ಈ ಹಾಳು ಮಳೆಗೆ ನೆನಪಿನ ನೆತ್ತಿಯಲಿ ಚಿಗುರು ಮೂಡಿಸೋ ಕಾಯಿಲೆ!

[adning id="4492"]

ಣರಣಾ ಬೇಸಗೆಯ ಮುಂಜಾವವೊಂದನ್ನು ಅಪಾದಮಸ್ತಕ ತೋಯಿಸಿದ ಮಳೆಯಂಥವಳೇ… ಮನಸಲ್ಲೀಗ ಮಳೆ ಹನಿ ಮುತ್ತಿಟ್ಟ ರಬಸಕ್ಕೆ ಪಕಳೆಗಳೆಲ್ಲ ಚಲ್ಲಾಪಿಲ್ಲಿಯಾದ ಹೂವಿನಂಥಾ ವಿಚಿತ್ರ ಕಳವಳ. ಮೊದಲೆಲ್ಲಾ ಈ ಮಳೆಗಾಗಿ ಅತೀವವಾಗಿ ಹಂಬಲಿಸುತ್ತಿದ್ದೆ. ಆಗೆಲ್ಲ ಬಾಲ್ಕನಿಯಲ್ಲಿ ನಿಂತು ಕೆನ್ನೆ ಸೋಕಿದ ಜಿಬುರು ಹನಿಗಳಿಗೆ ಪುಳಕಗೊಳ್ಳುವ ನಿನ್ನ ಕನಸಿನಂತಾ ಚಿತ್ರ ಎದೆಯೊಳಗಿರುತ್ತಿತ್ತು. ಮನಸಿನ ತುಂಬಾ ಒಂದಿಡೀ ಬೆಂಗಳೂರಿಗೇ ಹಂಚಿ ಬಿಡುವಷ್ಟು ಪುಳಕ. ಆಗೆಲ್ಲ ನನ್ನ ನಿನ್ನ ನಡುವಿದ್ದ ಅದೆಷ್ಟೋ ಗಾವುದ ದೂರಕ್ಕೆ ಸೇತುವೆ ಕಟ್ಟೋ ಕರುಣೆ ಮಳೆ ಹನಿಗಳಿಗಿತ್ತು. ಅಂತಾದ್ದೇ ಅದೆಷ್ಟು ಮಳೆ ಹಿಡಿದ ಮುಂಜಾವಗಳಲ್ಲಿ ನಿನ್ನ ಕನಸು ಬಿದ್ದಿತ್ತೋ, ಜೀವವೆಲ್ಲ ಅನೂಹ್ಯ ಸಡಗರಕ್ಕೆ ಸಿಕ್ಕು ಒದ್ದೆ ಮುದ್ದೆಯಾಗಿ ಹಿತವಗಿ ನರಳಿತ್ತೋ ಲೆಕ್ಕವಿಟ್ಟಿಲ್ಲ. ಆದರೀಗ ಅಂತಾ ಮಳೆಗೆ ನಿನ್ನ ನೆನಪಿನ ನೆತ್ತಿಗೆ ಚಿಗುರು ಮೂಡಿಸಿ ಜೀವ ತಿನ್ನೋ ಕಾಯಿಲೆಯೊಂದು ಅಮರಿಕೊಂಡಿದೆ!

ಈಗೀಗ ಈ ಹಾಳು ಮಳೆಯೂ ಥೇಟು ನಿನ್ನ ನೆನಪಿನಂತೆಯೇ; ಜಿಬುರುಗರೆಯುವುದಕ್ಕೆ ಹೊತ್ತುಗೊತ್ತೆಂಬುದಿಲ್ಲ. ಸೈಕ್ಲೋನು ಮಣ್ಣುಮಸಿಗಳೆಲ್ಲ ಸೇರಿಕೊಂಡು ಅದ್ಯಾವ ಘಳಿಗೆಯಲ್ಲಿ ಸುರಿಯುತ್ತದೋ ಹೇಳಲು ಬರುವುದಿಲ್ಲ. ಹಾಗೆ ಮಳೆ ಸುರಿದಾಗೆಲ್ಲ ನನ್ನೊಳಗೆ ನಾನೇ ಸಾಕಿಕೊಂಡ ಗಟ್ಟಿತನದ ಸೌಧದ ಅಡಿಪಾಯವೇ ನೆನೆದು ಕುಸಿದು ಬಿಳುತ್ತೆ. ನಿನ್ನ ಒದ್ದೊದ್ದೆ ನೆನಪುಗಳ ಹಾದಿಗುಂಟ ಗುರಿಯಿರದ, ಗುರುತಿರದ ಎಳೇ ಮಗುವಿನಂತೆ ತೊದಲು ಹೆಜ್ಜೆ ಎತ್ತಿಡುತ್ತೇನೆ. ಜೀವವೆಲ್ಲ ಒಜ್ಜೆಯಾದಂತೆನ್ನಿಸಿ, ಜೀವಂತಿಕೆಯೆಲ್ಲವೂ ಬಸಿದು ಹೋದಂತೆ ಕುಸಿದು ಕೂರುತ್ತೇನೆ. ಯಾವ ತಪ್ಪಿಗಾಗಿ ಇಂತಾ ಶಿಕ್ಷೆ ಅದೇಕೆ ನೀ ಹೀಗೆ ಸಣ್ಣ ಸುಳಿವೂ ಕೊಡದೆ ಎದ್ದು ಹೋದೆ ಜೀವನ ಪೂರ್ತಿ ಅಂಟಿಕೊಂಡೇ ಇರುವ ಕನಸು ಬಿತ್ತಿ ಅದೇಕೆ ಹೀಗೆ ಅಪರಿಚಿತಳಂತಾದೆ ಈ ಪ್ರಶ್ನೆಗಳೂ ಮಳೆಯಂತೆಯೇ; ಶುರುವಾದರೆ ಜಿನುಗುತ್ತಲೇ ಇರುತ್ತವೆ!

ಪ್ರತಿ ಹೆಜ್ಜೆಯನ್ನೂ ಪ್ರಾಕ್ಟಿಕಲ್ಲಾಗಿ ಎತ್ತಿಡೋ ಈ ಜಗತ್ತು ನನ್ಯಾವ ಕನಲಿಕೆಗಳನ್ನೂ ಅರ್ಥ ಮಾಡಿಕೊಳ್ಳದಷ್ಟು ಮರಗಟ್ಟಿದೆ ಅಂತ ಆಕ್ರೋಶ ಹುಟ್ಟುತ್ತೆ ಒಮ್ಮೊಮ್ಮೆ. ಹೀಗೆ ಮಳೆ ಹಿಡಿದ ರಾತ್ರಿಗಳನ್ನೆಲ್ಲ ಲೋಕ ನಿಂದಿತನಂತೆ, ನಿರ್ಗತಿಕನಂತೆ ಕಳೆಯುವಂತಾ ದುರ್ಗತಿ ತಂದಿಟ್ಟ ನಿನ್ನ ಮೇಲೆ ಸಿಟ್ಟುಕ್ಕಿದರೆ ನಿರಾಳವಾಗುತ್ತಿತ್ತೇನೊ… ಆದರೆ ಒಂದು ಸಣ್ಣ ದ್ವೇಷದ ಬಿಂದುವಿಗೂ ಜಾಗವಿಲ್ಲದಷ್ಟು ಉತ್ಕಟವಾಗಿ ನಿನ್ನನ್ನು ಪ್ರೀತಿಸಿದೆ. ಸಾಧ್ಯವಾದರೆ ಅದೊಂದು ತಪ್ಪನ್ನು ಕ್ಷಮಿಸಿಬಿಡು ಜೀವವೇ…

ನೀನು ಬದುಕೆಂದರೆ ಹೊಸಾ ಹುರುಪಿನ ಕೌದಿ ನೇಯುವ ಸುಂದರ ಕಸುಬೆಂದುಕೊಂಡವಳು. ಕ್ಷಣ ಕ್ಷಣವೂ ಕೊಂದರೂ ನಿನ್ನ ನೆನಪಲ್ಲಿ ಬೇಯೋದಕ್ಕಿಂತ ಬೇರೆ ಸುಖ ಜಗತ್ತಿನಲ್ಲಿನ್ನೂ ಹುಟ್ಟಿಲ್ಲವೆಂದು ನಂಬಿ ಕೂತವನು ನಾನು. ಕೆಲವೊಮ್ಮೆ ಶತಪ್ರಯತ್ನ ಮಾಡಿ ನಿನ್ನ ನೆನಪುಗಳಿಂದ ಕಳಚಿಕೊಂಡು ಮುನ್ನಡೆಯುತ್ತೇನೆ. ಅದೆಷ್ಟೇ ದೂರ ನಡೆದರೂ ಮತ್ತೆ ಹಾಳು ಮಳೆಯೊಂದು ಎಲ್ಲ ನೆನಪು, ನರಳಿಕೆಯನ್ನೂ ಎದೆ ತುಂಬಿಸಿ ಮಾಯವಾಗುತ್ತೆ. ಇದೆಷ್ಟು ದಿನದ ಆಟವೋ ಬಲ್ಲವರ‍್ಯಾರು ಆದರೆ ಇಂಥಾದ್ದೇ ಒಂದು ಮಳೆಗಾಲದ ಎಳೆಯ ಹನಿಗಳು ಮುಂದ್ಯಾವತ್ತೋ ನಿನ್ನ ಮನಸಿಗೂ ಮುತ್ತಿಡಬಹುದು. ಆ ಕ್ಷಣದಲ್ಲಿ ನನ್ನ ನೆನಪಿನ ಮೊಗ್ಗರಳಿ ಹೂವಾಗಿ ಕಾಡಬಹುದು. ಆ ಕ್ಷಣ ನಿನ್ನ ಮುಖದ ಸುಕ್ಕುಗಳಲ್ಲಿ ಒಂದು ಖುಷಿಯೋ ವಿಷಾದವೋ ಹೊತ್ತಿಕೊಳ್ಳುತ್ತದಲ್ಲಾ ಅಂಥಾದ್ದೊಂದು ಕ್ಷಣದಲ್ಲಿ ಬರಗಾಲ ಬಡಿದಿದ್ದರೂ ನಾನಿರುವ ಶಹರದಲ್ಲೊಂದು ಮಳೆಯಾದೀತು!

– ನಾನು ಪ್ರತೀ ಮಳೆಯಲೂ ಮತ್ತೆ ಹುಟ್ಟುವ ಹುಂಬ ಗರಿಕೆಯಂಥವನು

[adning id="4492"]

LEAVE A REPLY

Please enter your comment!
Please enter your name here