ಲಾಕ್‌ಡೌನ್ ಎಫೆಕ್ಟ್: ಗಾಂಜಾ ಚಟ ಎಂಥಾ ಕೆಲಸ ಮಾಡಿಸಿತು ಗೊತ್ತಾ?

[adning id="4492"]

ಲಾಕ್‌ಡೌನಿಂದಾಗಿ ತಿಂಗಳುಗಟ್ಟಲೆ ಮನೆಯಲ್ಲಿಯೇ ಇರಬೇಕಾದ ಪರಿಸ್ಥಿತಿಯಿಂದ ಎಲ್ಲರೂ ಮಾನಸಿಕ ವಿಹ್ವಲತೆಗೀಡಾಗಿದ್ದಾರೆ. ಅನನಾಹಾರವೂ ಸೇರಿದಂತೆ ಈ ಕಾಲಾವಧಿಯಲ್ಲಿ ದೇಶಾದ್ಯಂತ ಸಾವಿರ ಸಮಸ್ಯೆಗಳು ಹೆಡೆಯೆತ್ತಿ ಬುಸುಗುಟ್ಟಿವೆ. ಮನೆಯೊಳಗಿರೋದೇ ಇಷ್ಟೊಂದು ಕಷ್ಟವಾದರೆ ಮನೆ ಮಠವಿಲ್ಲದ, ಒಪ್ಪತ್ತಿನ ಊಟಕ್ಕೂ ಕಷ್ಟವಾದವರ ಕಥೆ ಕರುಣಾಜನಕ. ಆದರೂ ಒಂದಷ್ಟು ತಾಯ್ತನದ ಮನಸುಗಳ ದೆಸೆಯಿಂದ ದಿಕ್ಕಿಲ್ಲದವರೂ ತುಸು ನಿರಾಳವಾದಂತಾಗಿದೆ. ಇದು ಲಾಕ್‌ಡೌನ್‌ನ ಒಂದು ಮಗ್ಗುಲಿನ ಕಥೆ. ಅದರ ಇನ್ನೊಂದು ಚಹರೆ ಮಾತ್ರ ಎಂಥವರೂ ಬೆಚ್ಚಿ ಬೀಳುವಂತಿದೆ!


ಅದು ಒಂಥರ ವಿಕ್ಷಿಪ್ತ ಮಗ್ಗುಲು. ಅದರ ಭಾಗವಾಗಿರೋ ಜನರ ಮುಂದೆ ಹೊತ್ತು ಹೊತ್ತಿಗೆ ಮೃಷ್ಟಾನ್ನ ಭೋಜನವಿಟ್ಟರೂ, ಟೈಂ ಪಾಸಿಗೆ ಏನೇನು ಬೇಕೋ ಅದೆಲ್ಲವನ್ನೂ ಪೂರೈಸಿದರೂ ತಣಿಯುವುದಿಲ್ಲ. ಹೊಟ್ಟೆ ತುಂಬಿಯಾದ ನಂತರವೂ ಒಂದು ಥರದ ಸಿಟ್ಟು, ಚಡಪಡಿಕೆಯಿಂದ ಕೊತಗುಡಲಾರಂಭಿಸುತ್ತಾರೆ. ಅದು ನಶೆಯ ರೂಟುಗಳು ಈ ಲಾಕ್‌ಡೌನಿಂದಾಗಿ ಮುಚ್ಚಿ ಹೋಗಿದ್ದರ ಪರಿಣಾಮ. ಲಾಕ್‌ಡೌನ್ ಆರಂಭವಾದ ಆರಂಭದಲ್ಲಿ ಎಣ್ಣೆ ಸಿಗದೆ ಒಂದಷ್ಟು ಮಂದಿ ನೇಣು ಹಾಕಿಕೊಂಡಿದ್ದರ ಬಗ್ಗೆ ಸುದ್ದಿಯಾಗಿತ್ತು. ಈ ಕ್ಷಣಕ್ಕೂ ಅಂಥಾ ಸಾವುಗಳು ಸಂಭವಿಸುತ್ತಲೇ ಇದ್ದಾವೆ. ಹೇಗಾದರೂ ಮಾಡಿ ಎಣ್ಣೆ ದಕ್ಕಿಸಿಕೊಳ್ಳುವ ಸಲುವಾಗಿ ನಾನಾ ಸಾಹಸಗಳೂ ನಡೆದಿವೆ. ಆದರೆ ಹೈದ್ರಾಬಾದಿನ ಇಬ್ಬರು ಹುಡುಗರ ಗಾಂಜಾಕ್ಕಾಗಿ ಮಾಡಿದ ಸಾಹಸವನ್ನು ಯಾರೆಂದರೆ ಯಾರೂ ಅಷ್ಟು ಸಲೀಸಾಗಿ ಮುರಿಯಲು ಸಾಧ್ಯವಿಲ್ಲ.


ಹೈದ್ರಾಬಾದಿನ ಯಶ್ವಂತ್ ಕುಮಾರ್ ಮತ್ತು ಗಣೇಶ್ ಎಂಬ ಗಾಂಜ ಗಿರಾಕಿಗಳು ಇಂಥಾದ್ದೊಂದು ಸಾಹಸದ ರೂವಾರಿಗಳು. ಹಠಾತ್ತನೆ ಲಾಕ್‌ಡೌನ್ ಆಗಿದ್ದರಿಂದ ಇವರಿಬ್ಬರೂ ಕೂಡಾ ಗಾಂಜಾ ಸಿಗದೆ ಕಂಗಾಲಾಗಿದ್ದರು. ನಶೆಯ ಮೋಹವನ್ನು ಹತ್ತಿಕೊಳ್ಳಲಾರದೆ ಗಾಂಜಾ ಮೂಲಕ್ಕೇ ಕೈ ಹಾಕುವ ಉದ್ದೇಶದಿಂದ ಅವರಿಬ್ಬರೂ ಮಾಡಿದ್ದು ಅನಾಹುತಕಾರಿ ಸಾಹಸ. ಸೀದಾ ಬೈಕಲ್ಲಿಯೇ ಹೈದ್ರಾಬಾದಿನಿಂದ ಚತ್ತೀಸ್‌ಘಡದವರೆಗೂ ತೆರಳಿ ಭರ್ತಿ ಎರಡು ಕೆಜಿ ಗಾಂಜಾ ಪಡೆದು ಮತ್ತೆ ವಾಪಾಸಾಗಿದ್ದರು.


ತೀರಾ ಒಂದು ಜಿಲ್ಲೆಯಿಂದ ಮತ್ತೊಂದಕ್ಕೆ ತೆರಳೋದೇ ಈವತ್ತಿನ ಸ್ಥಿತಿಯಲ್ಲಿ ಹರಸಾಹಸ. ಅಂಥಾದ್ದರಲ್ಲಿ ಆರುನೂರು ಕಿಲೋಮೀಟರ್‌ಗೂ ಹೆಚ್ಚು ದೂರವನ್ನು ಈ ಯುವಕರು ಲೀಲಾಜಾಲವಾಗಿಯೇ ಕ್ರಮಿಸಿದ್ದರು. ಈ ಹಾದಿಯಲ್ಲಿ ನೂರಕ್ಕೂ ಹೆಚ್ಚು ಚೆಕ್‌ಪೋಸ್ಟ್‌ಗಳನ್ನು ಅಡ್ಡಹಾದಿಯ ಮೂಲಕ ತಪ್ಪಿಸಿಕೊಂಡು ಓಡಾಡಿದ್ದ ಈ ಯುವಕರು ರಾಚಕೊಂಡ ಸರಹದ್ದಿನ ಟೋಲ್ ಒಂದರಲ್ಲಿ ತಗುಲಿಕೊಂಡಿದ್ದಾರೆ. ಪೊಲೀಸರು ವಿಚಾರಣೆ ನಡೆಸುತ್ತಲೇ ಈ ಯುವಕರಿಗೂ ಗಾಂಜಾ ಗ್ಯಾಂಗಿಗೂ ಇರುವ ನೇರಾನೇರ ಸಂಪರ್ಕವೂ ಜಾಹೀರಾಗಿದೆ. ಇನ್ನುಳಿದಂತೆ ಈ ಗಾಂಜಾ ಸಾಹಸಿ ಯಶ್ವಂತ್ ಕುಮಾರ್ ಪಳಗಿದ ಬೈಕ್ ಕಳ್ಳ ಎಂಬುದೂ ಗೊತ್ತಾಗಿದೆ. ಯಶ್ವಂತ್ ಗಣೇಶ್ ಜೊತೆ ಗಾಂಜಾಕ್ಕಾಗಿ ಓಡಾಡಿದ್ದೂ ಕೂಡಾ ಕದ್ದ ಬೈಕಿನ್ನಲ್ಲಿಯೇ ಎಂಬ ವಿಚಾರವನ್ನೂ ಪೊಲೀಸರು ಪತ್ತೆಹಚ್ಚಿದ್ದಾರೆ.

[adning id="4492"]

LEAVE A REPLY

Please enter your comment!
Please enter your name here