ಮಹರಾಷ್ಟ್ರದಿಂದ ಗುಲ್ಬರ್ಗದ ಕಾರ್ಮಿಕರನ್ನು ತವರಿಗೆ ಕಳಿಸಿದ್ದು ನಟ ಸೋನು ಸೂದ್!

[adning id="4492"]

ನಟನೊಬ್ಬ ರಿಯಲ್ ಹೀರೋ ಆಗೋದಂದ್ರೆ ಹೀಗೆ!
ವಿಶ್ವವೆಲ್ಲ ಕೊರೋನಾ ಭೀತಿಯಿಂದ ಕಂಗಾಲೆದ್ದಿದೆ. ಅದರ ಆಕ್ರಂದನವೀಗ ಭಾರತದ ಅಷ್ಟ ದಿಕ್ಕುಗಳಿಂದಲೂ ಪ್ರತಿಧ್ವನಿಸಲಾರಂಭಿಸಿದೆ. ಲಾಕ್‌ಡೌನ್ ಎಂಬುದೀಗ ಕೊರೋನಾದಿಂದ ತಪ್ಪಿಸಿಕೊಳ್ಳಲು, ಅದರ ಸಂಕೋಲೆಗಳನ್ನು ಕಡಿದುಕೊಳ್ಳಲು ಬಹುತೇಕ ರಾಷ್ಟ್ರಗಳ ಪಾಲಿಗಿರುವ ಏಕೈಕ ಅಸ್ತ್ರ. ಆದರೆ ದೇಶಕ್ಕೆ ದೇಶವನ್ನೇ ಸ್ತಬ್ಧವಾಗಿಸೋ ಲಾಕ್‌ಡೌನ್ ಮಂತ್ರ ಅದೆಷ್ಟೋ ಕೋಟಿ ಜೀವಗಳನ್ನು ಬಾಣಲೆಯಿಂದ ಬೆಂಕಿಗೆ ಬೀಳಿಸಿ ಬಿಟ್ಟಿದೆ. ದಿನದ ಕೂಳನ್ನು ಆ ದಿನವೇ ದುಡಿದು ಗಿಟ್ಟಿಸಿಕೊಳ್ಳುವ ಜನರ ಪಾಡು ಹೇಳತೀರದಾಗಿದೆ. ಬದುಕಿಗಾಗಿ ಊರು ಬಿಟ್ಟು ಬೇರೆ ನಗರ, ರಾಜ್ಯ ಸೇರಿಕೊಂಡಿದ್ದ ಕಾರ್ಮಿಕರ ಸ್ಥಿತಿಯಂತೂ ತೀರಾ ದಾರುಣ. ಯಾವತ್ತಿದ್ದರೂ ಇಂಥಾ ರೋಗದ ಬಾಧೆ ಮಾತ್ರವಲ್ಲ; ಕಾನೂನು ಕಟ್ಟಳೆಗಳು ನಿಷ್ಕರುಣಿಯಾಗೋದು ಇಂಥಾ ದಿಕ್ಕಿಲ್ಲದ ಜನರ ಪಾಲಿಗೆ ಮಾತ್ರ. ಅದು ಈ ನೆಲದ ಕಾರ್ಮಿಕರ ಸ್ಥಿತಿಯ ಮೂಲಕ ಮತ್ತೊಮ್ಮೆ ಸಾಬೀತಾಗಿದೆ.


ನಮ್ಮದೇ ಕರ್ನಾಟಕದಲ್ಲಿ ಹೇಗಾದರೂ ಊರು ಸೇರಿಕೊಳ್ಳುವ ತವಕದಲ್ಲಿದ್ದ ಕಾರ್ಮಿಕರು ಮೆಜೆಸ್ಟಿಕ್ಕಿನಲ್ಲಿ ಅಡಕತ್ತರಿಗೆ ಸಿಕ್ಕು ನಲುಗಿನ ಚಿತ್ರಗಳಿನಮ್ನೂ ಹಾಗೇ ಇದ್ದಾವೆ. ರಾಜ್ಯ ಸರ್ಕಾರ ಬಿಲ್ಡರುಗಳ ಮರ್ಜಿಗೆ ಬಿದ್ದ ಪರಿಣಾಮವಾಗಿ ಕಾರ್ಮಿಕರೆಲ್ಲ ಅನಿವಾರ್ಯವಾಗಿ ನಗರದಲ್ಲೇ ಉಳಿದುಕೊಳ್ಳಬೇಕಾದ ಸ್ಥಿತಿ ಬಂದೊದಗಿದ್ದೂ ಕೂಡಾ ಕಣ್ಣ ಮುಂದಿದೆ. ಈ ಮೂಲಕ ಆಳುವವರ ನಾಲಗೆ ಯಾವತ್ತಿದ್ದರೂ ಬಡವರ ನೆತ್ತಿ ನೇವರಿಸೋದಿಲ್ಲ, ಬದಲಾಗಿ ಬಲಾಢ್ಯರ ಬೂಟು ಸವರಿ ಸುಖಿಸುತ್ತದೆಂಬ ಸತ್ಯ ಮತ್ತೊಮ್ಮೆ ಬಡಪಾಯಿಗಳ ಕಣ್ಣೀರಿನಲ್ಲಿ ಬರೇ ಬೆತ್ತಲೆ ಕುಣಿದಾಡಿ ಬಿಟ್ಟಿದೆ. ಇಂಥಾ ಅನಿಷ್ಠದ ಸಂದರ್ಭದಲ್ಲಿಯೂ ತುತ್ತಿನ ಚೀಲ ತುಂಬಿಸಿಕೊಳ್ಳಲೋಸ್ಕರವೇ ಮಹಾರಾಷ್ಟ್ರಕ್ಕೆ ತೆರಳಿದ್ದ ಗುಲ್ಬರ್ಗಾದ ಕಾರ್ಮಿಕರಿಗೆ ಮತ್ತೆ ತವರು ಸೇರಿ ನಿರಾಳವಾಗುವ ಮಹಾ ಭಾಗ್ಯ ಬಂದೊದಗಿದೆ. ಅದಕ್ಕೆ ಕಾರಣವಾಗಿರೋದು ಬಹುಭಾಷಾ ನಟ ಸೋನು ಸೂದ್!


ಇಡೀ ಭಾರತವೇ ಪವಾಡಸದೃಷವಾಗಿ ಬದಲಾಗಿ ಬಿಟ್ಟಿದೆ ಎಂಬ ಭ್ರಮೆ ಈವತ್ತಿಗೆ ಕೊರೋನಾಗಿಂತಲೂ ಭೀಕರವಾಗಿ ಬಹುತೇಕರನ್ನು ಬಡಿದುಕೊಂಡಿದೆ. ಇನ್ನೂ ಕೆಲ ಬರಗೆಟ್ಟವರು ಎಲ್ಲದೆ ಬಡತನ ಎಂಬರ್ಥದಲ್ಲಿ ಬಡಾಯಿ ಕೊಚ್ಚಿಕೊಳ್ಳುತ್ತಾರೆ. ಆದರೆ ನಿಜಕ್ಕೂ ಈ ನೆಲದಲ್ಲಿ ಬಡವರೆಷ್ಟಿದ್ದಾರೆ, ಸಂಕಷ್ಟಕಾಲದಲ್ಲಿ ಅವರ ಸ್ಥಿತಿ ಅದೆಷ್ಟು ಶೋಚನೀಯವಾಗಿರುತ್ತದೆಂಬುದನ್ನೆಲ್ಲ ಕೊರೋನ ಸಪಾಟಾಗಿಯೇ ತೆರೆದು ತೋರಿಸಿದೆ. ಇಂಥಾ ಘಳಿಗೆಯಲ್ಲಿ ಅದ್ಯಾವುದೋ ಸೇತುವೆ, ಫೈಓವರುಗಳನ್ನೇ ಸೂರಾಗಿಸಿಕೊಂಡು, ಎಳೇ ಕಂದಮ್ಮಗಳನ್ನು ಎದೆಗವುಚಿಕೊಂಡು ಒಂದಗುಳಿಗೂ ಗತಿಯಿಲ್ಲದ ಕಾರ್ಮಿಕರ ಸಂಕಟದ ಚಿತ್ರಗಳು ಸಾಮಾಜಿಕ ಜಾಲತಾಣಗಳ ತುಂಬೆಲ್ಲ ಹರಿದಾಡುತ್ತಿದ್ದವು. ಮಹಾರಾಷ್ಟ್ರದಲ್ಲಿ ಬಂಧಿಯಾಗಿದ್ದ ಗುಲ್ಬರ್ಗಾದ ಕಾರ್ಮಿಕರ ಸ್ಥಿತಿ ಕೂಡಾ ಅದಕ್ಕಿಂತ ಭಿನ್ನವಾಗಿರಲಿಲ್ಲ.


ಮುಂಬೈನಿಂದ ಒಂದಷ್ಟು ಕಾರ್ಮಿಕರನ್ನು ರೈಲಿನ ಮೂಲಕ ಗುಲ್ಬರ್ಗಾಕ್ಕೆ ಕಳಿಸೋ ವ್ಯವಸ್ಥೆ ಮಾಡಲಾಗಿದೆ. ಅಲ್ಲಿನ ಥಾಣೆಯಲ್ಲಿಯೇ ಬಂಧಿಯಾಗಿದ್ದ ಮತ್ತೊಂದಷ್ಟು ಕಾರ್ಮಿಕರು ತಮಗೆ ತವರು ಸೇರೋ ಭಾಗ್ಯವಿಲ್ಲ ಎಂಬ ಚಿಂತೆಯಲ್ಲಿದ್ದರು. ಅಂಥವರ ಸಂಕಟಕ್ಕೆ ಮಿಡಿದಿರೋದು ನಟ ಸೋನು ಸೂದ್. ಅವರು ಹತ್ತು ಬಸ್‌ಗಳನ್ನು ತಾವೇ ಬುಕ್ ಮಾಡಿ ಅದರಲ್ಲಿ ಕಾರ್ಮಿಕರನ್ನು ಕಳಿಸಿದ್ದಾರೆ. ಅವರಿಗೆ ಅಗತ್ಯಚವಾದ ಆಹಾರದ ಕಿಟ್‌ಗಳನ್ನೂ ಕೂಡಾ ವ್ಯವಸ್ಥೆ ಮಾಡಿದ್ದಾರೆ. ಇಡೀ ಜಗತ್ತೇ ಸಂಕಷ್ಟದಲ್ಲಿರುವಾಗ ಇಂಥಾ ಸಣ್ಣ ಸಹಾಯಗಳು ಬದುಕನ್ನುಸಹನೀಯವಾಗಿಸುತ್ತದೆಂದಿರೋ ಸೋನು ಸೂದ್ ಅವರ ಮಾನವೀಯ ನಡವಳಿಕೆ ನಿಜಕ್ಕೂ ಅಭಿನಂದನಾರ್ಹ. ಈ ಮೂಲಕವೇ ಅವರು ತಮ್ಮ ಮೇಲಿರುವ ಸಾಮಾಜಿಯ ಜವಾಬ್ದಾರಿಯನ್ನು ಸಾರ್ಥಕವಾಗಿ ನಿಭಾಯಿಸಿದ್ದಾರೆ.


ಸಾಮಾಜಿಕ ಜಾಲತಾಣಗಳಲ್ಲಿ, ಮಾಧ್ಯಮಗಳಲ್ಲಿ ನೋಡಿದ ದಾರುಣ ದೃಷ್ಯಾವಳಿಗಳೇ ಸೋನು ಸೂದ್ ಅವರನ್ನು ಕಾರ್ಮಿಕರತ್ತ ಸಹಾಯಹಸ್ತ ಚಾಚುವಂತೆ ಪ್ರೇರೇಪಿಸಿದೆ. ಹೇಗಾದರೂ ಊರು ಸೇರಬೇಕೆಂಬ ತವಕದಿಂದ ಅದೆಷ್ಟೋ ಕಾರ್ಮಿಕರು ಕಾಲ್ನಡಿಗೆಯಲ್ಲಿಯೇ ಯಾನ ಆರಂಭಿಸಿದ್ದರು. ಒಂದಷ್ಟು ಮಂದಿಯ ಪಯಣ ಅರ್ಧದಲ್ಲಿಯೇ ಅಂತ್ಯವಾದದ್ದೂ ಇದೆ. ಎಳೇ ಮಗುವನ್ನು ಅವುಚಿಕೊಂಡು ಚಪ್ಪಲಿಗೂ ಗತಿಯಿಲ್ಲದೆ ನಡೆಯುತ್ತಿರುವವರು, ವಯೋವೃದ್ಧ ಪೋಷಕರನ್ನು ಹೆಗಲ ಮೇಲೆ ಹೊತ್ತು ಸಾಗುವವರು… ಮನುಷ್ಯತ್ವವಿರುವವರೆಲ್ಲ ಕಣ್ಣೀರಾಗುವಂತೆ ಮಾಡಿದ ಇಂಥಾ ವಾಸ್ತವ ಸೋನು ಸೂದ್‌ರನ್ನು ಕಂಗೆಡಿಸಿದ್ದವಂತೆ. ಹೇಗಾದರೂ ಮಾಡಿ ಆ ಬಡಪಾಯಿಗಳನ್ನು ಊರು ಸೇರಿಸಬೇಕೆಂಬ ಪಣ ತೊಟ್ಟ ಸೂದ್‌ಗೆ ಮಹಾರಾಷ್ಟ್ರ ಮತ್ತು ಕರ್ನಾಟಕ ಸರ್ಕಾರಗಳೂ ಸಾಥ್ ಕೊಟ್ಟಿವೆ. ಅದರ ಫಲವಾಗಿ ಒಂದಷ್ಟು ಕಾರ್ಮಿಕರು ಗುಲ್ಬರ್ಗಾದ ಗೂಡು ಸೇರಲಿದ್ದಾವೆ.

ಎಳೆಗೂಸುಗಳಿಗೆ ತಟುಕು ಹಾಲು, ನಿತ್ರಾಣಗೊಂಡು ನಿಂತಾಗ ಚೂರು ರೊಟ್ಟಿಗೂ ಗತಿಯಿಲ್ಲದೆ ನಿಂತ ಕಾರ್ಮಿಕರಿದ್ದಾರಲ್ಲಾ? ಅಂಥವರ ಶಿಳ್ಳೆ ಚಪ್ಪಾಳೆ ಮತ್ತು ಪ್ರೀತಿಯಿಲ್ಲದೆ ಯಾರೊಬ್ಬರೂ ಸ್ಟಾರುಗಳಾಗಿಲ್ಲ. ನಟ ನಟಿಯರಾಗಿ ಮಿಂಚಲೂ ಸಾಧ್ಯವಿಲ್ಲ. ಆದರೆ ತೆರೆ ಮೇಲೆ ಆಪತ್ಭಾಂಧವರಂತೆ ಪೋಸು ಕೊಡೋ ಅದೆಷ್ಟೋ ಸ್ಟಾರುಗಳಿಗೆ ಅದೇ ಜನ ಸಂಕಷ್ಟದಲ್ಲಿದ್ದಾಗ ನೆರವಿಗೆ ಧಾವಿಸಬೇಕೆಂಬ ಮನಸಾಗೋದಿಲ್ಲ. ಆದರೆ, ಯಾವ ಪ್ರಚಾರದ ಹಪಾಹಪಿಯೂ ಇಲ್ಲದೆ ಸೋನು ಸೂದ್ ಮಾಡಿರೋ ಈ ಕೆಲಸವನ್ನು ಎಲ್ಲರೂ ಮೆಚ್ಚಿ ಕೊಂಡಾಡುತ್ತಿದ್ದಾರೆ.


ಇದೀಗ ಒಂದಷ್ಟು ನಟ ನಟಿಯರು ಕೊರೋನಾ ಕಾಲದಲ್ಲಿ ಇಂಥಾ ಸಾಮಾಜಿಕ ಕಳಕಳಿಯ ಮೂಲಕ ಗಮನ ಸೆಳೆದಿದ್ದಾರೆ. ಆದರೆ ಬೆಂಗಳೂರಿನಲ್ಲಿ ಅಂಥಾದ್ದೇ ಕಾರ್ಮಿಕರು ಕಂಗೆಟ್ಟು ನಿಂತಿದ್ದಾಗ ಸೂದ್ ಅವರಂತೆ ಯಾರಾದರೂ ಕಾರ್ಯ ನಿರ್ವಹಿಸಿದ್ದರೆ ಅಂಥವರು ನಿಜಕ್ಕೂ ಹೀರೋಗಳೆನ್ನಿಸಿಕೊಳ್ಳುತ್ತಿದ್ದರು. ಇರಲಿ; ಈವತ್ತಿಗೆ ಸೂದ್ ನಟ ನಟಿಯರು ಮನಸು ಮಾಡಿದರೆ ಎಂತೆಂಥಾ ಒಳ್ಳೆ ಕೆಲಸ ಮಾಡಬಹುದು, ಬಡಪಾಯಿಗಳಿಗೆ ಯಾವ ಥರದಲ್ಲಿ ನೆರವಾಗಬಹುದೆಂಬುದನ್ನು ಕಾರ್ಯರೂಪದಲ್ಲಿಯೇ ತೋರಿಸಿಕೊಟ್ಟಿದ್ದಾರೆ. ನಟ ನಟಿಯರೆಂದರೆ ತೆರೆ ಮೇಲೆ ಅಬ್ಬರಿಸಿ, ಸ್ಟಾರುಗಳಾಗಿ ಮೆರೆಯೋದು ಮಾತ್ರವಲ್ಲ; ಇಂಥಾ ಸಾಮಾಜಿಕ ಕೆಲಸ ಕಾರ್ಯಗಳನ್ನೂ ಮಾಡಬೇಕಾಗುತ್ತದೆ. ಅದಿಲ್ಲದೇ ಹೋದರೆ ಬಿರುದು, ಬಾವಲಿ, ಕೀರ್ತಿ, ಸ್ಟಾರ್‌ಗಿರಿಗಳೆಲ್ಲವೂ ನಮ್ಮ ಪೂರ್ವಜರ ಮುಕುಳಿ ಮುಚ್ಚುತ್ತಿದ್ದ ಪುಟಗೋಸಿಗಿಂತಲೂ ಕಡೆಯೆನ್ನಿಸಿಕೊಳ್ಳುತ್ತದೆ!

[adning id="4492"]

LEAVE A REPLY

Please enter your comment!
Please enter your name here