ಭಾರತದಲ್ಲೀಗ ಸ್ಯಾನಿಟರಿ ಪ್ಯಾಡ್‌ಗೂ ಬರ!

[adning id="4492"]

ಹೆಣ್ಣು ಮಕ್ಕಳ ಗೋಳು ಕೇಳೋರಿಲ್ಲ!
ಒಂದೇ ಒಂದು ದಿನ ಭಾರತ ಬಂದಾಗುತ್ತದೆಂದರೆ ಅಲ್ಲೋಲಕಲ್ಲೋಲವೇ ಸೃಷ್ಟಿಯಾಗುತ್ತಿದ್ದ ದಿನಗಳಿದ್ದವು. ಆದರೆ ದೇಶಕ್ಕೆ ದೇಶವೇ ಸಂಪೂರ್ಣ ಬಂದ್ ಆಗಿ ಹತ್ತತ್ತಿರ ಎರಡು ತಿಂಗಳು ಸಮೀಪಿಸುತ್ತಿದೆ. ಕೊರೋನಾ ಎಂಬ ಮಾಹಾಮಾರಿಯಿಂದ ಪಾರಾಗಲು ಲಾಕ್‌ಡೌನ್ ಅನಿವಾರ್ಯವಿದ್ದಿರಬಹುದು. ಆದರೆ ಆಡಳಿತ ವ್ಯವಸ್ಥೆಗೆ ಅಷ್ಟೂ ದಿನಗಳ ಕಾಲದ ವ್ಯತ್ಯಯಗಳನ್ನು ಭರಿಸುವ ಶಕ್ತಿ ಇಲ್ಲದಿದ್ದರೆ ಜನರ ಬದುಕು ನರಕಸದೃಷವಾಗುತ್ತದೆ. ಅಂಥಾ ನರಕದರ್ಶನ ಭಾರತದ ಒಡಲೊಳಗೆ ನಾನಾ ಥರದಲ್ಲಾಗುತ್ತಿದೆ. ಅದರ ಭಾಗವಾಗಿ ಈಗ ದೇಶದ ಉದ್ದಗಲಕ್ಕೂ ಹೆಣ್ಣುಮಕ್ಕಳ ಮೂಕರೋಧನೆ ಕೇಳಿಸಲಾರಂಭಿಸಿದೆ. ಅದಕ್ಕೆ ಕಾರಣವಾಗಿರೋದು ಅನ್ನಾಹಾರದಷ್ಟೇ ಅಗತ್ಯವಾಗಿರೋ ಸ್ಯಾನಿಟರಿ ಪ್ಯಾಡ್‌ಗಳಿಗೆ ಬಂದಿರೋ ಭೀಕರ ಬರ!


ದೇಶಕ್ಕೆ ದೇಶವನ್ನೇ ಗೃಹ ಬಂಧನದಲ್ಲಿರಿಸುವ ಸಂದರ್ಭದಲ್ಲಿ ಆಳೋ ಮಂದಿ ಅಷ್ಟದಿಕ್ಕುಗಲ್ಲಿಯೂ ಪರಾಮರ್ಶಿಸಿ, ಆಲೋಚಿಸಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ಭಾರತದಂಥಾ ಅಗಾಧ ಜನಸಂಖ್ಯೆ ಇರುವ ದೇಶಗಳಲ್ಲಿಯಂತೂ ಅದೊಂದು ಮಹಾ ಸವಾಲು. ಆದರೆ ನಿಜವಾದ ಜನಪರತೆ, ಕಾಳಜಿ ಇದ್ದರೆ ಅನಾಹುತಗಳ ಪ್ರಮಾಣ ಕೊಂಚ ಕಡಿಮೆಯಾಗಬಹುದು. ಆದರೀಗ ಆಡಳಿತ ವಲಯದಲ್ಲಿ ತಮ್ಮ ಬೆನ್ನು ತಾವೇ ಚಪ್ಪರಿಸಿಕೊಳ್ಳುವ, ಹಿಂಬಾಲಕ ಪಡೆಯಿಂದ ಭಜನೆ ಮಾಡಿಕೊಳ್ಳುವ ಬಂಡಾಟ ತಾರಕಕ್ಕೇರಿದೆ. ಈ ಕಾರಣದಿಂದಲೇ ಈ ನೆಲದ ಅಸಹಾಯಕರ ಸಂಕಟಗಳೂ ಉಲ್ಬಣಿಸಿವೆ.


ಲಾಕ್‌ಡೌನ್‌ನಂಥಾ ಸಂದರ್ಭಗಳಲ್ಲಿ ಜನರಿಗೆ ಅನ್ನಾಹಾರಕ್ಕೆ ಕೊರತೆಯಾಗದಂತೆ ನೋಡಿಕೊಳ್ಳೋದರತ್ತಲೇ ಪ್ರಧಾನವಾಗಿ ಗಮನ ಹರಿಸಲಾಗುತ್ತದೆ. ಅದರಷ್ಟೇ ಅನಿವಾರ್ಯವಾದ ಇನ್ನೊಂದಷ್ಟು ಅಂಶಗಳ ಬಗ್ಗೆ ಅರಿವಾಗೋದು ಪರಿಸ್ಥಿತಿ ಕೈ ಮೀರಿದಾಗಲೇ. ಈಗ ಭಾರತದಲ್ಲಿ ಆಗಿರೋದೂ ಅದೇ. ಲಾಕ್‌ಡೌನಿಂದಾಗಿ ಫ್ಯಾಕ್ಟರಿಗಳೆಲ್ಲವೂ ಸಾರಾಸಗಟಾಗಿ ಬಂದ್ ಆಗಿದ್ದವು. ಇದೀಗ ಆರಂಭವಾಗಿದ್ದರೂ ಅದೆಷ್ಟೋ ಫ್ಯಾಕ್ಟರಿಗಳಿಗೆ ಮುಕ್ತಿ ಸಿಕ್ಕಿಲ್ಲ. ಆದ್ದರಿಂದಲೇ ಅಗತ್ಯ ವಸ್ತುಗಳ ಉತ್ಪಾದನೆಯೇ ನಿಂತು ಹೋಗಿದೆ.


ಈ ರೀತಿ ಉತ್ಪಾದನೆ ನಿಂತಿರೋದರಿಂದ ಸ್ಯಾನಿಟರಿ ಪ್ಯಾಡ್‌ಗಳು ಕೂಡಾ ಅಗತ್ಯ ಪ್ರಮಾಣದಷ್ಟಿಲ್ಲ. ಇದರಿಂದಾಗಿ ಅದೆಷ್ಟೋ ಕೋಟಿ ಬಡ ಶಾಲಾ ಕಾಲೇಜು ವಿದ್ಯಾರ್ಥಿನಿಯರು, ಮಹಿಳೆಯರು ಕಂಗೆಡುವಂತಾಗಿದೆ. ಒಂದಷ್ಟು ಸ್ಥಿತಿವಂತರು ಇದೀಗ ಸ್ಟಾಕ್ ಉಳಿಸಿಕೊಂಡು ದುಪ್ಪಟ್ಟಾಗಿರೋ ಸ್ಯಾನಿಟರಿ ಪ್ಯಾಡ್‌ಗಳನ್ನು ಖರೀದಿಸಬಹುದು. ಆದರೆ ಲಾಕ್‌ಡೌನ್‌ನಿಂದ ಒಂದು ಹೊತ್ತಿನ ಊಟಕ್ಕೇ ತತ್ವಾರವಿರೋ ಮನೆಗಳ ಹೆಣ್ಮಕ್ಕಳ ಪಾಡೇನಾಗಬೇಕು? ಈವತ್ತಿಗೆ ಬೆಂಗಳೂರು, ದೆಹಲಿ, ಮುಂಬೈ ಸೇರಿದಂತೆ ನಾನಾ ಮಹಾನಗರಗಳ ಸ್ಲಂ ಏರಿಯಾಗಳಲ್ಲಿನ ಹೆಣ್ಣುಮಕ್ಕಳು ಸ್ಯಾನಿಟರಿ ಪ್ಯಾಡ್ ಕೊರತೆಯಿಂದ ಕಂಗಾಲಾಗಿದ್ದಾರೆ.


ಈ ಸಮಸ್ಯೆಯೀಗ ದೇಶಾದ್ಯಂತ ಹಬ್ಬಿಕೊಂಡಿದೆ ಅಂತ ಒಂದಷ್ಟು ವರದಿಗಳು ಹೇಳುತ್ತಿವೆ. ಲಾಕ್‌ಡೌನ್‌ನಿಂದಾಗಿ ಎಲ್ಲವೂ ಸ್ಥಗಿತಗೊಂಡಿರಬಹುದು. ಆದರೆ ಮುಟ್ಟಿನಂಥಾ ದೈಹಿಕ ಪ್ರಕ್ರಿಯೆಗಳೇನೂ ನಿಲ್ಲೋದಿಲ್ಲ. ಇಂಥಾ ಸಂದರ್ಭದಲ್ಲಿ ಹೆಣ್ಣುಮಕ್ಕಳನ್ನು ಬಚಾವು ಮಾಡುವ ಸ್ಯಾನಿಟರ್ ನ್ಯಾಪ್ಕಿನ್‌ಗಳಿಲ್ಲದೆ ಅದೆಷ್ಟೋ ಜೀವಗಳು ಕಂಗೆಟ್ಟಿವೆ. ಸಹನೀಯ ಸಂಗತಿಯೆಂದರೆ, ಒಂದಷ್ಟು ಸ್ವಯಂ ಸೇವಕರು, ಪೊಲೀಸ್ ಅಧಿಕಾರಿಗಳೇ ಆಯಾ ಪ್ರದೇಶಗಳಲ್ಲಿ ಸ್ಯಾನಿಟರಿ ಪ್ಯಾಡ್‌ಗಳನ್ನು ವಿತರಿಸುತ್ತಿದ್ದಾರೆ. ಆದರದು ಸಾಲುತ್ತಿಲ್ಲ.


ಲಾಗಾಯ್ತಿನಿಂದಲೂ ಪೀರಿಯಡ್ ಸಮಯದಲ್ಲಿ ಹೆಂಗಳೆಯರು ಸ್ರಾವದಿಂದ ಪಾರಾಗಲು ಒಂದಷ್ಟು ಮಾರ್ಗೋಪಾಯಗಳನ್ನು ಕಂಡುಕೊಂಡಿದ್ದರು. ಆದರೆ ಶುಚಿತ್ವದ ಕೊರತೆ, ಪ್ರಾಕೃತಿಕ ಪಲ್ಲಟಗಳಿಂದಾಗಿ ಸೋಂಕು ತಗುಲುವ ಸಾಧ್ಯತೆಗಳೇ ಹೆಚ್ಚಾಗಿದ್ದವು. ಈ ಹಿಂದೆ ಅದೆಷ್ಟೋ ಮಹಿಳೆಯರು, ಹೆಣ್ಣುಮಕ್ಕಳು ಇಂಥಶಾ ಸಮಸ್ಯೆಗಳನ್ನು ಹೇಳಿಕೊಳ್ಳಲು ಮಜುಗರವಾಗಿ ಸೋಂಕು ಉಲ್ಬಣಿಸಿ ಜೀವ ಬಿಟ್ಟ ದುರಂತ ಕಥೆಗಳಿದ್ದಾವೆ. ಹಾಗೆ ಅನ್ಯಾಯವಾಗಿ ನೋವನುಭವಿಸುತ್ತಾ ಜೀವ ಬಿಡುತ್ತಿದ್ದ ಹೆಣ್ಣು ಕುಲವನ್ನೇ ಸ್ಯಾನಿಟರಿ ಪ್ಯಾಡ್ ಎಂಬ ಆವಿಷ್ಕಾರ ಬಚಾವು ಮಾಡಿದೆ.


ಇದೀಗ ಅಂಥಾ ಪ್ಯಾಡ್‌ಗಳ ಕೊರತೆ ಕಾಣಿಸಿಕೊಂಡಿರೋದರಿಂದ ಹೆಣ್ಣುಮಕ್ಕಳು ಅನಿವಾರ್ಯವಾಗಿ ಪಾರಂಪರಿಕ ವಿಧಾನಗಳ ಮೊರೆ ಹೋಗುವಂತಾಗಿದೆ. ಹೇಳಿ ಕೇಳಿ ಸೈಕ್ಲೋನು ಶುರುವಾಗಿದೆ. ಇಷ್ಟರಲ್ಲೇ ಮಳೆಗಾಲವೂ ಆರಂಭವಾಗುತ್ತದೆ. ಇಂಥಾ ಹೊತ್ತಿನಲ್ಲಿ ಸ್ಯಾನಿಟರಿ ಪ್ಯಾಡ್ ಇಲ್ಲದೆ ಸೋಂಕು ಹರಡೋ ಸಾಧ್ಯತೆಗಳೂ ಹೆಚ್ಚಾಗುತ್ತವೆ. ಒಂದು ವೇಳೆ ಸಂಬಂಧಿಸಿದವರು ಗಮನ ಹರಿಸಿ ಸ್ಯಾನಿಟರಿ ಪ್ಯಾಡ್‌ಗಳ ಉತ್ಪಾದನೆಗೆ ಒತ್ತು ಕೊಡದಿದ್ದರೆ ಇಂಥಾ ಸೋಂಕಿನಿಂದಲೇ ಸಾವು ನೋವು ಸಂಭವಿಸಿದರೂ ಅಚ್ಚರಿಯೇನಿಲ್ಲ.

shortagesh
ಇದೀಗ ಒಂದಷ್ಟು ಸ್ವಯಂ ಸೇವಾ ಸಂಸ್ಥೆಗಳು ಬಟ್ಟೆಯಿಂದಲೇ ಸ್ಯಾನಿಟರಿ ಪ್ಯಾಡ್‌ಗಳನ್ನು ತಯಾರಿಸಿ ಹಂಚುತ್ತಿದ್ದಾರೆ. ಇದು ಸ್ಯಾನಿಟರಿ ಪ್ಯಾಡಿಗೆ ಪರ್ಯಾಯವಾದ ಸುರಕ್ಷಿತ ಕ್ರಮ ಎಂದೂ ಹೇಳಲಾಗುತ್ತಿದೆ. ಹೀಗೆ ಪರ್ಯಾಯ ಪರಿಕರ ತಯಾರಿಸಿ ಒಂದಷ್ಟು ಕಡೆಗಳಲ್ಲಿ ಹಂಚಲಾಗುತ್ತಿದೆ. ಅದು ಅಭಿನಂದನಾರ್ಹವೇ. ಆದರೆ ಅದೇನೂ ಈ ಸಮಸ್ಯೆಗೆ ಶಾಶ್ವತ ಪರಿಹಾರವಾಗಲಾರದು. ಆದರಷ್ಟು ಬೇಗನೆ ಸ್ಯಾನಿಟರ್ ಪ್ಯಾಡ್‌ಗಳ ಉತ್ಪಾದನೆ ಆರಂಭಿಸಿದರೆ ಹೆಣ್ಣುಮಕ್ಕಳನ್ನು ರೌರವ ನರಕದಿಂದ ಪಾರುಗಾಣಿಸಿದಂತಾಗುತ್ತದೆ.

[adning id="4492"]

LEAVE A REPLY

Please enter your comment!
Please enter your name here