ಬೆಂಗಳೂರಿನ (rameshwaram cafe blast) ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣವೀಗ ದಿನಕ್ಕೊಂದು, ಕ್ಷಣಕ್ಕೊಂದು ದಿಕ್ಕು ಬದಲಿಸುತ್ತಾ ಮುಂದುವರೆಯುತ್ತಿದೆ. ಈ ಪ್ರಕರಣವೀಗ ರಾಷ್ಟ್ರೀಯ ತನಿಖಾ ದಳದ ನೆರಳಿಗೆ ಸರಿದಿದೆ. ಅಷ್ಟಕ್ಕೂ ಇಂಥಾ ಸ್ಫೋಟಗಳು ನಡೆದಾಗ ನೇರವಾಗಿ ಇದೊಂದು ಭಯೋತ್ಪಾದನಾ ಕೃತ್ಯ ಎಂಬ ವಿಚಾರ ಮೇಲುನೋಟಕ್ಕೇ ಸಾಬೀತಾಗುತ್ತದೆ. ಬೆಂಗಳೂರು ಮಂದಿ ತುಸು ನಿರಾಳವಾದಾಗೆಲ್ಲ ಇಂಥಾ ವಿಧ್ವಂಸಕ ಕೃತ್ಯಗಳು ಘಟಿಸಿದಾಗ ನಾಗರಿಕರು ಕಂಗಾಲಾಗುತ್ತಾರೆ. ಇಂಥಾ ಹೊತ್ತಿನಲ್ಲಿ ಈ ವ್ಯವಸ್ಥೆಯಿಂದ ಭಯೋತ್ಪಾದನಾ (terrorism)ಕೃತ್ಯಗಳನ್ನು ಮಟ್ಟ ಹಾಕಲು ಯಾಕೆ ಸಾಧ್ಯವಾಗುತ್ತಿಲ್ಲ? ಡಜನ್ನುಗಟ್ಟಲೆ ನಟೋರಿಯಸ್ ಭಯೋತ್ಪಾದಕರನ್ನು ಹಂತ ಹಂತವಾಗಿ ಜೈಲು ಸೇರಿಸಲಾಗಿದೆಯಲ್ಲಾ? ಅಂಥವರಿಂದ ಮಾಹಿತಿ ಕಲೆ ಹಾಕಿ ರಾಜ್ಯದಲ್ಲಿ ಹಬ್ಬಿಕೊಂಡಿರುವ ಭಯೋತ್ಪಾದನೆಯ ಬೇರುಗಳನ್ನು ಕಿತ್ತೆಸೆಯಲು ಯಾಕೆ ಸಾಧ್ಯವಾಗುತ್ತಿಲ್ಲ? ಹೀಗೆ ಸಾಲು ಸಾಲು ಪ್ರಶ್ನೆಗಳು ಜನಸಾಮಾನ್ಯರನ್ನು ಕಾಡುತ್ತವೆ. ಸದ್ಯದ ಮಟ್ಟಿಗೆ ಪರಪ್ಪನ ಅಗ್ರಹಾರದೊಳಗೆ ನಡೆಯುತ್ತಿರುವ ಹಲಾಲು ಕೃತ್ಯಗಳು ಆ ಎಲ್ಲ ಪ್ರಶ್ನೆಗಳಿಗೂ ನಿಖರ ಉತ್ತರದಂತಿವೆ!
ಅಲ್ಲಿ ನಡೆಯುತ್ತಿರೋದು ಉಗ್ರ ಪರಿವರ್ತನೆ!
ಜೈಲು ಅಂದರೆ ಅಕ್ಷರಶಃ ಮನಃ ಪರಿವರ್ತನೆಯ ಜಾಗ ಎಂಬುದು ಸವಕಲು ನಂಬಿಕೆ. ಅದರ ನೆತ್ತಿಗೆ ಹೊಡೆದಂಥಾ ದಂಧೆಗಳೇ ಈವತ್ತಿಗೆ ಕರ್ನಾಟಕದ ಬಹುತೇಕ ಜೈಲುಗಳಲ್ಲಿ ನಡೆಯುತ್ತಿದೆ. ಅದರಲ್ಲಿಯೂ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ನಡೆಯುತ್ತಿದೆ ಎನ್ನಲಾಗಿರುವ ಕೃತ್ಯಗಳ ಮುಂದೆ ಇದುವರೆಗೆ ಬಂದಿರುವ ಅಷ್ಟೂ ಸಿನಿಮಾ ದೃಷ್ಯಗಳೂ ಡಲ್ಲು ಹೊಡೆಯುತ್ತವೆ. ನಿಮಗೆ ಅಚ್ಚರಿಯಾಗಬಹುದೇನೋ… ರಾಷ್ಟ್ರೀಯ ತನಿಖಾ ದಳದ ತನಿಖೆಯ ಜಾಡು ಹರಿದಾಡುತ್ತಿರುವ ರೀತಿ, ಅಲ್ಲೆದುರಾಗುತ್ತಿರುವ ಭೀಕರ ವಾಸ್ತವಗಳು ಜೈಲೆಂಬೋ ಕಲ್ಪನೆಯನ್ನೇ ಬುಡಮೇಲು ಮಾಡುವಂತಿವೆ.
ಅದ್ಯಾವುದೋ ಕೇಸುಗಳಲ್ಲಿ ತಗುಲಿಕೊಂಡು ಪರಪ್ಪನ ಅಗ್ರಹಾರ ಸೇರಿದವರನ್ನು ದಂಧೆಗಿಳಿಸೋ ನಟೋರಿಯಸ್ ರೌಡಿಗಳು ಪರಪ್ಪನ ಅಗ್ರಹಾರದಲ್ಲಿದ್ದಾರೆ.ಅದೇ ರೀತಿ ಬೇರೆ ಬೇರೆ ಕೇಸುಗಳಲ್ಲಿ ಶಿಕ್ಷೆಗೀಡಾದ ಸಾಧಾರಣ ಕ್ರಿಮಿಗಳನ್ನು ಅಸಾಧಾರಣ ಭಯೋತ್ಪಾದಕರನ್ನಾಗಿ ರೂಪಿಸುವ ಕೆಲಸವೂ ಕೂಡಾ ಪರಪ್ಪನ ಅಗ್ರಹಾರದೊಳಗೆ ನಡೆಯುತ್ತಾ ಬಂದಿದೆ. ಕ್ರಿಮಿನಲ್ಲುಗಳಿಗೆ ವಿಐಪಿ ವ್ಯವಸ್ಥೆ ಕಲ್ಪಿಸಿ, ಬೇಕಾದುದನ್ನೆಲ್ಲ ಪೂರೈಸೋ ಆರೋಪ, ಜೈಲಾಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದ ಮೇಲೆ ಲಾಗಾಯ್ತಿನಿಂದಲೂ ಇದ್ದೇ ಇದೆ. ಇಂಥಾದ್ದರಿಂದಾಗಿಯೇ ಈವತ್ತಿಗೆ ಎಲ್ಲಿ ಏನೇ ದುಷೃತ್ಯಗಳು ಸಂಭವಿಸಿದರೂ ತನಿಖಾಧಿಕಾರಿಗಳ ಕಣ್ಣ್ಣು ಪ್ರಧಾನವಾಗಿ ಪರಪ್ಪನ ಅಗ್ರಹಾರದತ್ತಲೇ ಕೀಲಿಸುವಂಥಾ ದುಃಸ್ಥಿತಿ ಬಂದೊದಗಿದೆ. ಕಾಂಜಿಪೀಂಜಿ ರೌಡಿಗಳ ಕಥೆ ಹಾಗಿರಲಿ; ಒಂದಿಡೀ ದೇಶಕ್ಕೇ ಕಂಟಕಪ್ರಾಯರಾದ ಭಯೋತ್ಪಾದಕರನ್ನೂ ದೊರೆಗಳಂತೆ ಮೆರೆಸೋ ಘನ ಗಂಭಿರ ಆರೋಪ ಪರಪ್ಪನ ಅಗ್ರಹಾರಕ್ಕೆ ಸುತ್ತಿಕೊಂಡು ವರ್ಷಗಳೇ ಕಳೆದಿವೆ. ಈ ಜೈಲಿನಲ್ಲಿರುವ ನಟೋರಿಯಸ್ ಭಯೋತ್ಪಾದಕ ಟಿ. ನಾಸೀರ್ ಪರಪ್ಪನ ಅಗ್ರಹಾರವನ್ನು ಅಕ್ಷರಶಃ ಪರಿವರ್ತನೆಯ ಕೇಂದ್ರವಾಗಿಸಿದ್ದಾನೆ. ಅದು ಸಕಾರಾತ್ಮಕ ಪರಿವರ್ತನೆಯಲ್ಲ; ಉಗ್ರ ಪರಿವರ್ತನೆ!
ಎಲ್ಲದಕ್ಕೂ ಇದೆ ಟೆರರ್ ಲಿಂಕು!ಮೊನ್ನೆದಿನ ರಾಮೇಶ್ವರಂ ಕೆಫೆಯೊಳಗೆ ಸ್ಫೋಟ ನಡೆಯಿತಲ್ಲಾ? ಆ ಘಳಿಗೆಯಲ್ಲಿ ಕರ್ನಾಟಕದಲ್ಲಿ ಮೈಚಾಚಿಕೊಂಡಿರುವ ಭಯೋತ್ಪಾದಕರ ದುನಿಯಾದಲ್ಲಿ ಒಂದಷ್ಟು ಪಲ್ಲಟಗಳು ಸಂಭವಿಸಿವೆ. ನಿಖರವಾಗಿ ಸ್ಫೋಟ ನಡೆದ ದಿನವೇ ಉತ್ತರಕರ್ನಾಟಕದ ದೊಡ್ಡ ಜೈಲೊಂದರಿಂದ ಗಲಭೆಕೋರರ ಹಿಂಡೊಂದು ಬಿಡುಗಡೆಗೊಂಡಿದೆ. ಹುಬ್ಬಳ್ಳಿ ಸೀಮೆಯಲ್ಲಿ ನಡೆದಿದ್ದ ಗಲಭೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಆ ಹಿಂಡನ್ನು ಜೈಲು ಸೇರಿಸಲಾಗಿತ್ತು. ಸೂಕ್ತ ಸಾಕ್ಷಾಧಾರಗಳ ಕೊರತೆಯ ಹಿನ್ನೆಲೆಯಲ್ಲಿ, ಪೊಲೀಸ್ ಠಾಣೆಗೆ ಬೆಂಕಿಯಿಟ್ಟಿದ್ದ ದಂಡು ಹೊರ ಬಿದ್ದಿದೆ. ಅದಾಗಿ ಸ್ವಲ್ಪ ಹೊತ್ತಿನಲ್ಲಿಯೇ ಗಿಜಿಗುಡುತ್ತಿದ್ದ ರಾಮೇಶ್ವರಂ ಕೆಫೆಯಲ್ಲಿ ಬಾಂಬು ಭಡಾರೆಂದಿದೆ!
ಇದರ ಹಿಂಚುಮುಂಚಲ್ಲಿ ನಡೆದ ಒಂದಷ್ಟು ವಿದ್ಯಮಾನಗಳು, ನಿಜಕ್ಕೂ ಎದೆ ಅದುರುವಂತಿವೆ. ಒಂದು ಮೂಲದ ಪ್ರಕಾರ ಉತ್ತರ ಕರ್ನಾಟಕದ ಜೈಲಿನಿಂದ ಬಿಡುಗಡೆಗೊಂಡ ಆ ಗಲಭೆಕೋರರ ದಂಡು ವಿಜಯ ಯಾತ್ರೆ ನಡೆಸಲು ಬಸ್ಸಿನ ವ್ಯವಸ್ಥೆ ಮಾಡಿದ್ದು ಭಯೋತ್ಪಾದಕ ನಾಸೀರ್ ಎಂಬ ಮಾತಿದೆ. ಪರಪ್ಪನ ಅಗ್ರಹಾರದೊಳಗೆ ಕುಳಿತೇ ನಾಸೀರ್ ಹೊರಜಗತ್ತಿನ ಭಯೋತ್ಪಾದನಾ ನೆಟ್ ವರ್ಕನ್ನು ಸಂಭಾಳಿಸುತ್ತಿದ್ದಾನೆಂಬ ಆರೋಪ ಈ ಹಿಂದಿನಿಂದಲೂ ಇತ್ತು. ಅದೀಗ ಈ ವಿಚಾರದ ಮೂಲಕ ಮತ್ತೆ ಸಾಬೀತಾಗಿದೆಯಷ್ಟೆ. ಪರಪ್ಪನ ಅಗ್ರಹಾರದೊಳಗೇ ಕುಳಿತು, ಬಿಡುಗಡೆಗೊಂಡ ಗಲಭೆಕೋರರಿಗೆ ಬಸ್ ವ್ಯವಸ್ಥೆ ಮಾಡಿಸಿದ್ದ ನಾಸಿರನೇ ರಾಮೇಶ್ವರಂ ಕೆಫೆಯಲ್ಲಿ ಬಾಂಬಿಡಲು ಹುಕುಂ ಹೊರಡಿಸಿದ್ದನಾ? ಅದು ಈಗಾಗಲೇ ನಡೆದಿರಬಹುದಾದ ಮತ್ತೊಂದು ಸುತ್ತಿನ ಸರಣಿ ಸ್ಫೋಟದ ಟ್ರಯಲ್ ಟೆಸ್ಟಾ? ಈ ಟೆಸ್ಟಿನೊಂದಿಗೆ ಗಲಭೆ, ಪೊಲೀಸ್ ಠಾಣೆ ಮೇಲಿನ ದಾಳಿ ಪ್ರಕರಣಗಳಲ್ಲಿದ್ದ ತನ್ನ ಪಾಳೆಯ ಬಿಡುಗಡೆಗೊಂಡಿದ್ದಕ್ಕೆ ಸಂಭ್ರಮಾಚರಣೆಯೂ ಹೌದಾಗಿರಬಹುದಾ? ಹೀಗೆ ನಾನಾ ಪ್ರಶ್ನೆಗಳು ಹುಟ್ಟಿಕೊಳ್ಳುತ್ತಿವೆ!
ನಟೋರಿಯಸ್ ನಾಸೀರ್!
2008ರಲ್ಲಿ ನಾಯಂಡಹಳ್ಳಿಯೂ ಸೇರಿದಂತೆ ಬೆಂಗಳೂರಿನ ಒಂದಷ್ಟು ಏರಿಯಾಗಳಲ್ಲಿ ಸರಣಿ ಬಾಂಬ್ ಸ್ಫೋಟ ಪ್ರಕರಣ ನಡೆದಿತ್ತಲ್ಲಾ? ಆ ಪ್ರಕರಣದಲ್ಲಿ ನಾಸಿರ್ ಮದನಿ ಗ್ಯಾಂಗಲ್ಲಿ ಕಾರ್ಯ ನಿರ್ವಹಿಸಿದ್ದವನು ಟಿ. ನಾಸಿರ್. ಆ ಪ್ರಕರಣದಲ್ಲಿ ಮದನಿಯನ್ನೂ ಬಂಧಿಸಲಾಗಿತ್ತು. ನಾಸೀರ್ ಕೂಡಾ ತನಿಖಾಧಿಕಾರಿಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದೆ ತಗುಲಿಕೊಂಡಿದ್ದ. ಸದ್ಯಕ್ಕೆ ಮದನಿ ಅನಾರೋಗ್ಯ ಸಮಸ್ಯೆಯಿಂದಾಗಿ ಜೈಲಿಂದ ಹೊರ ಬಂದಿದ್ದಾನೆ. ಆದರೆ, ಒಂದು ಕಾಲದಲ್ಲಿ ಆತನ ಸಹಚರನಾಗಿದ್ದ ಪ್ರಳಯಾಂತಕ ನಾಸಿರ್ ಮಾತ್ರ ದಶಕಗಳಿಂದೀಚೆಗೆ ಪರಪ್ಪನ ಅಗ್ರಹಾರ ವಾಸಿಯಾಗಿದ್ದಾನೆ. ಹೊರ ಜಗತ್ತಿನ ಪಾಲಿಗೆ ಆತನೋರ್ವ ಭಯೋತ್ಪಾದಕ. ಧರ್ಮದ ಅಫೀಮನ್ನೇ ಮೆದುಳಾಗಿಸಿಕೊಂಡು ಒಂದಿಡೀ ದೇಶಕ್ಕೇ ಕಂಟಕನಾದವನಿಗೆ ಜೈಲೊಳಗೆ ಥರ್ಡ್ ಡಿಗ್ರಿ ಟ್ರೀಟ್ ಮೆಂಟ್ ಸಿಗುತ್ತದೆ ಅಂತಲೇ ಬಹುತೇಕರು ಅಂದುಕೊಂಡಿರಬಹುದು. ಆದರೆ, ಆರಂಭದಿಂದ ಇಲ್ಲಿಯವರೆಗೂ ಪರಪ್ಪನ ಅಗ್ರಹಾರದೊಳಗೆ ನಡೆಯುತ್ತಿರೋದು ನಾಗರಿಕರ ನಂಬಿಕೆಗೆ ಅಕ್ಷರಶಃ ದ್ರೋಹವೆಸಗುವಂಥಾ ವಿದ್ಯಮಾನ!
ಕೇರಳದ ಕೊಲ್ಲಂ ಮೂಲದವನಾದ ಟಿ ನಾಸೀರ್, ಸಿಮಿ ಸಂಘಟನೆಯಲ್ಲಿ ಸಕ್ರಿಯವಾಗಿದ್ದವನು. ಸಿಮಿ ಸಂಘಟನೆ ನಿಷೇಧಕ್ಕೊಳಪಡುತ್ತಲೇ ಇಂಡಿಯನ್ ಮುಜಾಹಿದ್ದೀನ್ ಗೆ ಸೇರ್ಪಡೆಗೊಂಡಿದ್ದ. ಪಕ್ಕಾ ನಟೋರಿಯಸ್ ಆಸಾಮಿಯಾದ ನಾಸೀರ್, ಭಯೋತ್ಪಾದನಾ ತರಬೇತಿ ಕೊಡುವುದರಿಂದ ಹಿಡಿದು, ದೊಡ್ಡ ಮಟ್ಟದ ಕುಕೃತ್ಯಗಳಿಗೆ ನಿಖರವಾಗಿ ಸ್ಕೆಚ್ ಹಾಕಿ ಕಾರ್ಯರೂಪಕ್ಕೆ ತರುವುದರಲ್ಲಿಯೂ ಈತ ನಿಸ್ಸೀಮ. ಅತ್ಯಂತ ಕಡಿಮೆ ಅವಧಿಯಲ್ಲಿ ಕುಖ್ಯಾತನಾಗಿರುವ ಈತ ಆರಂಭದಲ್ಲಿ ನಾಸಿರ್ ಮದನಿಯ ನೆರಳಿನಲ್ಲಿದ್ದ. ಬಳಿಕ ಮುಂಬೈ ಮಾದರಿಯಲ್ಲಿ ಬೆಂಗಳೂರಿನಲ್ಲಿ ಸರಣಿ ಸ್ಫೋಟ ನಡೆಸಲು ವರ್ಷಾಂತರಗಳ ಕಾಲ ಫೀಲ್ಡ್ ವರ್ಕ್ ನಡೆಸಿದ್ದವನು ನಾಸೀರ್. ಇಂಥವನು ಅಂದುಕೊಂಡಂತೆಯೇ 2008ರಲ್ಲಿ ಸರಣಿ ಸ್ಫೋಟ ನಡೆಸಿ ಕರ್ನಾಟಕ ಪೊಲೀಸರಿಗೆ ತಗುಲಿಕೊಂಡಿದ್ದ. ಅಂದಿನಿಂದ ಇಂದಿನವರೆಗೂ ಪರಪ್ಪನ ಅಗ್ರಹಾರದಲ್ಲಿರುವ ನಾಸೀರ್, ಅಲ್ಲೇ ಒಂದು ಸ್ವರ್ಗ ಸೃಷ್ಟಿಸಿ ಬದುಕುತ್ತಿದ್ದಾನೆಂದರೆ ಅದಕ್ಕಿಂತಲೂ ನಾಚಿಕೆಗೇಡಿನ ಸಂಗತಿ ಮತ್ಯಾವುದಿದೆ?
ಶೇಷನೆಂಬೋ ಭಯೋತ್ಪಾದಕನ ಬಂಧು!
ನಾಸೀರನಂಥಾ ಭಯೋತ್ಪಾದಕರಿಗೆ ಯಾವುದೇ ರೀತಿಯಲ್ಲಿ ಸಹಾಯ ಮಾಡುವುದು ಕೂಡಾ ಮಹಾನ್ ದೇಶದ್ರೋಹದ ಸಂಗತಿ. ದುರಂತವೆಂದರೆ, ಇಷ್ಟು ವರ್ಷಗಳಲ್ಲಿ ಹಣದಾಸೆಗೆ ಬಿದ್ದ ಒಂದಷ್ಟು ಮಂದಿ ಜೈಲಾಧಿಕಾರಿಗಳೇ ದೇಶದ್ರೋಹಿಗಳ ಸ್ಥಾನದಲ್ಲಿ ನಿಲ್ಲುತ್ತಾರೆ. ಎಂಥಾ ಪರಿಸ್ಥಿತಿಯನ್ನಾದರೂ ತನಗೆ ಬೇಕಾದಂತೆ ಪಳಗಿಸಿಕೊಳ್ಳಬಲ್ಲ ಶುದ್ಧ ಕ್ರಿಮಿನಲ್ ಈ ನಾಸೀರ್. ಹಂತ ಹಂತವಾಗಿ ಈತ ಜೈಲಾಧಿಕಾರಿಗಳನ್ನು, ಕೆಲ ಸಿಬ್ಬಂದಿಗಳನ್ನು ಪಳಗಿಸಿಕೊಂಡು ಬಂದಿದ್ದ. ಈ ಕಾರಣದಿಂದಲೇ ನಾನಾ ನಾಟಕವಾಡಿ, ಇದೀಗ ವಿಐಪಿ ಟ್ರೀಟ್ ಮೆಂಟ್ ಪಡೆದುಕೊಂಡು ಸೇಫಾಗಿದ್ದಾನೆ. ಈ ಹಿಂದೆ ಜೈಲಾಧಿಕಾರಿಯಾಗಿದ್ದ ರಂಗನಾಥ್, ಈಗಿರುವ ಸೂಪರಿಟೆಂಡೆಂಟ್ ಶೇಷಮೂರ್ತಿ ಸೇರಿದಂತೆ, ನಾಸಿರ್ ವಿಚಾರದಲ್ಲಿ ಎಲ್ಲರ ಮೇಲೂ ಆರೋಪಗಳಿದ್ದಾವೆ.
ಆದರೆ, ಈ ಹಿಂದೆ ಪರಪ್ಪನ ಅಗ್ರಹಾರದ ಜೈಲಾಧಿಕಾರಿಯಾಗಿದ್ದ ಟಿ.ಪಿ ಶೇಷನ ಮೇಲಿರುವಷ್ಟು ಆರೋಪಗಳು ಮತ್ಯಾರ ಮೇಲೂ ಇರಲಿಕ್ಕಿಲ್ಲ. ಅಷ್ಟಕ್ಕೂ ಭಯೋತ್ಪಾದಕ ನಾಸೀರ್ ಈ ಪರಿಯಾಗಿ ಕೊಬ್ಬಲು ಮೂಲ ಕಾರಣವೇ ಶೇಷ ಎಂಬ ಆರೋಪವಿದೆ. ಜೈಲೊಳಗಿರುವ ನಾಸೀರ್ ಅಲ್ಲೇ ದಂಧೆಗಳ ದುಖಾನು ತೆರೆದು ಕೂತಿದ್ದಾನೆ. ಅದರಲ್ಲಿ ಯಥೇಚ್ಛವಾಗಿ ಗಾಂಜಾ, ಬೇಕಾದವರಿಗೆ ಮೊಬೈಲು ಮುಂತಾದ ನಾನಾ ಸರಕುಗಳು ಸಲೀಸಾಗಿ ಸಿಗುತ್ತಿವೆ. ಹಾಗೆ ನಾಸೀರ್ ಕ್ವಿಂಟಾಲುಗಟ್ಟಲೆ ಗಾಂಜಾವನ್ನು ಪರಪ್ಪನ ಅಗ್ರಹಾರದೊಳಗೆ ಮಾರುತ್ತಾನೆ. ಆ ಕಾಸಲ್ಲಿ ಪ್ರತೀ ತಿಂಗಳು ದೊಡ್ಡ ಮೊತ್ತದಲ್ಲಿ ಪಾಲು ಪಡೆಯುತ್ತಾ, ನಾಸಿರನೆಗೆ ಅನುಕೂಲಕರ ವಾತಾವರಣ ಸೃಷ್ಟಿಸಿದ್ದರೆಂಬ ಗುರುತರ ಆರೋಪ ಶೇಷ ವಿರುದ್ಧ ಕೇಳಿ ಬರುತ್ತಿದೆ!
ಜೈಲೊಳಗೆ ಕ್ವಿಂಟಾಲುಗಟ್ಟಲೆ ದನದ ಮಾಂಸ!
ನಿಮಗೆ ಮರೆತು ಹೋಗಿರಲಿಕ್ಕಿಲ್ಲ; ಕಳೆದ ವರ್ಷದ ಮಳೆಗಾಲದಲ್ಲಿ ಪರಪ್ಪನ ಅಗ್ರಹಾರದಲ್ಲಿ ನಾಸಿರನಿಗೆ ದೊರೆಯುತ್ತಿರುವ ರಾಜಾತಿಥ್ಯದ ಬಗ್ಗೆ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಜೊತೆಗೆ ಆತನ ಖಾತೆಗೆ ದುಬೈ ಸೇರಿದಂತೆ ನಾನಾ ಕಡೆಗಳಿಂದ ಫಂಡುಗಳು ಬಂದು ಬೀಳುತ್ತಿವೆ ಅನ್ನೋದರ ಬಗ್ಗೆಯೂ ಗುಲ್ಲೆದ್ದಿತ್ತು. ಆತ ಪರಪ್ಪನ ಅಗ್ರಹಾರದಿಂದಲೇ ಮ್ಯಾನೇಜು ಮಾಡುತ್ತಿರುವ ಉಗ್ರರ ನೆಟ್ ವರ್ಕ್ ಮತ್ತು ಆ ಮೂಲಕ ನಡೆಸುತ್ತಿರುವ ಸರಣಿ ಸ್ಫೋಟದ ಸಂಚಿನ ಬಗ್ಗೆಯೂ ಮಾಹಿತಿಗಳು ಹೊರಬಿದ್ದಿದ್ದವು. ಅಷ್ಟಾದೇಟಿಗೆ ನಾಸಿರನ ಬುಡಕ್ಕೊದ್ದು, ಆತನಿಗೆ ಸಹಾಯ ಮಾಡುತ್ತಿದ್ದವರಿಗೂ ಒಂದು ಗತಿ ಕಾಣಿಸಿದ್ದರೆ, ಬಹುಶಃ ಬೆಂಗಳೂರು ಸೇಫ್ ಆಗುಳಿಯುತ್ತಿತ್ತು. ಹಾಗಿದ್ದರೂ ಯಾಕೆ ಕ್ರಮ ಕೈಗೊಂಡಿಲ್ಲ? ಯಾಕೆ ನಾಸಿರ್ ಈವತ್ತಿಗೂ ಅಲ್ಲೆಲ್ಲೋ ಗಲಭೆಕೋರರು ಜೈಲಿಂದ ಬಿಡುಗಡೆಗೊಂಡರೆ ಬಸ್ಸು ಕಳಿಸಿ ವ್ಯವಸ್ಥೆ ಮಾಡಿ ಕೊಡುವ ಮಟ್ಟಕ್ಕೆ ಪ್ರಭಾವ ಉಳಿಸಿಕೊಂಡಿದ್ದಾನೆ? ಇಂಥಾ ಪ್ರಶ್ನೆಗಳು ಯಾರಿಗಾದರೂ ಕಾಡದಿರೋದಿಲ್ಲ.
ಅದಕ್ಕೆ ಉತ್ತರವಾಗಿ ನಿಲ್ಲುವ ಆಕೃತಿ ಜೈಲಾಧಿಕಾರಿ ಟಿ.ಪಿ ಶೇಷ. ಇವರು ಪರಪ್ಪನ ಅಗ್ರಹಾರದಲ್ಲಿ ಮೆರೆಯುತ್ತಿದ್ದ ಕಾಲದಲ್ಲಿಯೇ ಉಗ್ರ ನಾಸೀರ್ ಕೊಬ್ಬಿ ಹೋಗಿದ್ದ ಅನ್ನಲಾಗುತ್ತಿದೆ. ಆ ಕಾಲಮಾನದ ಬಗ್ಗೆ ನಾಗರಿಕರೆಲ್ಲ ರೊಚ್ಚಿಗೇಳುವಂಥಾ ಅನೇಕ ಘಟನಾವಳಿಗಳು ನಡೆದಿದ್ದವಂತೆ. ನಾಸೀರ್ ಗೆ ಗಾಂಜಾ ದಂಧೆ ಸೇರಿದಂತೆ ಎಲ್ಲದಕ್ಕೂ ಅನುವು ಮಾಡಿಕೊಟ್ಟಿದ್ದೇ ಈ ಶೇಷ ಎನ್ನಲಾಗುತ್ತಿದೆ. ಕ್ವಿಂಟಾಲುಗಟ್ಟಲೆ ದನದ ಮಾಂಸ ಸರಬರಾಜಾಗುವಂತೆ ಮಾಡಿ, ಅದರೊಳಗೆ ಮೊಬೈಲುಗಳನ್ನೂ ತರಿಸುವ ವ್ಯವಸ್ಥೆ ಆದದ್ದರ ಹಿಂದೆಯೂ ಸಾಹೇಬರ ನೇರಾನೇರ ಕೈವಾಡವಿದೆ. ಅದನ್ನು ತಾನು ಭಯೋತ್ಪಾದನಾ ತರಬೇತಿ ಕೊಟ್ಟ ಕ್ರಿಮಿನಲ್ಲುಗಳಿಗೆ ತಿನ್ನಿಸಿ, ತಾನೂ ತಿಂದು ನಾಸೀರ್ ಮಜಾ ಉಡಾಯಿಸಿಕೊಂಡು ಬಂದಿದ್ದಾನೆ!
ವೀಡಿಯೋ ಮಾಡಿಟ್ಟುಕೊಂಡನೇ ಉಗ್ರ?
ಪರಪ್ಪನ ಅಗ್ರಹಾರದೊಳಗೆ ನಾಸೀರ್ ರಾಜನಂತೆ ಮೆರೆಯುತ್ತಿರೋ ವಿಚಾರ ಅದ್ಯಾವತ್ತೋ ಮುಖ್ಯವಾಹಿನಿ ತಲುಪಿಕೊಂಡಿದೆ. ಒಂದು ವೇಳೆ ಜೈಲೊಳಗಿನ ಸಿಬ್ಬಂದಿಯೋ, ಅಧಿಕಾರಿಗಳೋ ಇಂಥಾ ತಪ್ಪು ಮಾಡಿದ್ದರೆ ಮೇಲಾಧಿಕಾರಿಗಳು ಕ್ರಮ ಜರುಗಿಸಿ, ಎಲ್ಲವನ್ನೂ ಕಟ್ಟುನಿಟ್ಟಾಗಿರುವಂತೆ ನೋಡಿಕೊಳ್ಳುವ ಅವಕಾಶವಿತ್ತು. ಅದಕ್ಕೆ ಕೊಳ್ಳಿಯಿಟ್ಟು ಕೊಳ್ಳಿದೆವ್ವದಂಥಾ ನಾಸಿರನನ್ನು ಕೊಬ್ಬಲು ಬಿಟ್ಟಿದ್ದರ ಹಿಂದೆಯೂ ಮತ್ತದೇ ಶೇಷನ ಹೆಸರು ಕೇಳಿ ಬರುತ್ತದೆ. ಹಾಗಾದರೆ, ಶೇಷ ಯಾಕೆ ಪಟ್ಟು ಹಿಡಿದು ನಾಸಿರನನ್ನು ಪೊರೆಯಲು ನಿಂತರು? ಸಸ್ಪೆಂಡ್ ವಆಗುವ ಭಯವೂ ಇಲ್ಲದೆ ಯಾಕೆ ಭಯೋತ್ಪಾದಕನಿಗೆ ಬೆಂಗಾವಲಾದರು? ಈ ದಿಶೆಯಲ್ಲಿ ಹುಡುಕ ಹೊರಟರೆ ಮತ್ತೊಂದಷ್ಟು ಇಂಟರೆಸ್ಟಿಂಗ್ ಆದ, ಆಘಾತಕರ ವಿಚಾರಗಳು ಜಾಹೀರಾಗುತ್ತವೆ!
ಶೇಷ ಸಾಹೇಬರು ಕ್ವಿಂಟಾಲುಗಟ್ಟಲೆ ಗಾಂಜಾವನ್ನು ಪರಪ್ಪನ ಅಗ್ರಹಾರದೊಳಕ್ಕೆ ಬಿಟ್ಟು, ತಿಂಗ ತಿಂಗಳು ಕಾಸೆಣಿಸುತ್ತಿದ್ದರಲ್ಲಾ? ಹಾಗೊಂದು ಸಲ ಮಂತ್ಲಿ ಸೆಟಲ್ ಮೆಂಟಿನಲ್ಲಿ ಅವರು ಬ್ಯುಸಿಯಾಗಿದ್ದಾಗ, ನಟೋರಿಯಸ್ ನಾಸಿರ್ ಸಣ್ಣ ಗ್ಯಾಪಿನಲ್ಲಿ ಕೈಚಳಕ ತೋರಿಸಿದ್ದಾನೆ. ಶೇಷ ಲಕ್ಷಣವಾಗಿ ಕಾಸೆಣಿಸುವ ದೃಷ್ಯವನ್ನು, ಅದರ ಹಿಂಚುಮುಂಚಿನ ಸಂವಾದವನ್ನು ನಾಸಿರ್ ವೀಡಿಯೋ ಮಾಡಿಕೊಂಡಿದ್ದಾನೆಂಬ ಮಾತೂ ಇದೆ. ಯಾವಾಗ ತನ್ನ ಅಸಲೀ ಜಾತಕ ಉಗ್ರನ ಕೈಲಿಗೆ ಎಂಬ ಸತ್ಯ ಗೊತ್ತಾಯಿತೋ, ಆಗ ಹೀನಾಯವಾಗಿ ಸಸ್ಪೆಂಡ್ ಆಗೋ ಭಯಕ್ಕೆ ಸಾಹೇಬರ ಬಾಟಮ್ಮು ಒದ್ದೆಯಾಗಿದೆ. ಆ ವೀಡಿಯೋವನ್ನೇ ಇಟ್ಟುಕೊಂಡು ನಾಸೀರ್ ಪರಪ್ಪನ ಅಗ್ರಹಾರವನ್ನು ಅಕ್ಷರಶಃ ಕಂಟ್ರೋಲಿನಲ್ಲಿಟ್ಟುಕೊಂಡಿದ್ದಾನೆ. ಈ ನಿಟ್ಟಿನಲ್ಲಿ ನೋಡಹೋದರೆ, ಒಟ್ಟಾರೆ ಅಧ್ವಾನದ ಹಿಂದಿರುವ ನಿಜವಾದ ಕಾರಣದಂತೆ ಶೇಷ ಗೋಚರಿಸುತ್ತಿರೋದು ಸಳ್ಳಲ್ಲ!
ಜೈಲೊಳಗೇ ಭಯೋತ್ಪಾದಕರ ಸೃಷ್ಟಿ!
ಹೀಗೆ ಅತ್ಯಂತ ವ್ಯವಸ್ಥಿತವಾಗಿ ಪರಪ್ಪನ ಅಗ್ರಹಾರವನ್ನು ಸುಪರ್ಧಿಗೆ ತೆಗೆದುಕೊಂಡ ನಾಸಿರ್ ಅದನ್ನು ಭಯೋತ್ಪಾದನಾ ತರಬೇತಿ ಕೇಂದ್ರವಾಗಿಸಿ ಬಿಟ್ಟಿದ್ದಾನೆ. ಬೇರೆ ಬೇರೆ ಪ್ರಕರಣಗಳಲ್ಲಿ ಕೆಲ ಹುಡುಗರು ಪರಪ್ಪನ ಅಗ್ರಹಾರ ಸೇರಿಕೊಳ್ಳುತ್ತಿರುತ್ತಾರೆ. ಅಂಥವರನ್ನೆಲ್ಲ ತಲೆಸವರಿ ಹತ್ತಿರ ಕರೆದುಕೊಳ್ಳುವ ನಾಸೀರ್ ಮೊಬೈಲು, ಮಾಂಸ ಮಡ್ಡಿ, ಎಣ್ಣೆಯೂ ಸೇರಿದಂತೆ ಸಖಲ ಸ್ವರೂಪಗಳಲ್ಲಿ ಉಪಚರಿಸುತ್ತಾನೆ. ನಂತರ ಹಂತ ಹಂತವಾಗಿ ಭಯೋತ್ಪಾದನೆಯನ್ನು ಬೋಧಿಸಲಾರಂಭಿಸುತ್ತಾನೆ. ಹೀಗೆ ಸಾಮಾನ್ಯ ಕ್ರಿಮಿನಲ್ಲು ಹುಡುಗರ ತಲೆಗೆ ಹಿಂಸೆಯನ್ನು ತುಂಬಿ, ಎಲ್ಲ ರೀತಿಯಿಂದಲೂ ಪಳಗಿಸಿ ಬಿಡುತ್ತಾನೆ. ಅಪರಾಧ ಪ್ರಕರಣಗಳಲ್ಲಿ ಜೈಲು ಪಾಲಾಗುವ ಯುವಕರಲ್ಲಿ ಬಹುತೇಕರು ಭಯೋತ್ಪಾದಕರಾಗಿಯೇ ಹೊರ ಹೋಗುತ್ತಿದ್ದಾರೆ.
ನಾಸಿರನ ನಟೋರಿಟಿಗೆ ಸೂಕ್ತ ಉದಾಹರಣೆಯಂತಿರುವಾತ ಆರ್ ಟಿ ನಗರದ ಮಠದಹಳ್ಳಿಯ ಮಹಮದ್ ಜುನೈದ್. ಆತ 2017ರಲ್ಲಿ ಕೊಲೆ ಕೇಸೊಂದರಲ್ಲಿ ಪರಪ್ಪನ ಅಗ್ರಹಾರಕ್ಕೆ ತಲುಪಿದ್ದ. ಜುನೈದ್ ನನ್ನು ನಾಸಿರ್ ಅದು ಹೇಗೆ ಪಳಗಿಸಿದ್ದನೆಂದರೆ, ಬೇಲ್ ಮೂಲಕ ಬಿಡುಗಡೆಗೊಂಡಿದ್ದ ಆತ ಭಯೋತ್ಪಾದನಾ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದ. ಎರಡು ವರ್ಷದ ಹಿಂದೆ ಮತ್ತೆ ಶ್ರೀಗಂಧ ಕಳ್ಳತನ ಕೇಸಿನಲ್ಲಿ ಜೈಲಿಗೆ ಬಂದಿದ್ದ ಜುನೈದ್ ನನ್ನು ನಾಸಿರ್ ತನ್ನ ಸಂಘಟನೆಗೆ ಸೇರಿಸಿಕೊಂಡಿದ್ದ. ಹೀಗೆ ಕೊಲೆ ಸುಲಿಗೆಯಂಥಾ ಕೇಸುಗಳಲ್ಲಿ ಜೈಲುಪಾಲಾಗುವ ತನ್ನ ಸಮುದಾಯದ ಯುವಕರ ತಲೆಗೆ ನಾಸಿರ್ ವ್ಯವಸ್ಥಿತವಾಗಿ ಮೂಲಭೂತವಾದವನ್ನು ತುಂಬಿಸುತ್ತಿದ್ದಾನೆ. ಈತನಿಂದಲೇ ಭಯೋತ್ಪಾದಕನಾಗಿರುವ ಜುನೈದ್ ಕಳೆದ ವರ್ಷವೇ ದುಬೈಗೆ ಹಾರಿದ್ದಾನೆ. ಅಲ್ಲಿಂದಲೇ ಬೆಂಗಳೂರು ಸ್ಫೋಟಕ್ಕೆ ಸಂಚನ್ನೂ ರೂಪಿಸುತ್ತಿದ್ದಾನೆ. ಅದೆಲ್ಲದರ ಮಾಸ್ಟರ್ ಮೈಂಡ್ ಇದೇ ನಾಸಿರ್!
ಎಸ್ಕೇಪಾಗಲು ವ್ಯವಸ್ಥಿತ ಸಂಚು!
ಹೀಗೆ ಜೈಲೊಳಗಿದ್ದುಕೊಂಡೇ ಹೊರಜಗತ್ತನ್ನು ಸಂಭಾಳಿಸುತ್ತಿರುವ ಉಗ್ರ ನಾಸಿರ್ ಜೈಲುಪಾಲಾಗಿ ಹದಿಮೂರು ವರ್ಷ ಕಳೆದಿದೆ. ಆತನಿಗೆ ಬಿಡುಗಡೆ ಭಾಗ್ಯವಂತೂ ಸಾಧ್ಯವಿಲ್ಲ. ಅಲ್ಲಿಯೇ ಆತನ ಬದುಕು ನಾಮಾವಶೇಷಗೊಳ್ಳುವ ಎಲ್ಲ ಲಕ್ಷಣಗಳೂ ಗೋಚರಿಸುತ್ತಿದ್ದಾವೆ. ಹಾಗಿರೋದರಿಂದಲೇ ಹೇಗಾದರೂ ಮಾಡಿ ಪರಪ್ಪನ ಅಗ್ರಹಾರದಿಂದ ಎಸ್ಕೇಪ್ ಆಗಲು ನಾಸಿರ್ ಸಂಚು ನಡೆಸುತ್ತಿದ್ದಾನೆಂಬ ಅನುಮಾನವೂ ಇದೆ. ಅದಕ್ಕಾಗಿ ಒಂದು ಬೆಟಾಲಿಯನ್ನನ್ನು ರೆಡಿ ಮಾಡಿಟ್ಟುಕೊಂಡಿದ್ದಾನೆ. ಇತ್ತೀಚೆಗಷ್ಟೇ ಶಂಕಿತ ಉಗ್ರರನ್ನು ಪೊಲೀಸರು ಬಂಧಿಸಿದಾಗ ಬೇರೆ ವೆಪನ್ನುಗಳ ಜೊತೆಗೆ ಗ್ರೆನೇಟ್ ಕೂಡಾ ಸಿಕ್ಕಿತ್ತು. ಅದರ ಹಿಂದೆ ಉಗ್ರ ನಾಸಿರನ ಎಸ್ಕೇಪ್ ಪ್ಲಾನಿದೆ ಎಂಬ ಮಾತೂ ಇದೆ.
ಸದ್ಯಕ್ಕೆ ನಾಸಿರ್ ಪರಪ್ಪನ ಅಗ್ರಹಾರದ ವಿಶೇಷ ಕೊಠಡಿಯಲ್ಲಿ ಸೇಫಾಗಿದ್ದಾನೆ. ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯ ಎದುರಿಗೇ ಈತನ ಕೋಣೆ ಇದೆ. ಆ ಕೋಣೆಯ ಪಕ್ಕದಲ್ಲಿಯೇ ಒಂದು ಖಾಲಿ ಜಾಗವೂ ಇದೆ. ಆ ಭಾಗದಿಂದಲೇ ಎಸ್ಕೇಪ್ ಆಗುವ ಪ್ಲಾನೂ ಚಾಲ್ತಿಯಲ್ಲಿರುವಂತಿದೆ. ಎಸ್ಕೇಪ್ ಆಗಲು ಬೇರೆ ಬೇರೆ ತಂತ್ರ ಹೆಣೆದಿರುವ ನಾಸಿರ್ ಹುಡುಗರ ಕೈಗೆ ಗ್ರೆನೇಟ್ ಕೊಟ್ಟು ಸಜ್ಜುಗೊಳಿಸಿದ್ದಾನೆ. ವಿಚಾರಣೆ, ಕೋರ್ಟ್ ಹಾಜರಿ ಸಂದರ್ಭದಲ್ಲಿ ಪೊಲೀಸ್ ವಾಹನದ ಮೇಲೆ ಗ್ರೆನೇಟ್ ದಾಳಿ ನಡೆಸಿ ಕಂಬಿ ಕೀಳುವ ತಂತ್ರಗಳನ್ನೂ ನಾಸಿರ್ ಹೆಣೆಯುತ್ತಿದ್ದಾನೆ. ರಾಷ್ಟ್ರೀಯ ತನಿಖಾ ದಳದ ಚಿತ್ತ ಬೇಗನೆ ನಾಸಿರನತ್ತ ಹರಿದು, ಆತನ ಎಲ್ಲ ಆಟಗಳಿಗೂ ಬ್ರೇಕ್ ಹಾಕಿದರೆ ದೊಡ್ಡ ಅನಾಹುತಗಳನ್ನು ತಪ್ಪಿಸಿದಂತಾಗುತ್ತದೆ.
ಇದೆಲ್ಲವೂ ಶೇಷನ ಅವಶೇಷ!
ಪರಪ್ಪನ ಅಗ್ರಹಾರದೊಳಗೇ ಉಗ್ರನೊಬ್ಬ ಈ ಪರಿಯಲ್ಲಿ ರಾಜ್ಯಭಾರ ನಡೆಸುತ್ತಿದ್ದಾನೆಂದರೆ, ಅದಕ್ಕೆ ನೇರ ಹೊಣೆ ಶೆಷನೇ ಹೊರತು ಮತ್ಯಾರೂ ಅಲ್ಲ. ಆತ ತೊಲಗಿದ ನಂತರ ಬಂದ ಜೈಲಾಧಿಕಾರಿಗಳೂ ಕೂಡಾ ಆತನದ್ದೇ ಹಾದಿಯಲ್ಲಿ ಮುಂದುವರೆಯುತ್ತಿದ್ದಾರೆ. ಇದೆಲ್ಲದರ ಹಿಂದೆ ಶೇಷ ಸಿಲುಕಿಕೊಂಡಿರುವ ವೀಡಿಯೋ ಇಕ್ಕಳವೂ ಕಾರಣವಾಗಿದ್ದಿರಬಹುದು. ಹೀಗೆ ನಾಸಿರ್ ವಿಚಾರದಲ್ಲಿ ಕಳ್ಳಾಟವಾಡಿರುವ ಶೇಷನ ಜಾಯಮಾನವೇ ಅಂಥಾದ್ದಿದೆ. ಈ ಹಿಂದೆ ಹ್ಯಾಕರ್ ಶ್ರೀಕಿ ಬಿಟ್ ಕಾಯಿನ್ ದಂಧೆಯಲ್ಲಿ ಸಿಕ್ಕಿಬಿದ್ದಾಗಲೂ, ಆ ಪ್ರಕರಣದಲ್ಲಿ ಶೆಷನ ಹೆಸರು ಕೇಳಿ ಬಂದಿತ್ತು. ಅತ್ಯಂತ ಬುದ್ಧಿವಂತನಾದ ಶ್ರೀಕಿ ಅಮೆರಿಕಾದಂಥಾ ಅಮೆರಿಕೆಗೇ ಛಳುಕು ಮೂಡಿಸಿದ್ದ ಹ್ಯಾಕರ್.
ಇಂಥವನಿಗೆ ಕೊಕೇನ್ ನಂಥಾದ್ದನ್ನು ಸರಬರಾಜು ಮಾಡಿ, ಬಹುಕೋಟಿ ಕಿಮ್ಮತ್ತಿನ ಬಿಟ್ ಕಾಯಿನ್ನುಗಳನ್ನು ತನ್ನ ಖಾತೆಗೆ ವರ್ಗಾಯಿಸಿಕೊಂಡ ಗುರುತರ ಆರೋಪವೂ ಶೇಷನ ಮೇಲಿದೆ. ಇದೀಗ ಬೆಳಗಾವಿ ಜೈಲಿನ ಡಿ.ಐ.ಜಿ ಆಗಿರುವ ಶೇಷನನ್ನು ಬಿಟ್ ಕಾಯಿನ್ ಕೇಸಿನಲ್ಲಿ ಎಸ್ ಐಟಿ ತಂಡ ತಡವಿಕೊಂಡಿತ್ತು. ಒದಷ್ಟು ದಿನ ರಜೆ ಹಾಕುವ ನಾಟಕವಾಡಿ ಆತ ಬಚಾವಾಗಲೆತ್ನಿಸಿದ್ದ. ಒಂದು ವೇಳೆ ಬಿಟ್ ಕಾಯಿನ್ ಕೇಸಿನ ವಿಚಾರಣೆ ಸರಿ ದಿಕ್ಕಿನಲ್ಲಿ ನಡೆದರೆ ಮೊದಲು ಶೇಷನೇ ಜೈಲುವಾಸಿಯಾದರೂ ಅಚ್ಚರಿಯೇನಿಲ್ಲ. ನಾಸಿರ್ ಕೇಸಿನಲ್ಲಿಯೂ ಆತನ ನೆತ್ತಿಯ ಮೇಲೆ ಅಪಾಯದ ತೂಗುಕತ್ತಿ ನೇತಾಡುತ್ತಲೇ ಇದೆ. ಯಾಕೆಂದರೆ, ಪರಪ್ಪನ ಅಗ್ರಹಾರದಲ್ಲಿ ಈ ಕ್ಷಣಕ್ಕೂ ಚಾಲ್ತಿಯಲ್ಲಿರುವ ಅಧ್ವಾನಗಳೆಲ್ಲವೂ ಈ ಶೇಷನ ಅವಶೇಷಗಳೇ!
ಝಳಪಿಸಲಿ ತನಿಖೆಯ ತಲವಾರು!
ಸಂಬಂಧಿಸಿದ ಅಧಿಕಾರಿಗಳು, ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ಬಂಧಿಖಾನೆ ಇಲಾಖೆ ಗಮನ ಹರಿಸದಿದ್ದರೆ ಪರಪ್ಪನ ಅಗ್ರಹಾರ ಮತ್ತೊಂದಷ್ಟು ಅನಾಹುತಗಳಿಗೆ ಸಾಕ್ಷಿಯಾಗಲಿದೆ. ಬಿಟ್ ಕಾಯಿನ್ನು ಸೇರಿದಂತೆ ನಾನಾ ಮೂಲದಿಂದ ಶೇಷನಂಥಾ ಅಧಿಕಾರಿಗಳು ಬೇನಾಮಿ ಆಸ್ತಿಯ ಒಡೆಯರಾಗಿದ್ದಾರೆಂಬ ಮಾತಿದೆ. ಈ ಕೂಡಲೇ ಸರತಿಯಾದ ತನಿಖೆ ನಡೆಸಿ, ಸರಿಯಾಗಿಕ ಶಿಕ್ಷೆ ವಿಧಿಸಬೇಕಿದೆ. ಭಯೋತ್ಪಾದನೆಯಂಥಾದ್ದು ಮೇಳೈಸಿದಾಗೆಲ್ಲ ನಾನಾ ದಿಕ್ಕಿನತ್ತ ಆರೋಪಗಳ ಹರಿದಾಡುತ್ತವೆ. ಆದರೆ ಅದೆಲ್ಲದಕ್ಕೂ ಕ್ರಿಮಿನಲ್ಲುಗಳ ಜೊತೆ ಮಿಲಾಪಿ ನಡೆಸುವ ಕೆಲ ಖೂಳ ಅಧಿಕಾರಿಗಳೇ ಕಾರಣ. ಬಹುಶಃ ಅಂಥಾ ಅಧಿಕಾರಿಗಳಿಲ್ಲದೇ ಹೋಗಿದ್ದರೆ ನಾಸಿರ್ ನಂಥಾ ಭಯೋತ್ಪಾದಕರು ಎಂದೋ ಮೂಲೆ ಸೇರುತ್ತಿದ್ದರು.
ಈಗ್ಗೆ ವರ್ಷಗಳ ಹಿಂದೆ ಪರಪ್ಪನ ಅಗ್ರಹಾರದಲ್ಲಿ ಖೈದಿಗಳಿಗೆ ವೈಭೋಗದ ವ್ಯವಸ್ಥೆ ಮಾಡಿ ಕೊಡುತ್ತಿರೋದರ ಬಗ್ಗೆರ ಗುಲ್ಲೆದ್ದಿತ್ತು. ಅದರ ಬಗ್ಗೆ ತನಿಖೆ ನಡೆಸಲು ಮುರುಗನ್ ನೇತೃತ್ವದಲ್ಲೊಂದು ತನಿಖಾ ತಂಡವನ್ನು ನೇಮಿಸಲಾಗಿತ್ತು. ಆ ಕಾಲದಲ್ಲಿ ಪರಪ್ಪನ ಅಗ್ರಹಾರ ಜೈಲಿನ ಡಿ.ಐಜಿ ಆಗಿದ್ದಾತ ಇದೇ ಟಿ.ಪಿ ಶೇಷ. ಮುರುಗನ್ ಮತ್ತವರ ತಂಡ ಪರಪ್ಪನ ಅಗ್ರಹಾರದ ಅಖಾಡಕ್ಕಿಳಿದು ತನಿಖೆ ಶುರುವಿಡುತ್ತಲೇ ಎಲ್ಲ ಅಕ್ರಮಗಳೂ ಒಂದೊಂದಾಗಿ ಜಾಹೀರಾಗಿದ್ದವು. ಶೇಷನ ನೆರಳಲ್ಲಿ ಖೈದಿಗಳಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ನಡೆದಿದ್ದ ಅಷ್ಟೂ ಸರ್ಕಸ್ಸುಗಳು ತೆರೆದುಕೊಂಡಿದ್ದವು. ಶೇಷ ಮಿಸುಕಲೂ ಸಾಧ್ಯವಾಗದಂತೆ, ಆರೋಪಗಳೆಲ್ಲವೂ ಸಾಬೀತಾಗಿ ಬಿಟ್ಟಿದ್ದವು. ಮುರುಗನ್ ನೇತೃತ್ವದ ತಂಡ ಯಾವ ಮುಲಾಜೂ ಇಲ್ಲದೆ ಆ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿತ್ತು. ಆ ಎಲ್ಲ ಅಂದಾದುಂದಿಗಳ ಸೂತ್ರದಾರನಾಗಿದ್ದ ಶೇಷರನ್ನು ಆ ಕ್ಷಣವೇ ಬೆಳಗಾವಿ ಜೈಲಿಗೆ ಎತ್ತಂಗಡಿ ಮಾಡಲಾಗಿತ್ತು. ಒಂದು ವೇಳೆ ಸರಿಯಾಗಿ ತನಿಖೆ ನಡೆದರೆ, ಪರಪ್ಪನ ಅಗ್ರಹಾರದ ಕಿಸುರುಗಳೇ ಶೇಷನ ಉಸಿರುಗಟ್ಟಿಸೋದರಲ್ಲಿ ಯಾವ ಸಂಶಯವೂ ಇಲ್ಲ!
ನಾಸಿರನಂಥಾ ಉಗ್ರ ಜೈಲುಪಾಲಾಗಿದ್ದರೂ ಅಲ್ಲಿಂದಲೇ ಭಯೋತ್ಪಾದನಾ ಚಟುವಟಿಕೆಗಳನ್ನು ಆಪರೇಟ್ ಮಾಡುತ್ತಿದ್ದಾನೆಂದರೆ, ಅದಕ್ಕೆ ಶೇಷನಂಥಾ ಅಧಿಕಾರಿಗಳ ಖೂಳುಬಾಕತನವೇ ಮೂಲ ಕಾರಣ. ಗೃಹಸಚಿವ ಪರಮೇಶ್ವರ್ ಅಡಿಗಡಿಗೆ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸೋಲುತ್ತಿದ್ದಾರೆ. ಅವರೋರ್ವ ಬೆನ್ನುಹುರಿಯೇ ನೆಟ್ಟಗಿಲ್ಲದ ವಿಫಲ ಗೃಹಸಚಿವನೆಂಬ ಆರೋಪಗಳೂ ಕೇಳಿ ಬರುತ್ತಿವೆ. ಪರಪ್ಪನ ಅಗ್ರಹಾರದ ಅಧ್ವಾನಗಳನ್ನು ನೋಡಿದರೆ ಯಾರಿಗಾದರೂ ಅಂಥಾ ಆರೋಪಗಳಲ್ಲಿ ಅರ್ಥವಿದೆ ಅನ್ನಿಸುತ್ತೆ. ಪರಮೇಶ್ವರ್ ಎಲ್ಲಕ್ಕಿಂತ ಮೊದಲು ಜೈಲೊಳಗಿನ ದಂಧೆಗಳನ್ನು ಮಟ್ಟಹಾಕಲಿ. ಶೇಷನಂಥಾ ಅಧಿಕಾರಿಗಳ ಮೇಲೆ ಸರಿಯಾದ ಕ್ರಮ ಜರುಗಿಸುವ ಮನಸು ಮಾಡಲೆಂಬುದು ಎಲ್ಲರ ಆಗ್ರಹ!