ಎಂಥ ಸಾವು ಮಾರಾಯ ಹಾಡು ಸೂಪರ್ ಹಿಟ್!

[adning id="4492"]

ಇದು ಶರಾವತಿ ಕಣಿವೆಯ ಕದಲಿಕೆಗೆ ಕಣ್ಣಾಗೋ ಕಥೆ!
ಲ್ಲೆಲ್ಲೋ ಚೀನಾದಲ್ಲಿ ಹುಟ್ಟಿಕೊಂಡ ಕಂಡು ಕೇಳರಿಯದ ಕೊರೋನಾ ವ್ಯಾಧಿ ವಿಶ್ಯಾದ್ಯಂತ ವ್ಯಾಪಿಸಿ ಭಾರತವನ್ನೂ ಆವರಿಸಿಕೊಂಡಿದೆ. ಅದರ ಹೊಡೆತಕ್ಕೆ ಸಿಕ್ಕು ಕರ್ನಾಟಕವೂ ಸ್ತಬ್ಧವಾಗಿರುವಾಗ ಚಿತ್ರರಂಗದ ಕಾರ್ಯ ಚಟುವಟಿಕೆಗಳೂ ಸ್ಥಗಿತಗೊಂಡಿವೆ. ಇಂಥಾದ್ದೊಂದು ವಿಷಮ ಸನ್ನಿವೇಷದಲ್ಲಿಯೂ ಕೆಲ ಸಿನಿಮಾಗಳು ನಾನಾ ಸ್ವರೂಪದಲ್ಲಿ ಸುದ್ದಿಯಾಗುತ್ತಿವೆ. ಮುಂದೇನೆಂಬುದೇ ಮಸುಕಾದ ಸ್ಥಿತಿಯಲ್ಲಿ ದಿಕ್ಕೆಟ್ಟಿರೋ ಜನರಿಗೆ ರಿಲೀಫು ಕೊಡುವಂಥಾ ಒಂದಷ್ಟು ವಿದ್ಯಮಾನಗಳು ಚಿತ್ರರಂಗದ ಕಡೆಯಿಂದ ಜರುಗುತ್ತಲೇ ಇದ್ದಾವೆ. ಅದರ ಭಾಗವಾಗಿಯೇ ಇದೀಗ ಎಂಥ ಕಥೆ ಮಾರಾಯ ಎಂಬ ಚಿತ್ರದ ವಿಶಿಷ್ಟ ಹಾಡೊಂದು ಬಿಡುಗಡೆಯಾಗಿ ಅತ್ಯಂತ ಕಡಿಮೆ ಅವಧಿಯಲ್ಲಿಯೇ ಹಿಟ್ ಆಗಿದೆ. ಒಂದೇ ಸಲಕ್ಕೆ ಒಳಗಿಳಿದು ನಾನಾ ದಿಕ್ಕಿನಲ್ಲಿ ಆವರಿಸಿಕೊಂಡು ಕಾಡುವ ಗುಣ ಹೊಂದಿರೋ ಈ ಹಾಡಿನ ಬಲದಿಂದಲೇ ಎಂಥ ಕಥೆ ಮಾರಾಯ ಚಿತ್ರವೀಗ ಮುನ್ನೆಲೆಗೆ ಬಂದಿದೆ.


ರಕ್ಷಿತ್ ತೀರ್ಥಹಳ್ಳಿ ನಿರ್ದೇಶನದ ಈ ಚಿತ್ರದ ಎಂಥ ಸಾವು ಮಾರಾಯ ಎಂಬ ಹಾಡು ಕೆಲ ದಿನಗಳ ಹಿಂದಷ್ಟೇ ಬಿಡುಗಡೆಯಾಗಿತ್ತು. ಸಂಗೀತ, ಸಾಹಿತ್ಯ ಸೇರಿದಂತೆ ಎಲ್ಲದರಲ್ಲಿಯೂ ಭಿನ್ನ ಧಾಟಿಯಲ್ಲಿ ಮೂಡಿ ಬಂದಿದ್ದ ಈ ಹಾಡನ್ನು ಎಲ್ಲರೂ ಮೆಚ್ಚಿಕೊಂಡಿದ್ದರು. ಹಾಗೆ ವೇಗವಾಗಿ ಎಲ್ಲೆಡೆ ಹಬ್ಬಿಕೊಂಡಿದ್ದ ಈ ಹಾಡಿನ ಹವಾ ಈಗ ಪ್ರತಿಯೊಬ್ಬರನ್ನೂ ಮೋಡಿಗೀಡು ಮಾಡಿದೆ. ಈ ಹಾಡನ್ನು ಸ್ವತಃ ನಿರ್ದೇಶಕ ರಕ್ಷಿತ್ ಬರೆದಿದ್ದಾರೆ. ಸೂರ್ಯ ಚಂದ್ರ ಮುಗಿಲೊಳಗೆ ಹೋಗಿ ಇಲ್ದಿದ್ರೆ ನಿಮ್ಗೂನು ಸಾವಾಗ್ತದೆ ಅಂತ ಶುರುವಾಗೋ ಈ ಹಾಡು ಪ್ರತೀ ಪದಗಳಲ್ಲಿಯೂ ಹಿಡಿದಿಡುವಂತಿದೆ. ಇದಕ್ಕೆ ಹೇಮಂತ್ ಜೋಯಿಸ್ ಸಂಗೀತ ನೀಡಿದ್ದರೆ, ಕೆಜಿಎಫ್ ಖ್ಯಾತಿಯ ಅನನ್ಯಾ ಭಟ್ ಹಾಡಿದ್ದಾರೆ. ಕೇಳಿದ ಬಳಿಕ ಮನಸಲ್ಲೇ ಕೂತು ಬಿಡುವಷ್ಟು ಶಕ್ತವಾಗಿರೋ ಈ ಹಾಡು ಕೊರೋನಾ ಬಾಧೆಯ ನಡುವೆಯೂ ವಿಶೇಷ ಅನುಭೂತಿಯನ್ನು ಕೊಡಮಾಡಿದೆ.


ಇದು ಸಂಚಲನ ಮೂವೀಸ್ ಬ್ಯಾನರಿನಡಿಯಲ್ಲಿ ರಾಮಕೃಷ್ಣ ನಿಗಡೆ ನಿರ್ಮಾಣ ಮಾಡಿರುವ ಚಿತ್ರ. ವೇದಾಂತ್ ಸುಬ್ರಹ್ಮಣ್ಯ, ಸುಧೀರ್, ಶ್ರೀಪ್ರಿಯಾ ಮುಂತಾದವರು ನಟಿಸಿರೋ ಎಂಥ ಕಥೆ ಮಾರಾಯ ಚಿತ್ರ ಮಲೆನಾಡು ಭಾಗದ ಆಡುಭಾಷೆಯ ಛಾಯೆಯೊಂದಿಗೆ ಗಮನ ಸೆಳೆದಿತ್ತು. ಈ ಶೀರ್ಷಿಕೆಯೇ ಸದರಿ ಚಿತ್ರದ ಬಗ್ಗೆ ನಾನಾ ದಿಕ್ಕಿನಲ್ಲಿ ಆಲೋಚಿಸುವಂತೆ, ಕುತೂಹಲಗೊಳ್ಳುವಂತೆ ಮಾಡಿ ಬಿಟ್ಟಿದೆ. ಈ ಬಗ್ಗೆ ನಿರ್ದೇಶಕರೇ ಒಂದಷ್ಟು ಸೂಕ್ಷ್ಮ ಸಂಗತಿಯನ್ನು ಹೇಳಿಕೊಂಡಿದ್ದಾರೆ. ಸೋಶಿಯಲ್ ಕಾಮಿಡಿ ಡ್ರಾಮ ಜಾನರಿನಲ್ಲಿ ಮೂಡಿ ಬಂದಿದೆ ಅಂತ ಹೇಳಬಹುದಾದರೂ ಯಾವ ಚೌಕಟ್ಟಿಗೂ ನಿಲುಕದಂಥಾ ಕಥೆಯನ್ನು ಈ ಚಿತ್ರ ಹೊಂದಿದೆಯಂತೆ. ಅಷ್ಟಕ್ಕೂ ಈ ಹಿಂದೆ ಇದೇ ರಕ್ಷಿತ್ ನಿರ್ದೇಶನ ಮಾಡಿದ್ದ ಹೊಂಬಣ್ಣ ಚಿತ್ರ ನೋಡಿದವರಿಗೆಲ್ಲ ಎಂಥ ಕಥೆ ಮಾರಾಯದತ್ತಲೂ ಕ್ಯೂರಿಯಾಸಿಟಿ ಮೂಡೋದರಲ್ಲಿ ಎರಡು ಮಾತಿಲ್ಲ.


ಹೊಂಬಣ್ಣ ಚಿತ್ರದಲ್ಲಿ ಮಲೆನಾಡೊಳಗೆ ಜನಸಾಮಾನ್ಯರಿಗೆಲ್ಲ ಬಾಧಿಸುತ್ತಿರುವ ಒತ್ತುವರಿ ಸಮಸ್ಯೆಯ ಸುತ್ತ ರಕ್ಷಿತ್ ಚೆಂದದ ಕಥೆ ಹೆಣೆದಿದ್ದರು. ಅದು ಪ್ರೇಕ್ಷಕರಿಗೆ ಇಷ್ಟವೂ ಆಗಿತ್ತು. ಈ ಬಾರಿ ಅವರ ಚಿತ್ರ ಮತ್ತೆ ಮಲೆನಾಡಿನೊಳಗೇ ಗಿರಕಿ ಹೊಡೆದಿದೆ. ಆದರದು ಈ ಬಾರಿ ಮಲೆನಾಡ ಜೀವನದಿ ಶರಾವತಿಯ ಕಣಿವೆಯ ಸುತ್ತ ಕೀಲಿಸಿಕೊಂಡಿದೆ. ತೀರ್ಥಹಳ್ಳಿ ಸೀಮೆಯ ಅಂಬುತೀರ್ಥದಲ್ಲಿ ಹುಟ್ಟಿ ಹೊನ್ನಾವರದಲ್ಲಿ ಕಡಲು ಸೇರೋ ಈ ಶರಾವತಿಯ ಹರಿವಿನುದ್ದಕ್ಕೂ ಹಲವಾರು ಅಭಿವೃದ್ಧಿ ಚಟುವಟಿಕೆಯಿಂದ ಜನ ಕಂಗಾಲಾಗುತ್ತಾ ಬಂದಿದ್ದಾರೆ. ಅದೆಷ್ಟೋ ಊರುಗಳೇ ಎದ್ದು ದಿಕ್ಕಾಪಾಲಾಗಿವೆ. ಅದೆಷ್ಟೋ ಕಾಡು ಕಣ್ಮರೆಯಾಗಿದೆ. ಈ ಕ್ಷಣಕ್ಕೂ ಅಭಿವೃದ್ಧಿಯ ಹೆಸರಿನ ಕಾಕದೃಷ್ಟಿ ಶರಾವತಿ ಕಣಿವೆಯತ್ತಲೇ ಬೀರುತ್ತಿದೆ.


ಇಂಥಾ ಸೂಕ್ಷ್ಮ ಕಥಾನಕವನ್ನು ಮಲೆನಾಡಿನ ಬದುಕು ಬವಣೆಯೊಂದಿಗೆ ಪಕ್ಕಾ ಕಮರ್ಶಿಯಲ್ ಶೈಲಿಯಲ್ಲಿ ರಕ್ಷಿತ್ ದೃಷ್ಯೀಕರಿಸಿದ್ದಾರಂತೆ. ಈಗಾಗಲೇ ಈ ಚಿತ್ರದ ಬಹುತೇಕ ಚಿತ್ರೀಕರಣ ಮುಗಿದಿದೆ. ಎರಡು ದಿನಗಳ ಕಾಲ ಬೆಂಗಳೂರಿನಲ್ಲಿ ಚಿತ್ರೀಕರಣವಾಗಿದ್ದರೆ ಇಡೀ ಚಿತ್ರ ಕಂಪ್ಲೀಟಾಗುತ್ತಿತ್ತು. ಆದರದು ಕೊರೋನಾದಿಂದ ಮುಂದಕ್ಕೆ ಹೋಗಿತ್ತಷ್ಟೆ. ಸದ್ಯಕ್ಕೆ ಬಾಕಿ ಉಳಿದಿರೋದು ಅದು ಮಾತ್ರ. ಅಂತೂ ಈ ಚಿತ್ರ ವಿಭಿನ್ನ ಕಥೆಯನ್ನೊಳಗೊಂಡಿದೆ ಅನ್ನೋದಕ್ಕೆ ಎಂಥ ಸಾವು ಮಾರಾಯ ಹಾಡಿಗಿಂತಲೂ ಬೇರೆ ಸಾಕ್ಷಿ ಬೇಕಿಲ್ಲ. ಒಟ್ಟಾರೆ ಕಥೆಯ ಸೂಕ್ಷ್ಮ ಒಳನೋಟಗಳನ್ನು ಬಚ್ಚಿಟ್ಟುಕೊಂಡಂತಿರೋ ಈ ಹಾಡಿನ ಮೂಲಕವೇ ಈ ಸಿನಿಮಾ ಕಥೆ ಎಂಥಾದ್ದಿರಬಹುದೆಂಬ ಚರ್ಚೆ ಆರಂಭವಾಗಿದೆ.

[adning id="4492"]

LEAVE A REPLY

Please enter your comment!
Please enter your name here