ನೆಲಮೂಲದ ಕಥೆಗಳನ್ನು ಹೆಕ್ಕಿ ತಂದು, ಅದಕ್ಕೆ ತಮ್ಮದೇ ಧಾಟಿಯಲ್ಲಿ ಸಿನಿಮಾ ಫ್ರೇಮು ಹಾಕಿ, ಪ್ರೇಕ್ಷಕರ ಮುಂದಿಡುತ್ತಾ ಅಡಿಗಡಿಗೆ ಅಚ್ಚರಿ ಮೂಡಿಸುತ್ತಿರುವವರು ನಿರ್ದೇಶಕ ಮಂಸೋರೆ. ಇಂಥಾ ಗುಣಗಳಿಂದಲೇ ಕನ್ನಡ ಮಟ್ಟಿಗೆ ಅಪರೂಪದ ನಿರ್ದೇಶಕರೆನ್ನಿಸಿಕೊಂಡಿರುವ ಮಂಸೋರೆ, 19.20.21 ಅಂತೊಂದು ಸಿನಿಮಾಗೆ ಸಜ್ಜಾದಾಗಲೂ ವಿಭಿನ್ನ ಕಥಾನಕವೊಂದರ ನಿರೀಕ್ಷೆಯಿತ್ತು. ಆ ನಂತರದಲ್ಲಿ ಹೆಜ್ಜೆ ಹೆಜ್ಜೆಗೂ ತಾನೇ ತಾನಾಗಿ ಸುದ್ದಿ ಮಾಡುತ್ತಾ ಸಾಗಿ ಬಂದಿದ್ದ ಈ ಚಿತ್ರವೀಗ ಬಿಡುಗಡೆಗೊಂಡಿದೆ. ಕಾಡಿನೊಂದಿಗೆ ನಿಕಟ ನಂಟಿಟ್ಟುಕೊಂಡು, ಅದನ್ನೇ ಜಗತ್ತಾಗಿಸಿಕೊಂಡ ಜನರ ಒಡಲ ಸಂಕಟ, ಅಧಿಕಾರಸ್ಥರ ಬೂಟುಗಾಲುಗಳ ಭರ್ಬರ ನಡೆ ಮತ್ತು ಬದುಕಿನ ನೆಲೆಯನ್ನೇ ಕಳೆದುಕೊಳ್ಳುವ ಬೀತಿಯಲ್ಲಿರುವ ಅಮಾಯಕ ಜೀವಗಳ ಆರ್ತ ಸ್ಥಿತಿ… ಇಂಥಾ ಗಟ್ಟಿ ಕಥಾನಕದೊಂದಿಗೆ ಈ ಸಿನಿಮಾ ಪ್ರೇಕ್ಷಕರನ್ನು ದಾಟಿಕೊಂಡು ಮನಸಿಗಿಳಿಯುವಲ್ಲಿ ಯಶ ಕಂಡಿದೆ.
ಮಂಸೋರೇ ಸಿನಿಮಾಗಳೆಂದ ಮೇಲೆ ಅದರ ಪ್ರತೀ ದೃಷ್ಯ, ಪಾತ್ರಗಳೂ ನೈಜ ಚಹರೆಗಳನ್ನು ಹೊಂದಿರುತ್ತವೆ. ಸಂಭಾಷಣೆಗಳು ನಮ್ಮೊಡಲಿಂದಲೇ ತೂರಿ ಬಂದವೇನೋ ಎಂಬಂತೆ ಭಾಸವಾಗುತ್ತದೆ. ಈ ಚಿತ್ರದಲ್ಲಿಯೂ ತಮ್ಮ ಒರಿಜಿನಲ್ ಫ್ಲೇವರ್ ಅನ್ನು ಕಾಪಿಟ್ಟುಕೊಂಡೇ ಅವರು ಮನಮುಟ್ಟುವಂಥಾದ್ದೊಂದು ಕಥೆಯನ್ನು ಹೇಳಿದ್ದಾರೆ. ಇಲ್ಲಿರುವುದು 2012ರಲ್ಲಿ ದಕ್ಷಿಣ ಕನ್ನಡದ ಕಾರ್ಕಳ ಭಾಗದಲ್ಲಿ ನಡೆದಿದ್ದ ನೈಜ ಕಥನ. ಆ ಕಾಲಕ್ಕೆ ನಕ್ಸಲ್ ಚಳುವಳಿ ಎಂಬುದು ಮಲೆನಾಡಿನಿಂದ, ದಕ್ಷಿಣ ಕನ್ನಡದ ಕಾನನದವರೆಗೂ ಹಬ್ಬಿಕೊಂಡು ಕಡೇಯ ಹಂತದಲ್ಲಿತ್ತು. ಆಗೆಲ್ಲ ನಕ್ಸಲ್ ನಂಟು ಹೊಂದಿದ, ನಕ್ಸಲರ ಬಗ್ಗೆ ಸಿಂಪಥಿ ಹೊಂದಿದ್ದಾರೆಂಬ ಕಾರಣಕ್ಕೆ ಈ ಪ್ರಭುತ್ವ ಕಾಡಿನ ಮಕ್ಕಳಿಗೆ ರೌರವ ನರಕ ತೋರಿಸಿತ್ತು. ಅಂಥಾ ದುಷ್ಟ ವ್ಯವಸ್ಥೆಗೆ ಬಲಿಪಶುವಾಗಿದ್ದಾತ ಮಲೆಕುಡಿಯ ಸಮುದಾಯದ ಹುಡುಗ ವಿಠಲ್ ಮಲೆಕುಡಿಯ. ಅದಾಗತಾನೇ ಅಕ್ಷರಗಳಿಗೆ ತೆರೆದುಕೊಂಡು, ಮಂಗಳೂರು ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಪದವಿ ಓದುತ್ತಿದ್ದ ವಿಠಲ್ನನ್ನು ನಕ್ಸಲ್ ನಿಗ್ಹ ಪಡೆ ಏಕಾಏಕಿ ಬಂಧಿಸಿತ್ತು. ಆತ ಅಪ್ಪನಿಗೂ ಕೋಳ ತೊಡಿಸಿ ಜೈಲಿಗಟ್ಟಿತ್ತು. ಕಡೇಗೆ ಆ ಹುಡುಗ ಕೈಗೆ ಬೇಡಿ ಹಾಕಿಕೊಂಡೇ ಪರೀಕ್ಷೆ ಬರೆದ ಸುದ್ದಿ ದೇಶಾದ್ಯಂತ ಸಂಚಲನ ಸೃಷ್ಟಿಸಿತ್ತು.
ಆ ಒಟ್ಟಾರೆ ಘಟನೆಯ ಒಳಸುಳಿಗಳನ್ನಿಲ್ಲಿ ಮಂಸೋರೇ ಸಮರ್ಥವಾಗಿ ದೃಷ್ಯವಾಗಿಸಿದ್ದಾರೆ. ಆ ಕಾಲಕ್ಕೆ ವಿಠಲ್ ಮಲೆಕುಡಿಯ ಪ್ರಕರಣ ದೇಶ ಮಟ್ಟದಲ್ಲಿ ಸುದ್ದಿಯಾದರೂ, ಅದರ ಒಳಸುಳಿಗಳು ನಮ್ಮದೇ ಜನಸಮುದಾಯಕ್ಕೆ ತಲುಪಿಕೊಂಡಿರಲಿಲ್ಲ. ರಾಜಧಾನಿಯಲ್ಲಿ ಈಸೀ ಭಂಗಿಯಲ್ಲಿ ಕುಳಿತು ಪೆನ್ನು ಹಿಡಿದಿದ್ದ ಭಟ್ಟಂಗಿಗಗಳನೇಕರು ಈ ಪ್ರಕರಣಕ್ಕೆ ತಮಗೆ ತೋಚಿದ ಬಣ್ಣ ಬಳಿದರು. ಪೇಜುಗಟ್ಟಲೆ ವಿಸರ್ಜಿಸಿದ್ದರು. ಮತ್ತೆ ಕೆಲವರು ಅಸಲೀಯತ್ತಿಗೆ ಬೆಳಕು ಚೆಲ್ಲುವ ಪ್ರಯತ್ನ ಮಾಡಿದ್ದದ್ದು ನಿಜ. ಅದಾಗಿ ಹತ್ತು ವರ್ಷಗಳ ಬಳಿಕ ವಿಠಲ್ ಮಲೆಕುಡಿಯ ಖುಲಾಸೆಯಾದದ್ದೂ ನಡೆದಿತ್ತು. ಆದರೆ, ಈ ಪ್ರಕರಣದ ಗರ್ಭದಲ್ಲಿದ್ದ ಜೀವಗಳ ಅಸಲೀ ಯಾತನೆ ಮಾತ್ರ ಅನಾಥವಾಗಿತ್ತು!
ಬಹುಶಃ ಅಂಥಾ ಅನಾಥ ಸತ್ಯಗಳಿಗೆ, ಅದರ ಆಳದ ಪದರುಗಳಿಗೆ ಕಣ್ಣಾಗದೇ ಇದ್ದಿದ್ದರೆ 19.20.21 ಇಷ್ಟೊಂದು ಪರಿಣಾಮಕಾರಿಯಾಗುತ್ತಿರಲಿಲ್ಲ. ಮಂಸೋರೇ ಈ ಪ್ರಕರಣದ ಪ್ರತೀ ವಿಚಾರಗಳನ್ನೂ ಹೆಕ್ಕಿ ತೆಗೆದಿದ್ದಾರೆ. ಎಲ್ಲಿಯೂ ಸತ್ಯಕ್ಕೆ ಅತಿರಂಜಕತೆಯ ಗ್ರಹಣ ಕವುಚದಂತೆ, ಬಡಪಾಯಿ ಜೀವಗಳ ಎದೆಯ ಸಂಕಟ ಮನೋರಂಜನೆಯ ಸರಕಾಗದಂತೆ ಜಾಗ್ರತೆ ವಹಿಸಿದ್ದಾರೆ. ಇದರ ಫಲವಾಗಿಯೇ ಕಾಡಿನ ಮಕ್ಕಳ ತಲ್ಲಣಗಳೆಲ್ಲವೂ ಅತ್ಯಂತ ಪರಿಣಾಮಕಾರಿಯಾಗಿ ಪ್ರೇಕ್ಷಕರತ್ತ ದಾಟಿಕೊಂಡಿವೆ. ಒಂದಷ್ಟು ಕಠೋರ ಸತ್ಯಗಳೂ ಕೂಡಾ ತಣ್ಣನೆಯ ಧಾಟಿಯಲ್ಲಿಯೇ ಪ್ರೇಕ್ಷಕರನ್ನು ಸೋಕಿವೆ. ಆಲೋಚನೆ ಹಚ್ಚಿ ಕಾಡುತ್ತವೆ. ಇದು ಈ ಸಿನಿಮಾದ ನಿಜವಾದ ಸಾರ್ಥಕ್ಯ.
ಇಂಥಾ ನೈಜ ಘಟನೆಗೆ ದೃಷ್ಯದ ಚೌಕಟ್ಟು ಹಾಕುವಾಗ ನಿರ್ದೇಶಕರ ಮೇಲೆ ಗುರುತರವಾದ ಜವಾಬ್ದಾರಿಗಳಿರುತ್ತವೆ. ಇದ್ದದ್ದನ್ನು ಇದ್ದ ಹಾಗೇ ತೋರಿಸಿದರೆ ಡಾಕ್ಯುಮೆಂಟರಿಯಾಗುವ, ಕ್ರಿಯಾಶೀಲವಾಗಿ ಹೇಳ ಹೋದರೆ ರಂಜಕತೆಯಲ್ಲಿ ಕಳೆದು ಹೋಗುವ ಅಪಾಯವಿರುತ್ತದೆ. ಅದರ ಮಧ್ಯಬಿಂದುವಿನಲ್ಲಿ ನಿಂತು ಒಂದಿಡೀ ಸಿನಿಮಾವನ್ನು ಸರಿದೂಗಿಸೋದಿದೆಯಲ್ಲಾ? ಅದು ನಿಜವಾದ ಸವಾಲು. ಅದನ್ನು ನಿರ್ದೇಶಕ ಮಂಸೋರೇ ಲೀಲಾಜಾಲವಾಗಿಯೇ ನಿಭಾಯಿಸಿದ್ದಾರೆ. ಇದು ನಿರ್ದೇಶನದ ಶಕ್ತಿಯಾದರೆ, ಪ್ರತೀ ಪಾತ್ರಗಳನ್ನು ನಿರ್ವಹಿಸಿರುವ ಕಲಾವಿದರೂ ಕೂಡಾ ಒಬ್ಬರನ್ನೊಬ್ಬರು ಮೀರಿಸುವಂತೆ, ಪ್ರೇಕ್ಷಕರ ಮನಸಲ್ಲಿ ಉಳಿದು ಹೋಗುವಂತೆ ನಟಿಸಿದ್ದಾರೆ.
ಇಲ್ಲಿ ವಿಠಲ್ ಮಲೆಕುಡಿಯನ ಪಾತ್ರವನ್ನು ಶೃಂಗ ಬಿ.ವಿ ನಟಿಸಿದ್ದಾರೆ. ನಟಿಸಿದ್ದಾರೆಂಬುದಕ್ಕಿಂತಲೂ ಆ ಪಾತ್ರವೇ ತಾನಾಗಿದ್ದಾರೆಂಬುದೇ ಸೂಕ್ತವೇನೋ. ಇನ್ನುಳಿದಂತೆ ಬಾಲಾಜಿ ಮನೋಹರ್, ರಾಜೇಶ್ ನಟರಂಗ, ಎಂ.ಡಿ.ಪಲ್ಲವಿ, ಕೃಷ್ಣ ಹೆಬ್ಬಾಳೆ, ವಿಶ್ವಕರ್ಣ, ಸಂಪತ್ ಕುಮಾರ್ ಸೇರಿದಂತೆ ಎಲ್ಲ ಕಲಾವಿದರೂ ಕೂಡಾ ನಟನೆಯಲ್ಲಿ ಫುಲ್ ಮಾಕ್ರ್ಸ್ ಪಡೆದುಕೊಳ್ಳುತ್ತಾರೆ. ಉಸಿರೆತ್ತುವ ಶಕ್ತಿ ಕಳೆದುಕೊಂಡ ಬಡಪಾಯಿ ಕಾಡಿನ ಮಕ್ಕಳ ಆರ್ತ ಕಥೆಗಳೆಲ್ಲವೂ ಈ ಮೂಲಕ ಜನರನ್ನು ಮುಖಾಮುಖಿಯಾಗಿವೆ. ಅದನ್ನು ಶಕ್ತವಾಗಿಸುವಲ್ಲಿ ನಿರ್ದೇಶಕರ ಪಾತ್ರ ಪ್ರಧಾನವಾಗಿದೆ. ಒಟ್ಟಾರೆಯಾಗಿ ಈ ಚಿತ್ರ ಬಹುಕಾಲ ಕಾಡುತ್ತದೆ. ಬೇರೆಯದ್ದೇ ಚಹರೆಗಳ ಮೂಲಕ ಮನಸಲ್ಲಿ ನೆಲೆ ಕಂಡುಕೊಳ್ಳುತ್ತದೆ. ಅದೆಷ್ಟೋ ಕಾಲದ ಕಾಡಿನ ಮಕ್ಕಳ ನಿಟ್ಟುಸಿರೊಂದು ಈ ಮೂಲಕ ಸಮರ್ಥವಾಗಿ ಮುಖ್ಯವಾಹಿನಿಗೆ ದಾಟಿಕೊಂಡು ನಿಸೂರಾಗಿದೆ. ಇಂಥಾದ್ದೊಂದು ಸನಿಮಾ ನಿರ್ಮಾಣ ಮಾಡಲು ಮನಸು ಮಾಡಿದ ದೇವರಾಜ್.ಆರ್ ನಿಜಕ್ಕೂ ಅಭಿನಂದನಾರ್ಹರು!