುಸ್ಥಿತಿಯಲ್ಲಿತ್ತು.
ಇದರ ಕಳೇಬರ ಪತ್ತೆಯಾದದ್ದು 2020ರ ಸುಮಾರಿಗೆ. ಸೈಬೀರಿಯಾದ ಕಾಡಿಗೆ ಹೊಂದಿಕೊಂಡಂತಿರುವ ಬುಡಕಟ್ಟ ಜನಾಂಗದ ದನಗಾಹಿಗಳಿಗೆ ಅದು ಸಿಕ್ಕಿತ್ತು. ಬಹುಶಃ ಹಿಮ ಪದರಗಳ ನಡುವೆ ಹೂತಿದ್ದ ಆ ಕಳೇಬರ, ಜಾಗತಿಕ ತಾಪಮಾನದ ದೆಸೆಯಿಂದ ಹಿಮ ಕರಗಿ ಗೋಚರವಾಗಿರಬಹುದೇನೋ. ಹಾಗೆ ಸಿಕ್ಕ ಕರಡಿಯ ಕಳೇಬರವನ್ನು ವರ್ಷಗಳ ಕಾಲ ವಿಜ್ಞಾನಿಗಳ ತಂಡ ಸಂಶೋಧನೆಗೊಳಪಡಿಸಿದೆ. ಈ ಹಂತದಲ್ಲಿ ಅದು 3500 ವರ್ಷಗಳಷ್ಟು ಹಿಂದಿನದ್ದೆಂದು ಪತ್ತೆಹಚ್ಚಲಾಗಿದೆ. ಇದರ ಮೂಲಕವೇ ಇನ್ನೊಂದಷ್ಟು ಪ್ರಯೋಗಗಳನ್ನು ನಡೆಸಲು ತಜ್ಞರ ತಂಡ ಉತ್ಸುಕವಾಗಿದೆ!