ಬೊಗಸೆಯಷ್ಟು ಬೆಳಕನ್ನಾದರೂ ಉಳಿಸಿ ಹೋಗಬೇಕಿತ್ತು ನೀನು…

[adning id="4492"]

ಪರಾಗದ ಕಣದಂಥವಳೇ…,
ಪಕ್ಕದ್ಮನೆಯಲ್ಲಿ ಸುಬ್ಬುಲಕ್ಷ್ಮಿ ಸುಪ್ರಭಾತ ಹಾಡ್ತಿದ್ದಾರೆ. ಇದರ ಆಧಾರದಲ್ಲಿ ಹೇಳೋದಾದರೆ ಬಹುಶಃ ಬೆಳಗಾಗಿರ ಬಹುದೇನೋ. ಅಕಸ್ಮಾತು ಬೆಳಗಾಗಿರದಿದ್ದರೆ ಕತ್ತೆ ಬಾಲ ಕುದ್ರೆ ಜುಟ್ಟು. ಕತ್ತಲ ಕಟಾಂಜನ ಸೇರಿ ಕೂತವನಿಗೆ ಬೆಳಕಾದರೆಷ್ಟು ಬಿಟ್ಟರೆಷ್ಟು. ಅಷ್ಟಕ್ಕೂ ಈ ಬೆಳಕಿನ ಮುದವೆಲ್ಲವೂ ನಿನ್ನೊಂದಿಗೇ ನಡೆದು ಹೋದಂತಿದೆ; ಈಗ ಉಳಕೊಂಡಿರುವುದು ಕತ್ತಲು ಮಾತ್ರ. ನನ್ನ ಕೋಣೆಯ ಕಿಟಕಿ ಗಾಜು ದಾಟಿ ಕರ್ಟನ್ನು ಸೀಳಿಕೊಂಡು ಒಳ ನುಗ್ಗುವ, ನನ್ನನ್ನು ಸೋಕುವ ಕಸುವೀಗ ಬೆಳಕಿಗೂ ಉಡುಗಿ ಹೋದಂತಿದೆ. ಬೆಳಕಿನ ಭಾಗವಾಗಿದ್ದಾಗ ಬೂಟಾಟಿಕೆ ಅನ್ನಿಸುತ್ತಿದ್ದ ವರ್ತನೆಗಳೆಲ್ಲವೂ ನಂಗೀಗ ಖಾಸಾ ಖಾಸ. ನಿನ್ನ ತಾತ್ಸಾರಕ್ಕೆ ಮೋಸವೆಂಬುದೂ ಸೇರಿದಂತೆ ಯಾವ ಹೆಸರನ್ನೂ ಇಡಲಾರೆ. ನನ್ನ ಅಸ್ತಿತ್ವವನ್ನೇ ಹೊಸಕಿ ಹೋದ ಮಾಯೆಗೆ ಯಾವ ಹೆಸರಿಟ್ಟರೇನು ಹೇಳು?

ನನಗೆ ಗೊತ್ತಿದ್ದದ್ದು ಸತ್ತುಹೋಗುವಂತೆ ನಿನ್ನ ಪ್ರೀತಿಸೋದು ಮಾತ್ರ. ಅಂಥಾ ಪ್ರಾಂಜಲ ಪ್ರೀತಿ ಕಿಕ್ಕಿರಿದ ಮನಸಲ್ಲಿ ಕಪಟಕ್ಕೆ ಜಾಗ ಸಿಕ್ಕೀತಾದರೂ ಹೇಗೆ? ನಿನ್ನ ಮುಗುಳ್ನಗುವಿಗೆ ಮುದಗೊಂಡು, ಮೆಲು ಮಾತಿಗೆ ಮರುಳಾಗಿ, ಬಿಸಿಯುಸಿರಿಗೂ ಬೆಚ್ಚಗಾಗೋ ಧನ್ಯತೆ ಮಾತ್ರ ನಂಗೊತ್ತು. ಅದರಾಚೆಗೆ ನಿನ್ನದೊಂದು ಮಧುರ ಸಾಮೀಪ್ಯದ ಹೊರತಾಗಿ ಮತ್ತೇನನ್ನೂ ನಾ ಧ್ಯಾನಿಸಲಿಲ್ಲ. ನೀನಿಲ್ಲದೆ ನನ್ನ ಕ್ಷಣಗಳು ಹೊರಳುತ್ತಿರಲಿಲ್ಲ. ನಾಳೆಯೆಂಬುದು ಅರಳುತ್ತಿರಲಿಲ್ಲ. ನೀನ್ಯಾವತ್ತಾದರೂ ದೂರಾಗುತ್ತೀಯೆಂಬುದನ್ನು ಕಲ್ಪಿಸಿಕೊಂಡರೂ ಉಸಿರುಗಟ್ಟಿ ಒದ್ದಾಡುತ್ತಿದ್ದೆನೇನೋ… ಇದೆಲ್ಲಾ ನಿಂಗೆ ಗೊತ್ತಿಲ್ಲದ ರಹಸ್ಯವೇನಲ್ಲ. ಹಾಗೇನಾದರೂ ನೀ ತೊರೆದು ಹೋದರೆ ಈ ಜೀವ ನೀರಿಂದ ಎತ್ತೆಸೆದ ಮೀನಿನಂತ ವಿಲಗುಟ್ಟಿ ನರಳುತ್ತದೆ ಎಂದೂ ನಿಂಗೆ ಗೊತ್ತಿಲ್ಲದ ವಿಚಾರವಲ್ಲ…

ಹಾಗಿದ್ದರೂ ಯಾಕೆ ಬಿಟ್ಟು ಹೋದೆ? ಮುಂದೆಂದಾದರೂ ಬೆಳಕಿಗೆ ಮುಖ ಮಾಡಿ ನಿಂತೆನಾದರೆ ಹಾಗಂತ ಇಡೀ ಜಗತ್ತಿಗೇ ಕೇಳುವಂತೆ ಚೀರಿಕೊಳ್ಳಬೇಕನಿಸುತ್ತೆ. ಒಂದೊಮ್ಮೆ ಹಾಗೆ ಕೂಗಿಕೊಂಡ ಸದ್ದು ಜಗತ್ತಿಗೆ ಕೇಳಿಸಿದರೂ ನಿಂಗೊಬ್ಬಳಿಗೆ ಮಾತ್ರ ಕೇಳಿಸಲಾರದೋ ಏನೋ. ನಿನ್ನ ಜಗತ್ತೇ ಬೇರೆ. ಹೀಗೆ ನನ್ನನ್ನು ಅನುಕ್ಷಣದ ಯಾತನೆಯ ಕಮರಿಗೆ ಕೆಡವಿ ಹೋಗಲು ನಿಂಗೆ ಮನಸಾದರೂ ಹೇಗೆ ಬಂತೋ… ಈ ಬದುಕಿಂದ ಶಾಶ್ವತವಾಗಿ ಮರೆಯಾಗುವ ನಿರ್ಧಾರ ಮಾಡಿ ಎದುರು ನಿಂತ ನಿಂಗೆ ವ್ಯವಧಾನವಿರಲಿಲ್ಲ. ಈ ನಿರ್ಭಾಗ್ಯ ಜೀವಿಗೆ ಕಾರಣ ಹೇಳಿ ಹೋಗುವ ದರ್ದೂ ನಿಂಗೆ ಕಾಣಿಸಿಲ್ಲವೇನೋ. ʼಸ್ಸಾರಿʼ ಅಂತಷ್ಟೇ ಹೇಳಿ ನಡೆದೆಯಲ್ಲಾ…? ಅದ್ಯಾವುದಕ್ಕೆ…? ನಂಗೀ ಕ್ಷಣಕ್ಕೂ ಅರ್ಥವಾಗಿಲ್ಲ. ಅಂತೂ ನನ್ನಿಡೀ ಬದುಕನ್ನು, ಕಟ್ಟಿಕೊಂಡಿದ್ದ ಸಾವಿರ ಕನಸುಗಳನ್ನು ಎರಡೇ ಎರಡಕ್ಷರ ಉಲಿದು ಸಾರಿಸಿಕೊಂಡು ಹೋದ ನಿನ್ನ ಮೇಲೆ ಸಿಟ್ಟು ಮಾಡಿಕೊಳ್ಳೋ ಸಂಯಮವನ್ನೂ ನಾನೀಗ ಕಳಕೊಂಡಿದ್ದೇನೆ.

ನೀನೆಂದರೆ ನನ್ನೆದೆಯಲ್ಲಿ ಜತನದಿಂದ ಹಚ್ಚೆ ಹಾಕಿಕೊಂಡಿರೋ ಚೆಂದದ ಚಿತ್ರ. ಅದರ ಸಮೇತ ಇದೀಗ ಈ ಕತ್ತಲ ಕೂಪ ಸೇರಿಕೊಂಡಿದ್ದೇನೆ. ಸೇದಿ ಎಸೆದ ಬೀಡಿ ಮುಂಡಿನ ಮುಗ್ಗಲು ವಾಸನೆ, ಒಡೆದು ಚೂರಾದ ಸುರೆಯ ಖಾಲಿ ಸೀಸ ಮತ್ತು ಈ ಕೋಣೆಯ ಅಂಗುಲಂಗುಲವನ್ನೂ ವ್ಯಾಪಿಸಿಕೊಂಡಂತಿರೋ ಬಿಕ್ಕಳಿಗೆ, ಕೈಯಾಡಿಸಿದರೆ ಅಂಗೈಗೆ ಮೆತ್ತಿಕೊಳ್ಳುವ ಗಾಢ ವಿಷಾದ… ಒಟ್ಟಾರೆಯಾಗಿ ನಾನು ಕತ್ತಲ ಹುಳ. ಕೆಲವೊಮ್ಮೆ ಈ ಕೂಪದಿಂದೆದ್ದು ಹೊರ ನಡೆಯಬೇಕು. ನಿನ್ನ ಮಹಾ ಮೋಸಕ್ಕೆ ಸೆಡ್ಡು ಹೊಡೆದು ಬದುಕ ಬೇಕೆಂದೆಲ್ಲಾ ಅಂದುಕೊಳ್ಳುತ್ತೇನೆ. ಆದರೆ ಈ ಅಂಧಕಾರದಲ್ಲಿ ಎದ್ದು ಹೋಗಲು ಯಾವ ದಾರಿಯೂ ಕಾಣಿಸುತ್ತಿಲ್ಲ. ಬಹುಶಃ ಇನ್ನೊಂದಷ್ಟು ದಿನ ಇಲ್ಲಿಯೇ ಹೀಗೆಯೇ ಇದ್ದರೆ ಇಂಚಿಂಚಾಗಿ ನರಳಿ ಸತ್ತೇ ಹೋದೇನೇನೋ…

ಅಷ್ಟು ಪ್ರೀತಿಸಿದ ತಪ್ಪಿಗೆ ಇದೆಂಥಾ ಶಿಕ್ಷೆ ಕೊಟ್ಟೆಯೇ ಹುಡುಗೀ… ನೀನು ಬೆಳಕಿನ ಜೊತೆಗೆ ನೆನಪುಗಳನ್ನೂ ಕಿತ್ತುಕೊಂಡು ಹೋಗಿದ್ದಿದ್ದರೆ ಬೇರೆ ಏನೋ ಆಗಿ ಬದುಕಬಹುದಿತ್ತು. ಈ ಕತ್ತಲಲ್ಲಿ ಕರಗಿ ಹೋಗುವ, ಕಲ್ಲಾಗಿ ಉಳಿಯುವ ಕಣ್ಣಾಮುಚ್ಚಾಲೆಯಾಟದ ಸಹವಾಸವೂ ಇರುತ್ತಿರಲಿಲ್ಲ. ಆಗ ಜೊತೆಯಾಗಿದ್ದ ದಿನಗಳಲ್ಲಿ ನಿನ್ನನ್ನು ಧ್ಯಾನಿಸುತ್ತಿದ್ದೆನಲ್ಲಾ? ಅಷ್ಟೇ ಉತ್ಕಟವಾಗಿ ಈಗ ಹೊಸಾ ಬದುಕಿಗಾಗಿ ಅರಸುತ್ತಿದ್ದೇನೆ. ಆದರೆ, ಈ ಕತ್ತಲ ನಡುವೆ ದಾರಿ ಕಾಣದೆ ಕಂಗಾಲಾಗಿದ್ದೇನೆ.

ಹುಡುಗೀ ತೊರೆದು ಹೋಗುವ ಘಳಿಗೆಯಲ್ಲಿ ಒಂದೇ ಒಂದು ಬೊಗಸೆಯಷ್ಟಾದರೂ ಬೆಳಕನ್ನು ಉಳಿಸಿ ಹೋಗಬೇಕಿತ್ತು ನೀನು…!

[adning id="4492"]

LEAVE A REPLY

Please enter your comment!
Please enter your name here