ಮುಂಬೈ: ಲಾಕ್‌ಡೌನ್ ನಡುವೆಯೂ ಬಿಂದಾಸ್ ಸಮೋಸಾ ಪಾರ್ಟಿ!

[adning id="4492"]

ಇಡೀ ದೇಶದ ತುಂಬ ಪೈಪೋಟೊಗೆ ಬಿದ್ದಂತೆ ಬಹುತೇಕ ರಾಜ್ಯಗಳಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಹೆಚ್ಚೂಕಮ್ಮಿ ಎರಡು ತಿಂಗಳ ಅವಧಿಯ ಲಾಕ್‌ಡೌನ್ ಪ್ರಯೋಗವೂ ಕೂಡಾ ವ್ಯರ್ಥ ಎಂಬಂಥಾ ಸ್ಥಿತಿಯೇ ಎಲ್ಲೆಡೆಯೂ ಮೇಳೈಸಿದೆ. ಮುಂದಿನ ದಿನಗಳಲ್ಲಿ ಈ ವೈರಸ್ ಕಮ್ಯುನಿಟಿ ಸ್ಪ್ರೆಡ್ ಆಗಬಹುದಾದ ಆತಂಕವಂತೂ ಇದ್ದೇ ಇದೆ. ದುರಂತವೆಂದರೆ, ನಮ್ಮ ಜನ ಪ್ರತಿಯೊಂದಕ್ಕೂ ಸರ್ಕಾರಗಳನ್ನು ಹಣಿಯುತ್ತಾರೇ ಹೊರತು ತಮ್ಮ ಮೇಲಿರೋ ಸಾನಮಾಜಿಕ ಜವಾಬ್ದಾರಿಯನ್ನು ಮರೆತೇ ಬಿಟ್ಟಂತಿದ್ದಾರೆ. ಇದಕ್ಕೆ ಉದಾಹರಣೆಯಂಥಾ ಘಟನೆಗಳು ದಂಡಿ ದಂಡಿ ಸಿಕ್ಕಾವು. ಮುಂಬೈನಲ್ಲಿ ನಡೆದೊಂದು ವಿದ್ಯಮಾನ ಅದಕ್ಕೆ ಹೊಸಾ ಸೇರ್ಪಡೆಯಷ್ಟೆ!


ಮುಂಬೈ ಭಾರತದ ಮಟ್ಟಿಗೆ ಕೊರೋನಾ ವೈರಸ್‌ನ ಹಾಟ್‌ಸ್ಪಾಟ್‌ಗಳಲ್ಲಿ ಪ್ರಮುಖ ನಗರ. ದಿನೇ ದಿನೆ ಅಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಿಕೊಳ್ಳುತ್ತಲೇ ಇದೆ. ಅಲ್ಲಿಂದ ಬಂದವರಿಂದಲೇ ಕರ್ನಾಟಕದ ಬಹುತೇಕ ಜಿಲ್ಲೆಗಳು ರೆಡ್‌ಝೋನಿಗೆ ಬಂದಿವೆ. ಹೀಗೆ ಇಡೀ ದೇಶಕ್ಕೇ ಕೊರೋನಾ ಹಂಚುತ್ತಿರುವ ಬಾಂಬೆಯಲ್ಲಿ ಒಂದು ಮಟ್ಟಕ್ಕೆ ಹೆಚ್ಚೇ ಜನ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಆದರೆ ಇಲ್ಲಿನ ಹೌಸಿಂಗ್ ಸೊಸೈಟಿಯೊಂದರ ಕಮಂಗಿಗಳು ಲಾಕ್‌ಡೌನ್ ಸಡಿಲಗೊಂಡ ಖುಷಿಯನ್ನು ಸಮೋಸಾ ಪಾರ್ಟಿಯ ಮೂಲಕ ಆಚರಿಸಿದ್ದಾರೆ. ಇದರ ವಿರುದ್ಧ ದೇಶಾದ್ಯಂತ ಟೀಕೆಗಳು ಕೇಳಿ ಬರಲಾರಂಭಿಸಿವೆ.


ಇಂಥಾದ್ದೊಂದು ಪಾರ್ಟಿ ನಡೆದಿರೋದು ಬಾಂಬೆಯ ಘಟ್ಕೋಪುರ್ ಪ್ರದೇಶದಲ್ಲಿ. ಇಲ್ಲಿನ ಕುಕ್ರೇಜಾ ಪ್ಯಾಲೇಸ್ ಹೌಸಿಂಗ್ ಸೊಸೈಟಿ ಸಂಗೀತ ಮತ್ತು ಸಮೋಸಾ ಪಾರ್ಟಿಯನ್ನು ಆಯೋಜಿಸಿತ್ತು. ಅದರಲ್ಲಿ ನೂರಾರು ಮಂದಿ ಪಾಲ್ಗೊಂಡು ಖುಷಿಯಲ್ಲಿ ತೇಲಾಡಿದ್ದರು. ಕ್ಕಪಕ್ಕದಲ್ಲಿ ಕೂತು ಸಂಗೀತ ಕೇಳುತ್ತಾ, ಮೆಲ್ಲುತ್ತಾ ಹರಟಿದ್ದರು. ಆದರೆ ಆ ಸ್ಥಳದಲ್ಲಿ ಕೊಂಚವೂ ಸಾಮಾಜಿಕ ಅಂತರವಾಗಲಿ, ಮುನ್ನೆಚ್ಚರಿಕಾ ಕ್ರಮವಾಗಲಿ ಕಾಣಿಸುತ್ತಿರಲಿಲ್ಲ. ಕನಿಷ್ಠ ಮಾಸ್ಕ್ ಧರಿಸಬೇಕೆಂಬ ಖಬರು ಕೂಡಾ ಅಲ್ಲಿದ್ದವರಿಗಿರಲಿಲ್ಲ. ಈ ಸಂಬಂಧವಾಗಿ ಈ ಕಾರ್ಯಕ್ರಮ ಆಯೋಜಕರ  ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ನಾಗರಿಕರು ಒತ್ತಾಯಿಸಿದ್ದಾರೆ.


ಮುಂಬೈ ಒಂದರಲ್ಲಿಯೇ ಹತ್ತತ್ತಿರ ಇಪ್ಪತ್ತೆರಡು ಸಾವಿರಕ್ಕೂ ಹೆಚ್ಚು ಕೇಸುಗಳಿದ್ದಾವೆ. ಇಂಥಾ ಸ್ಥಳದಲ್ಲಿ ಸಮೋಸಾ ಪಾರ್ಟಿ ಆಯೋಜಿಸಿದ ಅಯೋಗ್ಯರು ನಿಜಕ್ಕೂ ಕ್ಷಮೆಗೆ ಅರ್ಹರಲ್ಲ. ಅಷ್ಟಕ್ಕೂ ನಾಲಕ್ಕನೇ ಹಂತದ ಲಾಕ್‌ಡೌನ್ ಸಡಿಲಿಕೆಯಾಗಿರೋದು ಜನಜೀವನ ಸಹಜ ಸ್ಥಿತಿಯತ್ತ ಮರಳಲಿ ಎಂಬ ಕಾರಣದಿಂದಷ್ಟೇ. ಆದರೆ ಒಂದಷ್ಟು ಮಂದಿ ಇದು ಮೋಜುಮಸ್ತಿಗೆ ಸಿಕ್ಕ ಸುವರ್ಣಾವಕಾಶ ಅಂದುಕೊಂಡಿರುವಂತಿದೆ. ಆರಂಭದಲ್ಲಿಯೇ ಇಂಥ ಅವಿವೇಕದ ವರ್ತನೆಗಳಿಗೆ ಬ್ರೇಕು ಹಾಕದಿದ್ದರೆ ಮುಂದೆ ಅವುಗಳೇ ಕೊರೋನಾ ಸಾರ್ವತ್ರಿಕವಾಗಿ ಹಬ್ಬಿಕೊಳ್ಳಲು ಅನುವು ಮಾಡಿಕೊಟ್ಟರೂ ಅಚ್ಚರಿ ಪಡಬೇಕಿಲ್ಲ.

[adning id="4492"]

LEAVE A REPLY

Please enter your comment!
Please enter your name here