ನಿನ್ನ ನೆನಪೆಂಬುದು ನನ್ನೆದೆಯಲ್ಲಿ ಹುಗಿದಿಟ್ಟ ಹುಣ್ಣಿಮೆ!

[adning id="4492"]

ಯುಗಾದಿ ಬಂದು ಹೋಗಿದೆ. ಚಳಿ ಆವರಿಸುತ್ತಲೇ ಎಲೆ ಉದುರಿಸಿಕೊಂಡು ಬೋಳು ಬೋಳಾಗಿ ನಿಂತಿದ್ದ ಗಿಡ ಮರಗಳಿಗೂ ಚಿಗುರು ಮೂಡಿದ ಸಂಭ್ರಮ. ಅದ್ಯಾವುದೋ ಹೆಸರು ಗೊತ್ತಿಲ್ಲದ ಮರದ ಮೈತುಂಬಾ ಹೂವು. ಮೊದಲಾದರೆ ಈ ವಸಂತದ ಬಸುರಿಂದ ಚಿಗುರೊಡೆವ ಸದ್ದಿಗೂ ಕಿವಿಗೊಡುವಂಥಾ ಉತ್ಸಾಹ ಈ ಜೀವದಲ್ಲಿ ಜೀಕಾಡುತ್ತಿತ್ತು. ಆದರೀಗ ಈ ಪಲ್ಲಟದ ನೆರಳಲ್ಲಿಯೇ ಹೆಣದಂತೆ ಅಡ್ಡಾಡುತ್ತಿದ್ದೇನೆ. ಉಸಿರುಗಟ್ಟಿಸೋ ಸ್ಥಿತಿ ಅಂದರೆ ತುಸು ಸವಕಲಾದೀತೇನೋ… ಆದರಿದು ಅಂಥಾದ್ದೇ ಪರಿಸ್ಥಿತಿ. ನಾನೇ ಬೇಕಂತಲೇ ಕಟ್ಟಿಕೊಂಡಿರೋ ಭ್ರಮೆಗಳ ಜೇನುಗೂಡಿಗೆ ಪಾಪಿಗಳ್ಯಾರೋ ವಾಸ್ತವದ ಕಲ್ಲು ವಗಾಯಿಸಿದಂತಾಗಿ ಬೆಚ್ಚಿಬೀಳುತ್ತಲೇ ಬದುಕೋ ದೈನ್ಯ. ಎದೆಯೊಳಗೆ ತಲ್ಲಣಗಳ ಹುಳುಗಳು ಗುಂಯ್‌ಗುಟ್ಟಿ ಓಡಾಡಿದಂಥಾ ಯಾತನೆ. ಎದೆಯೊಳಗೆ ಕಾಲದ ಹಂಗಿಲ್ಲದೆ ಫ್ರೆಶಾಗಿರುತ್ತಿದ್ದ ಆಸೆಗಳ ಗುಲ್‌ಮೊಹರೂ ಈಗ ಶಾಶ್ವತವೇನೋ ಎಂಬಂತೆ ಬಾಡಿ ಬೆಂಡಾಗಿದೆ.


ನೀನಲ್ಲಿ ಹ್ಯಾಗಿದ್ದೀಯೋ ಗೊತ್ತಿಲ್ಲ. ನಿನ್ನ ಜಗತ್ತೇ ಬೇರೆ. ಅಲ್ಲಿ ಓಡಾಡುವ ನೆರಳು, ಮುಗುಳ್ನಗೆ, ಮಂದಹಾಸ, ಪಿಸುಮಾತು… ಪ್ರತಿಯೊಂದೂ ಬೇರೆಯೇ. ಆ ಜಗತ್ತಿಗೆ ನಾ ಅಪರಿಚಿತ. ಆದರೆ ಈ ಮುರುಕು ಬದುಕಿನ ಜೋಪಡಿಯ ತುಂಬಾ ನಿನ್ನ ಜಗತ್ತಿನ ಗಂಧವಿದೆ. ದುರಂತ ನೋಡು; ಈ ಜಗುಲಿಯಲ್ಲಿನ ಕಾತರ, ಕನವರಿಕೆ ಮತ್ತು ತಹತಹಿಕೆಗಳನ್ನು ನಿಂಗೆ ದಾಟಿಸುವ ಯಾವ ದಾರಿಗಳೂ ಇಲ್ಲ. ಈ ದಾರಿಗಳೇ ಈಗೀಗ ಚಕ್ರವ್ಯೂಹದಂತೆ ಕಂಡು ಭಯ ಹುಟ್ಟಿಸುತ್ತಿವೆ. ಇದರಲ್ಲೇ ಒಂದು ದಾರಿಗೆ ಹೆಜ್ಜೆ ಸೋಕಿಸಿ ಒಂದಷ್ಟು ಹೊತ್ತು ಅವುಡುಗಚ್ಚಿ ನಡೆದೆನೆಂದರೆ ನಿನ್ನಲ್ಲಿಗೇ ತಂದು ಬಿಟ್ಟೀತೇನೋ. ಆದರೆ ಬರೋದಕ್ಕೆ ನೂರು ಅಡ್ಡಿ, ಸಾವಿರ ಆತಂಕ. ಕಡೆಗೂ ನಿನ್ನ ಮನಸಲ್ಲಿ ನನ್ನ ಚಿತ್ರ ಅಪರಿಚಿತ ದಾರಿಹೋಕನಂತೆ ಚದುರಿ ಹೋದೀತೇನೋ ಎಂಬ ದಿಗಿಲು…


ನೀನೆಂಬೋ ಒಬ್ಬಳು ಈ ಜೀವಿತದ ಪರಿಧಿಯೊಳಗೆ ಹೆಜ್ಜೆಯಿರಿಸಿ, ಮುದ್ದಾದ ಕಾಲಗೆಜ್ಜೆ ಘಲ್ಲೆನ್ನಿಸದೇ ಹೋಗಿದ್ದರೆ ಹೆಂಗಿರ‍್ತಿತ್ತು ಅಂತ ಕೆಲವೊಮ್ಮೆ ನನ್ನ ನಾನೇ ಕೇಳಿಕೊಳ್ತೀನಿ. ತಕ್ಷಣವೇ ಈ ಏಕಾಂತವೆಂಬುದು ಭರ್ಜಿಯ ಮೊನೆಯಾಗಿ ನೆತ್ತಿಗೇ ಇರಿದಂತಾಗಿ ಭೀತನಾಗ್ತೀನಿ. ನಿಜ ಕಣೇ ಹುಡುಗೀ… ನಿನ್ನ ಇರುವಿಕೆಯಾಚೆಗೆ ಈ ಪಾಪಾತ್ಮಕ್ಕೊಂದು ಅಸ್ತಿತ್ವವೇ ಇಲ್ಲ. ಅಷ್ಟಕ್ಕೂ ಈ ಪ್ರೀತಿ ಕಣ್ಣಲ್ಲೇ ದಾಟಿಕೊಂಡು, ಬಸುರಾಗಿ, ಟಿಸಿಲೊಡೆದು ಹಬ್ಬಿಕೊಂಡ ಪರಿ ಮಾತ್ರ ನನ್ನ ಪಾಲಿಗೆ ನಿತ್ಯ ಸೋಜಿಗ. ಬಹುಶಃ ಯಾವ ಆಸೆಗಳೂ ಇಲ್ಲದ ಈ ಜೀವ ಇನ್ನೂ ಉಸಿರಾಡುತ್ತಿರೋದು ಇಂಥವೊಂದಷ್ಟು ಹುಚ್ಚುಚ್ಚು ಭ್ರಮೆಗಳಂಥವುಗಳಿಂದಲೇ ಇದ್ದೀತು. ಇಂಥವುಗಳನ್ನಿಟ್ಟುಕೊಂಡೇ ಬದುಕು ಪೂರ್ತಿ ಸವೆಸುವ ಯಾತನೆಯನ್ನ ಪುರುಸೊತ್ತಾದರೊಮ್ಮೆ ಕಲ್ಪಿಸಿಕೊಂಡು ಬಿಡು. ಆಗಲಾದರೂ ನಿಂಗೆ ಕನಿಕರ ಹುಟ್ಟೀತೇನೋ.


ತೊಟ್ಟು ಕಳಚಿ ಬಿದ್ದ ಯಃಕಶ್ಚಿತ್ ಎಲೆಯ ಎದೆಯೊಳಗೂ ಅದುವರೆಗೆ ಅವಸಿಟ್ಟುಕೊಂಡು ಪೊರೆದ ಕೊಂಬೆಯ ಋಣದ ಮರ್ಮರವಿದ್ದೀತೇನೋ ಅಂತ ಆಲೋಚಿಸುವ ಭಾವುಕರ ಪೈಕಿಯವನು ನಾನು. ಮನಸನ್ನ ಕ್ಯಾಲ್ಯುಕಲೇಟರಿನಂತೆ ಬಳಸೋ ಕಲೆ ಗೊತ್ತಿಲ್ಲ. ಅದು ಗೊತ್ತಾಗಲಿ ಅಂತೊಂದು ಇರಾದೆಯೂ ಇಲ್ಲ ಬಿಡು. ಆದರೆ ನಿನ್ನ ಪಾಲಿಗೆ ಇಂಥಾ ತೇವಗೊಂಡ ಭಾವನೆಗಳೆಲ್ಲವೂ ಫಾಯಿದೆ ಗಿಟ್ಟದ ಕಸಗಳಂಥವೇನೋ. ಆದರೆ ನೀ ನನ್ನ ಇಡೀ ಬದುಕಿನ ಕನಸು. ಥರ ಥರದ ಭಾವಗಳ ಕಟಾಂಜನ. ತೀರಾ ಅಚಿಜನ ಹಾಕಿ ಹುಡುಕಿದರೂ ನನ್ನೆದೆಯೊಳಗೆ ನಿನ್ನ ಬಗೆಗಿನ ನಿಕೃಷ್ಟ ಭಾವ ಸಿಗಲು ಸಾಧ್ಯವಿಲ್ಲ. ಆದರೆ ಪ್ರೀತಿ ಮಾತ್ರ ಮೊಗೆದು ಹಂಚುವಷ್ಟು ಸಿಕ್ಕೀತು.


ಬಿಡು, ಇದೆಲ್ಲ ಈಗ ವ್ಯರ್ಥ ಹಳ ಹಳಿಕೆ. ಉದ್ದಾನುದ್ದ ಬೋರಲು ಬಿದ್ದ ಹಾದಿಯ ಎದೆ ಮೇಲೆ ಹೆಜ್ಜೆಗಳಿಗೆ ಗುರುತುಗಳ ಹಂಗಿಲ್ಲ. ನಾನೂ ಸಹ ಹಾಗೆಯೇ ನಿನ್ನ ಬದುಕಿನ ಮುಂದೆ ಬೋರಲು ಬಿದ್ದವನು. ಒಂದಷ್ಟು ದೂರ ನನ್ನ ಮೇಲೆ ನಿನ್ನ ಪಾದದ ಗುರುತು ಮೂಡಿವೆಯಲ್ಲಾ? ಆ ಪುಳಕವೇ ಇಡೀ ಜೀವಿತವನ್ನ ಜೀವಂತವಾಗಿಡುತ್ತದೆಯೆಂದು ನಂಬಿ ಕೂತ ಮೂರ್ಖನೂ ನಾನೇ. ಕೆಲವೊಮ್ಮೆ ನೀನಿಲ್ಲದೇ ಬದುಕೋ ಯಾತನೆಗಿಂತಲೂ ಸಾವೇ ಮೇಲೆನ್ನಿಸುತ್ತೆ. ಆದರ‍್ಯಾಕೋ ಇಂಥಾ ಸಣ್ಣಪುಟ್ಟ ಪುಳಕಗಳನ್ನು ಈ ಆಸೆಬುರುಕ ಮನಸು ಮಿಸ್ ಮಾಡಿಕೊಳ್ಳುತ್ತೆ. ಆ ದೆಸೆಯಿಂದಲೇ ನಿನ್ನ ಪಾಲಿಗೆ ಪೀಡೆಯಂಥಾ ಈ ಜನುಮ ಇನ್ನೂ ಜಾರಿಯಲ್ಲಿದೆ.


ನಿನ್ನ ಜಗತ್ತಿನಲ್ಲಿ ನೀ ಹಾಯಾಗಿರು. ನಿನ್ನ ಸುಖಕ್ಕೆ, ಸುಳ್ಳೇ ಅಹಮ್ಮಿಕೆಗೆ, ಮುಗುಳ್ನಗುವಿನ ಮಾಧುರ್ಯಕ್ಕೆ, ನಿನ್ನವನ ಸಾಮಿಪ್ಯಕ್ಕೆ… ಯಾವುದೆಂದರೆ ಯಾವುದಕ್ಕೂ ಕೇಡು ಬಯಸುವವನಲ್ಲ ನಾನು. ಆ ಜಗತ್ತಿನ ಇಕ್ಕೆಲದಲ್ಲಿಯೂ ಹಾದು ಹೋಗಲಾರೆ. ಬಹುಶಃ ನನ್ನ ನೆನಪಿನ ಲವಲೇಶವನ್ನೂ ಉಳಿಸಿಕೊಂಡಿರಲಾರೆ ನೀನು. ಕಂಪ್ಯೂಟರಿನ ಕೀ ಬೋರ್ಡಿನಲ್ಲಿ ಡಿಲೀಟು ಒತ್ತಿದೇಟಿಗೆ ಇದ್ದದ್ದೆಲ್ಲಾ ಸರ್ವನಾಶವಾಗುತ್ತದೆಯಲ್ಲಾ? ಈ ಮರೆವೆಂಬುದು ನಿಂಗೆ ಅದಕ್ಕಿಂತಲೂ ಸಲೀಸಿರಬಹುದೇನೋ ಎಂಬ ಸಂದೇಹ. ಆದರೂ ನಿನ್ನ ಬಗೆಗೇನೂ ಕೋಪವಿಲ್ಲ. ತಕರಾರುಗಳಿದ್ದರೂ ಉಪಯೋಗವಿಲ್ಲ.


ಜೀವ ನಿಂತು ಕಣ್ಣೆಲ್ಲಾ ಮಂಜು ಮಂಜಾಗೋವರೆಗೂ ಈ ಬದುಕಿಗೆ ನಿರಾಸೆಯ ಕತ್ತಲು ಕವಿಯೋದಿಲ್ಲ. ನಿಂಗೊತ್ತಾ? ನನ್ನೆದೆಯಲ್ಲಿ ನಿನ್ನ ನೆನಪುಗಳ ಹುಣ್ಣಿಮೆಯನ್ನೇ ಹುಗಿದಿಟ್ಟುಕೊಂಡಿದ್ದೇನೆ. ಅದರ ಬೆಳಕಲ್ಲೇ ಬದುಕು ಸಾಗುತ್ತದೆ. ಈ ಆಯುಷ್ಯದ ಸಹನೆ ಮುಗಿಯುವವರೆಗೂ…
– ನಿನ್ನವನೇ

[adning id="4492"]

LEAVE A REPLY

Please enter your comment!
Please enter your name here