ಪೊಲೀಸ್ ಪೇದೆ ಆತ್ಮಹತ್ಯೆಯ ಸುತ್ತ ಅನುಮಾನಗಳ ಗಸ್ತು!

[adning id="4492"]

ಆತನಿಗೆ ನಿಜಕ್ಕೂ ಮನೋವ್ಯಾಧಿಯಿತ್ತೇ?
ಗಲಿರುಳೆನ್ನದೇ ಸದಾ ಕಾಲವೂ ಸಾರ್ವಜನಿಕರ ರಕ್ಷಣೆಗೆಂದು ಕಟಿಬದ್ಧರಾಗಿರೋ ಪೊಲೀಸರೇ ಅನೇಕಾನೇಕ ಸಮಸ್ಯೆಗಳಿಂದ ಬಳಲುತ್ತಿರೋ ವಿಚಾರ ಆಗಾಗ ಜಾಹೀರಾಗುತ್ತಿರುತ್ತದೆ. ಇಲಾಖೆಯೊಳಗಿನ ಕೆಲಸದೊತ್ತಡ, ಅದನ್ನು ಸಂಸಾರದೊಂದಿಗೆ ಸರಿದೂಗಿಸಿಕೊಳ್ಳಲಾಗದ ಅಸಹಾಯಕತೆ ಮತ್ತು ಕೆಲವೊಮ್ಮೆ ಮೇಲಾಧಿಕಾರಿಗಳ ಕಾಟಗಳಿಂದಲೂ ಪೊಲೀಸರು ಆತ್ಮಹತ್ಯೆಗೆ ಶರಣಾಗೋದಿದೆ. ಇದೀಗ ಅಂಥಾದ್ದೇ ಒಂದು ದುರಾದೃಷ್ಟಕರ ಘಟನೆ ಗಡಿನಾಡು ಬೆಳಗಾವಿಯಲ್ಲಿ ನಡೆದಿದೆ. ಜಿಲ್ಲಾಧಿಕಾರಿ ನಿವಾಸದ ಭದ್ರತಾ ಕರ್ತವ್ಯದಲ್ಲಿದ್ದ ಪೇದೆಯೊಬ್ಬರು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.


ಕಳೆದ ಹದಿಮೂರು ವರ್ಷಗಳಿಗೂ ಹೆಚ್ಚು ಕಾಲದಿಂದ ಪೊಲೀಸ್ ಇಲಾಖೆಯಲ್ಲಿ ಕಾರ್ಯ ನಿರ್ವಹಿಸಿದ್ದವರು ಪೇದೆ ಪ್ರಕಾಶ್. ಇತ್ತೀಚೆಗಷ್ಟೇ ಬೆಳಗಾವಿಗೆ ವರ್ಗಾವಣೆಗೊಂಡು ಬಂದಿದ್ದ ಅವರನ್ನು ಜಿಲ್ಲಾಧಿಕಾರಿ ನಿವಾಸದ ಭದ್ರತೆಗೆಂದು ನಿಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ರಾತ್ರಿ ಸಮಯ ಇಲಾಖೆಯ ಎಸ್‌ಆರ್‌ಎಲ್ ಬಂದೂಕಿನಿಂದ ಗುಂಡಿಟ್ಟುಕೊಂಡು ಪ್ರಕಾಶ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ಬೆಳಗ್ಗೆ ಸಮಯದಲ್ಲಿ ಪ್ರಕಾಶ್ ಇಂಥಾದ್ದೊಂದು ಅನಾಹುತ ಮಾಡಿಕೊಂಡಿರೋದು ಎಲ್ಲರಿಗೂ ಗೊತ್ತಾಗಿದೆ. ಈ ಸುದ್ದಿ ಎಲ್ಲರನ್ನೂ ಆಘಾತಕ್ಕೀಡು ಮಾಡಿದೆ.


ಪೊಲೀಸ್ ಇಲಾಖೆಯಲ್ಲಿ ಹದಿಮೂರು ವರ್ಷ ಸೇವೆ ಸಲ್ಲಿಸಿದ್ದ ಪ್ರಕಾಶ್ ಹೀಗೆ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆಂದರೆ ಅದರ ಹಿಂದಿರೋ ಕಾರಣಗಳ ಬಗ್ಗೆ ಎಲ್ಲರ ಕಣ್ಣು ಕೀಲಿಸುತ್ತದೆ. ಈ ನಿಟ್ಟಿನಲ್ಲಿ ನೋಡ ಹೋದರೆ ಪೊಲೀಸ್ ಇಲಾಖೆಯ ಅಧಿಕಾರಿಗಳೇ ಒಂದು ಮಗ್ಗುಲಿನ ಕೆಲ ಅಂಶಗಳ್ನ್ನು ಅನಾವರಣಗೊಳಿಸಿದ್ದಾರೆ. ಆ ಪ್ರಕಾರವಾಗಿ ಹೇಳೋದಾದರೆ, ಪ್ರಕಾಶ್ ಈಗೊಂದಷ್ಟು ವರ್ಷಗಳಿಂದ ಮನೋವ್ಯಾಧಿ ಇತ್ತು. ಅದಕ್ಕೆ ಸೂಕ್ತವಾದ ಚಿಕಿತ್ಸೆ ಪಡೆದುಕೊಂಡು ಕೊಂಚ ಗುಣವಾಗಿದ್ದ ಪ್ರಕಾಶ್ ಇತ್ತೀಚಿನ ವರ್ಷಗಳಲ್ಲಿ ಮಾತ್ರೆ ತೆಗೆದುಕೊಳ್ಳೋದನ್ನು ಬಿಟ್ಟಿದ್ದರು. ಆದ್ದರಿಂದಲೇ ಅವರಿಗೆ ಮತ್ತೆ ಮನೋ ವ್ಯಾಧಿ ಉಲ್ಭಣಿಸಿತ್ತು. ಅದರ ಫಲವಾಗಿಯೇ ಆತ್ಮಹತ್ಯೆ ಮಾಡಿಕೊಂಡಿರಬಹುದೆಂಬುದು ಅಧಿಕಾರಿಗಳ ವಿಶ್ಲೇಷಣೆ.


ಆದರೆ ಆ ವಿವರಗಳೇ ಒಂದಷ್ಟು ಪ್ರಶ್ನೆಗಳನ್ನೂ ಹುಟ್ಟು ಹಾಕುತ್ತವೆ. ಒಂದು ವೇಳೆ ಮತ್ತೆ ಪ್ರಕಾಶ್‌ಗೆ ಮನೋ ವ್ಯಾಧಿ ಉಲ್ಬಣಿಸಿದ್ದೇ ಹೌದಾದರೆ ಜಿಲ್ಲಾಧಿಕಾರಿಗಳ ನಿವಾಸದ ರಕ್ಷಣೆಗೆ ನಿಯೋಜಿಸಿದ್ದು ಯಾಕೆ? ಅದು ಬೇಜವಾಬ್ದಾರಿಯಲ್ಲವೇ? ಆತನ ಕಡೆಯಿಂದ ಮತ್ತೇನಾದರೂ ಅನಾಹುತಗಳಾಗಿದ್ದರೆ ಅದರ ಹೊಣೆಯನ್ನು ಯಾರು ಹೊರಬೇಕಿತ್ತೆಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿದೆ. ಅದರಲ್ಲಿ ಅರ್ಥವೂ ಇದೆ.


ಇನ್ನೊಂದು ಮಗ್ಗುಲನ್ನು ತಡಕಾಡಿದರೆ ಆತ್ಮಹತ್ಯೆ ಮಾಡಿಕೊಂಡ ಪೇದೆಯ ಖಾಸಗಿ ಜೀವನವೂ ಅಷ್ಟೇ ವಿಚಿತ್ರವಾಗಿದೆ. ಹಲವಾರು ವರ್ಷಗಳಿಂದ ಬೆಂಗಳೂರಿನಲ್ಲಿ ಕಾರ್ಯ ನಿರ್ವಹಿಸಿದ್ದ ಪ್ರಕಾಶ್ ಇತ್ತೀಚೆಗಷ್ಟೇ ಬೆಳಗಾವಿಯ ಸೆಎಆರ್‌ಗೆ ವರ್ಗಾವಣೆಗೊಂಡಿದ್ದರು. ಆ ಬಳಿಕ ಇಲ್ಲಿನ ಪಿಡಬ್ಲ್ಯುಡಿ ಕ್ವಾರ್ಟಸ್‌ನಲ್ಲಿ ಸಂಸಾರ ನಡೆಸುತ್ತಿದ್ದರು. ಪ್ರಕಾಶ್‌ಗೆ ಇಬ್ಬರು ಹೆಂಡಿರು ಮತ್ತು ಇಬ್ಬರು ಮಕ್ಕಳಿದ್ದಾವೆ. ಅವರೆಲ್ಲರ ಜೊತೆ ತಾಯಿಯೊಂದಿಗೆ ವಾಸವಿದ್ದರು. ಇಬ್ಬರು ಹೆಂಡಿರ ಇರುವಿಕೆಯೇ ಈತ ಸಾಂಸಾರಿಕವಾಗಿಯೂ ನೆಮ್ಮದಿ ಕೆಡಿಸಿಕೊಂಡಿದ್ದರಾ, ಅದರಿಂದಲೇ ಮಾನಸಿಕ ವ್ಯಾಧಿಗೆ ತುತ್ತಾಗಿದ್ದರಾ ಎಂಬ ಪ್ರಶ್ನೆಯೂ ಕಾಡುತ್ತದೆ.
ಇನ್ನುಳಿದಂತೆ, ಇಂಥಾ ಪ್ರಕರಣಗಳಿಗೆ ಇಲಾಖೆಯೊಳಗಿನ ಕಿರುಕುಳ ಮತ್ತು ಒತ್ತಡಹವೂ ಕಾರಣವಾಗೋದಿದೆ. ಅದೆಷ್ಟೋ ಪೇದೆಗಳು ರಾಜಕಾರಣಿಗಳು ಮತ್ತು ಪೊಲೀಸ್ ಅಧಿಕಾರಿಗಳ ಮನೆಗೆ ಭದ್ರತೆಗೆ ನೇಮಕವಾಗಿರುತ್ತಾರೆ. ಅಂಥವರಲ್ಲಿ ಕೆಲವರನ್ನು ತೀರಾ ಮನೆಗೆಲಸದವರಂತೆಯೇ ನಡೆಸಿಕೊಳ್ಳಲಾಗುತ್ತದೆಯೆಂಬ ಆರೋಪಗಳೂ ಇವೆ. ಅದಕ್ಕೆ ಇತರೇ ಜವಾಬ್ದಾರಿಯ ಒತ್ತಡವೂ ಸೇರಿಕೊಂಡಾಗ ಆತ್ಮಹತ್ಯೆಯೊಂದೇ ದಾರಿಯಾಗಿ ಬಿಡುತ್ತದೆ. ಆದರೆ ಅಂಥಾ ಯಾವುದೇ ಕಿಸುರು ಈ ಪ್ರಕರಣದಲ್ಲಿಲ್ಲ ಎಂಬುದನ್ನು ಪೊಲೀಸ್ ಅಧಿಕಾರಿಗಳು ಹೇಳುತ್ತಿದ್ದಾರೆ. ಈಲ್ಲಾಧಿಕಾರಿ ಡಾ ಎಸ್.ಬಿ ಬೊಮ್ಮನಹಳ್ಳಿ ಕೂಡಾ ಕೆಲಸದ ಒತ್ತಡ ಇದಕ್ಕೆ ಕಾರಣವಲ್ಲ ಎಂದಿದ್ದಾರೆ. ಇದರ ಹಿಂದಿರೋ ನಿಜವಾದ ಕಾರಣ ತನಿಖೆಯಿಂದಷ್ಟೇ ಬಯಲಾಗಬೇಕಿದೆ.

[adning id="4492"]

LEAVE A REPLY

Please enter your comment!
Please enter your name here