ನೀನೆದುರಾದ ಚಳಿಗಾಲದಿಂದ ಈ ಬದುಕಿನ ಚಹರೆ ಬದಲಾಗಿದೆ!

[adning id="4492"]

ತ್ತೊಂದು ಚಳಿಗಾಲ ಕಣ್ಣು ಪಿಳುಕಿಸಲಾರಂಭಿಸಿದೆ. ಒಂದು ವರ್ಷವೆಂದರೆ ಹೀಗೆ ಅದೆಷ್ಟೋ ಕಾಲಗಳು ಸರಿದು ಹೋಗುತ್ತವೆ. ಎಷ್ಟೋ ಸಲ ಅದರ ಅರಿವೇ ಆಗೋದಿಲ್ಲ. ಆದರೆ ಯಾರ ಹಂಗೂ ಇಲ್ಲದೆ ಸರಿಯುವ ಋತುಮಾನಗಳೆಲ್ಲವೂ ಇತ್ತಿತ್ತಲಾಗಿ ನನ್ನೆದೆಗೇ ಸವರಿಕೊಂಡು ಹೋದಂತೆನ್ನಿಸುತ್ತಿದೆ. ಬಹುಶಃ ತಮ್ಮ ಪಾಡಿಗೆ ಸರಿದು ಹೋಗೋ ಇಂಥಾ ಋತುಮಾನಗಳಿಂದೆಲ್ಲ ಈ ಪರಿ ಕಾಡಿಕೊಳ್ಳುವ, ಅದೆ ಪ್ರತಿ ಕದಲಿಕೆಗಳಿಗೂ ಕಣ್ಣು ಕಿವಿಯಾಗೋ ಹುಚ್ಚು ಹಿಡಿಸೋ ಮಾಯೆ ಇಡೀ ಜಗತ್ತಲ್ಲಿ ಪ್ರೀತಿಯೊಂದೇ ಇದ್ದೀತೇನೋ. ಇಂಥಾ ಋತುಗಳೇ ಛಳಿಗೆ ಗದಗುಡುತ್ತಾ, ಬೇಸಗೆಗೆ ಬೆವರಾಡುತ್ತಾ ಮತ್ತು ಮಳೆಗೆ ಒದ್ದೆ ಮುದ್ದೆಯಾದಂತೆ ಮನಸೊಳಗೆ ಮಿಸುಕರಾರಂಭಿಸಿವೆ. ಹುಡುಗೀ… ಬಹುಶಃ ಅದ್ಯಾವುದೋ ಘನವಾದೊಂದು ಸಂವತ್ಸರದ ಚಳಿಗಾಲವೊಂದರಲ್ಲಿ ಪುಟ್ಟ ದೇವತೆಯಂಥಾ ನೀನು ನನಗೆದುರಾದಾಗ ಮುಂದೊಂದು ದಿನ ಈ ಜೀವವೇ ಇಷ್ಟೊಂದು ವೈಚಿತ್ರ್ಯಗಳಿಂದ ನನ್ನನ್ನಾವರಿಸಿಕೊಳ್ಳುತ್ತದೆಂದು ನಾನಂದುಕೊಂಡಿರಲಿಲ್ಲ!


ಇಂಥಾ ಪ್ರತೀ ಋತುಮಾನಗಳು ಕದಲಿದಾಗಲೂ ಅದರೊಳಗೆ ನಿನ್ನ ಇರುವಿಕೆ ಇದ್ದೇ ಇರುತ್ತೆ. ಅದರಲ್ಲೂ ಈ ಚಳಿಗಾಲ ಬಂದರಂತೂ ಎದೆಯೊಳಗೆ ಮಂಜು ಮುಸುಕಿದಂಥಾ ನೆನಪಿನ ನೆತ್ತಿ ಸವರಿ ವರ್ಷವೆಷ್ಟಾಯ್ತು ಅಂತ ಲೆಕ್ಕ ಹಾಕೋ ಸಂಭ್ರಮ… ಈಗ ಮತ್ತೊಂದು ಛಳಿಗಾಲ ಆವರಿಸಿಕೊಂಡಿದೆ ನೋಡು. ಇದು ಬಹುಶಃ ಮೂರನೆಯದ್ದಿರಬಹುದು. ದೂರದೂರಿಂದ ಈ ನಗರಿಗೆ ಬಂದಿಳಿದಾದ ಮೇಲೆ ಅದ್ಯಾಕೋ ಪ್ರತೀ ಕ್ಷಣವೂ ರೇಜಿಗೆ. ನನ್ನ ಮೇಲೆ ನಾನೇ ಸಿಟ್ಟಿಗೇಳುವಂಥಾ ಸ್ಥಿತಿ. ಈ ಟ್ರಾಫಿಕ್ಕು, ಇರಿಕ್ಕು ಗಲ್ಲಿಗಳು, ಗಜಿಬಿಜಿ ವಾತಾವರಣ… ಥತ್ ಈ ಬದುಕು ಇದೆಂಥಾ ನರಕದ ನಡುವಲ್ಲಿ ತಂದು ನಿಲ್ಲಿಸಿತಲ್ಲಾ ಅಂತ ಅದೆಷ್ಟು ಸಾರ್ತಿ ಹಳ ಹಳಿಸಿದ್ದೀನೋ. ಊರ ಕಡೆಯ ಚೂರು ನಿಶ್ಯಬ್ಧಕ್ಕೆ, ಆ ದಿವ್ಯ ಏಕಾಂತಕ್ಕೆ ಅದೆಷ್ಟು ಹಂಬಲಿಸಿದ್ದೀನೋ. ಅಂಥಾದ್ದೊಂದು ಘಳಿಗೆಯಲ್ಲೇ ಅದೊಂದು ಥರಗುಡುವ ಛಳಿಗಾಲದ ಸಂಜೆ ನೀನೆದುರಾದೆ ನೋಡು? ರೇಜಿಗೆ ಹುಟ್ಟಿಸುತ್ತಿದ್ದವುಗಳೇ ಈಗೀಗ ಸೋಜಿಗ ಸ್ಫುರಿಸಲಾರಂಭಿಸಿವೆ.


ಇದೀಗ ನಂಗೆ ಬೆಂಗಳೂರಿನ ಒತ್ತಡಗಳೆಲ್ಲ ಅಮರಿಕೊಂಡಂತಿರೋ ರಣರಣಾ ಟ್ರಾಫಿಕ್ಕೂ ಕಸಿವಿಸಿ ಹುಟ್ಟಿಸೋದಿಲ್ಲ. ರಾತ್ರಿಯೂ ಛಾಲ್ತಿಯಲ್ಲಿರೋ ಭೀಕರ ಶಬ್ಧಗಳೂ ಕಾಡಿಸೋದಿಲ್ಲ. ಒಂದು ಕಾಲದಲ್ಲಿ ತೀರಾ ಹಿಂಸೆ ಅಂತನ್ನಿಸುತ್ತಿದ್ದ ಹರುಕು ಫುಟ್ಪಾತುಗಳೇ ಈಗ ರೆಡ್‌ಕಾರ್ಪೆಟ್ಟಿನಂತೆ ಕೂಗಿ ಕರೆಯುತ್ತಿವೆ. ಹಾಗೆ ನಡೆದು ಹೋದರೆ ಆ ಹಾದಿಯ ತುಂಬಾ ನೀನೆಂಬೋ ಗುಂಗು ಜಗತ್ತಿನ ಸಖಲ ನಿಶ್ಯಬ್ಧವನ್ನೂ ನನ್ನೊಳಗೆ ಪ್ರತಿಷ್ಠಾಪಿಸಿ ಬಿಡುತ್ತದೆ. ನನ್ನಿಷ್ಠದ ಏಕಾಂತವಾಗಿ ನೀನೇ ಬಂದು ಆವರಿಸಿಕೊಂಡ ಕ್ಷಣಗಳಲ್ಲಿ ನನ್ನಂಥವರಿಗಲ್ಲದ ಈ ಸೈತಾನ ಸಿಟಿಯನ್ನೇ ಅಪ್ಪಿ ಮುದ್ದಾಡಬೇಕೆನಿಸುತ್ತೆ. ಎಷ್ಟೇ ಬೈದುಕೊಂಡರೂ ಈ ರಾಕ್ಷಸ ನಗರಿಗೆ ನಾ ಕಡೇ ತಂಕ ಋಣಿಯಾಗಿರ ಬೇಕನಿಸುತ್ತೆ. ಯಾಕೆಂದರೆ, ನೀನೆಂಬೋ ಪುಟ್ಟ ದೇವತೆಯಂಥವಳನ್ನು ಎದುರು ಬದುರಾಗುವಂತೆ ಮಾಡಿದ್ದು ಈ ಸಿಟಿಯೇ ತಾನೆ?


ನೀನೊಬ್ಬಳು ಈ ಬದುಕಿನೊಳಗೆ ಬಾರದೇ ಹೋಗಿದ್ದಿದ್ದರೆ ಈ ರಾಕ್ಷಸನಗರಿಯ ಥರಾವರಿ ಏಟುಗಳ ಮುಂದೆ ಸೋಲೊಪ್ಪಿಕೊಂಡು ಅದ್ಯಾವತ್ತೋ ಊರ ತೆಕ್ಕೆ ಸೇರಿಕೊಳ್ಳುತ್ತಿದ್ದೆ. ಇಲ್ಲಿನ ವೇಗ, ನಿಯಾನ್ ದೀಪಗಳಾಚೆಯ ರೌದ್ರ, ಮನುಷ್ಯತ್ವವನ್ನೇ ಪಣಕ್ಕಿಟ್ಟಂತಾ ವ್ಯಾಪಾರೀ ಬುದ್ಧಿ, ರಾತ್ರಿಯ ಕತ್ತಲಿಗೂ, ಮುಂಜಾವದ ಬೆಳಕಿಗೂ ಅಂಟಿಕೊಂಡಂತಿರೋ ಧಾವಂತಗಳೆಲ್ಲ ಹೆಚ್ಚು ದಿನ ನನ್ನನ್ನಿಲ್ಲಿ ಇರಲು ಬಿಡುತ್ತಿರಲಿಲ್ಲವೇನೋ. ಕೇವಲ ಕಾಸಿಗೋಸ್ಕರ ಮಾತ್ರ ಯಾವ ಸೊಬಗಿಗಾಗಿ ಇಲ್ಲಿರಬೇಕೆಂಬ ನನ್ನೊಳಗಿನ ಪ್ರತೀ ಕ್ಷಣದ ಹಳವಂಡಗಳಿಗೆ ಉತ್ತರ ರೂಪಿಯಾಗಿ ಎದುರಾದವಳು ನೀನು. ಆ ಕ್ಷಣದಿಂದಲೇ ನನ್ನ ಕಣ್ಣೊಳಗೆ ಬೇರ‍್ಯಾವುದೋ ಹೊಸಾ ದೃಷ್ಟಿ ನುಸುಳಿಕೊಂಡಂತಿದೆ.


ಜೀವವೇ… ನನ್ನ ಕ್ಷಣಗಳನ್ನೆಲ್ಲಾ ಯಾರದ್ದೋ ಕೈಯ ರಿಮೋಟಿನ ಹಿಡಿತಕ್ಕೆ ಬಿಟ್ಟಂತೆ ಬದುಕಿದ ಕ್ಷುದ್ರ ಕ್ಷಣಗಳೆಲ್ಲವೂ ನಿನ್ನದೊಂದು ಮುಗುಳ್ನಗುವಿನ ಬಿಸುಪಿಗೆ ಕರಗಿ ಹೋಗಿವೆ. ನನ್ನಿಡೀ ಜೀವಿತವನ್ನೇ ನಿನ್ನ ಪುಟ್ಟ ಬೊಗಸೆಗಿಟ್ಟು ನಿರಾಳವಾದ ಘಳಿಗೆಯಿಂದಲೇ ಜೀವ ಹಗುರಾದಂತಾಗಿದೆ. ಗೂಬೆಯಂತೆ ಗುಗ್ಗರಿಸುತ್ತಾ ಸಾಗುತ್ತಿದ್ದ ಬದುಕೀಗ ಗರಿ ಬಿಚ್ಚಿದ ನವಿಲು. ವೈಕುಂಠ ಏಕಾದಶಿಯ ಶ್ರೀನಿವಾಸ ಕಲ್ಯಾಣ, ರಾಮ ನವಮಿಯ ಬಿಟ್ಟಿ ಪಾನಕ, ಬಕ್ರೀದಿನ ಕುರಿ ಸಂತೆ, ಬಸವನ ಗುಡಿಯ ಕಳ್ಳೇಕಾಯಿ ಪರಿಷೆ… ಅರೇ ಈ ಬೆಂಗಳೂರು ಸುಂದರವಾಗಿದೆ; ಥೇಟು ನಿನ್ನಂತೆಯೇ. ಸ್ಪಷ್ಟವಾಗಿ ಹೇಳಬೇಕೆಂದರೆ, ನಂಗೀಗ ನಿತ್ಯವೂ ಜಾತ್ರೆ, ಪ್ರತೀ ಕ್ಷಣವೂ ಸಂಭ್ರಮ. ನೀನೆಂಬೋ ಸಜೀವ ಬೆಳುದಿಂಗಳು ಎದುರಾದಲ್ಲಿಂದಲೇ ಈ ಅಮಾಸೆ ಜನುಮದ ಪೊರೆ ಕಳಚಲಾರಂಭಿಸಿದೆ.
ಹುಡುಗೀ… ನೀನೆದುರಾದ ಚಳಿಗಾಲದಿಂದ ಈ ಬದುಕಿನ ಚಹರೆಯೇ ಬದಲಾಗಿದೆ!
       -ನಿನ್ನವನು

[adning id="4492"]

LEAVE A REPLY

Please enter your comment!
Please enter your name here