ಸಪ್ತಸಾಗರದಾಚೆ ಸರಿಯಿತು ಶ್ರೀಮನ್ನಾರಾಯಣನ ಚಿತ್ತ!

[adning id="4492"]

ಕೊರೋನಾ ವೈರಸ್ ಬಾಧೆ ಕನ್ನಡ ಚಿತ್ರರಂಗವನ್ನು ಸ್ತಬ್ಧವಾಗಿಸಿದೆ. ಚಿತ್ರಮಂದಿರಗಳೆಲ್ಲ ಸ್ಥಗಿತಗೊಂಡಿದ್ದರೂ ಕೂಡಾ ಹೊಸಾ ಸೃಷ್ಟಿಯ ಕಾರ್ಯಕ್ಕೆ ಮಾತ್ರ ಯಾವ ಭಂಗವೂ ಆಗಿಲ್ಲ. ಕೊರೋನಾ ಬಾಧೆಯಿಂದ ಎಲ್ಲವೂ ಅಲ್ಲೋಲಕಲ್ಲೋಲವಾಗಿದ್ದರೂ ಕೂಡಾ ಒಂದಷ್ಟು ತಯಾರಿಗಳು ಅದೇ ಆವೇಗದೊಂದಿಗೆ ಮುಂದುವರೆಯುತ್ತಿದೆ. ಅದರ ನಡು ನಡುವೆ ಹೊಸಾ ಚಿತ್ರಗಳೂ ಸದ್ದು ಮಾಡುತ್ತಿವೆ. ಇದೀಗ ರಕ್ಷಿತ್ ಶೆಟ್ಟಿ ಅಭಿನಯದ ಮುಂದಿನ ಚಿತ್ರದ ಟೈಟಲ್ ಕೂಡಾ ಅನಾವರಣಗೊಂಡಿದೆ. ಅದು ರಕ್ಷಿತ್ ಅಭಿಮಾನಿಗಳು ಮಾತ್ರವಲ್ಲದೆ ಸಮಸ್ತ ಪ್ರೇಕ್ಷಕರಲ್ಲಿಯೂ ಪುಳಕ ಮೂಡಿಸಿದೆ.


ಅಂದಹಾಗೆ, ಅವನೇ ಶ್ರೀಮನ್ನಾರಾಯಣ ಚಿತ್ರದ ನಂತರದಲ್ಲಿ ರಕ್ಷಿತ್ ಶೆಟ್ಟಿ ೭೭೭ ಚಾರ್ಲಿ ಅನ್ನೋ ಚಿತ್ರದಲ್ಲಿ ನಟಿಸುತ್ತಿರೋದು ಗೊತ್ತೇ ಇದೆ. ಅದರ ಜೊತೆಗೇ ಅವರ ಮತ್ತೊಂದು ಚಿತ್ರಕ್ಕೂ ತಯಾರಿ ನಡೆಯುತ್ತಿದೆ. ಅದಕ್ಕೆ ‘ಸಪ್ತ ಸಾಗರದಾಚೆ ಎಲ್ಲೋ’ ಎಂಬ ಕಾವ್ಯಾತ್ಮಕ ಶೀರ್ಷಿಕೆಯನ್ನೂ ನಿಕ್ಕಿ ಮಾಡಲಾಗಿದೆ. ಗೋಪಾಲಕೃಷ್ಣ ಅಡಿಗರು ಬರೆದ ಯಾವ ಮೋಹನ ಮುರಳಿ ಕರೆಯಿತೋ ಎಂಬ ಭಾವಗೀತ ಚಿತ್ರಗೀತೆಯಾಗಿಯೂ ಪ್ರಸಿದ್ಧಿ ಪಡೆದಿದೆ. ಅದರದ್ದೇ ಸಾಲನ್ನು ರಕ್ಷಿತ್ ಶೆಟ್ಟಿ ಅಭಿನಯದ ಈ ಚಿತ್ರಕ್ಕೆ ಶೀರ್ಷಿಕೆಯಾಗಿಡಲಾಗಿದೆ. ಈ ಸಿನಿಮಾವನ್ನು ಈ ಹಿಂದೆ ಗೋಧಿ ಬಣ್ಣ ಸಾಧಾರಣ ಮೈಕಟ್ಟು ಚಿತ್ರವನ್ನು ನಿರ್ದೇಶನ ಮಾಡಿದ್ದ ಹೇಮಂತ್ ನಿರ್ದೇಶಿಸಲಿದ್ದಾರೆ.


ಈ ಚಿತ್ರವನ್ನೂ ಕೂಡಾ ಪುಷ್ಕರ್ ಮಲ್ಲಿಕಾರ್ಜುನಯ್ಯನವರೇ ನಿರ್ಮಾಣ ಮಾಡಲಿದ್ದಾರೆ. ಈ ಮೂಲಕ ಒಂದು ಯಶಸ್ವೀ ಚಿತ್ರ ಕೊಟ್ಟಿದ್ದ ತಂಡವೊಂದು ಮತ್ತೆ ಒಗ್ಗೂಡಿದಂತಾಗಿದೆ. ವರ್ಷಗಳ ಹಿಂದೆ ಇದೆ ಹೇಮಂತ್ ನಿರ್ದೇಶನ ಮಾಡಿದ್ದ ಗೋಧಿ ಬಣ್ಣ ಸಾಧಾರಣ ಮೈಕಟ್ಟು ಚಿತ್ರದಲ್ಲಿ ಅನಂತ್ ನಾಗ್ ಮತ್ತು ರಕ್ಷಿತ್ ಶೆಟ್ಟಿ ಪ್ರಧಾನ ಪಾತ್ರಗಳಲ್ಲಿ ನಟಿಸಿದ್ದರು. ಭಿನ್ನ ಬಗೆಯ ಕಥೆಯನ್ನೊಳಗೊಂಡಿದ್ದ ಆ ಚಿತ್ರ ಗೆದ್ದು ಬೀಗಿತ್ತು. ಅದೂ ಕೂಡಾ ರಕ್ಷಿತ್ ಶೆಟ್ಟಿ ವೃತ್ತಿ ಬದುಕಿಗೆ ಹೊಸಾ ಓಘ ನೀಡಿತ್ತು. ಇದೀಗ ಅದೇ ತಂಡ ಮತ್ತೆ ಜೊತೆಗೂಡಿರೋದರಿಂದ, ಮೋಹಕವಾದ ಶೀರ್ಷಿಕೆಯ ಕಾರಣದಿಂದ ಸಪ್ತಸಾಗರದಾಚೆಗೆ ಪ್ರೇಕ್ಷಕರ ಚಿತ್ತ ನೆಟ್ಟುಕೊಂಡಿದೆ.


ಅವನೇ ಶ್ರೀಮನ್ನಾರಾಯಣ ಚಿತ್ರಕ್ಕೆ ಭರ್ಜರಿ ಓಪನಿಂಗ್ ಸಿಕ್ಕಿತ್ತಾದರೂ ನಿರೀಕ್ಷೆಯಂತೆ ಪರಭಾಷೆಗಳಲ್ಲಿ ಹವಾ ಸೃಷ್ಟಿಸಲು ಸಾಧ್ಯವಾಗಿರಲಿಲ್ಲ. ಇದು ಒಂದರ್ಥದಲ್ಲಿ ಹಿನ್ನಡೆಯೇ. ಆದರೆ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯರಾಗಲಿ, ರಕ್ಷಿತ್ ಶೆಟ್ಟಿಯಾಗಲಿ ಅದರಿಂದ ಕಂಗೆಟ್ಟಿಲ್ಲ. ಅವನೇ ಶ್ರೀಮನ್ನಾರಾಯಣ ಕರ್ನಾಟಕದಲ್ಲಿ ಯಶಸ್ವೀ ಪ್ರದರ್ಶನ ಕಾಣುತ್ತಿರುವಾಗಲೇ ಅವರು ಹೊಸಾ ಚಿತ್ರಕ್ಕೆ ಅಣಿಗೊಳ್ಳಲಾರಂಭಿಸಿದ್ದರು. ಹೇಮಂತ್ ಚೆಂದದ್ದೊಂದು ಕಥೆಯನ್ನೂ ರೆಡಿ ಮಾಡಿಕೊಂಡಿದ್ದಾರೆ. ಅದು ರಕ್ಷಿತ್ ಶೆಟ್ಟಿ ಸೇರಿದಂತೆ ಎಲ್ಲರಿಗೂ ಖುಷಿ ಕೊಟ್ಟಿದೆ. ಇದೀಗ ತಾರಾಗಣ ಮತ್ತು ತಾಂತ್ರಿಕ ವರ್ಗದ ಆಯ್ಕೆ ಕಾರ್ಯವೂ ನಡೆಯುತ್ತಿದೆ. ಕೊರೋನಾ ಕಂಟಕ ನೀಗಿಕೊಂಡಾದ ಮೇಲೆ ಈ ಸಿನಿಮಾ ಬಗ್ಗೆ ಮತ್ತಷ್ಟು ವಿಚಾರಗಳು ಜಾಹೀರಾಗಲಿವೆ.

[adning id="4492"]

LEAVE A REPLY

Please enter your comment!
Please enter your name here