ಕುಡುಕರ ಮುಖದಲ್ಲೀಗ ‘ಸ್ವಿಗ್ಗಿ ಸಂಭ್ರಮ!

[adning id="4492"]

ಲಾಕ್‌ಡೌನ್ ಕಾಲಾವಧಿಯಲ್ಲಿ ದೇಶಾದ್ಯಂತ ಥರ ಥರದ ದುರಂತಗಳು ನಡೆದಿವೆ. ಸಾಕಷ್ಟು ಮಂದಿ ಒಪ್ಪೊತ್ತಿನ ಊಟಕ್ಕೂ ತತ್ವಾರವಾಗಿ ಕಂಗಾಲಾಗಿದ್ದಾರೆ. ಹಸಿವಿಂದ ಸತ್ತವರ ಸಂಖ್ಯೆ ಕೊರೋನಾ ಅಬ್ಬರದ ನಡುವೆ ಕಳೆದೇ ಹೋಗಿದೆ. ಇಂಥಾ ಘಳಿಗೆಯಲ್ಲಿ ಇಡೀ ಜಗತ್ತಿಗೇ ಕೇಳುವಂತೆ ಮುಗಿಲು ಮುಟ್ಟಿದ್ದದ್ದು ಗಂಟಲ ಪಸೆ ಆರಿಸಿಕೊಂಡ ಕುಡುಕರ ಆಕ್ರಂದನ. ಒಂದೇ ಒಂದು ಹೊತ್ತಿನ ಎಣ್ಣೆ ಮಿಸ್ ಆದರೂ ಜಗತ್ತೇ ಮುಳುಗಿ ಹೋದಂತೆ ಮರುಗುವ ಕುಡುಕರು ತಿಂಗಳುಗಟ್ಟಲೆ ಸರಕು ಸಿಗದಿದ್ದ ಹೇಗೆ ತಾನೇ ತಡೆದುಕೊಂಡಾರು? ಹಾಗೆ ಎಣ್ಣೆಪ್ರಿಯರ ಲಿವರಿನಿಂದ ಉದ್ಭವಿಸಿದ್ದ ಸಂಕಟಕ್ಕೆ ಸಿಎಂ ಯಡಿಯೂರಪ್ಪನೇ ಮರುಗಿ ಬಾರ್ ಓಪನ್ ಮಾಡಿದ್ದು, ಎಣ್ಣೆ ಏಟಿನ ರುದ್ರನರ್ತನ ಸಂಭವಿಸಿದ್ದೆಲ್ಲವೂ ಕೊರೋನಾ ಕಾಲದ ಕಿಕ್ಕೇರಿಸುವಂಥಾ ಸಂಗತಿಗಳಾಗಿ ಇತಿಹಾಸದ ಪುಟ  ಸೇರಿಕೊಂಡಿವೆ.


ಅಬಕಾರಿ ಇಲಾಖೆ ಥಂಡಾ ಹೊಡೆದ ಪರಿಣಾಮವಾಗಿ ಸರ್ಕಾರದ ಬೊಕ್ಕಸ ಖಾಲಿ ಹೊಡೆದದ್ದರಿಂದಲೇ ಯಡ್ಡಿ ಬಾರ್ ಓಪನ್ ಮಾಡೋ ಮನಸು ಮಾಡಿದ್ದರು. ಆದರೆ ಈ ಕ್ರಮದ ವಿರುದ್ಧ ರಾಜ್ಯಾದ್ಯಂತ ಜನಾಕ್ರೋಶ ಮೂಡಿಕೊಂಡಿತ್ತು. ಪರಮಾತ್ಮ ಒಳಗಿಳಿಯುತ್ತಲೇ ಸಾಮಾಜಿಕ ಅಂತರವನ್ನೆಲ್ಲ ಗಾಳಿಗೆ ತೂರಿ ತೂರಾಡಿದ್ದರಲ್ಲಾ ಕುಡುಕರು? ಅದನ್ನು ಕಂಡ ಮೇಲಂತೂ ಮಾಧ್ಯಮಗಳೂ ಸರ್ಕಾರದ ವಿರುದ್ಧ ಒಂದಷ್ಟು ಸುದ್ದಿ ಬಿತ್ತರಿಸಿದ್ದವು. ಈ ಹಂತದಲ್ಲಿಯೇ ಈ ಹಿಂದೆ ಆಹಾರ ಪದಾರ್ಥಗಳನ್ನು ಮನೆಮನೆಗೆ ತಲುಪಿಸುತ್ತಿದ್ದಂತೆಯೇ ಎಣ್ಣೆಯನ್ನೂ ತಲುಪಿಸಿದ್ದರೆ ಇಂಥಾ ಅನಾಹುತಗಳಾಗುತ್ತಿರಲಿಲ್ಲ ಎಂಬಂಥಾ ವಿಶ್ಲೇಷಣೆಗಳೂ ಎಲ್ಲೆಡೆ ಕೇಳಿ ಬಂದಿದ್ದವು.


ಅದನ್ನು ಜನಪ್ರಿಯ ಕಂಪೆನಿ ಸ್ವಿಗ್ಗಿ ಸರಿಯಾಗಿಯೇ ಸ್ವೀಕರಿಸಿದೆ. ದೇಶಾದ್ಯಂತ ಆಹಾರದ ಹೋಂ ಡೆಲಿವರಿಯಲ್ಲಿ ಮುಂಚೂಣಿಯಲ್ಲಿರೋ ಸ್ವಿಗ್ಗಿಯೀಗ ಮದಿರೆಯನ್ನೂ ಮನೆ ಬಾಗಿಲಿಗೆ ತಲುಪಿಸುವ ಹೊಸಾ ಯೋಜನೆಯೊಂದನ್ನು ಆರಂಭಿಸಿದೆ. ಇದು ಜಾರ್ಖಂಡ್‌ನ ರಾಂಚಿಯಲ್ಲಿ ಆರಂಭಿಸಿದೆ. ಲಾಕ್‌ಡೌನ್‌ನಿಂದ ಎಣ್ಣೆಯಿಲ್ಲದೆ ಕಂಗಾಲಾಗಿದ್ದ ಅಲ್ಲಿನ ಕುಡುಕರ ಮುಖದಲ್ಲೀಗ ಸ್ವಿಗ್ಗಿ ಕರುಣಿಸಿದ ಸುಗ್ಗಿ ಸಂಭ್ರಮ ಕುಣಿದಾಡಲಾರಂಭಿಸಿದೆ. ಕೊರೋನಾ ವ್ಯಾಪಿಸುತ್ತಿರುವ ಈ ದಿನಗಳಲ್ಲಿ ಸ್ವಿಗ್ಗಿ ಆರಂಭಿಸಿರೋ ಈ ಹೊಸಾ ಸೇವೆಗೆ ಮೆಚ್ಚುಗೆಗಳೂ ಕೇಳಿ ಬರುತ್ತಿವೆ. ಇದರಿಂದ ಉತ್ತೇಜಿತವಾಗಿರೋ ಈ ಕಂಪೆನಿಯೀಗ ಸರ್ಕಾರಗಳು ಅವಕಾಶ ಕೊಟ್ಟರೆ ಬೇರೆ ರಾಜ್ಯಗಳಿಗೂ ಈ ಎಣ್ಣೆ ಸೇವೆಯನ್ನು ವಿಸ್ತರಿಸಲು ಉತ್ಸುಕವಾಗಿದೆ.


ಈ ಬಗ್ಗೆ ಸ್ವಿಗ್ಗಿ ಕಂಪೆನಿಯ ಮುಖ್ಯಸ್ಥ ಅನುಜ್ ರಾತಿ ಒಂದಷ್ಟು ವಿವರಗಳನ್ನೂ ಹಂಚಿಕೊಂಡಿದ್ದಾರೆ. ಅವರ ಪ್ರಕಾರ ಎಣ್ಣೆಯನ್ನು ಮನೆ ಮನೆಗೆ ತಲುಪಿಸೋದೇ ಈ ದಿನಮಾನದಲ್ಲಿ ಅತ್ಯಂತ ಸುರಕ್ಷಿತವಾದ ಕ್ರಮ. ಬಾರ್ ಓಪನ್ ಮಾಡಿದರೆ ಖಂಡಿತಾ ಅಲ್ಲಿ ಕೊರೋನಾ ಸಂಬಂಧಿತ ಎಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲು ಸಾಧ್ಯವಾಗೋದಿಲ್ಲ. ಪ್ರತೀ ದಿನವೂ ಬಾರ್‌ಗಳ ಮುಂದೆ ಪೊಲೀಸರನ್ನು ಬೀಟ್ ಹೊಡೆಸಲಾಗೋದೂ ಇಲ್ಲ. ಕಂಟ್ರೋಲು ತಪ್ಪಿ ಹಾದಿ ಬೀದಿ, ಗಲ್ಲಿ ಗಟಾರಗಳನ್ನು ಸರ್ವೆ ಮಾಡುವಂಥಾ ಕುಡುಕರು ಹೆಚ್ಚಿರುವ ನಮ್ಮಲ್ಲಿ ಮುಂದೊಂದು ದಿನ ಬಾರುಗಳೇ ಕೊರೋನಾ ಕೇಂದ್ರಗಳಾಗಿ ಮಾರ್ಪಟ್ಟರೂ ಅಚ್ಚರಿಯೇನಿಲ್ಲ.


ಹೀಗೆ ಹೋಂ ಡೆಲಿವರಿ ಕೊಡೋದರಿಂದ ಕೊರೋನಾ ಹರಡೋದನ್ನು ತಡೆಗಟ್ಟಿದಂತಾಗುತ್ತದೆ. ಮೈಲಿಗಟ್ಟಲೆ ಕ್ಯೂ ನಿಂತು ಪಡಿಪಾಟಲು ಪಡೋದೂ ತಪ್ಪುತ್ತದೆ. ಇಂಥಾ ಸ್ಥಳಗಳಲ್ಲಿ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವ ಅನಿವಾರ್ಯತೆಯೂ ಸರ್ಕಾರಗಳಿಗೆ ಇಲ್ಲವಾಗುತ್ತದೆ ಎಂಬುದು ಅನುಜ್ ರಾಟಿ ಅವರ ಅಭಿಪ್ರಾಯ. ಇದೊಂದು ರೀತಿಯಲ್ಲಿ ಒಳಿತೂ ಹೌದು. ನಮ್ಮ ರಾಜ್ಯದಲ್ಲಿ ಬಾರ್ ಓಪನ್ ಮಾಡಿದ ಮೊದಲ ದಿನ ನಡೆದ ಬಯಲಾಟ ಕಂಡವರೆಲ್ಲ ಇದನ್ನು ಅನುಮೋದಿಸುತ್ತಾರೆ. ಬಹುಶಃ ಮುಖ್ಯಮಂತ್ರಿ ಯಡಿಯೂರಪ್ಪ ಮನಸು ಮಾಡಿದರೆ ಕರ್ನಾಟಕದ ಕುಡುಕರ ಮುಖದಲ್ಲಿಯೂ ಸ್ವಿಗ್ಗಿ ಸಂಭ್ರಮ ತೊನೆದಾಡೋದರಲ್ಲಿ ಯಾವ ಸಂದೇಹವೂ ಇಲ್ಲ!

[adning id="4492"]

LEAVE A REPLY

Please enter your comment!
Please enter your name here