ಒಂದು ಕಡೆಯಿಂದ ಪ್ಯಾನಿಂಡಿಯಾ ಸಿನಿಮಾಗಳ ಹಂಗಾಮಾ ಚಾಲ್ತಿಯಲ್ಲಿರುವಾಗಲೇ, ಮತ್ತೊಂದು ದಿಕ್ಕಿನಿಂದ ಹಲವು ಬಗೆಯ ಪ್ರಯತ್ನಗಳು ಚಾಲ್ತಿಯಲ್ಲಿವೆ. ಅಂಥಾ ಪ್ರಯತ್ನಗಳ ಸಾಲಿನಲ್ಲಿ ನೆಲ ಮೂಲದ ಕಥೆಗಳು, ನಾನಾ ಭಾಗಗಳಲ್ಲಿ ಜರುಗಿದ್ದ ಸತ್ಯ ಘಟನೆಗಳೂ ಕೂಡಾ ಸಿನಿಮಾ ಫ್ರೇಮಿನಲ್ಲಿ ನಸುನಗಲಾರಂಭಿಸಿವೆ. ಅಂಥಾ ಸಿನಿಮಾಗಳ ಪೈಕಿ ಇದೀಗ ಬಿಡುಗಡೆಗೆ ಸಜ್ಜುಗೊಂಡಿರುವ `1 ರಾಬರಿ ಕಥೆ’ಯೂ ಸೇರಿಕೊಂಡಿದೆ. ಶೀರ್ಷಿಕೆಯಲ್ಲಿಯೇ ಕಥೆಯ ಜೀವಾಳದ ಸುಳಿವನ್ನು ಅಡಗಿಸಿಕೊಂಡಿರುವ ಈ ಸಿನಿಮಾದ ಜಬರ್ಧಸ್ತಾದ ವೀಡಿಯೋ ಸಾಂಗ್ ಒಂದೀಗ ಬಿಡುಗಡೆಗೊಂಡಿದೆ!
ಈ ಲೂಟಿ ಸಾಂಗ್ ದಿವ್ಯ ರಾಮಚಂದ್ರ ಮತ್ತು ಹರ್ಷ ಉಪ್ಪಾರರ ಧ್ವನಿಯಲ್ಲಿ ಮೂಡಿ ಬಂದಿದೆ. ಈ ಸಿನಿಮಾದ ನಿರ್ದೇಶಕರಾದ ಗೋಪಾಲ್ ಹಳ್ಳೇರ್ ಹೊನ್ನಾವರ ಸದರಿ ಹಾಡಿಗೆ ಸಾಹಿತ್ಯ ಒದಗಿಸಿದ್ದಾರೆ. ಅದು ನಾಟಿ ಶೈಲಿಯ ಶ್ರೀವತ್ಸರ ಸಂಗೀತ ಸ್ಪರ್ಶದೊಂದಿಗೆ ಪ್ರೇಕ್ಷಕರನ್ನು ಮುಟ್ಟಿದೆ. ಒಂದಷ್ಟು ಒಳ್ಳೆ ಪ್ರತಿಕ್ರಿಯೆಗಳನ್ನು ಪಡೆದುಕೊಳ್ಳುತ್ತಿರುವ ಈ ಹಾಡಿನ ಮೂಲಕ 1 ರಾಬರಿ ಕಥೆಯತ್ತ ಪ್ರೇಕ್ಷಕರ ಚಿತ್ತ ಕೀಲಿಸಿಕೊಂಡಿದೆ. ನಾಯಕ ನಾಯಕಿಯರಾದ ರಣಧೀರ್ ಗೌಡ ಮತ್ತು ರಿಷ್ವ್ವಿ ಭಟ್ ಮಾದಕವಾಗಿ ಹೆಜ್ಜೆ ಹಾಕಿರೋ ಈ ಹಾಡು ಅಷ್ಟರ ಮಟ್ಟಿಗೆ ಯಶ ಕಂಡಂತಾಗಿದೆ.
1 ರಾಬರಿ ಕಥೆ ಎಂಬ ಶೀರ್ಷಿಕೆ ಕೇಳಿದಾಕ್ಷಣವೇ ಕಥಾ ಹಂದರದ ಬಗ್ಗೆ ಒಂದಷ್ಟು ಸುಳಿವುಗಳು ಸಿಕ್ಕು ಬಿಡುತ್ತವೆ. ಉತ್ತರಕರ್ನಾಟಕದ ಹೊನ್ನಾವರದವರಾದ ನಿರ್ದೇಶಕರು, ತಮ್ಮ ವಾತಾವರಣದಲ್ಲಿ ಹಲವಾರು ವರ್ಷಗಳ ಹಿಂದೆ ನಡೆದಿದ್ದ ರಣ ರೋಚಕ ಕಥೆಯೊಂದನ್ನು ಕಮರ್ಶಿಯಲ್ ಸಿನಿಮಾದ ಚೌಕಟ್ಟಿಗೆ ಒಗ್ಗಿಸಿದ್ದಾರಂತೆ. ಅದಾಗಲೇ ಈ ಸಿನಿಮಾದ ಒಂದು ಹಾಡು ಹಾಗೂ ಟ್ರೈಲರ್ ಲಾಂ ಚ್ ಆಗಿದೆ. ಅದರ ಮೂಲಕವೇ ಭಿನ್ನ ಕಥನದ ಲಕ್ಷಣಗಳೂ ಕಾಣಿಸಿವೆ. ಅದರೊಂದಿಗೆ ರಾಬರಿ ಕಥೆಯ ಸುತ್ತಾ ಕೌತುಕ ಗಸ್ತು ಹೊಡೆಯಲಾರಂಭಿಸಿದೆ. ರಾಬರಿ ಕಥೆ ಅಂದಾಕ್ಷಣ ಸಿನಿಮಾದ ತುಂಬಾ ಬರೀ ಅದರ ಛಾಯೆಯೇ ಇರುತ್ಚತದೆ ಅಂದುಕೊಳ್ಳುವಂತಿಲ್ಲ. ಕಾಮಿಡಿ, ಲವ್ವು, ಸೆಂಟಿಮೆಂಟ್ ಸೇರಿದಂತೆ ನಾನಾ ಭಾವಗಳಿಂದ ಈ ಚಿತ್ರ ಕಳೆಗಟ್ಟಿಕೊಂಡಿದೆಯಂತೆ.
ಈ ಸಿನಿಮಾ ನಿರ್ದೇಶಕ ಗೋಪಾಲ್ ಹಳ್ಳೇರ ರಂಗಭೂಮಿಯ ಹಿನ್ನೆಲೆಯಿಂದ ಬಂದಿರುವವರು. ಹಲವಾರು ವರ್ಷಗಳಿಂದಲೂ ಸಿನಿಮಾ ರಂಗದಲ್ಲಿ ಸಕ್ರಿಯವಾಗಿದ್ದುಕೊಂಡು ನಿರ್ದೇಶನದ ಪಟ್ಟುಗಳನ್ನು ಕರಗತ ಮಾಡಿಕೊಂಡಿರುವವರು. ಬೇಲೂರಿನ ಸಂತೋಷ್ ನಾಗೇನಹಳ್ಳಿ ಸಮನ್ವಿ ಕ್ರಿಯೇಷನ್ಸ್ ಬ್ಯಾನರಿನಡಿಯಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಈ ಹಿಂದೆ ರಕ್ಕಂ ಸಿನಿಮಾದಲ್ಲಿ ನಟಿಸಿದ್ದ ರಣಧೀರ್ ಗೌಡ ನಾಯಕನಾಗಿ, ಎರಡು ಶೇಡುಗಳ ಪಾತ್ರಕ್ಕೆ ಜೀವ ತುಂಬಿದ್ದಾರಂತೆ. ಇನ್ನೇನು ಕೆಲವೇ ದಿನಗಳಲ್ಲಿ 1 ರಾಬರಿ ಕಥೆಯ ಬಿಡುಗಡೆ ದಿನಾಂಕ ನಿಕ್ಕಿಯಾಗಬೇಕಿದೆ.