ಜಾತ್ರೆ ಜಂಗುಳಿ ತಪ್ಪಿಸಲು ಕಲಬುರ್ಗಿ ಪೊಲೀಸರು ಐಡ್ಯಾ ಮಾಡ್ಯಾರ!

[adning id="4492"]

ಶೋಧ ನ್ಯೂಸ್ ಡೆಸ್ಕ್: ಕೊರೋನಾ ವೈರಸ್ ವಿಚಾರದಲ್ಲಿ ಕರ್ನಾಟಕ ಒಂದು ಮಟ್ಟಿಗೆ ಕಂಟ್ರೋಲಿನಲ್ಲಿದೆ. ದಿನೇ ದಿನೆ ಪ್ರಕರಣಗಳು ಹೆಚ್ಚಿಕೊಳ್ಳುತ್ತಿದ್ದರೂ ಅದನ್ನು ತಹಬಂದಿಗೆ ತರುವ ಕಾರ್ಯವೂ ಅಷ್ಟೇ ತೀವ್ರವಾಗಿ ಚಾಲ್ತಿಯಲ್ಲಿದೆ. ಕೇವಲ ಕಾನೂನು ಕಟ್ಟಳೆಗಳಿಂದ ಮಾತ್ರವೇ ಇಲ್ಲಿನ ಜನರನ್ನು ಹದ್ದುಬಸ್ತಿನಲ್ಲಿಡಲು ಸಾಧ್ಯವಿಲ್ಲ. ಯಾಕೆಂದರೆ ಜನರನ್ನು ಯಾವ ಕ್ಷಣದಲ್ಲಿಯಾದರೂ ಡೇಂಜರ್ ಝೋನಿನಲ್ಲಿ ನಿಲ್ಲಿಸಬಹುದಾದಂಥಾ ಭಾವನಾತ್ಮಕ ವಿಚಾರಗಳಿಲ್ಲಿ ಸಾಕಷ್ಟಿವೆ. ಅದರಲ್ಲಿ ಕೆಲವಾರು ಧಾರ್ಮಿಕ ಆಚರಣೆ, ವಿಧಿ ವಿಧಾನಗಳೂ ಬೆರೆತು ಹೋಗಿವೆ.


ಯಾವುದೇ ಊರಾದರೂ ಅಲ್ಲೊಂದು ದೇವಸ್ಥಾನ. ಮತ್ತು ವರ್ಷಾವರ್ತಿ ತಪ್ಪದೇ ನಡೆಯೋ ಜಾತ್ರಾ ಮಹೋತ್ಸವ ಮಾಮೂಲು. ದೆಂಥಾದ್ದೇ ಪರಿಸ್ಥಿತಿಯಿದ್ದರೂ ಪೂಜಾ ರ್ಕಾ ನೆರವೇರಿಸಿ ರಥದ ಗಾಲಿ ಕದಲುವಂತೆ ಮಾಡದೇ ಹೋದರೆ ಇಡೀ ಊರಿಗೇ ಗಂಡಾಂತರ ಖಾಯಂ ಎಂಬ ನಂಬಿಕೆ ಹಳ್ಳಿ ಬದುಕಲ್ಲಿಯೇ ಹಾಸುಹೊಕ್ಕಾಗಿದೆ. ಹಾಗಿದ್ದ ಮೇಲೆ ಈ ಕೊರೋನಾ ವೈರಸ್ಸು ಮತ್ತು ಲಾಕ್‌ಡೌನ್ ಆ ನಂಬಿಕೆಯನ್ನು ಬದಲಾಯಿಸಲು ಸಾಧ್ಯವೇ? ಹಾಗಂತ ಜಾತ್ರೆ ನಡೆಯಲು ಅವಕಾಶ ಕೊಟ್ಟರೆ ಆ ಊರಲ್ಲಿಯೂ ಕೊರೋನಾ ಮಾರಿ ರಣಕೇಕೆ ಹಾಕಿದರೇನು ಗತಿ?


ಈ ಪ್ರಶ್ನೆ ಕರ್ನಾಟಕದ ಬಹುಭಾಗಗಳಲ್ಲಿ ಪೊಲೀಸ್ ಇಲಾಖೆಯನ್ನು ಬಹುವಾಗಿ ಕಾಡುತ್ತಿದೆ. ಕೆಲ ಪ್ರದೇಶಗಳಲ್ಲಿ ಒಳಗೊಳಗೇ ಇಂಥಾ ಜಾತ್ರೆಗಳನ್ನು ನಡೆಸಿದ ಬಗ್ಗೆಯೂ ಸುದ್ದಿಯಾಗುತ್ತಿವೆ. ಹಾಗೆ ಸದ್ದೇ ಇಲ್ಲದೆ ಜಾತ್ರೆ ನಡೆಸಲು ಕಲಬುರ್ಗಿಯ ಮುನ್ನಳ್ಳಿ ಗ್ರಾಮದಲ್ಲಿಯೂ ತಯಾರಿ ನಡೆದಿತ್ತು. ಈ ಸುಳಿವು ತಿಳಿದ ಅಧಿಕಾರಿಗಳು ಹೊಸಾದೊಂದು ಐಡಿಯಾ ಮಾಡಿ ಆಗಬಹುದಾದ ಅನಾಹುತ ತಡೆಗಟ್ಟಲು ಮುಂದಾಗಿದ್ದಾರೆ. ಅದರ ಬಗ್ಗೆಯೀಗ ರಾಜ್ಯಾದ್ಯಂತ ಚರ್ಚೆಗಳು ನಡೆಯುತ್ತಿವೆ. ಮುನ್ನಳ್ಳಿಯ ಮಸನ ಸಿದ್ದೇಶ್ವರ ಜಾತ್ರೆಗೆ ತಯಾರಿ ನಡೆದಿರೋದನ್ನು ಮನಗಂಡ ಪೊಲೀಸರು ಸ್ಥಳಕ್ಕಾಗಮಿಸಿ ರಥದ ಸುತ್ತಲೂ ದೊಡ್ಡ ಹೊಂಡ ತೋಡಿ ನಿರ್ಭಂಧಿಸಿದ್ದಾರೆ. ಬೇರೆ ದಾರಿ ಕಾಣದೆ ಗ್ರಾಮಸ್ಥರು ಲಾಕ್‌ಡೌನ್‌ಗೆ ಒಪ್ಪಿಸಿಕೊಂಡಿದ್ದಾರೆ.


ಇದಾದೇಟಿಗೆ ಉತ್ತರಕರ್ನಾಟಕ ಭಾಗದ ಹೆಚ್ಚಿನ ಕಡೆಗಳಲ್ಲಿಯೂ ಪೊಲೀಸರು ಇದೇ ಐಡಿಯಾವನ್ನು ಕಾರ್ಯ ರೂಪಕ್ಕೆ ತರುತ್ತಿದ್ದಾರೆ. ಅಂಥಾ ಪ್ರದೇಶಗಳಲ್ಲಿ ಮೂಢ ನಂಬಿಕೆಯ ಬಗ್ಗೆ ಅರಿವು ಮೂಡಿಸಿ, ಕೊರೋನಾದ ಭೀಕರತೆಯನ್ನು ಮನನ ಮಾಡಿಸುವಂಥಾ ಕಾರ್ಯವನ್ನೂ ಪೊಲೀಸರು ನಡೆಸಿದ್ದಾರೆ. ಇಂಥಾ ಸಂದಿಗ್ಧ ಕಾಲದಲ್ಲಿ ಇಂಥಾ ಬುದ್ಧಿವಂತಿಕೆಯ ನಡೆಗಳೇ ಜನರನ್ನು ಕಂಟಕಗಳಿಂದ ಪಾರುಗಾಣಿಸುತ್ತವೆ. ಲಾಕ್‌ಡೌನ್ ಮುರಿಯಬೇಕೆಂಬ ಇರಾದೆ ಇಲ್ಲದಿದ್ದರೂ ಧಾರ್ಮಿಕ ಕಟ್ಟು ಪಾಡುಗಳನ್ನು ಅನುಸರಿಸುವ ಉಮೇದಿನಲ್ಲಿ ಅನಾಹುತ ನಡೆಯೋ ಸಾಧ್ಯತೆಗಳೇ ಹೆಚ್ಚು. ಇದೀಗ ಅದನ್ನು ತಡೆಗಟ್ಟೋದೇ ಪೊಲೀಸರ ಪಾಲಿಗೆ ದೊಡ್ಡ ತಲೆನೋವಾಗಿ ಬಿಟ್ಟಿದೆ.

[adning id="4492"]

LEAVE A REPLY

Please enter your comment!
Please enter your name here