ಕೊರೋನಾ: ಮೇ ಮೂರರಂದು ಕಾದಿದೆಯೇ ಮತ್ತೊಂದು ಶಾಕ್?

[adning id="4492"]

ಈಗಲೇ ಮನಸು ಗಟ್ಟಿ ಮಾಡಿಕೊಳ್ಳಿ!
ಶೋಧ ನ್ಯೂಸ್ ಡೆಸ್ಕ್: ವಿಶ್ವಕ್ಕೆ ವಿಶ್ವವೇ ಕಣ್ಣಿಗೆ ಕಾಣದ ಕೊರೋನಾ ವೈರಸ್‌ನಿಂದ ಕಂಗಾಲೆದ್ದು ಹೋಗಿದೆ. ಮುಂದುವರೆದ ದೇಶಗಲ್ಲಿಯೇ ಜನ ಸಾಲು ಸಾಲಾಗಿ ಉಸಿರು ಚೆಲ್ಲುತ್ತಿರೋ ಈ ಹೊತ್ತಿನಲ್ಲಿ ಭಾರತದಲ್ಲಿ ಪರಿಸ್ಥಿತಿ ಒಂದಷ್ಟು ತಹಬಂದಿಯಲ್ಲಿದೆ. ಅದಕ್ಕೆ ಕಾರಣವಾಗಿರೋದು ಲಾಕ್‌ಡೌನ್ ಎಂಬ ಬಿಗಿ ಕ್ರಮವೆಂಬುದು ಕಣ್ಣ ಮುಂದಿರುವ ಸತ್ಯ. ಈ ಲಾಕ್‌ಡೌನ್‌ನಿಂದಾಗಿ ಅದೆಷ್ಟೋ ಜನ ಹೊಟ್ಟೆಗಿಲ್ಲದೆ ಕಂಗಾಲಾಗಿದ್ದಾರೆ. ಎಲ್ಲ ವ್ಯವಹಾರಗಳೂ ನಿಂತು ಹೋಗಿವೆ. ಅದೆಲ್ಲದರಾಚೆಗೂ ಸಹಾಯ ಮಾಡುವ ಮನಸುಗಳು ದೇಶಾದ್ಯಂತ ಕಾರ್ಯಾಚರಣೆಗಿಳಿದಿವೆ. ಇನ್ನೇನು ವಾರವೊಂದು ಮಗುಚಿಕೊಂಡರೆ ಮೇ ಮೂರರ ಗಡುವು ಎದುರಾಗುತ್ತೆ. ಆದ್ದರಿಂದಲೇ ಇಡೀ ದೇಶದ ದೃಷ್ಟಿ ಅದರತ್ತ ಕೀಲಿಸಿಕೊಂಡಿದೆ.


ಆರಂಭದಲ್ಲಿ ಒಂದೇ ಒಂದು ದಿನ ಮನೆಯೊಳಗೇ ಇರುವಂತೆ ಆದೇಶ ಪ್ರಕಟವಾಗಿದ್ದಾಗ ಕಂಗಾಲಾಗಿದ್ದವರೆಲ್ಲ ತಿಂಗಳುಗಟ್ಟಲೆ ಮನೆಯೊಳಗೇ ಇರುವಂಥಾ ಪರಿಸ್ಥಿತಿ ದೇಶಾದ್ಯಂತ ನಿರ್ಮಾಣವಾಗಿದೆ. ಒಂದಷ್ಟು ಅನಿವಾರ್ಯತೆ, ಮತ್ತೊಂದಷ್ಟು ಬೇಜವಾಬ್ದಾರಿ ಪ್ರವೃತ್ತಿ ಲಾಕ್‌ಡೌನ್ ಪರಿಣಾಮವನ್ನು ಕೊಂಚ ಕಡಿಮೆ ಮಾಡಿದೆ. ಕೊರೋನಾ ವೈರಸ್ಸು ಹರಡೋ ವೇಗ ಹತೋಟಿಗೆ ಬಂದಿದ್ದರೂ ಹೊಸಾ ಪ್ರದೇಶಗಳು ರೆಡ್ ಜೋನಿಗೆ ಜಮೆಯಾಗುತ್ತಿರೋ ಆಘಾತಕರ ಬೆಳವಣಿಗೆಗಳೂ ನಡೆಯುತ್ತಿವೆ. ಇಂಥಾ ಸಮಯದಲ್ಲಿ ಮೇ ಮೂರಕ್ಕೆ ಗೃಹ ಬಂಧನ ಕೊನೆಯಾದೀತೆಂಬ ಆಶಾವಾದವೂ ಕೊಂಚ ಮುಸುಕಾಗುವಂಥಾ ವಾತಾವರಣವೇ ದೇಶದ ತುಂಬೆಲ್ಲ ವ್ಯಾಪಿಸಿಕೊಂಡಿದೆ.


ಈ ಕ್ಷಣಕ್ಕೆ ಲಾಕ್‌ಡೌನ್ ಬೇಗನೆ ಮುಗಿದು ಮತ್ತೆ ದೇಶ ಯಥಾ ಸ್ಥಿತಿಗೆ ಮರಳಲಿ ಎಂಬ ಆಶಯ ಎಲ್ಲರಲ್ಲಿಯೂ ಇದೆ. ಆದರೆ ಕೊಂಡಿಗಳನ್ನು ಕಳಚಿದಾಕ್ಷಣ ಕೊರೋನಾ ಕಂಟಕ ಮಾಯವಾಗುತ್ತದೆಯೆಂಬ ಯಾವ ನಂಬಿಕೆಯೂ ಉಳಿದಿಲ್ಲ. ಭಾರತದಂಥಾ ದೇಶದಲ್ಲಿ ಒಂದು ಸಾರಿ ಕೈ ಮೀರಿದರೆ ಕಂಟ್ರೋಲು ಮಾಡಲಾಗದ ಸ್ಥಿತಿ ಬಂದು ಬಿಡುತ್ತದೆಂಬುದು ಮೇಲು ನೋಟಕ್ಕೆ ಅರ್ಥವಾಗುವಂಥಾ ವಿಚಾರ. ಅದಕ್ಕೆ ಪೂರಕವೆಂಬಂತೆ ತಜ್ಞರು ಕೂಡಾ ಈ ಲಾಕ್‌ಡೌನ್ ಅನ್ನು ಇನ್ನೊಂದಷ್ಟು ದಿನ ಮುಂದುವರೆಸೋದೇ ಸೂಕ್ತ ಎಂಬಂಥಾ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮೇಲೂ ಇಂಥಾ ಒತ್ತಡ ಹೆಚ್ಚಲಾರಂಭಿಸಿದೆ.


ಮೇ ತಿಂಗಳೆಂಬುದು ಭಾರತದ ಮಟ್ಟಿಗೆ ಕೊರೋನಾ ವಿಚಾರದಲ್ಲಿ ನಿರ್ಣಾಯಕ ಎಂಬುದು ಬಹು ಹಿಂದಿನಿಂದಲೂ ತಜ್ಞರ ಅಭಿಪ್ರಾಯವಾಗಿತ್ತು. ಆದರೆ ಅದೇ ತಿಂಗಳು ಲಾಕ್‌ಡೌನ್ ಸಡಿಲಗೊಳಿಸಿದರೆ ಬೇಗನೆ ಈ ವೈರಸ್ ಮತ್ತಷ್ಟು ಜನರನ್ನು ಆವರಿಸಿಕೊಳ್ಳಲಿದೆ ಎಂಬ ಆತಂಕ ಇದ್ದೇ ಇದೆ. ಈಗ ಸಾವಿರದ ಲೆಕ್ಕದಲ್ಲಿರೋ ಕೊರೋನಾ ಸೋಂಕಿತರ ಸಂಖ್ಯೆ ಮುಂದಿನ ತಿಂಗಳು ಲಕ್ಷಗಳ ಗಡಿ ದಾಟಲಿರೋ ಆತಂಕವೂ ಅದಕ್ಕೆ ಜೊತೆಯಾಗಿದೆ. ವರದಿಯೊಂದು ಅದನ್ನೇ ಪುಷ್ಟೀಕರಿಸುತ್ತಲೂ ಇದೆ. ನಿಖರವಾಗಿ ಹೇಳಬೇಕೆಂದರೆ ಜನ ಮೇ ಮೂರರ ನಂತರವೂ ಲಾಕ್‌ಡೌನ್‌ಗೆ ಒಪ್ಪಿಸಿಕೊಳ್ಳುವ ಮಾನಸಿಕ ಸಿದ್ಧತೆ ಆರಂಭಿಸಿಕೊಂಡರೊಳಿತು. ಈ ಬಾರಿಯ ಮಳೆಗಾಲವನ್ನೂ ಕೊರೋನಾ ಬಾಧೆಯ ಭಯದಲ್ಲಿಯೇ ಎದುರುಗೊಳ್ಳುವಂತಾದರೂ ಅಚ್ಚರಿಯೇನಿಲ್ಲ!

[adning id="4492"]

LEAVE A REPLY

Please enter your comment!
Please enter your name here