ಅಲ್ಲಿ ಅಲೆಯೆದ್ದರೆ ಇಲ್ಲಿ ಮಳೆ ಬಿದ್ದಂತೆ…

[adning id="4492"]

ಹಾ… ಕಡೆಗೂ ಈ ಮಳೆಗೆ ಮನಸಿನ ಕರೆ ಕೇಳಿದಂತಿದೆ. ಅಲ್ಲೆಲ್ಲೋ ಹಿಂದೂ ಮಹಾ ಸಾಗರದಲ್ಲಿ ಚಂಡಮಾರುತವೆದ್ದು ಇಲ್ಲಿ ದಿನಾ ಮಳೆಗೆ ಮೈಯೊಡ್ಡುವ ಸುಖ. ಊರೆಲ್ಲಾ ಮಳೆಯಾಗುತ್ತಿರುವಾಗ ಖಚಿತವಾಗಿ ನಿನ್ನ ಏರಿಯಾದಲ್ಲಿ ಮಳೆ ಬೀಳದಿರುತ್ತಾ? ನಿನ್ನ ಏರಿಯಾದಲ್ಲಿ ಅಂಥಾ ಪಾಪಿಗಳಿಲ್ಲ ಅಂತ ಮನಸಾರೆ ನಂಬುತ್ತಾ… ಜೀವವೇ… ಹೀಗೆ ಮಳೆ ಜಿಟಿ ಜಿಟಿ ಜಿನುಗುವ ಹೊತ್ತಲ್ಲಿ ನಿಂಗೊಂದು ಕರೆ ಮಾಡಿ ಕೈ ಕೈ ಹಿಡಿದು ನಡೆಯೋ ಆಸೆಯಾಗುತ್ತೆ. ಅದನ್ನು ಸಾಕಾರಗೊಳಿಸಿಕೊಳ್ಳೋದೇನೂ ಹೆಚ್ಚು ಹೊತ್ತಿನ ಕೆಲಸವೇನಲ್ಲ. ನಂಗೊತ್ತು, ಬೆಚ್ಚಗೆ ಹೊದ್ದು ಕೂತು ನನ್ನದೊಂದು ಕರೆ ಬರಲಿ ಅಂತ ನೀನೀಗ ಕಾಯುತ್ತಿರುತ್ತಿ. ಆದರೆ ಸಮೀಪವಾಗೋ ಕ್ಷಣಗಳನ್ನ ಹೀಗೆ ಬೇಕೆಂತಲೇ ಚೂರು ಮುಂದೆ ಸರಿಸಿ ನನ್ನ ನಾ ನಿನ್ನ ಧ್ಯಾನಿಸೋದರಲ್ಲಿಯೂ ಒಂದು ಸುಖವಿದೆ. ಇಂಥಾ ಒತ್ತಾಯದ ಅಗಲಿಕೆಗೂ ಪ್ರೀತಿಯನ್ನ ಮತ್ತಷ್ಟು ಆಪ್ತವಾಗಿಸೋ ಕಸುವಿದೆ…


ರಣ ರಣಾ ಬಿಸಿಲಿಗೆ ಮೈಯೊಡ್ಡಿ ನಡೆವಾಗೆಲ್ಲಾ ಮಳೆಗಾಗಿ ಹಪಾಹಪಿಸೋ ನನ್ನನ್ನ ಕಂಡು ‘ನೀನೇನು ಬರಗಾಲದಲ್ಲಿ ಹುಟ್ಟಿದೋನಾ’ ಅಂತ ಅದೆಷ್ಟು ಸಲ ಕಿಚಾಯಿಸಿದ್ದೀಯೋ. ಬಹುಶಃ ನಾ ಹೀಗೆ ರಚ್ಚೆ ಹಿಡಿದು ಹಂಬಲಿಸೋದು ನಿನ್ನನ್ನು ಬಿಟ್ಟರೆ ಈ ಮಳೆಯನ್ನೇ ಇರಬಹುದು. ಅದ್ಯಾಕೋ ಗೊತ್ತಿಲ್ಲ, ಮಳೆಗೆ ಮೈಯೊಡ್ಡಿ ನಿನ್ನ ಧ್ಯಾನಿಸೋದು, ನಿನ್ನೊಟ್ಟಿಗಿರೋವಾಗ ಮಳೆಗಾಗಿ ಹಂಬಲಿಸೋದು ಅಭ್ಯಾಸವಾಗಿ ಬಿಟ್ಟಿದೆ. ಅದರ ಭಾಗವಾಗಿ ಬೆಳಗ್ಗಿನಿಂದಲೇ ಜಿಟಿ ಜಿಟಿ ಸುರಿಯುತ್ತಿರುವ ಮಳೆಗೆ ಮುದಗೊಳ್ಳುತ್ತಾ ಬೆಚ್ಚಗಿದ್ದೇನೆ. ನಿಂಗೊತ್ತಾ? ನೀ ಜೊತೆಗಿದ್ದಾಗ ಬಾಯಿ ಸತ್ತಂತಾಗುವ ಮಾತುಗಳೆಲ್ಲವೂ ಈ ಥಂಡಿ ಹವೆಯಲ್ಲಿ ಕೈಕಾಲು ಬಡಿಯುತ್ತವೆ. ಸಂಜೆ ನೀ ಸಿಕ್ಕಾಗ ಹೀಗೆ ಒದ್ದೆ ಫುಟ್ಪಾತುಗಳಲ್ಲಿ ಒಂದಷ್ಟು ದೂರ ಜೊತೆ ನಡೆದು ಕಾರ್ನರಿನಲ್ಲಿ ಬಿಸ್ಸಿ ಬಿಸಿ ಕಾಫಿ ಕುಡಿದು ಈ ಪತ್ರವನ್ನ ನಿನ್ನ ಕೈಗಿತ್ತು ಮಾಯವಾಗಬೇಕೆಂಬೋ ಇರಾದೆಯಿಂದಲೇ ಹೀಗೆ ಬರೆಯಲು ಕೂತಿದ್ದೇನೆ.


ಈ ಫೇಸ್‌ಬುಕ್ಕು, ವಾಟ್ಸಪ್, ಮೆಸೇಂಜರುಗಳ ಸಂಭಾಷಣೆ ಬೋರು ಬೋರು. ಇಲ್ಲಿ ಬೆರಳ ಮೊನೆಯಲ್ಲಿ ಮಾತು ಹುಟ್ಟುತ್ತವೆ. ಆದರೆ ಮನಸಿನ ಮೂಲೆಯ ತೇವ ಹೃದಯಗಳಿಗೆ ಪಸರಿಸೋದಿಲ್ಲ. ಅದೇನಿದ್ದರೂ ಫ್ಲರ್ಟ್ ಮಾಡೋ ಖಯಾಲಿಯಿದ್ದವರಿಗೇ ಸೂಟಾದೀತೇನೋ. ಈ ಪತ್ರ ಇದೆಯಲ್ಲಾ? ಇದನ್ನು ಬರೆದು ಒಲವಿನ ಜೀವದ ಕೈಗಿಡುವ ಮಜವೇ ಬೇರೆ. ಬಹುಶಃ ಇಂಥಾದ್ದೊಂದು ಸರ್‌ಪ್ರೈಸನ್ನು ನೀನು ಊಹಿಸಿರಲಿಕ್ಕಿಲ್ಲ. ಜೊತೆಯಾಗಿದ್ದಾಗಲೂ ಇಡೀ ಬೆಂಗಳೂರನ್ನೇ ಎದೆ ಮೇಲಿಟ್ಟುಕೊಂಡವನಂತೆ ಧಾವಂತದಲ್ಲಿರೋ ಈ ಆಸಾಮಿಗೆ ಭಾವನೆಗಳೇ ಇಲ್ಲವಾ, ಸ್ವಲ್ಪವಾದರೂ ರೊಮ್ಯಾನ್ಸ್ ಮೂಡು ಬೇಡವಾ ಅಂತೆಲ್ಲ ಅದೆಷ್ಟು ಸಲ ಒಳಗೊಳಗೇ ಬೈದುಕೊಂಡಿದ್ದೀಯೋ ಗೊತ್ತಿಲ್ಲ. ಆದರೆ ಹಾಳಾದ್ದು, ಮನಸಿನಲ್ಲಿದ್ದದ್ದನ್ನು ಹಂಗಂಗೇ ಹೇಳೋ ವಿದ್ಯೆಯೂ ನಂಗೊಲಿದಿಲ್ಲ!


ವಿಷ್ಯ ಏನಪ್ಪಾ ಅಂದರೆ… ನೀನಂದ್ರೆ ನಂಗಿಷ್ಟ. ಎಷ್ಟು ಅಂದರೆ ಬಹುಶಃ ಹೋಲಿಕೆಗೆ ತಡಕಾಡುತ್ತೀನೇನೋ… ನನ್ನ ಹುಚ್ಚು ಹಂಬಲಿಕೆಗಳಿಂದ ಕೆಲವೊಮ್ಮೆ ಹೀಗೆ ಒಂದಂತರ ಕಾಯ್ದುಕೊಂಡಾಗಲೆಲ್ಲಾ ಆಸಾಮಿ ಅವಾಯ್ಡ್ ಮಾಡುತ್ತಿದ್ದಾನಾ ಅಂತೊಂದು ಸಣ್ಣ ಆತಂಕ, ಸಂಶಯ ಕಾಡಿದರೆ ಅದು ನಿನ್ನ ತಪ್ಪಲ್ಲ ಬಿಡು. ಆದರೆ ಆವಾಯ್ಡ್ ಮಾಡೋದಿರಲಿ, ನೀ ಒಂದೇ ಒಂದು ದಿನ ಕಾಣಿಸದಿದ್ದರೂ ಮಾತಾಡದಿದ್ದರೂ ನಾನು ನಾನಾಗಿರೋದಿಲ್ಲ. ನಿನ್ನ ಇರುವಿಕೆಯ ಹೊರತಾಗಿ ಈ ಬದುಕನ್ನು ಕಲ್ಪಿಸಿಕೊಳ್ಳೋ ಸಾಹಸವನ್ನೂ ನಾ ಮಾಡೋದಿಲ್ಲ. ಅದು ನನ್ನ ಪಾಲಿಗೆ ಬದುಕೇ ಅಲ್ಲ.


ಇನ್ನು ಅಷ್ಟೊಂದು ವರ್ಷ ಜೊತೆಯಾಗೇ ಬದುಕಬೇಕಲ್ಲಾ? ಆ ಹಾದಿಯ ಯಾವ ಕ್ಷಣಗಳೂ ನಿನ್ನ ಪಾಲಿಗೆ ಸಪ್ಪೆಯಾಗದಂತೆ, ಬೋರು ಹೊಡೆಸದಂತೆ ನೋಡಿಕೊಳ್ಳ ಬೇಕೆಂದೇ ಒಂದಷ್ಟು ಮಾತುಗಳನ್ನು ಹಾಗೆಯೇ ಪೇರಿಸಿಟ್ಟುಕೊಂಡಿದ್ದೇನೆ. ಇಂಥಾ ಹಠಾತ್ ಮಳೆಯ ಸಂಜೆಗಳಲ್ಲಿ ನಿನ್ನನ್ನು ತೋಳಿಗಾನಿಸಿಕೊಂಡು ತಿರುಗಾಡೋ ನಿತ್ಯ ಸುಖಕ್ಕಾಗಿ ಒಳಗೊಳಗೇ ಕಾತರಿಸುತ್ತಿದ್ದೇನೆ. ನನ್ನನ್ನೇ ನಿನ್ನ ಸುಪರ್ಧಿಗೊಪ್ಪಿಸಿ ನಿರಾಳವಾಗೋ ಕಾಲ ಆದಷ್ಟು ಬೇಗನೆ ನಮ್ಮತ್ತ ಸರಿದು ಬರಲಿ ಎಂಬ ನಿತ್ಯ ಹಂಬಲಿಕೆ ನನ್ನದು.


ಹೀಗೆ ಕೊಂಚ ದೂರವಿದ್ದಾಕ್ಷಣ ನಾನೇನು ಒಂಟಿ ಅನ್ನಿಸೋದಿಲ್ಲ. ಯಾಕೆಂದರೆ ಇದ್ದಲ್ಲಿಂದಲೇ ನಿನ್ನ ಪ್ರತೀ ಕದಲಿಕೆಗಳಿಗೂ ಕಣ್ಣಾಗುತ್ತೇನೆ. ನಿನ್ನ ಕಾತರ ಧಾವಂತ ಮತ್ತು ಸುಳ್ಳೇ ಸಿಟ್ಟುಗಳೆಲ್ಲವೂ ನನ್ನನ್ನು ತಾಕುತ್ತದೆ. ಹಂಗೆಲ್ಲಾ ಆಗೋದಕ್ಕೆ ಇದೇನು ಸಿನಿಮಾನಾ ಅನ್ನುತ್ತಿಯೇನೋ. ಇದೆಲ್ಲ ಸುಮ್ಮನೆ ರಮಿಸೋ ನಾಟಕ ಅಂತೆಲ್ಲ ಮೂತಿ ಊದಿಸಿಕೊಂಡರೂ ನೀ ಚೆಂದವೇ. ಆದರಿದು ಕಲ್ಪನೆ, ಭ್ರಮೆ ಅಂತೆಲ್ಲ ನಂಗನ್ನಿಸೋದಿಲ್ಲ. ಅಲ್ಲೆಲ್ಲೋ ಸಾವಿರ ಕಿಲೋ ಮೀಟರು ದೂರದ ಅರಬ್ಬೀ ಸಮುದ್ರದಲ್ಲಿ ಅಲೆಯೆದ್ದರೆ ಇಲ್ಲಿ ಮಳೆ ಬೀಳುತ್ತದೆ ಎಂದಾದರೆ, ನಿನ್ನುಸಿರಿನ ಸದ್ದಿಗೆ ಈ ಜೀವ ಜೀಕಾಡೋದರಲ್ಲಿ ಯಾವ ಅಚ್ಚರಿಯಿದ್ದೀತು ಹೇಳು?
-ನಿನ್ನವನು

[adning id="4492"]

LEAVE A REPLY

Please enter your comment!
Please enter your name here