ಅಮೇಜಾನ್ ಪ್ರೈಮ್ ಈಗ ಚೇತೋಹಾರಿ ಅನುಭೂತಿಯ ನಿಲ್ದಾಣ!

[adning id="4492"]

ಇದು ಮಾಯಾವಿ ಬದುಕಿನ ಅಮೂರ್ತ ಕ್ಷಣಗಳ ದೃಷ್ಯಕಾವ್ಯ!
ದುಕು ಎಂಥಾದ್ದೇ ಸವಾಲುಗಳನ್ನು ಹಠಾತ್ತನೆ ಮುಂದೆ ತಂದು ನಿಲ್ಲಿಸಿದರೂ ತಲ್ಲಣದ ಪದರುಗಳಲ್ಲಿಯೇ ಸಣ್ಣ ಸಣ್ಣ ಖುಷಿಗಳನ್ನು ಹೆಕ್ಕಿಕೊಳ್ಳೋದು ಮನುಷ್ಯ ಸಹಜ ಸ್ಥಿತಿ. ಹಾಗೆಯೇ ಆಯಾ ಕಾಲಘಟ್ಟಕ್ಕೆ, ಪರಿಸ್ಥಿತಿಗಳಿಗೆ ಹೊಂದಿಕೊಂಡು ಹೊಸ ಸಾಧ್ಯತೆಗಳತ್ತ ಕೈ ಚಾಚೋದು ಕೂಡಾ ಮನುಷ್ಯ ಸಹಜ ಗುಣಗಳಲ್ಲೊಂದು. ಕೊರೋನಾ ವೈರಸ್‌ನಿಂದಾಗಿ ತಲೊದೋರಿದ ಲಾಕ್‌ಡೌನ್ ಕಾಲದಲ್ಲಿ ಹುಟ್ಟಿಕೊಂಡ ಒಂದಷ್ಟು ಮನೋರಂಜನಾತ್ಮಕ ಪರ್ಯಾಯ ಮೂಲಗಳಿವೆಯಲ್ಲಾ? ಅದೂ ಕೂಡಾ ಮೇಲ್ಕಂಡ ವಿಚಾರಗಳಿಗೆ ಪೂರಕವಾದ ಅಂಶವೇ. ತಮ್ಮ ದುಗುಡ, ಜಂಜಾಟ, ಖುಷಿಗಳೆಲ್ಲವಕ್ಕೂ ಸಿನಿಮಾ ಮಂದಿಗಳಲ್ಲಿಯೇ ಮುಕ್ತಿ ಕಾಣುತ್ತಿದ್ದ ಅದೆಷ್ಟೋ ಮಂದಿಯೀಗ ಅಮೇಜಾನ್ ಪ್ರೈಮ್‌ನಂಥಾ ಪರ್ಯಾಯ ಮಾಧ್ಯಮಗಳಿಗೆ ಒಗ್ಗಿಕೊಂಡಿದ್ದಾರೆ. ಈ ಕಾರಣದಿಂದಲೇ ಅಮೇಜಾನ್ ಪ್ರೈಮ್‌ನಲ್ಲಿ ಒಳ್ಳೊಳ್ಳೆ ಚಿತ್ರಗಳ ಸುಗ್ಗಿ ಆರಂಭವಾಗಿದೆ. ಆ ಸಡಗರವನ್ನು ಮತ್ತಷ್ಟು ಮಿನುಗಿಸುವಂತೆ ಇದೀಗ ಅಮೇಜಾನ್ ಪ್ರೈಮ್‌ಗೆ ಮುಂದಿನ ನಿಲ್ದಾಣ ಚಿತ್ರ ಆಗಮಿಸಿದೆ.


ವಿನಯ್ ಭಾರದ್ವಾಜ್ ನಿರ್ದೇಶನದಲ್ಲಿ ಮೂಡಿಬಂದಿದ್ದ ಈ ಚಿತ್ರ ಕಳೆದ ವರ್ಷದ ಕಡೇಯ ಭಾಗದಲ್ಲಿ ಬಿಡುಗಡೆಯಾಗಿತ್ತು. ಎಂಥವರ ಮನಸಲ್ಲಿಯೂ ನವಿರಾದ ಅನುಭೂತಿಯನ್ನು ಚಿಮ್ಮಿಸುವಂಥ ಚೆಂದದ ಹಾಡುಗಳು, ಅಂಥ ಭಾವನೆಗಳೇ ಎರಕ ಹೊಯ್ದಂಥ ಪೋಸ್ಟರ್‌ಗಳ ಮೂಲಕ ಭಾರೀ ನಿರೀಕ್ಷೆಗೆ ಕಾರಣವಾಗಿದ್ದ ಈ ಸಿನಿಮಾ ಅದಕ್ಕೆ ತಕ್ಕುದಾದ ಕಂಟೆಂಟಿನೊಂದಿಗೆ ಪ್ರೇಕ್ಷಕರ ಮನ ಗೆದ್ದಿತ್ತು. ಗೆಲುವನ್ನೂ ದಾಖಲಿಸಿತ್ತು. ಅದಕ್ಕೆ ಕಾರಣವಾಗಿದ್ದದ್ದು ಇದರ ಕಥೆ ಮತ್ತು ನವೀನ ನಿರೂಪಣಾ ಶೈಲಿ.


ಹೊಸತನವೆಂದರೆ ಕಲಾತ್ಮಕ ಹಾದಿ ಮಾತ್ರ ಎಂಬಂಥ ವಾತಾವರಣ ಮರೆಯಾಗಿ ಕಮರ್ಶಿಯಲ್ ಹಾದಿಯ ಇಕ್ಕೆಲಗಳಲ್ಲಿಯೂ ಹೊಸತನದ ಹೂ ಬಿರಿಯಲಾರಂಭಿಸಿ ವರ್ಷಗಳೇ ಕಳೆದಿವೆ. ಆ ಸಾಲಿನಲ್ಲಿ ನಿಸ್ಸಂದೇಹವಾಗಿ ದಾಖಲಾಗುವ ಚಿತ್ರ ಮುಂದಿನ ನಿಲ್ದಾಣ. ಈಚಿನ ಯುವ ಸಮುದಾಯದ ಕಥೆಯನ್ನು ಕಾಪೋರೇಟ್ ಜಗತ್ತಿನ ಹಿನ್ನೆಲೆಯಲ್ಲಿ ಹೇಳುತ್ತಾ, ಅದು ಪ್ರತಿಯೊಬ್ಬರನ್ನೂ ಕನೆಕ್ಟ್ ಆಗುವಂತೆ ರೂಪಿಸಿರೋದೇ ಮುಂದಿನ ನಿಲ್ದಾಣದ ಪ್ಲಸ್ ಪಾಯಿಂಟು. ಸಾದಾಸೀದವಾಗಿ ಆರಂಭವಾಗೋ ಕಥೆ ಗಹನವಾದ ಕೊಂಬೆ ಕೋವೆಗಳೊಂದಿಗೆ ಪ್ರತೀ ನೋಡುಗರ ಮನಸಲ್ಲಿಯೂ ಹೊಸಾ ಅನುಭೂತಿಯ ಮೊಗ್ಗು ಬಿರಿಯುವಂತೆ, ಪ್ರತೀ ಫ್ರೇಮುಗಳಲ್ಲಿಯೂ ಭಾವತೀವ್ರತೆಯ ಗಂಧ ಪಸರಿಸುವಂತೆ ಈ ಸಿನಿಮಾವನ್ನು ಕಟ್ಟಿ ಕೊಡಲಾಗಿದೆ.


ಕೊರೋನಾ ಭೀತಿಯ ಈ ಕಾಲದಲ್ಲಿ ಮುಂದಿನ ನಿಲ್ದಾಣ ಪ್ರತಿಯೊಬ್ಬರೊಳಗೂ ಬೇರೆಯದ್ದೇ ಭಾವಲೋಕವೊಂದನ್ನು ಪ್ರತಿಷ್ಠಾಪಿಸುವಷ್ಟು ಶಕ್ತವಾಗಿದೆ. ಈ ಕಾರಣದಿಂದಲೇ ಅಮೇಜಾನ್ ಪ್ರೈಮ್‌ನಲ್ಲಿ ಮುಂದಿನ ನಿಲ್ದಾಣದಲ್ಲಿ ಬಂದು ತಂಗುತ್ತಿರುವವರ ಸಂಖ್ಯೆ ಕ್ಷಣಕ್ಷಣವೂ ಏರುಗತಿ ಕಾಣುತ್ತಿದೆ. ಪ್ರವೀಣ್ ತೇಜ್, ರಾಧಿಕಾ ನಾರಾಯಣ್, ಅನನ್ಯಾ ಕಶ್ಯಪ್ ಮುಂತಾದವರ ಪಾತ್ರಗಳು ಮಾತ್ರವಲ್ಲದೇ ಪ್ರತೀ ದೃಷ್ಯಗಳನ್ನೂ ಒಳಗಿಳಿಸಿಕೊಂಡು, ಕಾಡಿಸಿಕೊಳ್ಳುತ್ತಾ ಪ್ರೇಕ್ಷಕರೆಲ್ಲ ಕೊರೋನಾ ಕಾಲದಲ್ಲಿಯೂ ಮುದಗೊಳ್ಳುತ್ತಿದ್ದಾರೆ. ವರ್ಷದ ಹಿಂದೆ ಬಿಡುಗಡೆಯಾಗಿ ಗೆದ್ದಿದ್ದ ಈ ಚಿತ್ರವೀಗ ಅಮೇಜಾನ್ ಪ್ರೈಮ್‌ನಲ್ಲಿ ಮತ್ತೊಂದು ಮಜಲಿನ ಗೆಲುವು ದಾಖಲಿಸುವ ಸನ್ನಾಹದಲ್ಲಿದೆ.


ಇದು ಬದುಕಿಗೆ ಹತ್ತಿರವಾದ ಸಿನಿಮಾ. ಜೀವನವನ್ನು ಪಯಣಕ್ಕೆ ಹೋಲಿಸಲಾಗುತ್ತದೆ. ಅದರ ಉದ್ದಕ್ಕೂ ಅನೇಕಾನೇಕ ಭಾವಗಳ ನಿಲ್ದಾಣಗಳಿರುತ್ತವೆ. ಅಲ್ಲಿ ತುಸುವೇ ತಂಗಿ ನಿರಾಳವಾಗಬಹುದು, ನಿಡುಸುಯ್ಯಲೂ ಬಹುದು. ಹಾಗೆ ತಂಗಿದ್ದಾಗಲೇ ಅನೇಕ ಅಚಾನಕ್ ಘಟನಾವಳಿಗಳು ಪ್ರತ್ಯಕ್ಷವಾಗುತ್ತವೆ. ಗುರುತೇ ಇಲ್ಲದ ಬಂಧಗಳು ತಾನೇತಾನಾಗಿ ಹಬ್ಬಿಕೊಳ್ಳುತ್ತವೆ. ಬರೀ ಅಷ್ಟು ಮಾತ್ರವಲ್ಲ; ಆ ಹಾದಿಯಲ್ಲಿ ಸಿಗಬಹುದಾದ ಪ್ರೀತಿ, ನಿರಾಕರಣ, ಖುಷಿ, ಸಂಕಟಗಳೆಲ್ಲವೂ ಒಂದೊಂದು ನಿಲ್ದಾಣಗಳಿವೆ. ಈ ಸಿನಿಮಾದಲ್ಲಿಯೂ ಅಂಥಾ ನಿಲ್ದಾಣಗಳಿವೆ. ಅದು ನಮ್ಮನ್ನು ನಾವೇ ನೇವರಿಸಿಕೊಂಡು ನೋಡುವಷ್ಟು ಪರಿಣಾಮಕಾರಿಯಾಗಿವೆ. ಮುಂದಿನ ನಿಲ್ದಾಣದಲ್ಲೊಮ್ಮೆ ಅಮೇಜಾನ್ ಪ್ರೈಮ್ ಮೂಲಕ ತಂಗಿ ನೋಡಿ… ಗುರುತಿರದ ಭಾವಗಳನ್ನೆಲ್ಲ ಒಮ್ಮೆಗೇ ಆವಾಹಿಸಿಕೊಳ್ಳುವ ಸದಾವಕಾಶವನ್ನು ಖಂಡಿತಾ ಕಳೆದುಕೊಳ್ಳಬೇಡಿ…

[adning id="4492"]

LEAVE A REPLY

Please enter your comment!
Please enter your name here