ಜಿಬುರು ಮಳೆಗೆ ಅದ್ಯಾಕೆ ಚಿಗುರುತ್ತೋ ನಿನ್ನ ನೆನಪು…

[adning id="4492"]

ಜೀವಾ…
ಸುತ್ತೆಲ್ಲ ಜಿಬುರು ಮಳೆ. ಸದಾ ಭಣಗುಡುತ್ತಾ, ಕ್ಷಣ ಕ್ಷಣವೂ ಕಂಗಾಲಾಗಿಸೋ ಈ ಮಾಯಾನಗರಿಯಲ್ಲೂ ಒಂದು ಮಲೆನಾಡು ಸೃಷ್ಟಿಯಾದಂಥಾ ಸಂಭ್ರಮ. ಹೀಗೆ ಹನಿಕಡಿಯದೇ ಬೀಳೋ ಮಳೆ ಶುರುವಾಯಿತೆಂದರೆ ಅದೇಕೋ ನನ್ನೆದೆಯಲ್ಲಿ ನೆನಪುಗಳ ಅತಿವೃಷ್ಟಿ ತಲೆದೋರುತ್ತೆ. ತಲೆ ಕೆದರಿಕೊಂಡು ಓಡಾಡುವಂಥಾ ಸಂಕಟ, ಸುಳ್ಳೇ ಸಂಭ್ರಮ, ನಂಗೇ ಗೊತ್ತಿಲ್ಲದಂತೆ ಏನಕ್ಕೋ ಅಣಿಯಾಗುವಂಥಾ ಆಹ್ಲಾದ ಮತ್ತು ಏನೂ ಇಲ್ಲದೆ ಖಾಲಿ ಖಾಲಿಯಾದಂಥಾ ನಿರಭ್ರ ನೀರವ… ಒಂದಷ್ಟು ದಿನ ಹಿಂಗೇ ಇದ್ದರೆ ಮಳ್ಳೆಂಬುದು ಮೇರೆ ಮೀರಿ ಹುಚ್ಚಸ್ಪತ್ರೆಯಲ್ಲೂ ಅಡ್ಮಿಷನ್ನು ಸಿಗೋದು ಕಷ್ಟ ಅನ್ನಿಸಿ ತಲ್ಲಣವಾಗುತ್ತೆ. ಹಿಂಗೆಲ್ಲಾ ಆಗಿ ಸತ್ತೇ ಹೋಗುತ್ತೀನೇನೋ ಅನ್ನಿಸಿದ ಕ್ಷಣದಲ್ಲಿ ನಿನ್ನ ಮುದ್ದಾದ ಅಹಮ್ಮಿಕೆಯ ಕಟಾಂಜನದಂತಿರೋ ಮೂಗಿನ ನತ್ತು, ನಗೆಯ ಬೆಳುದಿಂಗಳು, ಪುಟ್‌ಪುಟ್ಟ ಕಣ್ಣುಗಳ ಕೀಟಲೆಗಳೆಲ್ಲ ಮತ್ತೊಂದು ರೌಂಡು ಕಾಡುತ್ತವೆ. ಅದೇ ಮತ್ತಲ್ಲಿ ಮತ್ತೇನೋ ಯಡವಟ್ಟು ಸಾಹಸವೊಂದಕ್ಕೆ ತಯಾರಿ ನಡೆಸುತ್ತೇನೆ…

ಮಾಯಗಾತಿ… ಇದು ನೀನಿಲ್ಲದ ನನ್ನ ಬದುಕಿನ ಪ್ರತೀ ಕ್ಷಣದ ಹಳವಂಡ. ಈ ಪ್ರೀತಿಯೆಂಬುದು ನನ್ನ ಪಾಲಿಗೆ ಖಾಯಂ ಕಾಯಿಲೆ. ಇದಕ್ಕೆ ನಿನ್ನ ಹೊರತಾಗಿ ಮತ್ಯಾವ ಮದ್ದೂ ಇಲ್ಲವೆಂಬುದು ಅದ್ಯಾವತ್ತೋ ಅರ್ಥವಾಗಿದೆ. ನೀನಿರದ ಪ್ರತೀ ಮುಂಜಾವುಗಳೂ ನಿನ್ನ ತಲುಪೋ ದಾರಿಯನ್ನ ಹತ್ತಿರಾಗಿಸುತ್ತೆಂಬ ನಂಬುಗೆಯಿಂದಲೇ ಉಸಿರಾಡುವವನು ನಾನು. ಕೆಲವೊಮ್ಮೆ ಇಂಥಾ ನಂಬುಗೆಗಳೂ ಸವಕಲಾಗುತ್ತವೆ. ಮತ್ತೂ ಕೆಲ ಸಾರ್ತಿ ಸವೆದ ಸರಕುಗಳೂ ಆಪ್ಯಾಯಮಾನವಾಗುತ್ತವೆ. ನಿನ್ನೆಡೆಗಿನ ನನ್ನ ಹಂಬಲಿಕೆಯೂ ಅದೇ ಟೈಪಿನದ್ದು. ಇತ್ತೀಚೆಗೆ ಯಾಕೋ ಈ ಮುಂಜಾವಗಳು ನಿನ್ನೆಡೆಗಿನ ಹಾದಿಯನ್ನು ಮತ್ತಷ್ಟು ದೂರವಾಗಿಸುತ್ತಿವೆಯೇನೋ ಅಂತನ್ನಿಸಿ ಭಯವಾಗುತ್ತೆ. ಮಂಜುಗಟ್ಟಿದ ಕಣ್ಣಾಲಿಗಳಿಗೆ ಇಂಥಾ ಸವೆದ ಹಾದಿಯ ಬಾಜಿನಲ್ಲೆಯೇ ಸಣ್ಣದೊಂದು ಭರವಸೆಯ ಕಂದೀಲು ಮಿಣುಕಿದಂತಾಗುತ್ತೆ. ನಾನಿನ್ನೂ ಬದುಕಿದ್ದು, ನನಗೀ ಪತ್ರ ಬರೆಯುತ್ತಿದ್ದೇನೆಂದರೆ ಅದು ಅಂಥಾ ಭರವಸೆಗಳದ್ದೇ ಫಲ!

ಈ ನೆನಪುಗಳು ರೇಜಿಗೆ ಹುಟ್ಟಿಸಿ, ನನ್ನದೇ ಹಳವಂಡಗಳು ಉಸಿರುಗಟ್ಟಿಸಿದ ಕ್ಷಣಗಳಲ್ಲಿ ನೀನೆಂಬೋ ಮಾಯೆ ಈ ಬದುಕಿನ ಹಾದಿಯಲ್ಲಿ ಸುಳಿದಾಡಲೇ ಬಾರದಿತ್ತು ಅಂದುಕೊಳ್ಳುತ್ತೇನೆ. ನೀನು ಹಾಗೆ ಬಂದು ಹೀಗೆ ಸುಳಿಯದೇ ಹೋಗಿದ್ದರೇ ಚೆನ್ನಾಗಿತ್ತು, ಈ ಜೀವಿತ ಇನ್ನೆಲ್ಲೋ ಹೊರಳಿಕೊಂಡು ಸಾಗಿ ಹೋಗುತ್ತಿತ್ತು ಅಂತ ಹಳಹಳಿಸುತ್ತೇನೆ. ಕೆಲ ಸಾರ್ತಿ ಅದೊಂದು ದಿನ ಬೆಳ್‌ಬೆಳಗ್ಗೆಯೇ ಮಳೆ ಹಿಡಿದ ಘಳಿಗೆಯಲ್ಲಿ ಪುಟ್ಟ ದೇವತೆಯಂಥಾ ನೀನು ಎದುರಾಗದೇ ಹೋಗಿದ್ದರೆ ಹೇಗಿರುತ್ತಿತ್ತು ಅಂತ ನಿಕಷಕ್ಕೆ ಬೀಳುತ್ತೇನೆ. ಅರೇ ನೀನಿರದೆ ನನ್ನನ್ನು ಕಲ್ಪಿಸಿಕೊಳ್ಳಲೂ ಆಗದೇ ಸೋಲುತ್ತೇನೆ. ಈ ನಿತ್ಯ ಸಂಕಟದ ಮನೆ ಹಾಳುಬೀಳಲಿ. ಬೆಳಗ್ಗೆ ಕಣ್ಣು ಬಿಡುತ್ತಲೇ ನಿಗಿನಿಗಿಸೋ ನಿರೀಕ್ಷೆ, ಈ ರಾಕ್ಷಸ ನಗರಿಯ ಹಾದಿ ಬೀದಿಗಳಲ್ಲಿ ನಿನ್ನನ್ನು ಹುಡುಕಾಡುತ್ತಾ ಅಂಡಲೆಯೋ ಆಹ್ಲಾದ, ಇದೆಲ್ಲಾ ಭ್ರಮೆ ಅನ್ನಿಸಿದಾಗ ಕಣ್ಣಂಚು ಒದ್ದೆಯಾಗೋ ಆರ್ಧ್ರತೆ… ನೀ ಬರದೇ ಹೋಗಿದ್ದರೆ ಬಹುಶಃ ಇವನ್ನೆಲ್ಲ ಕಲ್ಪಿಸಿಕೊಳ್ಳಲೂ ಆಗುತ್ತಿರಲಿಲ್ಲವೇನೋ…

ಪ್ರತಿಯೊಂದನ್ನೂ ವಾಸ್ತವಿಕತೆಯ ತಕ್ಕಡಿಯಲ್ಲಿಟ್ಟೇ ದಿಟ್ಟಿಸುವ ಆಸಾಮಿಗಳಿಗೆ ನನ್ನ ಹಳಹಳಿಕೆಗಳೆಲ್ಲಾ ದಡ್ಡತನ ಅನ್ನಿಸಿದರೂ ಅಚ್ಚರಿಯೇನಿಲ್ಲ. ಹಾಗಂದುಕೊಂಡರೆ ನಂಗ್ಯಾವ ಬೇಜಾರೂ ಇಲ್ಲ. ಅಂಥವರೆಲ್ಲ ತುಂಬಾ ಪ್ರೀತಿಸಿ ನೆನಪನ್ನು ಮಾತ್ರ ಎದೆಯೊಳಗಿಟ್ಟುಕೊಂಡು ಬದುಕೋ ಸುಖದಿಂದ ವಂಚಿತರಾವ ಲೋಕನಿಂದಿತರಂತೆಯೇ ಕಾಣಿಸುತ್ತಾರೆ ನನಗೆ. ಇದನ್ನೆಲ್ಲ ಸುಖ ಅಂದೆನಲ್ಲಾ? ಅದು ನಿಂಗೆ ನರಕ ಅನ್ನಿಸಲೂ ಬಹುದು; ಈ ಜಗತ್ತಿಗೂ… ಆದರೆ ಹುಡುಗೀ, ನಿನ್ನ ನೆನಪಿನ ನೆರಳು ಸೋಕಿದರೂ ಸಾಕು ಅದೆಂಥಾ ನರಕವಾದರೂ ನಂಗದು ಸ್ವರ್ಗವೇ…

ನಿಜ, ನನ್ನ ಹಳವಂಡಗಳೆಲ್ಲಾ ನನ್ನೊಂದಿಗೇ ಮುಗಿದುಹೋಗುವಂಥವು. ನನ್ನೊಳಗೆ ಕೊತಗುಡುವ ಸಂಕಟವೂ ನಿನ್ನ ತುಟಿಯಂಚಲ್ಲಿ ಸದಾ ಜಿನುಗುವ ನಗು ಬಯಸುತ್ತಾ ಮುದಗೊಳ್ಳುತ್ತವೆ. ನಂಗಾಗಿ ಈ ಮಂದಹಾಸವನ್ನಾದರೂ ಕಡೇತನಕ ಜೊತೆಗಿಟ್ಟುಕೊಂಡಿರು… ನಾನಿಲ್ಲಿ ಈ ಬದುಕಿನ ಜಂಜಡಗಳ ನಡುವೆ ನಿನ್ನನ್ನೇ ಧ್ಯಾನಿಸುತ್ತಾ, ನಿನ್ನ ನೆನಪುಗಳಿಂದಲೇ ಪುಳಕಿತನಾಗುತ್ತಾ, ಖುಷಿಗೊಳ್ಳುತ್ತಾ, ಕಣ್ಣೀರಾಗುತ್ತಾ ಹೇಗೋ ಬದುಕಿ ಬಿಡುತ್ತೇನೆ. ಹೌದೂ… ಈ ಜಿಬುರು ಮಳೆ ಬಿದ್ದರೆ ಅದ್ಯಾಕೆ ನಿನ್ನ ನೆನಪು ಚಿಗುರುತ್ತದೋ…

-ನಿನ್ನವನು

[adning id="4492"]

LEAVE A REPLY

Please enter your comment!
Please enter your name here