ಹಿತ್ತಲಿಂದ ಯುದ್ಧ ಘೋಷಣೆ ಮಾಡೋ ಕುನ್ನಿಗಳಿಗೆ ಹಚಾ ಅನ್ನಿ!

[adning id="4492"]

ಮಾಡಿದ ಕರ್ಮಗಳೆಲ್ಲ ಆಯಾ ಕಾಲದಲ್ಲಿ ಅವರವರಿಗೇ ಸುತ್ತಿಕೊಳ್ಳುತ್ತೆ… ಕರ್ಮ ಅನ್ನೋದು ಯಾರನ್ನೂ ಬಿಡೋದಿಲ್ಲ… ನಾವೇನು ಕೊಡುತ್ತೀವೋ ಅದೇ ನಮಗೆ ವಾಪಾಸಾಗುತ್ತೆ… ಇಂಥಾ ಅನೇಕಾನೇಕ ನುಡಿಗಟ್ಟುಗಳೆ ನಾನಾ ಸಂದರ್ಭಗಳಲ್ಲಿ ನಮ್ಮ ನಡುವಿನ ಜನರ ಬಾಯಲ್ಲೇ ಮಾತಾಗುತ್ತಿರುತ್ತೆ. ಇಲ್ಲಿ ಎಲ್ಲವೂ ನಶ್ವರ ಅನ್ನಿಸಿದ ಘಳಿಗೆಯಲ್ಲಿ ಇಂಥಾ ಕರ್ಮ ಸಿದ್ಧಾಂತ ಆಪ್ತವಾಗಿ ಕಾಣಬಹುದು. ತೀರಾ ಮೋಸ ವಂಚನೆಗೀಡಾಗಿ ಹತಾಶರಾದ ಘಳಿಗೆಯಲ್ಲಿ ಒಂದಷ್ಟು ಸಮಾಧಾನವನ್ನೂ ಕೊಡಕಬಹುದು. ಆದರೆ ಅದೆಲ್ಲವೂ ಎದುರಾಗಿ ನಿಂತಾತ ಕನಿಷ್ಠ ಮನುಷ್ಯತ್ವ ಇಟ್ಟುಕೊಂಡವನಾಗಿದ್ದರೆ ಮಾತ್ರವೇ ಅನ್ವಯಿಸಬಹುದೇನೋ!


ಅದರ ಹೊರತಾಗಿ ಅಂಥಾದ್ದೆಲ್ಲವೂ ಹತಾಶೆಯಿಂದ ಕೂಡಿದ ಕೈಲಾಗದ ಪರಿಸ್ಥಿತಿಯಂತೆಯೇ ಭಾಸವಾಗುತ್ತೆ. ಇಂಥಾ ಹೊತ್ತಿನಲ್ಲಿ ತಿರುಗಿ ಬಿದ್ದು ಎದುರಾಳಿ ಕುನ್ನಿಗಳ ಪಕ್ಕೆ ಮುರಿಯುವಂಥಾ ಮರ್ಮಾಘಾತ ನೀಡೋದಿದೆಯಲ್ಲಾ? ಅದು ಇಂದಿನ ಸ್ಥಿತಿಗತಿಯಲ್ಲಿ ತೀರಾ ಅನಿವಾರ್ಯ. ಮಾಡಿಸಿಕೊಂಡ ಉಪಕಾರವನ್ನೂ ಉಂಡ ಬಾಳೆಲೆಗಂಟಿದ ಎಂಜಲಿನಂತೆ ಟ್ರೀಟ್ ಮಾಡುವವರು, ಯಾರದ್ದೋ ಬಡತನ, ಮತ್ತೇನೋ ಅನಿವಾರ್ಯತೆಗಳನ್ನ ಸ್ನೇಹದ ಮುಲಾಮು ಸವರಿ ನಯವಾಗಿ ಹಿಂಡಿಕೊಳ್ಳುವವರು, ಯಾರದ್ದೋ ಪ್ರತಿಭೆಗೆ ತಾನೇ ಅಪ್ಪನೆಂಬಂತೆ ಬಿಂಬಿಸಿಕೊಳ್ಳುವ ಹೇತ್ಲಾಂಡಿಗಳು… ಇಷ್ಟೆಲ್ಲದರ ವಾರಸೂದಾರಿಕೆ ವಹಿಸಿಕೊಂಡು ಹಿತ್ತಲ ಬಾಗಿಲಿಂದ ನಮ್ಮ ವಿರುದ್ಧವೇ ಯುದ್ಧ ಘೋಷಣೆ ಮಾಡಿ ಪಾಯಿಖಾನೆಯಲ್ಲಿ ಅವಿತುಕೊಳ್ಳುವ ಕುನ್ನಿಗಳು…


ಇಂಥಾ ಎಲಿಮೆಂಟುಗಳೆಲ್ಲ ಶಕುನಿಯ ಸಕಲ ರಸಗಳನ್ನೂ ಮಾಂಸ ಮಜ್ಜೆಯಾಗಿಸಿಕೊಂಡು ಹುಟ್ಟಿದ ಹೇಸಿಗೆ ಹುಳುಗಳು. ಅಂಥ ಆಸಾಮಿಗಳ ಕಪಾಳಕ್ಕೆ ಬಾರಿಸಿದರೂ ಕೊರೋನಾಕ್ಕಿಂತಲೂ ಭೀಕರವಾದ ಅಸಹ್ಯಗಳೇ ಕೈಗಂಟಿಕೊಂಡು ದೇಹಕ್ಕೆ ಹೊಗುವ ಅಪಾಯಗಳಿದ್ದಾವೆ. ಇಂಥಾ ಕುನ್ನಿಗಳು ಯಾರದ್ದೋ ಲಂಗೋಟಿಯ ಸಂದಿಯಿಂದ ಆಗಾಗ ಊಳಿಡುತ್ತವೆ. ಅದನ್ನೇ ಶಂಖನಾದವೆಂದು ಅಂಡು ಬಡಿದುಕೊಂಡು ಸಂಭ್ರಮಿಸುತ್ತವೆ. ಅದೇ ಲಂಗೋಟಿಯ ಚುಂಗು ಹಿಡಿದು ಜೋಕಾಲಿಯಾಡುತ್ತಾ ಎಳೇ ಕಪಿಯಂತೆ ಕಿಚಾಯಿಸುತ್ತವೆ… ಅದಕ್ಕೆಲ್ಲ ಪ್ರತಿಕ್ರಿಯಿಸುತ್ತಾ ಹೋದರೆ ನಾವೂ ಕೂಡಾ ಮತ್ಯಾವುದೂ ಪುಟಗೋಸಿಗಂಟಿದ ಅಸಹ್ಯವಾಗಿ ಉಳಿದು ಹೋಗಬಹುದಷ್ಟೆ.


ಯಾಕೆಂದರೆ, ಕೆಲ ಹಡಬೇ ಜಾಯಮಾನದವುಗಳಿಗೆ ಬೇರೆಯವರನ್ನು ಡಿಸ್ಟರ್ಬ್ ಮಾಡೋದರಲ್ಲಿಯೇ ವಿಕೃತ ಖುಷಿ ಸಿಗುತ್ತದೆ. ಸ್ವಂತಕ್ಕೆ ಏನನ್ನೂ ಸೃಷ್ಟಿಸಲಾಗದ ಹಲಾಲುಕೋರರು ಯಾರದ್ದೋ ಬಸುರಿಗೆ ಡ್ಯಾಡಿ ಅನ್ನಿಸಿಕೊಳ್ಳೋದರಲ್ಲಿ ನಿಷ್ಣಾತರು. ಮುಂದೊಂದು ಹಿಂದೊಂದು ಮಾಡುತ್ತಲೇ, ಬೀದಿ ಬದಿಯಲ್ಲಿ ಕೈಚಾಚಿ ನಿಂತ ಬೆಲೆವೆಣ್ಣುಗಳಿಗಿಂತಲೂ ಕಡೆಯಾಗಿ ಬದುಕೋ ಈ ಕೆಟಗರಿಯ ಜನರಿಂದ ತೃಣಮಾತ್ರದ ಒಳಿತನ್ನೂ ಬಯಸಲು ಸಾಧ್ಯವಿಲ್ಲ.


ಈ ಬದುಕು ಮಾಯಾ ಬಜಾರು ಅನ್ನೋದಾದರೆ ಅಲ್ಲಿ ಇಂಥಾ ಕೃತಜ್ಞರದ್ದೊಂದು ದಂಡೇ ಬಹುತೇಕರನ್ನು ಎದುರುಗೊಳ್ಳುತ್ತೆ. ಅದು ಹಸಿದು ನಿಂತಾದ ಅನ್ನವಿಕ್ಕಿ, ಆ ಋಣದ ಮರ್ಜಿಗೆ ಬದುಕನ್ನೇ ಕಿತ್ತುಕೊಳ್ಳುವ ಖೂಳರ ಸಂತೆ. ಅಲ್ಲಿ ಭಾವನೆಗಳನ್ನು ಎದೆಯ ಮಿಡಿತದ ಸಮೇತ ಹರಾಜಿಗಿಡಲಾಗುತ್ತೆ. ಅಲ್ಲಿ ಸ್ನೇಹ, ಸೆಂಟಿಮೆಂಟು, ಎಥಿಕ್ಸುಗಳೆಲ್ಲವೂ ಬಿಕರಿಯ ಸರಕುಗಳೇ. ಹೆಚ್ಚೂಕಡಿಮೆಯಾದರೆ ನಿಮ್ಮದೇ ಕೂಸನ್ನು ತುಬುಕ್ಕನೆ ಕಂಕುಳಲ್ಲಿ ಕೂರಿಸಿಕೊಂಡು ಇದು ನಂದೇ ಅಂತ ಹಲ್ಲು ಚಿಲಿಯಲೂ ಹಿಂದೆಮುಂದೆ ನೋಡದ ದುಷ್ಟರೇ ಆ ಸಂತೆಯ ತುಂಬಾ ತುಂಬಿಕೊಂಡಿರುತ್ತಾರೆ.


ಇಂಥಾ ಖೂಳರ ಸಂತೆಯ ಶನಿಸಂತಾನಿಗಳಿಂದ ನಿಮಗೂ ನಾನಾ ಥರದ ನೋವುಗಳಾಗಿರಬಹುದು. ಮೊದಲೇ ಹೇಳಿದಂತೆ ಅದು ಬೆನ್ನಿಗೆ ಬಾಕೂ ಇರಿದು ಗಾಯ ಒಣಗಲೂ ಬಿಡದಂತೆ ಮತ್ತೆ ಮತ್ತೆ ಚುಚ್ಚುವ ಸೈಕಿಕ್ ಸ್ವಭಾವದ ಲೋಕ. ಇಂಥ ಕುನ್ನಿಗಳು ಅದೇನೇ ಬೃಹನ್ನಾಟಕವಾಡಿದರೂ ಅದರತ್ತ ಲಕ್ಷ ಕೊಡಬೇಡಿ. ಯಾಕೆಂದರೆ, ಇಂಥ ಹುಚ್ಚು ನಾಯಿಗಳಿಗೆ ಕಾಲವೇ ಸಲ್ಲಬೇಕಾದ ಸಂಸ್ಕಾರಗಳನ್ನ ಮಾಡೇ ತೀರುತ್ತೆ. ಅದರಾಚೆಗೂ ಅಂಥಾ ಕುನ್ನಿಗಳು ಮತ್ತೆ ಮತ್ತೊಂದು ಹಿಕಮತ್ತಿನ ಲಂಗೋಟಿಯಾಚೆ ಮುಸುಡಿ ಹಾಕಿ ಕಿಚಾಯಿಸಿದರೆ ಸುಮ್ಮಗೆ ಹಚಾ ಅಂದು ಮುಂದೆ ನಡೆಯಿರಿ.


ಬದುಕು ತುಂಬಾ ಚಿಕ್ಕ ಕಾಲಾವಧಿ ಹೊಂದಿರುವಂಥಾದ್ದು. ಅದರಲ್ಲಿ ಇಂಥಾ ಕಸುಬಿಲ್ಲದವರಿಗಾಗಿ ಅರೆಕ್ಷಣ ಮೀಸಲಿಟ್ಟರೂ ನಷ್ಟವೇ. ಇಲ್ಲಿ ಯಾರ ಬದುಕನ್ನು ಯಾವನೂ ಕಿತ್ತುಕೊಳ್ಳಲಾಗೋದಿಲ್ಲ. ಯಾರ ಬೆವರಿಗೆ ಇನ್ಯಾವ ತೋಲಾಂಡಿಯೂ ಅಪ್ಪ ಆಗಲಾಗೋದಿಲ್ಲ. ಯಾರಾದರೂ ನಿಮ್ಮ ಶ್ರಮದ ಫಸಲು ತಿಂದು ನಿಮಗೇ ಬಾಕೂ ಇರಿಯಲು ಬಂದರೆ ಕಂಗಾಲಾಗಬೇಡಿ. ಪ್ರತೀ ವಿಚಾರದಲ್ಲಿಯೂ ಪ್ರತಿಕ್ರಿಯಿಸೋ ರಿಸ್ಕು ತೆಗೆದುಕೊಳ್ಳಬೇಡಿ. ಆದರೆ, ಮುಟ್ಟಿ ನೋಡುವಂಥಾ ಏಟೊಂದನ್ನು ಕೊಡದೇ ಇರಬೇಡಿ. ಅದು ಗೆಲುವಿನ ಮೂಲಕವೇ ಆಗಿದ್ದರೆ ಒಳ್ಳೆಯದು. ಆ ಹಾದಿಯಲ್ಲಿಯೇ ಸೈರಣೆ ಖಾಲಿಯಾಗುವಂಥಾದರೆ ಎದೆಗಿರಿದ ಗೋಸುಂಬೆಗಳ ನಡ ಮುರಿದರೂ ತಪ್ಪೇನಿಲ್ಲ. ಇದೆಲ್ಲ ನೇರಾನೇರ ನಿಂತು ಯುದ್ಧ ಮಾಡೋ ಗಂಡಸುತನ ಹೊಂದಿರುವವರಿಗೆ… ಇನ್ನು ಬೇರೆಯವರ ಲಂಗೋಟಿಯನ್ನೇ ಆವಾಸ ಸ್ಥಾನವಾಗಿಸಿಕೊಂಡು ಕದ್ದು ಕದ್ದೇ ಬದುಕುವ ಹಡಬೇ ಕ್ಯಾರೆಕ್ಟರುಗಳಿಗೆ ಹಚಾ ಅಂದರೂ ಸಮಯ ವ್ಯರ್ಥವಾದೀತಷ್ಟೆ!

[adning id="4492"]

LEAVE A REPLY

Please enter your comment!
Please enter your name here