ಗೋಲ್ಡನ್ ಹುಟ್ಟುಹಬ್ಬಕ್ಕೆ ಸಿಂಪಲ್ ಸುನಿ ಕೊಟ್ಟಿದ್ದು ‘ಸಖತ್’ ಗಿಫ್ಟ್!

[adning id="4492"]

ಗಣೇಶ್ ಅಭಿಮಾನಿಗಳ ಪಾಲಿಗೆ ಖುಷಿಯ ಬೂಸ್ಟರ್‌ನಂತಿದೆ ಮೋಷನ್ ಪೋಸ್ಟರ್!
ಇಂದು ಗೋಲ್ಡನ್ ಸ್ಟಾರ್ ಗಣೇಶ್ ಹುಟ್ಟುಹಬ್ಬ. ಪ್ರತೀ ವರ್ಷ ಈ ಕ್ಷಣಗಳನ್ನು ಇಂಚಿಂಚಾಗಿ ಸಂಭ್ರಮಿಸುತ್ತಿದ್ದ ಅಭಿಮಾನಿಗಳು ಕೊಂಚ ಕಸಿವಿಸಿಗೊಂಡಿದ್ದರು. ಅದಕ್ಕೆ ಕಾರಣವಾಗಿದ್ದದ್ದು ಕೊರೋನಾ ಸೃಷ್ಟಿಸಿರುವ ವಿಷಮ ವಾತಾವರಣ. ಹತ್ತಿರದಿಂದ ಗಣೇಶ್‌ರನ್ನು ನೋಡಿ, ವಿಶ್ ಮಾಡಿ ಖುಷಿಗೊಳ್ಳುತ್ತಿದ್ದವರೆಲ್ಲ ಈ ಬಾರಿ ಇದ್ದಲ್ಲಿಂದಲೇ ಶುಭ ಹಾರೈಸುವಂತಾಗಿದೆ. ಆದರೀಗ ಅಂಥಾ ನಿರಾಸೆಯೂ ಕೂಡಾ ಸಂಭ್ರಮದಿಂದ ಲಕಲಕಿಸುವಂಥಾ ಮ್ಯಾಜಿಕ್ಕೊಂದನ್ನು ನಿರ್ದೇಶಕ ಸಿಂಪಲ್ ಸುನಿ ಮಾಡಿದ್ದಾರೆ.


ಸಿಂಪಲ್ ಸುನಿ ಮತ್ತು ಗಣೇಶ್ ಕಾಂಬಿನೇಷನ್ನಿನಲ್ಲಿ ಸಖತ್ ಅನ್ನೋ ಸಿನಿಮಾ ಅನೌನ್ಸ್ ಆಗಿ ಬಹುಕಾಲವೇ ಸಂದಿದೆ. ಟೈಟಲ್ ಮೂಲಕವೇ ತಿರುಗಿ ನೋಡುವಂತೆ ಮಾಡಿದ್ದ ಈ ಸಿನಿಮಾ ಕೂಡಾ ಕೊರೋನಾ ಬಾಧೆಯಿಂದ ತುಸು ಮಂಕಾಗಿತ್ತು. ಈ ಮ್ಲಾನ ಕಾಲವನ್ನು ಸಿಂಪಲ್ ಸುನಿ ಮಾತ್ರ ಸಖತ್ ಚಿತ್ರವನ್ನು ಮತ್ತಷ್ಟು ಸಖತ್ತಾಗಿ ರೂಪುಗೊಳಿಸಲು ಮೀಸಲಿಟ್ಟಿದ್ದರು. ಅದರ ಭಾಗವಾಗಿಯೇ ವಿಶಿಷ್ಟವಾದ ರ‍್ಯಾಪ್ ಮೋಷನ್ ಪೋಸ್ಟರ್ ಮೂಲಕ ಗಣೇಶ್ ಬರ್ತ್‌ಡೇಗೆ ಗಿಫ್ಟು ಕೊಡಲೂ ತಯಾರಾಗಿದ್ದರು. ಅದೀಗ ಲಾಂಚ್ ಆಗಿದೆ.


ಪಕ್ಕಾ ರ‍್ಯಾಪ್ ಶೈಲಿಯ ಸಾಲುಗಳೊಂದಿಗೆ ಗಣೇಶ್ ಅವತಾರವನ್ನು ತೆರೆದಿಟ್ಟಿರೋ ಈ ಮೋಷನ್ ಪೋಸ್ಟರ್ ಪರಿಣಾಮಕಾರಿಯಾಗಿದೆ. ವಿಶೇಷವಾಗಿ ಗಣೇಶ್ ಲುಕ್ಕು ಅಭಿಮಾನಿಗಳನ್ನು ಥ್ರಿಲ್ ಆಗಿಸಿದೆ. ಈ ಮೂಲಕ ನಿರ್ಮಾಪಕ ಸುಪ್ರೀತ್ ಕೂಡಾ ಒಂದೊಳ್ಳೆ ಕಥೆಯನ್ನ ಆರಿಸಿಕೊಂಡು ಮತ್ತೊಂದು ಗೆಲುವಿನ ಉತ್ಸಾಹದಲ್ಲಿರೋದು ಕೂಡಾ ಸ್ಪಷ್ಟವಾಗಿಯೇ ಕಾಣಿಸಿದೆ. ಒಟ್ಟಾರೆಯಾಗಿ ಈ ರ‍್ಯಾಪ್ ಮೋಷನ್ ಪೋಸ್ಟರ್ ಗಣೇಶ್ ಅಭಿಮಾನಿಗಳ ಪಾಲಿಗೆ ನವ ಉತ್ಸಾಹದ ಬೂಸ್ಟರ್‌ನಂತೆ ಮೂಡಿ ಬಂದಿದೆ.


ಸಖತ್ ಅನ್ನೋದು ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ನಿರ್ದೇಶಕ ಸಿಂಪಲ್ ಸುನಿ ಕಾಂಬಿನೇಷನ್ನಿನ ಎರಡನೇ ಚಿತ್ರ. ಈ ಹಿಂದೆ ಈ ಜೋಡಿ ಚಮಕ್ ಅನ್ನೋ ಸಿನಿಮಾ ಮೂಲಕ ಗೆಲುವು ಕಂಡಿತ್ತು. ಚಿತ್ರದಿಂದ ಚಿತ್ರಕ್ಕೆ ಹೊಸಾ ಬಗೆಯ ಕಥೆಯೊಂದಿಗೆ ಸುನಿ ಲಕಲಕಿಸುತ್ತಿದ್ದಾರೆ. ಗಣೇಶ್ ಕೂಡಾ ಇತ್ತೀಚಿನ ದಿನಗಳಲ್ಲಿ ಹೊಸ ಬಗೆಯ ಪಾತ್ರಗಳನ್ನೇ ಆವಾಹಿಸಿಕೊಳ್ಳುತ್ತಿದ್ದಾರೆ. ಈ ಎರಡೂ ತುಡಿತಗಳು ಒಂದು ಬಿಂದುವಿನಲ್ಲಿ ಸಂಧಿಸಿ ಮಹಾ ಚಮತ್ಕಾರ ಮಾಡಲಿರೋದಕ್ಕೆ ಈ ಮೋಷನ್ ಪೋಸ್ಟರ್ ಸಾಕ್ಷಿಯಂತಿದೆ.

[adning id="4492"]

LEAVE A REPLY

Please enter your comment!
Please enter your name here