ಶ್ರೇಯಸ್ ಹುಟ್ಟುಹಬ್ಬಕ್ಕೆ ವಿಷ್ಣುಪ್ರಿಯ ಪೋಸ್ಟರ್ ಉಡುಗೊರೆ!

[adning id="4492"]

ಹುಟ್ಟುಹಬ್ಬದಂದು ಹಸಿದ ಹೊಟ್ಟೆ ತಣಿಸೋ ಕಾಯಕ!
ನ್ನಡ ಚಿತ್ರರಂಗದ ಮುಂಚೂಣಿ ನಿರ್ಮಾಪಕರಲ್ಲೊಬ್ಬರಾದ ಕೆ.ಮಂಜು ಪುತ್ರ ಶ್ರೇಯಸ್ ನಾಯಕನಾಗಿ ನಟಿಸಿರುವ ಎರಡನೇ ಚಿತ್ರ ವಿಷ್ಣುಪ್ರಿಯ. ಗುರು ದೇಶಪಾಂಡೆ ನಿರ್ದೇಶನದ ಪಡ್ಡೆಹುಲಿ ಚಿತ್ರದಲ್ಲಿ ಮಾಸ್ ಲುಕ್ಕಲ್ಲಿ ಮಿಂಚಿ ಸೈ ಅನ್ನಿಸಿಕೊಂಡಿದ್ದ ಶ್ರೇಯಸ್ ಈ ಚಿತ್ರದಲ್ಲಿ ಅದಕ್ಕಿಂತಲೂ ತೀವ್ರವಾದ ಮಾಸ್ ಕ್ಯಾರೆಕ್ಷರ್‌ನಲ್ಲಿ ಕಾಣಿಸಿಕೊಂಡಿದ್ದಾರಂತೆ. ಮೊದಲ ಚಿತ್ರ ತೆರೆಕಂಡ ತಕ್ಷಣವೇ ಆ ಹೀರೋನ ಮುಂದಿನ ಸಿನಿಮಾ ಯಾವುದೆಂಬುದರ ಬಗ್ಗೆ ಪ್ರೇಕ್ಷಕರು ಕಾತರರಾಗೋದಿದೆಯಲ್ಲಾ? ಅದು ಅತ್ಯಂತ ವಿರಳ ಬೆಳವಣಿಗೆ. ವಿಶೇಷವೆಂದರೆ ಶ್ರೇಯಸ್ ಅದಕ್ಕೆ ಕಾರಣರಾಗಿದ್ದರು. ಅದಕ್ಕುತ್ತರವಾಗಿ ಘೋಷಣೆಯಾಗಿದ್ದ ವಿಷ್ಣುಪ್ರಿಯ ಚಿತ್ರವೀಗ ವೇಗವಾಗಿ ಚಿತ್ರೀಕರಣ ಮುಗಿಸಿಕೊಂಡು ಬಿಡುಗಡೆಗೆ ರೆಡಿಯಾಗಿದೆ. ಇದೀಗ ಶ್ರೇಯಸ್ ಹುಟ್ಟುಹಬ್ಬದ ಕೊಡುಗೆಯಾಗಿ ಈ ಸಿನಿಮಾದ ಪೋಸ್ಟರ್ ಬಿಡುಗಡೆಗೊಂಡಿದೆ.


ಈಗ ಶ್ರೇಯಸ್ ಹುಟ್ಟುಹಬ್ಬದ ಉಡುಗೊರೆಯಾಗಿ ಬಿಡುಗಡೆಯಾಗಿರೋ ಪೋಸ್ಟರ್‌ಗಳು ಇಡೀ ಸಿನಿಮಾ ಕಥೆಯ ಹಲವು ಮಜಲುಗಳನ್ನು ತೆರೆದಿಟ್ಟಿವೆ. ಪಡ್ಡೆಹುಲಿ ಸಿನಿಮಾ ನೋಡಿದ್ದ ಯಾರೇ ಆದರೂ ಶ್ರೇಯಸ್ ಅವರನ್ನು ಮಾಸ್ ಇಮೇಜಿಗೆ ನಿಕ್ಕಿ ಮಾಡಿಕೊಳ್ಳುತ್ತಾರೆ. ಆದ್ದರಿಂದಲೇ ಅವರ ನಟನೆಯ ಎರಡನೇ ಚಿತ್ರ ವಿಷ್ಣುಪ್ರಿಯದ ಬಗ್ಗೆಯೂ ಅಂಥಾದ್ದೇ ನಿರೀಕ್ಷೆಗಳಿದ್ದವು. ಹಾಗಾದರೆ ಈ ಚಿತ್ರದಲ್ಲಿಯೂ ಅವರು ಮಾಸ್ ಇಮೇಜಿನಲ್ಲಿ ಕಂಗೊಳಿಸಲಿದ್ದಾರಾ? ಇದರ ವಿಶೇಷತೆಗಳೇನು ಅನ್ನೋದರ ಬಗ್ಗೆ ಖುದ್ದು ಶ್ರೇಯಸ್ ಅವರೇ ಒಂದಷ್ಟು ವಿವರಗಳನ್ನಿಲ್ಲಿ ಹಂಚಿಕೊಂಡಿದ್ದಾರೆ. ಅದರ ಆಧಾರದಲ್ಲಿ ಹೇಳೋದಾದರೆ, ಪಡ್ಡೆಹುಲಿ ಚಿತ್ರದಲ್ಲಿ ಕಾಣಿಸಿಕೊಂಡಿರೋ ಶ್ರೇಯಸ್‌ಗಿಂತಲೂ ಭಿನ್ನವಾದ ಶ್ರೇಯಸ್ ಈ ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಅವತರಿಸಲಿದ್ದಾರೆ.


ಯಾರೇ ಯಶಸ್ವೀ ನಟರಾದರೂ ಒಂದು ಸಿನಿಮಾದಿಂದ ಮತ್ತೊಂದಕ್ಕೆ ಸಂಪೂರ್ಣ ಬದಲಾವಣೆಯೊಂದಿಗೆ ಪ್ರೇಕ್ಷಕರನ್ನು ತಲುಪಿಕೊಳ್ಳುವ ತಪನೆ ಹೊಂದಿರುತ್ತಾರೆ. ಅಂಥಾದ್ದೇ ಮನಸ್ಥಿತಿ ಹೊಂದಿರೋ ಶ್ರೇಯಸ್ ಒಂದಷ್ಟು ಭಯವಿಟ್ಟುಕೊಂಡೇ ಈ ಭಿನ್ನ ಕಥಾನಕವನ್ನು ಒಪ್ಪಿಕೊಂಡಿದ್ದರಂತೆ. ಆದರೀಗ ಸಂಪೂರ್ಣವಾಗಿ ತಯಾರುಗೊಂಡಿರೋ ಸಿನಿಮಾ ನೋಡಿದ ಮೇಲೆ ಅವರಲ್ಲಿಯೇ ಒಂದು ಭರವಸೆ ಮೂಡಿಕೊಂಡಿದೆಯಂತೆ. ಇಲ್ಲಿ ಪಡ್ಡೆಹುಲಿಯಲ್ಲಿ ಕಾಣಿಸಿದ್ದಕ್ಕಿಂತಲೂ ಭಿನ್ನವಾದ, ಅದರ ಛಾಯೆಗೆ ಹೊರತಾದ ಪಾತ್ರದಲ್ಲಿ ಕಾಣಿಸಿಕೊಂಡಿರೋ ಖುಷಿ ಶ್ರೇಯಸ್ ಅವರಲ್ಲಿದೆ. ಇದು ಸಂಪೂರ್ಣವಾಗಿ ಬೇರೆಯದ್ದೇ ಥರದ ಕಥೆ. ಇಲ್ಲಿ ಮೂರು ಫೈಟ್ ಸೀನುಗಳಿವೆಯಾದರೂ ಅದೂ ಕೂಡಾ ಪ್ರೇಕ್ಷಕರಿಗೆ ಹೊಸಾ ಫೀಲ್ ಕೊಡುವಂತೆ ಮೂಡಿ ಬಂದಿದೆಯಂತೆ. ಇದೀಗ ಕೊರೋನಾ ಬಾಧೆಯಿಂದ ತತ್ತರಿಸಿರುವ ಜನರಿಗೆ ರಿಲೀಫ್ ಎಂಬಂತೆ ಈ ಸಿನಿಮಾದ ಪೋಸ್ಟರ್ ಲಾಂಚ್ ಆಗಿದೆ.


ಪ್ರತೀ ಬಾರಿಯೂ ಶ್ರೇಯಸ್ ತಮ್ಮ ಹುಟ್ಟುಹಬ್ಬವನ್ನು ಆಡಂಬರವಿಲ್ಲದೆ, ಅವಶ್ಯಕತೆ ಇರುವವರಿಗೆ ಒಂದಷ್ಟು ಸಹಾಯ ಮಾಡುತ್ತಾ ಮುನ್ನಡೆದುಕೊಂಡು ಬರುತ್ತಿದ್ದಾರೆ. ಈ ಬಾರಿಯಂತೂ ಅತ್ಯಂತ ಸಾರ್ಥಕವಶಾಗಿಯೇ ಅವರು ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಕೊರೋನಾ ಬಾಧೆಯಿಂದಾಗಿ ಇಡೀ ದೇಶವೇ ಲಾಕ್ ಡೌನಾಗಿದೆ. ಬೆಂಗಳೂರಿನಂಥ ಮಹಾ ನಗರದಲ್ಲಿ ಅದೆಷ್ಟೋ ಮಂದಿ ಅನ್ನಾಹಾರವಿಲ್ಲದೆ ಕಂಗಾಲಾಗಿದ್ದಾರೆ. ಒಂದು ಸ್ವಯಂ ಸೇವಾ ಸಂಘಟನೆಯೊಂದಿಗೆ ಕೈ ಜೋಡಿಸಿರುವ ಶ್ರೇಯಸ್ ಇಂದು ಹಸಿದ ಜೀವಗಳಿಗೆಲ್ಲ ಆಹಾರ ಹಂಚಿದ್ದಾರೆ. ಈ ಮೂಲಕ ತಮ್ಮ ಹುಟ್ಟುಹಬ್ಬವನ್ನು ಸಂಪನ್ನಗೊಳಿಸಿಕೊಳ್ಳುತ್ತಿದ್ದಾರೆ. ಅದರ ಜೊತೆಗೇ ವಿಷ್ಣುಪ್ರಿಯ ಚಿತ್ರದ ಪೋಸ್ಟರ್ ಲಾಂಚ್ ಆಗಿರೋದು ಅವರ ಖುಷಿಯನ್ನು ಇಮ್ಮಡಿಸಿದೆ.


ಶ್ರೇಯಸ್ ಕನ್ನಡ ಚಿತ್ರರಂಗದ ಮುಂಚೂಣಿ ನಿರ್ಮಾಪಕ ಕೆ. ಮಂಜು ಅವರ ಪುತ್ರ. ಈತ ಗುರು ದೇಶಪಾಂಡೆ ನಿರ್ದೇಶನದ ಪಡ್ಡೆಹುಲಿ ಚಿತ್ರದ ಮೂಲಕ ನಾಯಕನಾಗಿ ಎಂಟ್ರಿ ಕೊಡೋ ಸುದ್ದಿ ಬಂದಾಗ ಒಂದಷ್ಟು ಮಂದಿ ಮೂಗು ಮುರಿದಿದ್ದರೆ ಅಚ್ಚರಿಯೇನಿಲ್ಲ. ಅದರಲ್ಲಿ ಅತಿಶಯವೇನಿಲ್ಲ. ಯಾವುದೇ ತಯಾರಿ ಇಲ್ಲದೆ ಯಾರದ್ದೋ ಹೆಸರಿನ ಪ್ರಭೆಯಲ್ಲಿ ನಾಯಕರಾಗಿ ಕಾಸಿನ ಮದ ತೋರಿಸೋ ಮಂದಿ ಇರೋದರಿಂದ ಅಂಥಾದ್ದೊಂದು ಭಾವನೆ ಮೂಡಿಕೊಂಡಿದೆ. ಆದರೆ, ಶ್ರೇಯಸ್ ಮೊದಲ ಚಿತ್ರಕ್ಕಾಗಿ ಸಮರ್ಪಿಸಿಕೊಂಡಿದ್ದ ರೀತಿ ಮಾತ್ರ ಎಲ್ಲರನ್ನೂ ಚಕಿತುಗೊಳಿಸಿತ್ತು. ಅದನ್ನು ಕಂಡು ಶಹಬ್ಬಾಸ್ ಅನ್ನದಿದ್ದವರೇ ಇಲ್ಲ. ಆ ಮಟ್ಟಿಗೆ ನಟನಾಗಿ ಅವತರಿಸಿದ್ದ ಶ್ರೇಯಸ್ ಅಂಥಾದ್ದೇ ಶ್ರದ್ಧೆಯೊಂದಿಗೆ ವಿಷ್ಣುಪ್ರಿಯ ಚಿತ್ರದಲ್ಲಿಯೂ ನಾಯಕನಾಗಿ ನಟಿಸಿದ್ದಾರೆ. ಅದರ ಛಾಯೆ ಈ ಪೋಸ್ಟರಿನಲ್ಲಿ ಸ್ಪಷ್ಟವಾಗಿ ಗೋಚರಿಸಿದೆ.


ನಟನೆಯೂ ಸೇರಿದಂತೆ ಯಾವುದೇ ಕಲೆಯಾದರೂ ಬರೀ ಕಾಸಿಗೊಲಿಯುವಂಥಾದ್ದಲ್ಲ. ಚಿತ್ರರಂಗದಲ್ಲಿ ನಾಯಕನಾಗಿ ಗೆಲ್ಲಬೇಕೆಂದರೆ ಟ್ಯಾಲೆಂಟು, ಅದನ್ನು ದಕ್ಕಿಸಿಕೊಳ್ಳುವ ಛಲ, ಪರಿಶ್ರಮಗಳು ಅತ್ಯವಶ್ಯಕ. ಯಶಸ್ವಿ ನಿರ್ಮಾಪಕನ ಮಗನಾಗಿದ್ದರೂ ನಟನೆಯ ಹಸಿವನ್ನು ತುಂಬಿಕೊಂಡಿದ್ದ ಶ್ರೇಯಸ್ ಆ ವಾಸ್ತವವನ್ನು ಮನಗಂಡಿದ್ದರು. ಮಂಜು ಕೂಡಾ ಪರಿಪಕ್ವವಾಗಿಯೇ ತಮ್ಮ ಮಗನನ್ನು ಅಖಾಡಕ್ಕಿಳಿಸಲು ಎಲ್ಲ ತಯಾರಿಯನ್ನೂ ಮಾಡಿಕೊಂಡೇ ಬಂದಿದ್ದರು. ಹಾಗೊಂದು ವೇಳೆ ಅವಸರಕ್ಕೆ ಬಿದ್ದು ಮಗನನ್ನು ಹೀರೋ ಮಾಡಬೇಕೆಂದುಕೊಂಡಿದ್ದರೆ ಅವರಿಗದು ಕಷ್ಟದ ಕೆಲಸವಾಗಿರಲಿಲ್ಲ. ಆದರೂ ಶ್ರೇಯಸ್ ನಟನಾಗುವ ಸಿದ್ಧಿ ಪಡೆದುಕೊಂಡ ನಂತರವೇ ಅದರ ಬಗ್ಗೆ ಆಲೋಚಿಸೋ ನಿರ್ಧಾರ ತಳೆದು ಪಡ್ಡೆಹುಲಿಯ ಮೂಲಕ ಅದನ್ನು ಸಾಕಾರಗೊಳಿಸಿಕೊಂಡಿದ್ದರು.


ಮೊದಲ ಚಿತ್ರವಾದ ಪಡ್ಡೆಹುಲಿಯಲ್ಲಿ ಅನುಭವೀ ನಿರ್ದೇಶಕ ಗುರು ದೇಶಪಾಂಡೆ ಗರಡಿಯಲ್ಲಿ ಪಳಗಿಕೊಂಡಿದ್ದ ಶ್ರೇಯಸ್ ಮಾಸ್ ಹೀರೋ ಆಗಿ ಮಿಂಚುವ ಸೂಚನೆ ನೀಡಿದ್ದರು. ಆ ನಂತರದಲ್ಲಿ ಒಂದೊಳ್ಳೆ ಕಥೆಯ ತಲಾಶಿಗಿಳಿದು ಕಡೆಗೂ ವಿಷ್ಣುಪ್ರಿಯ ಚಿತ್ರವನ್ನು ಆರಿಸಿಕೊಂಡಿದ್ದರು. ಇದರಲ್ಲಿ ಕಣ್ಣೇಟಿನ ಸುಂದರಿ ಪ್ರಿಯಾ ವಾರಿಯರ್ ನಾಯಕಿಯಾಗಿ ನಟಿಸಿದ್ದಾರೆ. ವಿ.ಕೆ ಪ್ರಕಾಶ್ ನಿರ್ದೇಶನದ ಈ ಸಿನಿಮಾ ಸತ್ಯಘಟನೆಯಾಧಾರಿತವಾದದ್ದು. ಈ ಹಿಂದೆ ಪಡ್ಡೆಹುಲಿ ಚಿತ್ರದಲ್ಲಿ ಸಾಹಸ ಸಿಂಹನ ಅಭಿಮಾನಿಯಾಗಿ ನಟಿಸಿದ್ದ ಶ್ರೇಯಸ್ ಈ ಭಿನ್ನ ಕಥೆಯಲ್ಲಿಯೂ ಆ ಛಾಯೆಯ ಪಾತ್ರದಲ್ಲಿ ಮಿಂಚಿರುವಂತಿದೆ. ಎಲ್ಲ ಕೆಲಸ ಕಾರ್ಯಗಳನ್ನು ಮುಗಿಸಿಕೊಂಡಿರೋ ವಿಷ್ಣುಪ್ರಿಯ ಕೊರೋನಾ ಬಾಧೆ ನೀಗಿಕೊಂಡಾದ ನಂತರ ಪ್ರೇಕ್ಷಕರ ಮುಂದೆ ಬರಲಿದ್ದಾನೆ.

[adning id="4492"]

LEAVE A REPLY

Please enter your comment!
Please enter your name here