ಪವರ್ ಸ್ಟಾರ್ ನೆರಳಲ್ಲಿ ಫ್ಯಾಮಿಲಿ ಪ್ಯಾಕ್!

[adning id="4492"]

ಕೊರೋನಾ ಬಾಧೆ ಮುಗಿದೇಟಿಗೆ ಚಾಲನೆ!
ವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಫ್ಯಾಮಿಲಿ ಪ್ರೇಕ್ಷಕರ ಪಾಲಿಗೂ ಫೇವರಿಟ್ ಹೀರೋ. ನಾಯಕ ನಟನಾಗಿ ಒಂದರ ಬೆನ್ನಿಗೊಂದು ಸಿನಿಮಾಗಳಲ್ಲಿ ಬ್ಯುಸಿಯಾಗಿರೋ ಅವರು ಪಿಆರ್‌ಕೆ ಬ್ಯಾನರ್ ಮೂಲಕ ಹೊಸಾ ಪ್ರತಿಭೆಗಳ ಬೆನ್ತಟ್ಟುವ ಕೆಲಸವನ್ನೂ ಚಾಲನೆಯಲ್ಲಿಟ್ಟಿದ್ದಾರೆ. ಈ ಮೂಲಕ ತನ್ನ ಅಭಿಮಾನಿ ಬಳಗವನ್ನು ಭಿನ್ನ ಕಥೆಗಳ ಮೂಲಕ ಸಂತೃಪ್ತಗೊಳಿಸೋ ಇರಾದೆ ಅವರದ್ದು. ಈಗಾಗಲೇ ಒಂದಷ್ಟು ಸಿನಿಮಾಗಳು ಈ ಸಂಸ್ಥೆಯ ಮೂಲಕ ನಿರ್ಮಾಣಗೊಂಡು ಹಿಟ್ ಆಗಿವೆ. ಪಿಆರ್‌ಕೆ ಬ್ಯಾನರಿನಡಿಯಲ್ಲಿ ಫ್ಯಾಮಿಲಿ ಪ್ಯಾಕ್ ಅಂತೊಂದು ಚಿತ್ರ ನಿರ್ಮಾಣಗೊಳ್ಳಲಿದೆ ಎಂಬ ಸುದ್ದಿ ಈ ಹಿಂದೆಯೇ ಹಬ್ಬಿಕೊಂಡಿತ್ತು. ಆ ಚಿತ್ರದ ಆರಂಭಕ್ಕೆ ಕೊರೋನಾ ಬಾಧೆ ಕಂಟಕವಾಗಿದ್ದರೂ ಕೂಡಾ ತಯಾರಿಗೆ ಮಾತ್ರ ಯಾವ ಭಂಗವೂ ಉಂಟಾಗಿಲ್ಲ!


ಇದು ಎಸ್. ಅರ್ಜುನ್ ಕುಮಾರ್ ನಿರ್ದೇಶನದಲ್ಲಿ ಮೂಡಿ ಬರಲಿರೋ ಚಿತ್ರ. ವರ್ಷಗಳ ಹಿಂದೆ ಸಂಕಷ್ಟಕರ ಗಣಪತಿ ಎಂಬೊಂದು ಚಿತ್ರ ತೆರೆಗಂಡಿತ್ತಲ್ಲಾ? ಅದನ್ನು ನಿರ್ದೇಶನ ಮಾಡಿ ಮೆಚ್ಚುಗೆ ಗಳಿಸಿಕೊಂಡಿದ್ದವರು ಅರ್ಜುನ್ ಕುಮಾರ್. ಅದರಲ್ಲಿ ಲಿಖಿತ್ ನಾಯಕನಾಗಿ ನಟಿಸಿದ್ದರು. ಅತ್ಯಂತ ವಿಚಿತ್ರ ಅನ್ನಿಸುವಂಥ ಖಾಯಿಲೆಯ ಸುತ್ತಾ ಹೆಣೆಯಲ್ಪಟ್ಟಿದ್ದ ಈ ಕಥೆ ಪ್ರೇಕ್ಷಕರಿಗೆಲ್ಲ ಇಷ್ಟವಾಗಿತ್ತು. ಆ ನಂತರದಲ್ಲಿ ಸುದೀರ್ಘ ಕಾಲಾವಧಿ ತೆಗೆದುಕೊಂಡು ಮತ್ತೊಂದು ಬಗೆಯ ಕಥೆಯನ್ನು ಸಿದ್ಧಪಡಿಸಿಕೊಳ್ಳಲಾಗಿದೆ. ಅದು ಪುನೀತ್ ರಾಜ್‌ಕುಮಾರ್ ಅವರಿಗೂ ಇಷ್ಟವಾಗಿ ತಮ್ಮ ಪಿ ಆರ್ ಕೆ ಬ್ಯಾನರಿನಡಿಯಲ್ಲಿಯೇ ನಿರ್ಮಾಣ ಮಾಡಲು ಒಪ್ಪಿಗೆ ಸೂಚಿಸಿದ್ದಾರೆ.


ಈ ಚಿತ್ರದಲ್ಲಿಯೂ ಲಿಖಿತ್ ನಾಯಕನಾಗಿ ನಟಿಸಲಿದ್ದಾರೆ. ಪಾಪ್ ಕಾರ್ನ್ ಮಂಕಿ ಟೈಗರ್ ನಂತರದಲ್ಲಿ ಭಾರೀ ಅವಕಾಶಗಳನ್ನು ತನ್ನದಾಗಿಸಿಕೊಳ್ಳುತ್ತಿರೋ ಅಮೃತ ಅಯ್ಯಂಗಾರ್ ಲಿಖಿತ್‌ಗೆ ಜೋಡಿಯಾಗಿ ನಟಿಸಲಿದ್ದಾರೆ. ಇದರ ಕಥೆ ಸೇರಿದಂತೆ ಎಲ್ಲವೂ ಪೂರ್ಣಗೊಂಡು ಫೋಟೋಶೂಟ್ ಕೂಡಾ ಮುಗಿದಿತ್ತು. ಎಲ್ಲವೂ ಅಂದುಕೊಂಡಂತೆಯೇ ಆಗಿದ್ದರೆ ಕಳೆದ ತಿಂಗಳಲ್ಲಿಯೇ ಚಿತ್ರೀಕರಣವೂ ಚಾಲೂ ಆಗುತ್ತಿತ್ತು. ಲೊಕೇಷನ್ನು ಸೇರಿದಂತೆ ಎಲ್ಲವನ್ನು ನಿಗಧಿಪಡಿಸಿಕೊಂಡು ಚಿತ್ರೀಕರಣಕ್ಕೆ ಹೊರಡಲು ಇಡೀ ಚಿತ್ರತಂಡ ತಯಾರಾಗಿದ್ದ ಘಳಿಗೆಯಲ್ಲಿಯೇ ಕೊರೋನಾ ವೈರಸ್ ಹರಡಿಕೊಂಡು ಲಾಕ್‌ಡೌನ್ ಘೋಷಣೆಯಾದದ್ದರಿಂದ ಅದು ಸಾಧ್ಯವಾಗಿರಲಿಲ್ಲ. ಆದರೂ ನಿರಾಶೆಗೊಳ್ಳದೆ ಮತ್ತೊಂದಷ್ಟು ತಯಾರಿಗಾಗಿ ಈ ಕಾಲಾವಧಿಯನ್ನು ವಿನಿಯೋಗಿಸಿಕೊಳ್ಳುತ್ತಿರೋ ಚಿತ್ರತಂಡ ಲಾಕ್‌ಡೌನ್ ಮುಗಿದಾಕ್ಷಣವೇ ಚಿತ್ರೀಕರಣ ಆರಂಭಿಸಲು ತಯಾರಾಗಿದೆ.


ಫ್ಯಾಮಿಲಿ ಪ್ಯಾಕ್ ಎಂಬುದು ಪ್ರತಿಭಾವಂತರ ಪ್ಯಾಕೇಜಿನಂಥಾ ಚಿತ್ರತಂಡವನ್ನೊಳಗೊಂಡಿದೆ. ಈಗಾಗಲೇ ತಾರಾಗಣ ಮತ್ತು ತಾಂತ್ರಿಕ ವರ್ಗವೂ ನಿಕ್ಕಿಯಾಗಿದೆ. ಮಾಸ್ತಿ ಮಂಜು ಸಂಭಾಷಣೆ ಬರೆದರೆ, ಗುರುಕಿರಣ್ ಸಂಗೀತ ಸಂಯೋಜನೆ ಮಾಡಲಿದ್ದಾರೆ. ಸಂಪೂರ್ಣವಾಗಿ ಕಾಮಿಡಿ ಕಥಾನಕವನ್ನೊಳಗೊಂಡಿರೋ ಈ ಸಿನಿಮಾದಲ್ಲಿ ಅದ್ದೂರಿ ತಾರಾಗಣವಿರಲಿದೆ. ರಂಗಾಯಣ ರಘು, ಅಚ್ಯುತ್ ಕುಮಾರ್, ಅಶ್ವಿನಿ ಗೌಡ, ತಿಲಕ್ ಮುಂತಾದವರು ಪ್ರಧಾನ ಪಾತ್ರಗಳನ್ನು ನಿರ್ವಹಿಸಿಸಲಿದ್ದಾರೆ. ಈ ಹಿಂದೆ ಸಂಕಷ್ಟಕರ ಗಣಪತಿ ಚಿತ್ರದಲ್ಲಿ ಏಲಿಯನ್ ಹ್ಯಾಂಡ್ ಸಿಂಡ್ರೋಮ್ ಎಂಬ ವಿಚಿತ್ರ ರೋಗದ ಸುತ್ತ ಅರ್ಜುನ್ ಕಥೆ ಹೆಣೆದಿದ್ದರು. ಫ್ಯಾಮಿಲಿ ಪ್ಯಾಕಿನಲ್ಲಿ ಮತ್ತೊಂದು ಬಗೆಯ ಅಚ್ಚರಿ ಪ್ರೇಕ್ಷಕರನ್ನು ಎದುರುಗೊಳ್ಳೋದರಲ್ಲಿ ಯಾವ ಸಂದೇಹವೂ ಇಲ್ಲ.


ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಪಿಆರ್‌ಕೆ ಈಗಾಗಲೇ ಯಶಸ್ವೀ ನಿರ್ಮಾಣ ಸಂಸ್ಥೆಯಾಗಿ ಗುರುತಿಸಿಕೊಂಡಿದೆ. ಇದರಡಿಯಲ್ಲೊಂದು ಸಿನಿಮಾ ನಿರ್ಮಾಣಗೊಳ್ಳುತ್ತದೆಯೆಂದರೆ ಅದರದ್ದು ಪಕ್ಕಾ ವಿಶೇಷ ಕಥೆಯಾಗಿರುತ್ತದೆಂಬ ನಂಬಿಕೆ ಪ್ರೇಕ್ಷಕರೆಲ್ಲರಲ್ಲಿಯೂ ಮೂಡಿಕೊಂಡಿದೆ. ಅದು ಮುಕ್ಕಾಗದಂತೆ ಎಚ್ಚರ ವಹಿಸುತ್ತಾ, ಯುವ ಪ್ರತಿಭಾವಂತರಿಗೆ ವೇದಿಕೆ ಒದಗಿಸುತ್ತಿರೋ ಪುನೀತ್, ಫ್ಯಾಮಿಲಿ ಪ್ಯಾಕ್ ಕಥೆಯನ್ನು ಬಲು ಇಷ್ಟದಿಂದಲೇ ಆಯ್ಕೆ ಮಾಡಿಕೊಂಡಿದ್ದಾರೆ. ಇದೂ ಕೂಡಾ ಪಿಆರ್‌ಕೆ ಸಂಸ್ಥೆಯ ಹಿಟ್ ಲಿಸ್ಟ್ ಸೇರಿಕೊಳ್ಳೋ ಗಾಢ ಲಕ್ಷಣಗಳಿದ್ದಾವೆ. ಅಂದಹಾಗೆ ಈ ಸಿನಿಮಾ ಕನ್ನಡದ ಮಟ್ಟಿಗೆ ತೀರಾ ಹೊಸತೆನ್ನಿಸುವಂಥಾ ಗುಣಲಕ್ಷಣಗಳನ್ನು ಹೊಂದಿದೆಯಂತೆ. ಲಾಕ್‌ಡೌನ್ ಮುಗಿದಾಕ್ಷಣವೇ ಈ ಸಿನಿಮಾ ಪವರ್‌ಸ್ಟಾರ್ ನೆರಳಲ್ಲಿ ವೇಗವಾಗಿಯೇ ರೂಪುಗೊಳ್ಳಲಿದೆ.

[adning id="4492"]

LEAVE A REPLY

Please enter your comment!
Please enter your name here